ಪುಣೆ: ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ತಮ್ಮ ಕಾರಿನಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಕೆಲ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು, ವಾಗ್ಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಗ್ಲೆ ಅವರ ಕಾರು ಸಂಪೂರ್ಣ ಜಖಂಗೊಂಡಿದೆ.
ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನಬು ನಿಖಿಲ್ ವಾಗ್ಲೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಿಸಿದ್ದರು. ಇದರಿಂದ ಉದ್ರೇಕಗೊಂಡ ಬಿಜೆಪಿ ಕಾರ್ಯಕರ್ತರು ನಿಖಿಲ್ ಕಾರಿನ ಮೇಲೆ ಕಲ್ಲುಗಳನ್ನು ಎಸೆದು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುತ್ತಿರುವ ಕೆಲವು ಹೆಣ್ಣುಮಕ್ಕಳಿಗೂ ಗಾಯಗಳಾಗಿವೆ.
ಶುಕಿರವಾರ ಸಂಜೆ ನಿಲು ಫುಲೆ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ನಿರ್ಭಯ್ ಭಾನೋ ಸಮಾವೇಶಕ್ಕೆ ನಿಖಿಲ್ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆಸಿದ್ದು ನ್ಯಾಯವಾದಿ ಆಸಿಮ್ ಸರೋಡೆಯವರ ನಿವಾಸದಿಂದ ಹೊರಟಿದ್ದ ನಿಖಿಲ್ ಅವರ ಕಾರಿನ ಮೇಲೆ ಕನಿಷ್ಠ ನಾಲ್ಕು ಜಾಗಗಳಲ್ಲಿ ಪ್ರತ್ಯೇಕ ದಾಲಿಗಳು ನಡೆದಿವೆ. ಖಂಡೋಜಿಬಾಬಾ ಚೌಕ್ ಮತ್ತು ಅಲ್ಕಾ ಚೌಕ್ ನಲ್ಲಿ ದ್ವಿಚಕ್ರವಾಹನಗಳಲ್ಲಿ ಬಂದ ದಾಳಿಕೋರರು ಕಲ್ಲುಗಳನ್ನು ಎಸೆದರು ಗಾಜುಗಳನ್ನು ಪುಡಿ ಮಾಡಿ ನಿಖಿಲ್ ಅವರ ಮೇಲೆ ಇಂಕ್ ಎಸೆಯಲು ಯತ್ನಿಸಿದರು.
ಈ ಸಂದರ್ಭದಲ್ಲಿ ರಕ್ಷಣೆ ನೀಡಿದ ಮಹಾವಿಕಾಸ್ ಅಘಾಡಿಯ ಕಾರ್ಯಕರ್ತೆಯರು ನಿಖಿಲ್ ಅವರನ್ನು ಸಮಾರಂಭದ ಸ್ಥಳಕ್ಕೆ ಕರೆದೊಯ್ಯಲು ಯಶಸ್ವಿಯಾದರು. `ಈ ಬಗ್ಗೆಯ ದಾಳಿಗಳಿಂದ ಅವರು ನನ್ನನ್ನು ಡೆಯಲು ಸಾಧ್ಯವಿಲ್ಲ. ಇದು ಮೊದಲ ದಾಳಿ ಏನಲ್ಲ, ಈ ಹಿಂದೆ ಏಳು ಬಾರಿ ಅವರು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಆದರೆ ನನ್ನ ಅಭಿವ್ಯಕ್ತಿಯನ್ನು ಅವರು ತಡೆಯಲು ಸಾಧ್ಯವಾಗಿಲ್ಲ. ದೆಹಲಿ ಮತ್ತು ಮುಂಬೈನಲ್ಲಿ ಕುಳಿತುಕೊಂಡು ಪ್ರಜಾತಂತ್ರವನ್ನು ಧ್ವಂಸಗೊಳಿಸುತ್ತಿರುವ ಶಕ್ತಿಗಳ ವಿರುದ್ಧ ನನ್ನ ಹೋರಾಟ ಜಾರಿಯಲ್ಲಿರುತ್ತದೆʼ ಎಂದು ವಾಗ್ಲೆ ನುಡಿದಿದ್ದಾರೆ.
ದಾಳಿಕೋರರು ನಿರಾಯುಧರಾಗಿದ್ದ ಮಹಿಳಾ ಕಾರ್ಯಕರ್ತೆಯರ ಮೇಲೆ ನಿರ್ದಯವಾಗಿ ದಾಳಿ ನಡೆಸಿದ್ದಾರೆ. ಅವರು ಕಲ್ಲುಗಳನ್ನು, ಇಟ್ಟಿಗೆಗಳನ್ನು ಈ ಹೆಣ್ಣುಮಕ್ಕಳ ಮೇಲೆ ಎಸೆದಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ ಏಳೆಂಟು ಕಾರ್ಯಕರ್ತೆಯರು ಗಾಯಗೊಂಡಿದ್ದಾರೆ ಎಂದು ಪುಣೆ ಕಾಂಗ್ರೆಸ್ ಪಕ್ಷದ ನಾಯಕ ಸಂಗೀತಾ ತಿವಾರಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ MVA ಕಾರ್ಯಕರ್ತೆಯರು ರಾಜ್ಯದ ಗೃಹ ಮಂತ್ರಿಯಾಗಿರಲು ದೇವೇಂದ್ರ ಫಡ್ನವೀಸ್ ನಾಲಾಯಕ್ ಆಗಿದ್ದಾರೆ, ಅವರು ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದ್ದಾರೆ.
ನಿಖಿಲ್ ವಾಗ್ಲೆ ಕಾರಿನ ಮೇಲೆ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಣೆಗೆ ನಿಂತ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಪೊಲೀಸರು ಸ್ಥಳದಲ್ಲೇ ಇದ್ದರೂ ಅವರು ಮೂಕ ಪ್ರೇಕ್ಷಕರಾಗಿದ್ದರು ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಕಲ್ಲುಗಳನ್ನು ತೂರಿದ್ದು ಮತ್ಯಾರೂ ಅಲ್ಲ, ರಾಜ್ಯ ಸರ್ಕಾರವೇ ಈ ದಾಳಿ ಸಂಘಟಿಸಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ಶಿಂಧೆ-ಫಡ್ನವೀಸ್ ಅವರ ಸರ್ಕಾರ ಪ್ರಜಾತಂತ್ರವನ್ನು ನಾಶಗೊಳಿಸುತ್ತಿದೆ ಎಂದು ಸಂಗೀತಾ ತಿವಾರಿ ಹೇಳಿದ್ದಾರೆ.
ಘಟನೆಯನ್ನು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತೀವ್ರವಾಗಿ ಖಂಡಿಸಿದ್ದು, ಇದು ಒಬ್ಬ ವ್ಯಕ್ತಿಯ ಮೇಲೆ ನಡೆದ ದಾಳಿಯಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ. ಬಿಜೆಪಿ-ಶಿವಸೇನೆ ಆಡಳಿತದಲ್ಲಿ ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟೀಕಿಸಿದ್ದಾರೆ.
ಶಿವಸೇನೆ ವಕ್ತಾರ ಸಂಜಯ್ ರಾವತ್ ಕೂಡ ಘಟನೆಯನ್ನು ತೀಕ್ಷ್ಣ ಶಬ್ದಗಳಿಂದ ಖಂಡಿಸಿದ್ದು, ದೆಹಲಿಯ ತಮ್ಮ ಮಾಸ್ಟರ್ ಗಳನ್ನು ಮೆಚ್ಚಿಸಲು ಮುಂಬೈನಲ್ಲಿ ಕುಳಿತುಕೊಂಡವರು ತಮ್ಮ ಗೂಂಡಾಗಳ ಮೂಲಕ ಮಹಾರಾಷ್ಟ್ರದ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ. ಶಿಂಧೆ-ಫಡ್ನವೀಸ್ ಸರ್ಕಾರ ಗೂಂಡಾಗಳ ಸರ್ಕಾರ, ಛತ್ರಪತಿ ಶಿವಾಜಿಯವರ ನಾಡಿನಲ್ಲಿ ಮಹಿಳೆಯರು, ಬಾಲಕಿಯರು ಗೂಂಡಾಗಳಿಂದ ಹಾಡ ಹಗಲಲ್ಲೇ ದಾಳಿಗೊಳಗಾದರೂ ಪುಣೆಯ ಪೊಲೀಸರು ಮೌನವಾಗಿದ್ದಾರೆ. ಇದು ಮಹಾರಾಷ್ಟ್ರಕ್ಕೆ ದೊಡ್ಡ ಅಪಮಾನ ಎಂದು ರಾವತ್ ಹೇಳಿದ್ದಾರೆ.