ಲಖನೌ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಾಗಿ ಮತ ಪತ್ರಗಳ ಮೂಲಕವೇ ಚುನಾವಣೆ ನಡೆದರೆ ಬಿಎಸ್‌ಪಿಯು ಕಳೆದುಹೋದ ತನ್ನ ರಾಜಕೀಯ ನೆಲೆಯನ್ನು ಮತ್ತೆ ಪಡೆಯಲಿದೆ’ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್ ಪಿ) ಮುಖ್ಯಸ್ಥೆ ಮಾಯಾವತಿ ಆಗ್ರಹಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಎಸ್ ಪಿ ಅಭ್ಯರ್ಥಿಗಳು ಗೆಲ್ಲದಂತೆ ತಡೆಯಲು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.
ಯಾವುದೇ ಚುನಾವಣೆ ನಡೆದರೂ ಈ ಹಿಂದಿನಂತೆ ಬ್ಯಾಲೆಟ್ ಪೇಪರ್ ಗಳ ಮೂಲಕವೇ ಮತದಾನ ನಡೆಸುವಂತೆ ಬಿಎಸ್‌ಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಇವಿಎಂಗಳನ್ನು ಬಳಸಿಕೊಂಡು ಬಿಎಸ್ ಪಿ ಅಭ್ಯರ್ಥಿಗಳನ್ನು ಸೋಲಿಸಲಾಗುತ್ತಿದೆ. ಆ ಮೂಲಕ ಬಿ ಎಸ್ ಪಿ ಪಕ್ಷದ ಮೇಲೆ ದಲಿತ ಮತ್ತು ವಂಚಿತ ವರ್ಗದ ಮತದಾರರಲ್ಲಿ ನಂಬಿಕೆ ಮುರಿಯುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಈಗಿನ ಸರ್ಕಾರ ಈ ಕೆಲಸ ಮಾಡದಿದ್ದರೂ, ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ. ಮರಳಿ ಬ್ಯಾಲೆಟ್ ಪೇಪರ್ ಗಳ ಮೂಲಕ ಚುನಾವಣೆ ನಡೆದರೆ ಬಿಎಸ್ ಪಿ ತನ್ನ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.