ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲೂ ಆಡುವುದಿಲ್ಲ. ಸ್ವತಃ ವಿರಾಟ್ ಕೊಹ್ಲಿ ಈ ವಿಷಯವನ್ನು ರಾಷ್ಟ್ರೀಯ ತಂಡದ ಆಯ್ಕೆದಾರರಿಗೆ ತಿಳಿಸಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದರು. ಮೂರನೇ ಪಂದ್ಯದಿಂದ ಅವರು ಭಾರತ ತಂಡಕ್ಕೆ ಆಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.
ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳು ರಾಜ್ ಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿದ್ದು, ನಿನ್ನೆ ಈ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಸಂಬಂಧ ಆಯ್ಕೆದಾರರು ಆನ್ ಲೈನ್ ಸಭೆ ಸೇರುವ ಮುನ್ನ ಕೊಹ್ಲಿ ತಮ್ಮ ಅಲಭ್ಯತೆಯ ಸಂದೇಶವನ್ನು ತಲುಪಿಸಿದ್ದಾರೆ.
ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ತವರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ವಿರಾಟ್ ಮತ್ತು ಅನುಷ್ಕಾ ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಆ ಕಾರಣಕ್ಕೆ ಅವರು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಅವರ ಆತ್ಮೀಯ ಗೆಳೆಯ, ದಕ್ಷಿಣ ಆಫ್ರಿಕಾದ ಆಟಗಾರ ಎ.ಬಿ.ಡಿವಿಲಿಯರ್ ಹೇಳಿದ್ದರಾದರೂ ನಂತರ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದರು. ಭಾರತ ಟೆಸ್ಟ್ ತಂಡದ ಬೆನ್ನೆಲುಬೇ ಆಗಿರುವ ಕೊಹ್ಲಿ ಆಶ್ಚರ್ಯಕರ ರೀತಿಯಲ್ಲಿ ಪಂದ್ಯಗಳಿಂದ ಹೊರಗೆ ಉಳಿದಿರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಭಾರತ ತಂಡದ ಮತ್ತೋರ್ವ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ ಕೂಡ ಗಾಯಾಳುವಾಗಿದ್ದು, ಅವರೂ ಕೂಡ ಮುಂದಿನ ಮೂರು ಪಂದ್ಯಗಳಿಂದ ಹೊರಗೆ ಉಳಿದಿದ್ದಾರೆ. ಐಯ್ಯರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಐಯ್ಯರ್ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಹರಿಸಲಿದೆ. ಶ್ರೇಯಸ್ ಐಯರ್ ಬೆನ್ನು ನೋವು ಮತ್ತು ತೊಡೆಗಳ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.
ಭಾರತ ತಂಡಕ್ಕೆ ಸಮಾಧಾನದ ತರುವ ವಿಷಯವೆಂದರೆ ಕೆ.ಎಲ್.ರಾಹುಲ್ ಮತ್ತು ರವೀಂದ್ರ ಜಡೇಜಾ ಮತ್ತೆ ತಂಡ ಸೇರ್ಪಡೆಗೊಳ್ಳಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಜಡೇಜಾ ಆಡಿರಲಿಲ್ಲ. ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೆ.ಎಲ್.ರಾಹುಲ್ ಗಾಯಾಳುವಾದ್ದರಿಂದ ಎರಡನೇ ಪಂದ್ಯ ಆಡಲು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ತಂಡಕ್ಕೆ ಮತ್ತೆ ಸೇರ್ಪಡೆಯಾಗುತ್ತಿರುವುದು ಟೀಮ್ ಇಂಡಿಯಾಗೆ ಶಕ್ತಿ ಮತ್ತು ಸಮತೋಲನವನ್ನು ನೀಡಿದಂತಾಗಿದೆ.