ನೇರವಾಗಿ ಅಭಿವೃದ್ಧಿಯ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಬಿಜೆಪಿ ಪಕ್ಷ ಯಾವಾಗಲೂ ಕೋಮುದ್ವೇಷ ರಾಜಕಾರಣದ ಮೂಲಕವೇ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಮತಾಂಧತೆಯ ಕಸರತ್ತನ್ನು ಮಾಡುತ್ತದೆ. ಬಿಜೆಪಿಗರ ಈ ಕೋಮುಕೇಂದ್ರಿತ ರಾಜಕಾರಣದ ತಂತ್ರಗಾರಿಕೆಯನ್ನು ಬೇಧಿಸಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷ ಅಸಹಾಯಕವಾಗುತ್ತಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಹೇಗೆಲ್ಲಾ ಜನರನ್ನು ಭಾವನಾತ್ಮಕವಾಗಿ ಉದ್ದೀಪನಗೊಳಿಸಬೇಕು. ಹೇಗೆಲ್ಲಾ ಶವದ ಮೇಲೆ ರಾಜಕೀಯ ಮಾಡಿ ಭಾವಪ್ರಚೋದನಾತ್ಮಕ ಉನ್ಮಾದ ಸೃಷ್ಟಿಸಬೇಕು ಎನ್ನುವುದನ್ನು ಈ ಕೇಸರಿ ಕಲಿಗಳನ್ನು ನೋಡಿ ಅಚ್ಚರಿ ಪಡಲೇಬೇಕು.
ಇಲ್ಲಿವರೆಗೂ ಯಾವುದೋ ಕಾರಣಕ್ಕೆ ಯಾವುದಾದರೂ ಸಾವಾದರೆ, ಅದರಿಂದ ಚುನಾವಣಾ ರಾಜಕೀಯಕ್ಕೆ ಪ್ರಯೋಜನಕಾರಿ ಎಂದಾದರೆ, ರಣಹದ್ದುಗಳಂತೆ ಗರಿ ಬಿಚ್ಚಿ, ಕೊಕ್ಕು ಮಸೆದು ಹಾರಿ ಬರುವ ಬಿಜೆಪಿಗರು ಸೂತಕದ ಸಂಗತಿಗೆ ಕೋಮುಬಣ್ಣ ಹಚ್ಚಿ ರಾಜಕೀಯದಾಟ ಶುರುಮಾಡುತ್ತಿದ್ದರು. ಪರೇಶ್ ಮೇಸ್ತಾ ಎನ್ನುವ ಯುವಕ ಕೆರೆಗೆ ಬಿದ್ದು ಸತ್ತಿದ್ದನ್ನೇ ನೆಪ ಮಾಡಿ ಮುಸ್ಲಿಂ ಸಮುದಾಯದವರು ಮಾಡಿದ ಹತ್ಯೆ ಎಂದು ಆರೋಪಿಸಿ ಇಡೀ ಕರಾವಳಿ ಕರ್ನಾಟಕವನ್ನೇ ಕೋಮುಬೆಂಕಿಯಲ್ಲಿ ಧಗಧಗಿಸುವಂತೆ ಸಂಘ ಪರಿವಾರ ನೋಡಿಕೊಂಡಿತು. ಮತಾಂಧತೆಯ ಬೆಂಕಿಯಲ್ಲಿ ಮತಗಳ ಬೇಟೆ ಆರಂಭಿಸಿ ಕರಾವಳಿ ಭಾಗದ ಎಲ್ಲಾ ವಿಧಾನಸಭೆಯ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತು. ಕೊನೆಗೆ ಪರೇಶ್ ಸಾವು ಹತ್ಯೆಯಲ್ಲಾ ಎಂದು ಸಿಬಿಐ ತನಿಖೆಯ ತೀರ್ಪು ಬಂತಾದರೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಲಾಗಿತ್ತು.
ಕಳೆದ ಸಲದ ಚುನಾವಣಾ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿನಿಯನ್ನು ಪ್ರೇಮವೈಫಲ್ಯಕ್ಕೊಳಗಾದ ಮುಸ್ಲಿಂ ಯುವಕನೊಬ್ಬ ಕೊಂದು ವಿಕೃತಿ ಮೆರೆದ. ಲವ್ ಜಿಹಾದ್ ಎಂದು ಅರಚುತ್ತಾ ಬಂದ ಕೇಸರಿ ರಣಹದ್ದುಗಳು ತಮ್ಮ ಧರ್ಮದ್ವೇಷದ ಅಪಪ್ರಚಾರ ಆರಂಭಿಸಿ, ಹಿಂದೂ ಮತಗಳನ್ನು ಕ್ರೋಢೀಕರಿಸಿ ಸೋಲುತ್ತಿದ್ದ ಪ್ರಹ್ಲಾದ ಜೋಶಿಯವರನ್ನು ಗೆಲ್ಲುವಂತೆ ಮಾಡಲಾಯ್ತು. ಚುನಾವಣೆ ಮುಗಿದ ನಂತರ ನೇಹಾ ಹತ್ಯೆ ವಿಚಾರ ಅಲ್ಲಿಗೆ ಬಿಡಲಾಯ್ತು.
ಎಲ್ಲಿಯೇ ಸಾವಾದರೆ ಆ ಸಾವಿಗೂ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೂ ಏನಾದರೂ ಸಣ್ಣ ಸಂಬಂಧ ಇದ್ದರೂ ಸಾಕು ಬಿಜೆಪಿಗರ ಶವ ರಾಜಕೀಯ ತೀವ್ರತೆ ಪಡೆಯುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೆಂದೋ ಆಗಿದ್ದ ಸಾವನ್ನು ಈಗ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಕೋಮುದ್ವೇಷ ಪ್ರಚೋದಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.
ಈಗ ಕರ್ನಾಟಕ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಯಾವುದಾದರೂ ಹತ್ಯೆ ಎಲ್ಲಾದರೂ ನಡೆಯುತ್ತಾ, ಯಾರದಾದರೂ ಹೆಣ ಬೀಳುತ್ತಾ ಎಂದು ಬಿಜೆಪಿಗರು ಕಾಯುತ್ತಲೇ ಇದ್ದರು. ವಕ್ಫ್ ಪ್ರಕರಣವನ್ನು ಮುನ್ನಲೆಗೆ ತಂದು ರೈತರ ಹೆಸರಲ್ಲಿ ಮುಸ್ಲಿಂ ದ್ವೇಷವನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಯ್ತು. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಾಡುತ್ತಾ ಇರುವುದರಿಂದಲೇ ಮುಸಲ್ಮಾನರ ವಕ್ಫ್ ಮಂಡಳಿ ರೈತರ ಜಮೀನನ್ನು ಕಬಳಿಸುತ್ತಿದೆ, ನೋಟೀಸ್ ಕಳಿಸಲಾಗುತ್ತಿದೆ, ರೈತರ ಜಮೀನಿನ ಪಾಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗುತ್ತಿದೆ ಎಂದು ಹಾದಿ ಬೀದಿಯಲ್ಲಿ ಆರೋಪಿಸುತ್ತಾ ಅನ್ನದಾತರನ್ನು ಆಳುವ ಪಕ್ಷದ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಲೇ ಬಂತು. ಅದಕ್ಕೆಲ್ಲಾ ಕಾಂಗ್ರೆಸ್ ಕೌಂಟರ್ ಕೊಡತೊಡಗಿತು. ನೋಟಿಸ್ ವಾಪಸ್ ಪಡೆಯಲು ಆದೇಶಿಸಿತು. ಯಾವ ರೈತರ ಜಮೀನನ್ನು ಯಾರೂ ಆಕ್ರಮಿಸಲು ಅವಕಾಶ ಕೊಡುವುದಿಲ್ಲವೆಂದು ಭರವಸೆ ಕೊಟ್ಟಿತು. ಇದರಿಂದಾಗಿ ಯಾವಾಗ ಬಿಜೆಪಿಗರ ಕೋಮುದ್ವೇಷದ ರಾಜಕೀಯ ತಂತ್ರಗಾರಿಕೆಗೆ ಸ್ವಲ್ಪ ಹಿನ್ನಡೆಯಾಯ್ತೋ, ಬಿಜಾಪುರದಲ್ಲಿ ಯತ್ನಾಳ ಶೋಭಕ್ಕಳ ಜಂಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಕ್ಫ್ ವಿರೋಧಿ ಅಹೋರಾತ್ರಿ ಧರಣಿ ನಾಲ್ಕೇ ದಿನಕ್ಕೆ ನಿಲ್ಲಿಸಬೇಕಾಯ್ತೋ ಆಗ ಕಂಗಾಲಾಗಿದ್ದ ಬಿಜೆಪಿಗರಿಗೆ ಆತ್ಮಹತ್ಯೆ ಪ್ರಕರಣವೊಂದು ಮುಳುಗುತ್ತಿರುವವರಿಗೆ ಕಡ್ಡಿಯ ಆಶ್ರಯ ಸಿಕ್ಕಂತಾಯ್ತು.
ತೇಜಸ್ವಿ ಸೂರ್ಯ ಎನ್ನುವ ಮತಿಗೆಟ್ಟ ಮತಾಂಧ ಸಂಸದ “ಜಮೀನಿನ ಪಾಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿದ್ದಕ್ಕೆ ಮನನೊಂದು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರುದ್ರಪ್ಪ ಎನ್ನುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎನ್ನುವ ಸ್ಫೋಟಕ ಮಾಹಿತಿಯನ್ನು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡು ಬಿಜೆಪಿಯ ಶವ ರಾಜಕಾರಣಕ್ಕೆ ಚಾಲನೆ ಇತ್ತ. ಇದನ್ನೇ ಚಿಪ್ ಖ್ಯಾತಿಯ ರಂಗಣ್ಣನ ಪಬ್ಲಿಕ್ ಟಿವಿ ಬಿತ್ತರಿಸತೊಡಗಿತು. ಅನ್ನದಾತರಲ್ಲಿ ಇನ್ನೂ ಆತಂಕ ಹೆಚ್ಚಾಯಿತು. ಹಿಂದೂಗಳಿಗೆ ಮುಸ್ಲಿಂ ವಕ್ಫ್ ಮಂಡಳಿಯ ಮೇಲೆ ಆಕ್ರೋಶ ಹೆಚ್ಚಾಗಬೇಕು, ಆ ಮೂಲಕ ಹಿಂದೂಗಳ ಮತಗಳು ಹಾವೇರಿ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕ್ರೋಢೀಕರಣವಾಗಬೇಕು, ಕಾಂಗ್ರೆಸ್ ಹಿಂದೂ ವಿರೋಧಿ ಹಾಗೂ ಮುಸ್ಲಿಂ ಪರ ಎನ್ನುವ ಅಪಪ್ರಚಾರ ಮತವಾಗಿ ಫಲ ನೀಡಬೇಕು’ ಎಂಬುದು ಈ ಸಂಘಿಗಳ ಹುನ್ನಾರವಾಗಿತ್ತು. ಓಟಿಗಾಗಿ ಏನು ಬೇಕಾದರೂ ಮಾಡಬಲ್ಲ, ಎಂತಹ ನೀಚತನಕ್ಕೂ ಇಳಿಯಬಲ್ಲ ಕೋಮುವಾದಿಗಳಿಗೆ ಇಂತಹುದೆಲ್ಲಾ ಕರಗತವಾದ ವಿದ್ಯೆಯಾಗಿತ್ತು.
ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರಾದ ಜಗದಂಬಿಕಾ ಪಾಲ್ ರವರ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ರುದ್ರಣ್ಣನ ತಂದೆ ಚೆನ್ನಪ್ಪನವರನ್ನು ನಿಲ್ಲಿಸಿ ತಮ್ಮ ಮಗ ವಕ್ಫ್ ನಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಎಂದು ಮನವಿ ಪತ್ರ ಸಲ್ಲಿಸಿ ಹೇಳಿಕೆ ಕೊಡಿಸಲಾಯ್ತು. ಆದರೆ ಬಿಜೆಪಿಗರ ಈ ಸುಳ್ಳು ಸೃಷ್ಟಿ ಅತೀ ಬೇಗನೇ ಬಯಲಾಗಿತ್ತು.
ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ.. ಈಗ ವಕ್ಫ್ ಭಯದಿಂದ ಯುವರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಯಾವ ತೇಜಸ್ವಿ ಸೂರ್ಯ ಸುದ್ದಿ ಹರಿಯಬಿಟ್ಟಿದ್ದಾರೋ ಆ ರೈತ ರುದ್ರಣ್ಣ ಎರಡೂ ಮುಕ್ಕಾಲು ವರ್ಷದ ಹಿಂದೆಯೇ ಅಂದರೆ 2022 ಜನವರಿ 6 ರಂದು ಸಾಲಬಾಧೆ ತಾಳಲಾಗದೇ ಅತ್ಮಹತ್ಯೆ ಮಾಡಿಕೊಂಡಿದ್ದರು. ಎಂದೋ ಆದ ಆತ್ಮಹತ್ಯೆ ಪ್ರಕರಣವನ್ನು ವಕ್ಫ್ ನಿಂದಾಗಿ ಈಗ ಆಗಿದೆ ಎಂದು ಸುಳ್ಳು ಹೇಳುವ ಮೂಲಕ ಈ ಕೋಮುಪೀಡಿತ ಸಂಸದ ಧರ್ಮದ್ವೇಷ ಬಿತ್ತುವ ಪಿತೂರಿ ಮಾಡಿದ್ದು ಅಕ್ಷಮ್ಯ ಅಪರಾಧ.
ಬ್ಯಾಂಕ್ ಮತ್ತು ಬೇರೆಕಡೆ 7 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಸಾಲಬಾಧೆಯಿಂದ ಸತ್ತಿದ್ದೂ ನಿಜ. ಅದೇ ಕಾರಣಕ್ಕೆ ಅವನ ತಂದೆ ಸರಕಾರದಿಂದ 5 ಲಕ್ಷ ಪರಿಹಾರ ತೆಗೆದುಕೊಂಡಿದ್ದೂ ಸತ್ಯ. ಹಿಂದಿನ ಪ್ರಕರಣವನ್ನು ಇಂದೇ ಆಗಿದ್ದು ಎಂದು ಬಿಂಬಿಸುವ ಮೂಲಕ ಸರಕಾರದ ವಿರುದ್ಧ ರೈತ ಸಮುದಾಯವನ್ನು, ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ಉಪಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಬಿಜೆಪಿಗರ ನೀಚತನ ಬಯಲಾಗಿದೆ. ರೈತರ ಹೆಸರಲ್ಲಿ ಪ್ರೆಶರ್ ಸೃಷ್ಟಿಸಿ ಚುನಾವಣಾ ಕುಕ್ಕರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಶಡ್ಯಂತ್ರ ಕೇಸರಿ ನಾಯಕರದ್ದಾಗಿದೆ.
ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿ ಸರಕಾರವೇ ಆಡಳಿತದಲ್ಲಿತ್ತು ಹಾಗೂ ಇದೇ ಹಾವೇರಿ ಜಿಲ್ಲೆಯವರಾದ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿದ್ದರು. ಅಂದರೆ ಈ ರೈತನ ಸಾವಿನ ಹೊಣೆಯನ್ನು ಬಿಜೆಪಿಯೇ ಹೊತ್ತುಕೊಳ್ಳಬೇಕಿದೆ. ಆದರೆ ಈಗ ಆ ಆತ್ಮಹತ್ಯೆಯ ಕಳಂಕವನ್ನು ವಕ್ಫ್ ಮಂಡಳಿ ಮೇಲೆ ಹಾಕಿ, ಆ ಮೂಲಕ ಕಾಂಗ್ರೆಸ್ ಸರಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಬಿಜೆಪಿಯದ್ದಾಗಿದೆ.
ಹೀಗೆ ಸಮುದಾಯಗಳ ನಡುವೆ ದ್ವೇಷಬಿತ್ತುವಂತಹ ಸುಳ್ಳು ಸುದ್ದಿಯನ್ನು ಹರಿಯ ಬಿಟ್ಟ ಸಂಸದ ತೇಜಸ್ವಿ ಸೂರ್ಯನ ಮೇಲೆ ಬಿಎನ್ ಎಸ್ 353 (2) ಕಾಲಂ ಅಡಿಯಲ್ಲಿ ಕೇಸು ದಾಖಲಿಸಿ ಎಫ್ ಐ ಆರ್ ಮಾಡಲಾಗಿದೆ. ಆದರೂ ತನ್ನ ನೀಚತನವನ್ನು ಈ ಸಂಸದ ಸಮರ್ಥಿಸಿಕೊಳ್ಳುತ್ತಿರುವುದು ಹಾಗೂ ಇತರೆ ಬಿಜೆಪಿ ನಾಯಕರುಗಳು ಅದನ್ನು ಬೆಂಬಲಿಸುತ್ತಿರುವುದು ನಾಚಿಗೆಗೇಡಿನ ಸಂಗತಿಯಾಗಿದೆ.
ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ರಾಜಕಾರಣ ಮಾಡಲು ಒಂದು ಹೆಣ ಬೇಕೇ ಬೇಕು. ಶವ ಕೇಂದ್ರಿತ ರಾಜಕೀಯಕ್ಕೆ ಈ ಸಲ ಹಿಂದೆಂದೋ ನೀಗಿಕೊಂಡಿದ್ದ ಆತ್ಮಹತ್ಯೆಯನ್ನು ಈಗ ಎಳೆದು ತಂದು ವಕ್ಫ್ ಪ್ರಕರಣಕ್ಕೆ ಲಿಂಕ್ ಮಾಡಿ ತಮ್ಮ ಶವ ರಾಜಕಾರಣ ಮುಂದುವರೆಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕ ಬಸವರಾಜ ಯತ್ನಾಳಾದಿಯಾಗಿ ಬಿಜೆಪಿ ನಾಯಕರು ಈಗ ಹರನಗಿ ಗ್ರಾಮಕ್ಕೆ ತೆರಳಿ ರುದ್ರಣ್ಣನ ಮನೆಗೆ ಭೇಟಿ ಇತ್ತು ಸಾಂತ್ವನ ಹೇಳುವ ನಾಟಕ ಮಾಡುತ್ತಿದ್ದಾರೆ. ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿ ಸರಕಾರ ಇದ್ದು ಈ ಯಾವ ನಾಯಕರೂ ರೈತನ ಮನೆಗೆ ಹೋಗಿರಲಿಲ್ಲ. ವಕ್ಫ್ ಆಸ್ತಿ ತಗಾದೆಯಿಂದಲೇ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದೇ ಆಗಿದ್ದರೆ ಈ ನಾಯಕರುಗಳು ಆಗ ವಕ್ಫ್ ವಿರುದ್ಧ ಕ್ರಮ ಜರುಗಿಸಲಿಲ್ಲ. ಇದೇ ಬಿಜೆಪಿ ಸರಕಾರ ಸಾಲಬಾಧೆಯಿಂದಾದ ಆತ್ಮಹತ್ಯೆ ಎಂದು ಘೋಷಿಸಿಯೇ ಪರಿಹಾರವನ್ನೂ ಕೊಟ್ಟಿದೆ. ಆಗ ಇಲ್ಲದ ರೈತ ಪರ ಕಾಳಜಿ ಈಗ ಈ ಬಿಜೆಪಿಗರಿಗೆ ಉಕ್ಕಿ ಹರಿಯತೊಡಗಿದ್ದರ ಹಿಂದೆ ಕೋಮುರಾಜಕೀಯ ಅಲ್ಲದೆ ಬೇರೇನೂ ಅಲ್ಲ ಎನ್ನುವುದಂತೂ ಸ್ಪಷ್ಟ.
ಈಗ ಬಿಜೆಪಿ ನಾಯಕರು ದಿವಂಗತ ರುದ್ರಣ್ಣನ ತಂದೆಯವರಿಂದ “ತಮ್ಮ ಜಮೀನಿನ ಪಾಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ” ಎಂದು ಹೇಳಿಸುತ್ತಿದ್ದಾರೆ. ಇದೇ ತಕರಾರನ್ನು ಬಿಜೆಪಿ ಸರಕಾರ ಇದ್ದಾಗ ಯಾಕೆ ಹೇಳಲಿಲ್ಲ. ಭೂವಿವಾದದಿಂದಾದ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಜವಾಗಿದ್ದಲ್ಲಿ ಸಾಲಬಾಧೆ ಹೆಸರಲ್ಲಿ ಪರಿಹಾರದ ಫಲಾನುಭವಿಯಾಗಿದ್ದಾದರೂ ಯಾಕೆ? ಬಿಜೆಪಿಗರು ಹರಡಿದ ಸುಳ್ಳನ್ನು ಮುಚ್ಚಿಕೊಂಡು ರೈತನ ಆತ್ಮಹತ್ಯೆಗೆ ವಕ್ಫ್ ಮಂಡಳಿಯೇ ಕಾರಣ ಎಂದು ಸಾಬೀತು ಪಡಿಸಲು ಹೆಣಗಾಡುತ್ತಿದ್ದಾರೆ.
ಈ ಸಾಲಬಾಧೆಯಿಂದಾದ ಆತ್ಮಹತ್ಯೆ ಪ್ರಕರಣವನ್ನು ವಕ್ಫ್ ವಿವಾದದ ಆತ್ಮಹತ್ಯೆ ಎಂದು ಬಿಜೆಪಿಗರು ಬಿಂಬಿಸಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಕೇಂದ್ರ ಸರಕಾರ ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಜಗದಂಬಿಕಾ ಪಾಲ್ ಎನ್ನುವವರ ಅಧ್ಯಕ್ಷತೆಯಲ್ಲಿ ಜಂಟಿ ಸಂಸದೀಯ ಸಮಿತಿಯೊಂದನ್ನು ರಚಿಸಿದೆ. ವಿಜಯಪುರದಲ್ಲಿ ವಕ್ಫ್ ವಿರೋಧಿಸಿ ಬಿಜೆಪಿ ಶಾಸಕ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ತರಾತುರಿಯಲ್ಲಿ ಜೆಪಿಸಿ ಅಧ್ಯಕ್ಷ ಜಗದಂಬಿಕಾರವರನ್ನು ಬಿಜೆಪಿಗರು ದೆಹಲಿಯಿಂದ ಕರೆಸಿಕೊಂಡು ಅವರ ಮುಂದೆ ಮೃತ ರೈತ ರುದ್ರಣ್ಣನವರ ತಂದೆ ಚೆನ್ನಪ್ಪನವರನ್ನು ನಿಲ್ಲಿಸಿ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮನವಿ ಪತ್ರ ಸಲ್ಲಿಸುವ ವ್ಯವಸ್ಥೆ ಮಾಡಿದರು. ಕಾರಣ ಇಷ್ಟೇ ವಕ್ಫ್ ಆಸ್ತಿ ವಿವಾದ ರೈತರನ್ನು ಆತ್ಮಹತ್ಯೆಗೆ ದೂಡುತ್ತದೆ ಎಂದು ಈ ಅಧ್ಯಕ್ಷ ಮಹೋದಯ ಜೆಪಿಸಿ ಸಭೆಯಲ್ಲಿ ಸಮರ್ಥನೆ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಪೂರಕವಾಗಿ ಸುಳ್ಳು ಸಾಕ್ಷಿಯಾಗಿ ರುದ್ರಣ್ಣನ ಸಾವನ್ನು ಬಿಜೆಪಿಗರು ಬಳಸಿಕೊಂಡರು. ಅನಿರ್ದಿಷ್ಟ ಧರಣಿಯನ್ನು ನಾಲ್ಕೇ ದಿನಕ್ಕೆ ಮುಕ್ತಾಯ ಮಾಡಿ ಟೆಂಟ್ ಖಾಲಿ ಮಾಡಿದ ಬಿಜೆಪಿ ನಾಯಕರ ಚಿತ್ತ ರುದ್ರಣ್ಣನ ಮನೆಯತ್ತ ಹರಿಯಿತು. ಈಗ ಶಿಗ್ಗಾಂವ್ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿಯವರ ಮಗನನ್ನು ಗೆಲ್ಲಿಸಲು ಶವ ರಾಜಕಾರಣ ಜೋರಾಗಿದೆ. ರೈತಾಪಿ ಜನರನ್ನು ವಕ್ಫ್ ವಿರುದ್ಧ ಪ್ರಚೋದಿಸಿ ಕಾಂಗ್ರೆಸ್ ನ್ನು ಉಪಚುನಾವಣೆಯಲ್ಲಿ ಸೋಲಿಸುವ ರಾಜಕೀಯ ಪಿತೂರಿ ಜಾರಿಯಲ್ಲಿದೆ.
ಈಗಾಗಲೇ ಯಾವುದೇ ರೈತರ ಆಸ್ತಿಯನ್ನು ಕಬಳಿಸಲು ಅವಕಾಶ ಕೊಡುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ವಕ್ಪ್ ಮಂಡಳಿ ರೈತರಿಗೆ ಕೊಟ್ಟ 423 ನೊಟೀಸ್ ಗಳನ್ನು ಹಿಂಪಡೆಯುವುದಾಗಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿಯಾಗಿದೆ. ಆದರೂ ಚುನಾವಣೆಯ ಮತದಾನ ಮುಗಿಯುವವರೆಗೂ ಈ ವಕ್ಫ್ ವಿವಾದವನ್ನು ಜೀವಂತವಾಗಿಡಲು ಏನು ಮಾಡಲು ಸಾಧ್ಯವೋ ಅದನ್ನು ಬಿಜೆಪಿ ಮಾಡುತ್ತಲೇ ಇರುತ್ತದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲೂ ಈ ವಕ್ಫ್ ಪ್ರಕರಣದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನೇರವಾಗಿ ಅಭಿವೃದ್ಧಿಯ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಬಿಜೆಪಿ ಪಕ್ಷ ಯಾವಾಗಲೂ ಕೋಮುದ್ವೇಷ ರಾಜಕಾರಣದ ಮೂಲಕವೇ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಮತಾಂಧತೆಯ ಕಸರತ್ತನ್ನು ಮಾಡುತ್ತದೆ. ಬಿಜೆಪಿಗರ ಈ ಕೋಮುಕೇಂದ್ರಿತ ರಾಜಕಾರಣದ ತಂತ್ರಗಾರಿಕೆಯನ್ನು ಬೇಧಿಸಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷ ಅಸಹಾಯಕವಾಗುತ್ತಿದೆ. ಬಿಜೆಪಿಗರ ಆಕ್ರಮಣಕಾರಿ ಆಟ ಹಾಗೂ ಕಾಂಗ್ರೆಸ್ಸಿಗರ ರಕ್ಷಣಾತ್ಮಕ ಸೆಣಸಾಟಕ್ಕೆ ಕೋಮು ಸೌಹಾರ್ದತೆ ಹಾಳಾಗುತ್ತಿದೆ. ಮತಾಂಧತೆ ಈಗ ಈ ದೇಶವನ್ನು ಆಳುತ್ತಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ.
ಇದನ್ನೂ ಓದಿ- ಮೂರು ಕ್ಷೇತ್ರ ನೂರಾರು ಸಮಸ್ಯೆ!