ಬುದ್ಧ ಪೂರ್ಣಿಮೆ ವಿಶೇಷ |ಬುದ್ಧನೂರಿನ ಮಾತು

Most read

ಜಗತ್ತು ಬುದ್ಧನ ಜ್ಞಾನ ಪ್ರಭೆಯ ಕಡೆಗೆ ಚಲಿಸುತ್ತಿರುವಾಗ ಭಾರತೀಯ ಸಮಾಜದಲ್ಲಿ ಬುದ್ಧನನ್ನು  ಸನಾತನ ಧರ್ಮದ ಮುಂಬಾಗಿಲಿಗೆ ಕಟ್ಟುವ ಹುನ್ನಾರವೊಂದು ನಡೆದಿದೆ. ಬುದ್ಧನ ವಸ್ತುನಿಷ್ಠ ಚರಿತ್ರೆಯನ್ನು  ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಕೋಸಂಬಿ ಅವರು ಜಗತ್ತಿಗೆ ಸಾರುವಲ್ಲಿ ತಮ್ಮ ಅಧ್ಯಯನ ನಿಷ್ಠೆಯನ್ನು ತೋರಿದ್ದಾರೆ. ಇಂತಹ ವಸ್ತುನಿಷ್ಠ ಚರಿತ್ರೆಗಳಿಗೆ ನಾವು ಮರಳುವುದು  ಮತ್ತು ಬುದ್ಧ ಪ್ರತಿಪಾದಿಸಿದ  ಕರುಣೆ, ಮೈತ್ರಿ, ಪ್ರೇಮ ತುಂಬಿದ ಬದುಕನ್ನು ನಡೆಯುವುದು ಬುದ್ಧನನ್ನು ಉಳಿಸಿಕೊಳ್ಳುವ ಅಂದರೆ  ನಮ್ಮನ್ನು ನಾವು ದುಃಖ, ತಲ್ಲಣಗಳಿಂದ ಬಿಡುಗಡೆ ಗೊಳಿಸಿಕೊಳ್ಳುವ ದಾರಿಯೇ ಆಗಬಲ್ಲದು – ಎನ್.ರವಿಕುಮಾರ್, ಪತ್ರಕರ್ತರು.

ಪೇಟೆಯ ಅಂಗಡಿಗಳಲ್ಲಿ, ಫುಟ್ಪಾತ್‌ನ ಚಮ್ಮಾರನ ಪೆಟ್ಟಿಗೆಯಲ್ಲಿ, ವಸತಿಗೃಹಗಳ ರಿಸೆಪ್ಸನ್ ಕೌಂಟರ್‌ನ ಆವರಣದಲ್ಲಿ, ಗಿಫ್ಟ್ ಸೆಂಟರ್ ಗಳಲ್ಲಿ , ರೆಸಾರ್ಟ್‌ಗಳ  ಹುಲ್ಲುಗಾವಲಿನ ಮೇಲೋ, ಮನೆಗಳ ನಡುಮನೆಯ ಗೋಡೆಯ ಮೇಲೋ, ಟ್ಯಾಟೋ ಹಾಕುವ ಹುಡುಗ ಹುಡುಗಿಯ ಬೆರಳ ತುದಿಯಲ್ಲೋ, ಟ್ಯಾಟೋ ಹಾಕಿಸಿಕೊಂಡವರ ಎದೆ, ತೋಳುಗಳ ಮೇಲೋ.., ಅಷ್ಟೆ ಅಲ್ಲ,  ಗಡಿಯಲ್ಲಿ ಯುದ್ಧ ನಡೆಯದಿರಲಿ ಎಂದು  ಪ್ರಾರ್ಥಿಸುವ  ತಾಯಂದಿರ  ಕಣ್ಣೀರಿನಲ್ಲೋ…ಎಲ್ಲಿಲ್ಲ ಬುದ್ಧ!‌

ಬುದ್ಧ ಕೆಲವರಿಗೆ ಅಲಂಕಾರದ ಸೌಂದರ್ಯದ ಮೀಮಾಂಸೆಯಂತೆ ಕಂಡರೆ, ಕೆಲವರಿಗೆ ಬುದ್ಧ ವಿವೇಕದ ಶಕ್ತಿಯ ಕಂಪನದಂತೆ  ಕಾಣುತ್ತಾನೆ. ಇನ್ನೂ ಕೆಲವರಿಗೆ  ಆತ ಪ್ರತಿಪಾದಿಸಿದ ಮೌಲಿಕ ಜೀವನ ತತ್ವಗಳಾದ ಕರುಣೆ ಮತ್ತು ಮೈತ್ರಿಯ ಮಹಾಪಯಣಿಗನಂತೆ ದರ್ಶನಕ್ಕೆ ಸಿಗುತ್ತಾನೆ.

 ಭಾರತವನ್ನು ತೊರೆದಿದ್ದ ಬುದ್ಧ ಮತ್ತೆ ಮರಳಿದ್ದಾನೆ. ಹೀಗೆ ಭಾರತವನ್ನು ಬುದ್ಧ ತೊರೆಯಲು ಮಹತ್ವದ ಚಾರಿತ್ರಿಕ ಕಾರಣಗಳಿದ್ದವು. ಬುದ್ಧನ ತತ್ವಗಳು ಸನಾತನದಿಂದಲೂ, ಆರ್ಯ ತತ್ವಗಳಿಂದಲೂ ಕೂಡಿವೆ ಎಂಬ ವಾದ ಸರಣಿಯನ್ನು ಬಿತ್ತುವುದರ ಹಿಂದೆ ಬುದ್ಧ ತತ್ವಗಳಿಗೆ ವ್ಯತಿರಿಕ್ತವಾದ ವೈದಿಕ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಮುಖವಾಡವಿದೆ. ಬುದ್ಧ ವಿಷ್ಣುವಿನ ಅವತಾರ ಎಂಬ ಮಿಥ್ಯಗಳನ್ನು ನಂಬಿಸುವ ಸಂಚುಗಳನ್ನು ಮೀರಿ ಬುದ್ಧ ಪ್ರೇಮ, ಶಾಂತಿ, ಕರುಣೆ ಮೈತ್ರಿಯ ಬೆಳಕಾಗಿ ಕಂಗೊಳಿಸುತ್ತಲೆ ಇದ್ದಾನೆ. ತಿಪ್ಪೆಯಲಿ ಹುದುಗಿದ್ದ ಚಿನ್ನದ ತುಣುಕೊಂದು ತನ್ನ ಹೊಳಪನ್ನು ಕಳೆದುಕೊಳ್ಳದು ಎಂಬಂತೆ ಬುದ್ಧ ಜಗತ್ತಿನ ದುಃಖಕ್ಕೆ ಮದ್ದಾಗಬಲ್ಲ ಏಕೈಕ ವೈದ್ಯ ಗುರು ಎಂಬುದು ಮನವರಿಕೆಯಾದಂತೆ ಲೋಕ ಅವನನ್ನು ತಬ್ಬಿಕೊಳ್ಳಲು ಆರಂಭಿಸಿದಂತಿದೆ.

ಮನುಷ್ಯ ಜೀವನದ ಪ್ರತಿ ಸಂದರ್ಭದಲ್ಲೂ ಬುದ್ಧನನ್ನು ಕಾಣುವ ಅಥವಾ ಅವನೇ ಎದುರಾಗುವ ಸಂದರ್ಭಗಳನ್ನು ನೋಡುತ್ತಿದ್ದರೆ ಬುದ್ಧಗುರುವಿನ ಹೊಳಪು ಕಣ್ಣ ಕೋರೈಸಿ ಅರಿವಿನ ದೀಪವನ್ನು ಹಚ್ಚುವ ಕಾಲಕ್ಕೆ ನಾವು ಮರುಳುತ್ತಿದ್ದೇವೆಯೋ ಎಂದು ಅನಿಸುತ್ತದೆ.  ಇಷ್ಟೊಂದು ಪ್ರಭಾವಿಸಿದ, ಎಚ್ಚರಿಸುವ, ಎಲ್ಲರೊಳಗೂ ಕರಗಿ ಹೆಪ್ಪಾಗುವ ಈ ಬುದ್ಧ ಯಾರು? ಯಾಕಾಗಿ ಈ ರೂಪವನ್ನು ಕಣ್ಣ ಮುಂದಿರಿಸಿಕೊಳ್ಳಬೇಕು? ಎಂದು  ಹುಡುಕಾಟ ನಡೆಸಿದರೆ ಹುಡುಕ ಹೊರಟವರ ಎದೆಯೊಳಗೆ ಬುದ್ದನೊಬ್ಬ ಮಿಸುಕಾಡುವುದು ಸ್ಪರ್ಶಕ್ಕೆ ದಕ್ಕುತ್ತದೆ.

ಸಿದ್ದಾರ್ಥನ ತಂದೆ ಶಾಕ್ಯ ಬುಡಕಟ್ಟಿನ  ರಾಜ್ಯವಾಳುತ್ತಿದ್ದ ಶುದ್ಧೋಧನ ಒಮ್ಮೆ ಹೊಲವನ್ನು ಉಳುವಾಗ ನೇಗಿಲಿಗೆ ಸಿಕ್ಕ ಹುಳುವನ್ನು ಹಕ್ಕಿಯೊಂದು ಕಚ್ಚಿಕೊಂಡು ಹೋಗುತ್ತದೆ. ಇದನ್ನು ಕಂಡ ಸಿದ್ಧಾರ್ಥನ ಮನಸ್ಸು ಕದಡಿಹೋಗುತ್ತದೆ. ಲೋಕದಲ್ಲಿ ಎಲ್ಲವೂ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿವೆ ಎಂದು ದುಃಖಕ್ಕೀಡಾಗುತ್ತಾನೆ. ಮತ್ತೊಂದು ಸಂದರ್ಭದಲ್ಲಿ   ಸಿದ್ಧಾರ್ಥನ ಸಹೋದರ ದೇವದತ್ತ  ಬಿಟ್ಟ ಬಾಣದಿಂದ ಗಾಯಗೊಂಡ ಹಂಸಪಕ್ಷಿಯೊಂದು ತೊಪ್ಪನೆ  ಸಿದ್ದಾರ್ಥನ ಮುಂದೆ ಬಿದ್ದಾಗ  ಅದನ್ನು ತಕ್ಷಣವೇ ಉಪಚರಿಸಿದ ಆತನಿಗೆ ಬಾಣ ಮೂಲದ ಚಿಂತನೆಯನ್ನು ಬಿಟ್ಟು ಲೋಕವನ್ನು  ಕರುಣೆ ಮತ್ತು ಮೈತ್ರಿಯಿಂದ ಕಾಣಬೇಕೆಂಬ ನಿಲುವನ್ನು ಪ್ರತಿಪಾದಿಸಿ  ಅದಕ್ಕಾಗಿ ನಮ್ಮಲ್ಲೆ ಇರುವ ಪ್ರಜ್ಞೆಯನ್ನು ಕಂಡುಕೊಳ್ಳಲು ಧ್ಯಾನ ಸ್ಥಿತಿಗೆ ಹೊರಟ ಸಿದ್ದಾರ್ಥ ’ಗೌತಮ ಬುದ್ದ’ನಾಗಿ ಜಗತ್ತಿಗೆ ಕಂಡನು.

ಬುದ್ಧ  ಎಂಬುದು ಒಂದು ಪದವಲ್ಲ. ಅದೊಂದು ಸಾಧಕ ಅವಸ್ಥೆ. ’ಬುದ್ಧ’ ಎಂದರೆ ಕನ್ನಡದ ’ಸಿದ್ದ’, ’ಆರೂಢ’,  ’ಅವಧೂತ’,  ’ಶರಣ’ … ಹೀಗೆ ಸಮಾನಾಂತರ ರೂಪದ ಅರ್ಥವೇ ಆಗಿದೆ.  ಸದಾ ಎಚ್ಚರ ಸ್ಥಿತಿಯಲ್ಲಿರುವವರು ಬುದ್ಧನಾಗುತ್ತಾನೆ. ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಕರುಣೆ  ಮತ್ತು ಮೈತ್ರಿಯನ್ನು, ಮನುಷ್ಯ ಕುಲ ಧರಿಸಿಕೊಂಡಿದ್ದೇ ಆದರೆ ಮನುಷ್ಯ  ದುಃಖದಿಂದ ಬಿಡುಗಡೆಗೊಳ್ಳುತ್ತಾನೆ.

ಇದು ಒಂದು ಪರಿಯ ಸುಖವೇ ಹೌದು ಎಂಬ ಅರಿವಿನ ಬೆಳಕನಿಡಿದವನೇ  ಬುದ್ಧ. ಇಲ್ಲಿ ದುಃಖ ಎಂದರೆ ಕೇವಲು ಅಳು, ಕಣ್ಣೀರು, ಸಂಕಟ ಮಾತ್ರ ಎಂದರ್ಥವಲ್ಲ. ಅದು  ದುರಾಸೆ. ತಲ್ಲಣ, ಮರಣ, ಯಾತನೆಯೂ ಆಗಿರುತ್ತದೆ. ಅಷ್ಟೆ ಅಲ್ಲ ಪರಿವರ್ತನೆ ಲೋಕದ ನಿಯಮ, ಇಂದು ಇದ್ದಿದ್ದು ನಾಳೆ ಇಲ್ಲವಾಗಬಹುದು, ಇಂದಿನ ಸಂತೋಷ  ಹೀಗೆ ಇರುವುದಿಲ್ಲ. ಯವ್ವನ ಕರಗಿ ಮುಪ್ಪು ಬಂದೇ ಬರುತ್ತದೆ ಹೀಗೆ ಆಗುವ ಬದಲಾವಣೆಗಳು ದುಃಖವನ್ನು ತರುತ್ತವೆ.   ಇಂತಹ ದುಃಖಗಳಿಂದ ನಾವು ಬಿಡುಗಡೆ ಗೊಂಡಾಗ ಬುದ್ಧ ಸ್ಥಿತಿಯನ್ನು ತಲುಪಲು ಸಾಧ್ಯ. ಇದರಿಂದ ಬಿಡುಗಡೆ ಗೊಳ್ಳುವ ಮಾರ್ಗವೆಂದರೆ  ಅದು ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದು.

ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ದೇವರು ಬರಬೇಕಾಗಿಲ್ಲ. ಅಸಲಿಗೆ ದೇವರು, ಆತ್ಮ ಎಂಬುದೆಲ್ಲಾ  ಒಂದು ಭ್ರಮೆ. ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಮತ್ತು ಅದರಿಂದ ಪರಿಣಾಮಗಳು ಉಂಟಾಗುತ್ತವೆ ಎಂಬ ವಿಜ್ಞಾನ ಸೂತ್ರವನ್ನು ಜಗತ್ತಿಗೆ ಕಂಡು ಕೊಟ್ಟ ಮೊದಲ ವಿಜ್ಞಾನಿ ಗೌತಮ ಬುದ್ಧ. ಶೂನ್ಯದಿಂದ ಸೃಷ್ಟಿ ಸಾಧ್ಯವಿಲ್ಲ. ಇಲ್ಲಿ ಯಾವುದೂ ನಾಶವಾಗುವುದಿಲ್ಲ. ಬದಲಿಗೆ ರೂಪಾಂತರ ಹೊಂದುತ್ತವೆ ಎಂಬ ವೈಜ್ಞಾನಿಕ ತಿಳುವಳಿಕೆಯನ್ನು ಕ್ರಿ.ಪೂರ್ವದಲ್ಲೆ ತಿಳಿಸಿಕೊಟ್ಟವರು ಬುದ್ಧ. ಹೀಗಿರುವಾಗ ಬುದ್ಧ ಆಶಾವಾದಿಯೂ ಅಲ್ಲ, ನಿರಾಶಾವಾದಿಯೂ ಅಲ್ಲ, ಆತ ’ವಾಸ್ತವವಾದಿ’ಯೇ ಆಗಿದ್ದನು.

ಹೀಗೆ ಜಗತ್ತಿಗೆ ದುಃಖದ ಕಾರಣಗಳನ್ನು ತಿಳಿಸುತ್ತ ಹೊರಟ ಬುದ್ಧ  ’ಅತ್ತ ದೀಪ ಭವ:’ ಅಂದರೆ ನಿನಗೆ ನೀನೇ ಬೆಳಕು ಎನ್ನುವ ಮೂಲಕ ನಿನ್ನ ದುಃಖಕ್ಕೆ, ಸಂಕಟ, ಯಾತನೆಗಳಿಗೆ ನಿನ್ನಲ್ಲೆ ಪರಿಹಾರವಿದೆ ಎಂಬ ವಾಸ್ತವ ಸತ್ಯವನ್ನು ಎದುರಿಗಿಡುತ್ತಾರೆ.

ಮನುಷ್ಯ ತನ್ನೊಳಗೆ ತಾನು ಮಾತಾಡಿಕೊಂಡಾಗ ತನ್ನ ದೋಷಗಳು, ಯೋಚನೆಗಳು ಕಾಣಿಸುತ್ತವೆ. ಹೀಗೆ ತನ್ನೊಳಗೆ ತಾನು ಮಾತಾಡಿಕೊಳ್ಳುವ ಸ್ಥಿತಿಯನ್ನು ಧ್ಯಾನ ಎನ್ನಬಹುದು.  ಈ ಸ್ಥಿತಿಗೆ ತಲುಪಿದಾಗ ತನ್ನೊಳಗಿರುವ ವಿವೇಕ ಎಚ್ಚರಗೊಳ್ಳುತ್ತದೆ. ಬಿಡುಗಡೆಯ ದಾರಿಯೂ ಕಾಣಿಸುತ್ತದೆ ಎಂದ ಬುದ್ಧ  ಜನರು ತಮ್ಮ ತೊಳಲಾಟಗಳಿಂದ ಬಿಡುಗಡೆಗೊಳ್ಳುವ ಸರಳ ದಾರಿಗಳನ್ನು ತೋರಿಸಿಕೊಟ್ಟರು.  ಜಗತ್ತು ಯುದ್ಧ, ಕದನದ ಕಾಲದಲ್ಲಿದೆ. ಮನುಷ್ಯ ಹಿಂಸೆಗೆ ತಹ ತಹಿಸಲು ಅವನಿಗಿರುವ ಲಾಲಸೆಯೇ ಕಾರಣ.  ಯುದ್ಧ ಹಿಂಸೆಯ ನೆಲೆಯನ್ನೆ ಅವಲಂಬಿಸಿರುತ್ತದೆ. ಅದಕ್ಕಾಗಿ ಯುದ್ಧ ಬೇಡ ಎಂದ ಬುದ್ಧ ಮನುಷ್ಯಕುಲದ ಪ್ರವರ್ತಕನಾಗಿ ಕಾಣಿಸುತ್ತಾರೆ.
 
 ತನ್ನ ತಂದೆಯ ರಾಜ್ಯಭಾರದ ಕಾಲದಲ್ಲಿ ರೋಹಿಣಿ ನದಿ ನೀರು ಹಂಚಿಕೊಳ್ಳಲು  ಸಾಕ್ಯರು ಮತ್ತು ಕೋಲಿ ರಾಜ್ಯಗಳ ನಡುವೆ ಯುದ್ಧ ನಡೆಯಬೇಕಾದ ಸಂದರ್ಭ ಬಂದಾಗ ಅದನ್ನು ವಿರೋಧಿಸಿದ ಬುದ್ಧ  ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಸೂಚಿಸುತ್ತಾನೆ. ಇದಕ್ಕೆ ಬೆಂಬಲ ಸಿಗದೆ ಇದ್ದಾಗ ರಾಜ್ಯವನ್ನೆ ತೊರೆದು ಹೊರಡುತ್ತಾನೆ. ಎಲ್ಲದಕ್ಕೂ ಯುದ್ಧವೊಂದೆ ಪರಿಹಾರವಲ್ಲ, ಯುದ್ಧದಿಂದ ಮತ್ತೊಂದು ಯುದ್ಧಕ್ಕೆ ಸಾಗುತ್ತೇವೆಯೇ ಹೊರತು, ಅಂತಿಮ ಪರಿಹಾರ ಸಾಧ್ಯವಿಲ್ಲ ಎಂಬ ವಿವೇಕವನ್ನು ಬಿತ್ತಿದರು.  ಅಂತಿಮವಾಗಿ ರಾಜ್ಯ ತೊರೆದ ಮೇಲೆ ಶಾಕ್ಯರು, ಕೋಲಿಯರ ನಡುವೆ ಯುದ್ಧ ನಡೆಯಲಿಲ್ಲ ಎಂಬ ಸುದ್ದಿ ಕೇಳಿ ಸಂತಸ ಗೊಂಡನಾದರೂ ಬುದ್ಧ ರಾಜ್ಯಕ್ಕೆ ಮರಳದೆ  ಜನರನ್ನು ಲಾಲಸೆಯ ದುಃಖದಿಂದ ಬಿಡುಗಡೆಗೊಳಿಸುವ ಕಡೆಗೆ ಹೆಜ್ಜೆ ಹಾಕಿದರು.

ಹಿಂಸೆಯ ಬಗ್ಗೆ ಅವರು ನಿರ್ದಿಷ್ಟವಾಗಿ ಏನನ್ನೂ ಹೇಳದೆ ಹೋದರೂ ಕರುಣೆ -ಮೈತ್ರಿಯಿಂದ ಬದುಕುವುದನ್ನು ಪ್ರತಿಪಾದಿಸಿದರು. ನೀನು ಎಲ್ಲರನ್ನೂ ಪ್ರೀತಿಸುವೆಯಾದರೆ ಯಾರನ್ನೂ ಕೊಲ್ಲಲಾರೆ ಎಂಬ ವಿವೇಕದ ಪರಮೋಚ್ಛ ಸಂವೇದನೆಯನ್ನು ಲೋಕಕ್ಕೆ ಕಾಣಿಸಿದ ತೇಜೋಪುರಷನಾಗಿ ಬುದ್ಧ ಕಾಣಿಸಿಕೊಳ್ಳುತ್ತಾನೆ.  

ಬುದ್ಧ ಒಬ್ಬನೆ ಆಗಿರಲಾರ, ಬೌದ್ಧ ತಾತ್ವಿಕತೆಯನ್ನು ನಿರ್ವಚಿಸುವ ಅಷ್ಟಾಂಗ  ಮಾರ್ಗಗಳಲ್ಲಿ ನಡೆಯುವ ಯಾರಾದರೂ ಬುದ್ಧರಾಗಬಹುದು. ಅದು ಬುದ್ಧ ಕೊಟ್ಟ ಧಮ್ಮ ಮಾರ್ಗ ಅನುಸರಿಸಿದಾಗ ಮಾತ್ರ ಸಾಧ್ಯವಾಗುತ್ತದೆ.   ಧಮ್ಮ ಎಂದರೆ ಸದ್ವಿಚಾರ, ಸನ್ನಡತೆ, ಒಳ್ಳೆಯ ಮಾತು ಇವೆಲ್ಲವೂ ಮನುಷ್ಯನ ಸಂತೋಷಕ್ಕೆ ಕಾರಣವಾಗುತ್ತವೆ. ಕೇಡು, ಹಿಂಸೆ, ಅಸೂಯೆ, ಲಾಲಸೆಗಳು ಯಾವ ಕಾಲಕ್ಕೂ ಸದ್ಧಮ್ಮಗಳಾಗಲಾರವು.   ಧಮ್ಮವು ಸದ್ಧಮ್ಮವಾಗಬೇಕಾದರೆ ಮನುಷ್ಯ -ಮನುಷ್ಯರ ನಡುವೆ ಎಲ್ಲಾ ಸ್ತರಗಳಲ್ಲೂ ಸಮಾನತೆ ಹೆಚ್ಚಿಸಬೇಕು. ಅಸ್ತಿತ್ವಕ್ಕಾಗಿ ಹೋರಾಟದಲ್ಲಿ  ಅಸಮಾನತೆಯನ್ನೂ ಪ್ರಕೃತಿ ನಿಯಮವೆಂದು ಪರಿಗಣಿಸಿದರೆ ದುರ್ಬಲರು ಯಾವಾಗಲೂ ಅಂಚಿಗೆ ದೂಡಲ್ಪಡುತ್ತಾರೆ. ಸಮಾಜಕ್ಕೆ ಬೇಕಾಗಿರುವುದು ಅತ್ಯುತ್ತಮರೆ ಹೊರತು, ಅತ್ಯಂತ ಸಮರ್ಥರಲ್ಲ ಇದು ಬುದ್ಧನ ದೃಷ್ಟಿಕೋನ.

ಈ ನೆಲೆಯಲ್ಲಿ  ನಾವು ವಿದೇಶಗಳ ನೆಲದಲ್ಲಿ ನಿಂತು ನಾನು ಬುದ್ಧನ ನಾಡಿನಿಂದ ಬಂದವನು/ಳು ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ. ಜಗತ್ತಿನ  ಮನುಷ್ಯ ಕುಲಕ್ಕೆ ’ಕರುಣೆ -ಮೈತ್ರಿಯ’ ಮಹೋನ್ನತ ಅರಿವನ್ನು ಬಿತ್ತಿದ ನೆಲ ಇದು ಎಂದು ಹೇಳಿಕೊಳ್ಳುವುದು  ತನ್ನ ನೆಲದ ಅರಿವಿನ ತಾತ್ವಿಕತೆಯನ್ನು   ಸಾರುವ  ಹಿರಿಮೆಯೇ ಆಗಿರುತ್ತದೆ.

ಆದರೆ ಜಗತ್ತು ಬುದ್ಧನ ಜ್ಞಾನ ಪ್ರಭೆಯ ಕಡೆಗೆ ಚಲಿಸುತ್ತಿರುವಾಗ ಭಾರತೀಯ ಸಮಾಜದಲ್ಲಿ ಬುದ್ಧನನ್ನು  ಸನಾತನ ಧರ್ಮದ ಮುಂಬಾಗಿಲಿಗೆ ಕಟ್ಟುವ ಹುನ್ನಾರವೊಂದು ನಡೆದಿದೆ. ತಾನು ದೇವರಲ್ಲ ಎಂದ ಬುದ್ಧನನ್ನು ವಿಷ್ಣುವಿನ ಅವತಾರ ಎಂಬ ಮಿಥ್ ಗಳಿಂದ, ಪೌರಾಣಿಕ ಕಥನಗಳಿಂದ ಕಟ್ಟಿಹಾಕುವ, ಅನೈತಿಕವಾದ ಸಾಂಸ್ಕೃತಿಕ ರೂಪಾಂತರಗೊಳಿಸುವ ಹುನ್ನಾರ ನಡೆದಿರುವುದು ಕಳವಳಕಾರಿಯಾದುದ್ದು.  ಬುದ್ಧನ ವಸ್ತುನಿಷ್ಠ ಚರಿತ್ರೆಯನ್ನು  ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಕೋಸಂಬಿ ಅವರು ಜಗತ್ತಿಗೆ ಸಾರುವಲ್ಲಿ ತಮ್ಮ ಅಧ್ಯಯನ ನಿಷ್ಠೆಯನ್ನು ತೋರಿದ್ದಾರೆ. ಇಂತಹ ವಸ್ತುನಿಷ್ಠ ಚರಿತ್ರೆಗಳಿಗೆ ನಾವು ಮರಳುವುದು  ಮತ್ತು ಬುದ್ಧ ಪ್ರತಿಪಾದಿಸಿದ  ಕರುಣೆ, ಮೈತ್ರಿ, ಪ್ರೇಮ ತುಂಬಿದ ಬದುಕನ್ನು ನಡೆಯುವುದು ಬುದ್ಧನನ್ನು ಉಳಿಸಿಕೊಳ್ಳುವ ಅಂದರೆ  ನಮ್ಮನ್ನು ನಾವು ದುಃಖ, ತಲ್ಲಣಗಳಿಂದ ಬಿಡುಗಡೆ ಗೊಳಿಸಿಕೊಳ್ಳುವ ದಾರಿಯೇ ಆಗಬಲ್ಲದು.
 
ಎಲ್ಲಿಯಾದರೂ

ಯಾಕೆ ಹುಡುಕಬೇಕು

ಕೇಡು ಕಳಚಿ ಪ್ರೇಮವನ್ನು ತಬ್ಬಿದಾಗ

ಅಲ್ಲಿ  ತಥಾಗತ ಹುಟ್ಟುತ್ತಾನೆ.


ಎನ್.ರವಿಕುಮಾರ್

ಪತ್ರಕರ್ತರು, ಕವಿಗಳು

ಇದನ್ನೂ ಓದಿ- ಜಗಕೊಂದು ಕಾರುಣ್ಯದ ಬೆಳಕು- ಬುದ್ಧ

More articles

Latest article