ಅಭಿವೃದ್ಧಿ ಎಂಬುದು ಬಡವರನ್ನು ಹೊರಗಿಡುವುದಲ್ಲ; ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬುದನ್ನು ಜೊತೆಜೊತೆ ಒಯ್ಯಬಹುದೆನ್ನುವುದನ್ನು ಈ ಬಜೆಟ್ ಸಾಧಿಸಿದೆ. ತಳಸ್ತರ ಜನರ ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್‌ನ್ನು ನೋಡಿದರೆ ಬಜೆಟ್‌ನ ಪ್ರಾಮುಖ್ಯತೆ ಅರ್ಥವಾಗಬಹುದು- ಪ್ರೊ. ಎಂ. ಚಂದ್ರಪುಜಾರಿ, ಅಭಿವೃದ್ಧಿ ಚಿಂತಕರು.
ನಮ್ಮ ಸಮಾಜ ಹಿಂದೆ ಮತ್ತು ಇಂದು ಒಂದು ಪಿರಮಿಡ್ ರೂಪದಲ್ಲಿ ಸಂಘಟಿತವಾಗಿದೆ. ಪಿರಮಿಡ್ ಮೇಲ್ಭಾಗದಲ್ಲಿ ಕಡಿಮೆ ಜನ ಇದ್ದು ಹೆಚ್ಚು ಅಧಿಕಾರ, ಸಂಪತ್ತು, ಸ್ಥಾನಮಾನ ಹೊಂದಿದ್ದಾರೆ. ಮಧ್ಯದಲ್ಲಿ ಮೇಲಿನವರಿಗಿಂತ ಹೆಚ್ಚು ಜನರಿದ್ದು ಕಡಿಮೆ ಅಧಿಕಾರ, ಸಂಪತ್ತು, ಅಂತಸ್ತು ಹೊಂದಿದ್ದಾರೆ. ಪಿರಮಿಡ್‌ನ ಬುಡ ತುಂಬಾ ವಿಸ್ತಾರವಾಗಿದೆ. ಸಮಾಜದ ಬಹುತೇಕರು ಬುಡದಲ್ಲೇ ಇದ್ದಾರೆ. ಇವರು ಅತೀ ಕಡಿಮೆ ಅಧಿಕಾರ, ಸಂಪತ್ತು, ಅಂತಸ್ತು ಹೊಂದಿದ್ದಾರೆ. ಕೇಂದ್ರ ಮತ್ತು ಬಹುತೇಕ ರಾಜ್ಯ ಸರಕಾರಗಳ ಅಭಿವೃದ್ಧಿ ಯೋಜನೆಗಳು ಏಣಿಯ ಬುಡದಲ್ಲಿರುವವರನ್ನು ಕೇಂದ್ರಿತವಾಗಿ ನಡೆಯುತ್ತಿಲ್ಲ. ಏಣಿಯ ಮಧ್ಯ ಮತ್ತು ಮೇಲಿದ್ದವರು ಚಾಲ್ತಿಯಲ್ಲಿರುವ ಅಭಿವೃದ್ಧಿ ಚಿಂತನೆ ಮತ್ತು ಯೋಜನೆಗಳ ಕೇಂದ್ರ ಬಿಂದುಗಳು. ಏಣಿಯ ಬುಡದಲ್ಲಿರುವವರು ತೆರಿಗೆ ಪಾವತಿಸುವವರೇ ಅಲ್ಲ ಎಂಬ ಅಪ ತಿಳಿವಳಿಕೆ ಬಲವಾಗಿ ಬೇರೂರಿದೆ. ಸಹಜವಾಗಿಯೇ ಇವರನ್ನು ಕೇಂದ್ರೀಕರಿಸಿ ಸರಕಾರ ಯೋಜನೆಗಳನ್ನು ಪ್ರಕಟಿಸಿದರೆ ಎಲ್ಲದಕ್ಕೂ, ಎಲ್ಲರಿಗೂ ಕುತ್ತು ಎಂಬ ವ್ಯಾಖ್ಯಾನಗಳು ಎಲ್ಲೆಡೆ ವಿಜೃಂಭಿಸುತ್ತಲೇ ಇರುತ್ತವೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳ ಕುರಿತು ಸ್ವತಃ ನರೇಂದ್ರ ಮೋದಿ ಅವರೇ ನಿರುಪಯೋಗಿ, ಅನುತ್ಪಾದಕ, ರೇವ್ಡಿ (ಉಚಿತ ಕಾಣಿಕೆ) ಎಂದು ಜರೆದಿದ್ದರು.
ಜನಸಾಮಾನ್ಯರು ತೆರಿಗೆ ಕೊಡುವುದಿಲ್ಲ ಎನ್ನುವುದು ತಪ್ಪು. ರಾಜ್ಯ, ದೇಶದ ಸಂಪನ್ಮೂಲಗಳಲ್ಲಿ ಬಡವರು ನೀಡುವ ಪರೋಕ್ಷ ತೆರಿಗೆ ಪಾಲು ಅತಿ ಹೆಚ್ಚು ಎಂಬುದನ್ನು ಮರೆಯಬಾರದು. ಕೇಂದ್ರ, ರಾಜ್ಯಗಳು ನಮಗೆ ಕೊಟ್ಟಿದ್ದು ಎಂಬುದಕ್ಕೆ ಅರ್ಥವಿಲ್ಲ. ನಮ್ಮಿಂದ ಹೋಗಿದ್ದು ಅಲ್ಪ ಪ್ರಮಾಣದಲ್ಲಿ ವಾಪಸ್ ಬಂದಿದೆ ಎಂಬುದು ವಾಸ್ತವ. ಕರ್ನಾಟಕದ ಬಜೆಟ್‌ನಲ್ಲಿ ಹಿಂದೆಲ್ಲ ಅಂಚಿನ ಜನರಿಗೆ ಒಟ್ಟು ಬಜೆಟ್‌ನಲ್ಲಿ ಕೊಡುತ್ತಿದ್ದ ಪಾಲು ಶೇಕಡ ನಾಲ್ಕೈದು ದಾಟುವುದು ಅಪರೂಪ. ಇಂತಹ ಸಂದರ್ಭದಲ್ಲಿ ಒಟ್ಟು ಬಜೆಟ್‌ನ ಶೇ.15 ರಷ್ಟು ತಳಸ್ತರದ ಜನರಿಗೆ ನೀಡುವುದನ್ನು ಉಹಿಸಲಾಗುತ್ತಿಲ್ಲ. ನಮ್ಮ ಒಟ್ಟು ಬಜೆಟ್ ಗಾತ್ರ 3,71,383 ಕೋಟಿ. ಗ್ಯಾರಂಟಿ ಹಾಗೂ ಇತರೆ ಸಹಾಯಧನವನ್ನು ಒಟ್ಟುಗೂಡಿಸಿದರೆ 60 ಸಾವಿರ ಕೋಟಿಯಾಗಬಹುದು. ಇದು ಒಟ್ಟು ಬಜೆಟ್ ಗಾತ್ರದಲ್ಲಿ ಬಡವರಿಗೆ ಹಂಚಿಕೆಯಾಗುವುದು ಸುಮಾರು ಶೇ. 15 ರಷ್ಟಾಗಿದೆ. ತಳಸ್ತರಕ್ಕೆ ತಲುಪುವ ಬಜೆಟ್‌ನ ಶೇ.15 ನಮ್ಮ ರಾಜ್ಯದ ಅಭಿವೃದ್ಧಿಯ ಗತಿಯನ್ನು ಬದಲಾಯಿಸಬಹುದು. ಏಕೆಂದರೆ ಈ ಮೊತ್ತ ಇವರ ಖರೀದಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಇವರ ಖರೀದಿ ಶಕ್ತಿ ಹೆಚ್ಚಿದರೆ ಕೃಷಿ, ಕೈಗಾರಿಕೆಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಭಿವೃದ್ದಿ ಎಂಬುದು ಇಂತಹ ಸಾವಯವ ಸಂಬಂಧ ಹೊಂದಿರುತ್ತದೆ. ಒಟ್ಟಾರೆ ಸರಕು, ಸೇವೆಗಳ ಬೇಡಿಕೆ ಹೆಚ್ಚುತ್ತದೆ. ಬಡವರ ಆಯ್ಕೆಯ ಅವಕಾಶಗಳು ವಿಸ್ತರಿಸುತ್ತವೆ. ಅಭಿವೃದ್ಧಿ ಎಂದರೆ ಸ್ವಾತಂತ್ರ‍್ಯ. ಸ್ವಾತಂತ್ರ‍್ಯ ಎಂದರೆ ಆಯ್ಕೆಗಳು ಎಂದು ಅಮರ್ತ್ಯ ಸೇನ್ ವ್ಯಾಖ್ಯಾನಿಸುತ್ತಾರೆ. ನಮ್ಮ ಗಮನ ಇರಬೇಕಾಗಿರುವುದು ಆಯ್ಕೆಗಳೇ ಇಲ್ಲದವರಿಗೆ ಅವನ್ನು ಕಲ್ಪಿಸುವುದೇ ಆಗಿದೆ. ಪಿರಮಿಡ್‌ನ ತುದಿಯಲ್ಲಿರುವವರನ್ನು ಪೋಷಿಸಿದರೆ ಬುಡದಲ್ಲಿರುವವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಡವರ ಮನೆ ಮುಂದೆ ಚತುಷ್ಪಥವಲ್ಲ ೨೪ ಪಥವಾದರೂ ಯಾವುದೇ ಉಪಯೋಗವಾಗುವುದಿಲ್ಲ.
ಕರ್ನಾಟಕ ಸರಕಾರ ಖಾತ್ರಿ ಯೋಜನೆಗಳ ಜತೆ ಈಗ ಘೋಷಿಸಿರುವ ಕೆಲ ಯೋಜನೆಗಳು ಇನ್ವಿಸಿಬಲ್ ಕಮ್ಯೂನಿಟಿಗಳನ್ನು ಮುಖ್ಯಧಾರೆಗೆ ತರುವುದು, ಅದರ ಜತೆ ಸಮ್ಮಿಳಿತಗೊಳಿಸುವುದೇ ಆಗಿದೆ. ಕುರಿಗಾಹಿಗಳು, ದೇವದಾಸಿಯರು, ಪೌರ ಕಾರ್ಮಿಕರು, ಮೀನುಗಾರರು, ಅಂಗನವಾಡಿ ಕಾರ್ಯಕರ್ತರ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟು ಕೊಂಡಿವೆ. ಬಡವರ ಸಾಮರ್ಥ್ಯವನ್ನು ಹೆಚ್ಚಿಸುವ ಕಡೆ ಗಮನ ಹರಿಸಲಾಗಿದೆ. ಇದರಿಂದ ಅವರ ಸಹಭಾಗಿತ್ವ ಮತ್ತು ಪಾಲ್ಗೊಳ್ಳುವಿಕೆಯ ಬಲ ಹೆಚ್ಚುತ್ತದೆ. ಅಭಿವೃದ್ಧಿ ಎಂಬುದು ಬಡವರನ್ನು ಹೊರಗಿಡುವುದಲ್ಲ; ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬುದನ್ನು ಜೊತೆಜೊತೆ ಒಯ್ಯಬಹುದೆನ್ನುವುದನ್ನು ಈ ಬಜೆಟ್ ಸಾಧಿಸಿದೆ. ತಳಸ್ತರ ಜನರ ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್‌ನ್ನು ನೋಡಿದರೆ ಬಜೆಟ್‌ನ ಪ್ರಾಮುಖ್ಯತೆ ಅರ್ಥವಾಗಬಹುದು.
ಎಂ. ಚಂದ್ರಪುಜಾರಿ, ಅಭಿವೃದ್ಧಿ ಚಿಂತಕರು