ಕೆಲವು ವರ್ಗಗಳಿಂದ ಪತ್ರಕರ್ತರ ವೇಷದಲ್ಲಿದ್ದು ಇದೀಗ ದಿಢೀರ್ ಎಂದು ಬಿಜೆಪಿ ಪಕ್ಷದ ವಕ್ತಾರರಾಗಿ ಕಾಣಿಸಿಕೊಂಡಿರುವ ಹರಿಪ್ರಕಾಶ್ ಕೋಣೆಮನೆಗೆ ಯುವಪತ್ರಕರ್ತರು ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ರಾಜ್ಯ ಶಿಕ್ಷಣ ಮಂಡಳಿ ಬಿಡುಗಡೆ ಮಾಡಿದ SSLC ಪರೀಕ್ಷೆಯ ಪೂರ್ವ ಸಿದ್ದತ ಪರೀಕ್ಷೆಯ ವೇಳಪಟ್ಟಿಯಲ್ಲಿ ಇಲ್ಲದಿದ್ದ ಮುಸ್ಲಿಂ ತುಷ್ಟೀಕರಣವನ್ನು ಸೃಷ್ಟಿಸಲು ಹೋಗಿ ಪೇಚಿಗೆ ಸಿಕ್ಕಿಹಾಕಿಕೊಂಡ ಮಾಜಿ ಪತ್ರಕರ್ತ, ಹಾಲಿ ರಾಜಕಾರಣಿ ಹರಿಪ್ರಕಾಶ್ ಕೋಣೆಮನೆ ಕತೆ ದು. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ʼರಾಜ್ಯಮಟ್ಟದ SSLC ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಸಹ ಮುಸ್ಲಿಂ ತುಷ್ಟೀಕರಣ!’ ಎಂದು ಬರೆದುಕೊಂಡಿದ್ದ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಎಡವಟ್ಟು ಮಾಡಿ ಜನರೆದುರು ಬಯಲಾಗಿದ್ದಾರೆ.
ಹಿನ್ನೆಲೆ:
ಕಳೆದ ತಿಂಗಳ ಜನವರಿ 31 ರಂದು ರಾಜ್ಯ ಶಿಕ್ಷಣ ಮಂಡಳಿ SSLC ಪೂರ್ವ ಸಿದ್ದತ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳಾಪಟ್ಟಿ ಹಿಡಿದುಕೊಂಡು ಕೋಣೆಮನೆ ತಮ್ಮ ʼಎಕ್ಸ್ʼ ಖಾತೆಯಲ್ಲಿ, ʼರಾಜ್ಯ ಶಿಕ್ಷಣ ಇಲಾಖೆ ನಮಾಜ್ ಮಾಡಲು ಅನುಕೂಲ ಮಾಡಿಕೊಡಲು ಉಳಿದ ದಿನದ ವೇಳಾಪಟ್ಟಿಯ ಬದಲಾಗಿ ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ನಿಜವಾಗಿಯೂ ಖೇದಕರ. ಮುಸ್ಲಿಂ ತುಷ್ಟೀಕರಣದ ಈ ನೀತಿಯನ್ನು ಬಹಿರಂಗವಾಗಿ ಖಂಡಿಸಬೇಕಾಗಿದೆʼ ಎಂದು ಬರೆದಿದ್ದರು. ಸ್ಪಷ್ಟವಾಗಿ ಈ ಬರೆಹ ಶಾಲಾ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಧರ್ಮ ಕೋಮು ರಾಜಕಾರಣ ಮಾಡುವ ರೀತಿಯಲ್ಲಿತ್ತು ಎಂದು ಅವರ ಮೇಲೆ ಟೀಕೆಗಳ ಸುರಿಮಳೆ ಕೇಳಿಬಂದಿತ್ತು. ಇದೇ ವಿಷಯವು ಅವರು ಹಿಂದೆ ಸಂಪಾದಕರಾಗಿ ಕೆಲಸ ಮಾಡಿರುವ ವಿಸ್ತಾರ ಮಾಧ್ಯಮದಲ್ಲಿಯೂ ಸುದ್ದಿಯಾಗಿ ಪ್ರಕಟವಾಗಿತ್ತು. ಇದೇ ಸುದ್ದಿಯನ್ನು ಚಕ್ರವರ್ತಿ ಸೂಲಿಬೆಲೆ ಕೂಡಾ ಬರೆದುಕೊಂಡಿದ್ದರು. ಜೊತೆಗೆ ಬಿಜೆಪಿ ಕಾರ್ಯಕರ್ತರು ಈ ಸುಳ್ಳುಸುದ್ದಿಯನ್ನೇ ಸತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತ್ರಕರ್ತರು ಬಿಜೆಪಿ ವಕ್ತಾರ ಕೋಣೆಮನೆಗೆ ಕೇಳಿದ್ದು…
ಈ ದಿನ.ಕಾಂ ಪತ್ರಕರ್ತರಾದ ಯತಿರಾಜ್ ಬ್ಯಾಲಹಳ್ಳಿ ಹರಿಪ್ರಕಾಶ್ ಕೋಣೆಮನೆ ಅವರಿಗೆ ಕರೆ ಮಾಡಿ ಅವರಿಗೂ ತಮಗೂ ನಡೆದ ಸಂಭಾಷಣೆಯನ್ನು ಫೇಸ್ಬುಕ್ ಮೂಲಕ ಹಂಚಿಕೊಂಡಿದ್ದಾರೆ. “ಅಲ್ಲಾ ಸರ್, ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಕೋಮು ಭಾವನೆ ಹುಡುಕಿದ್ದೀರಲ್ಲಾ ಸರಿಯೇ?” ಎಂದು ಯತಿರಾಜ್ ಪ್ರಶ್ನಿಸಿದ್ದಾರೆ. ಅದಕ್ಕೆ ಕೋಣೆಮನೆ, “ನೋಡಿ, ಉಳಿದೆಲ್ಲ ದಿನಗಳು ಬೆಳಿಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆ ಮಾಡ್ತಾ ಇದ್ದಾರೆ. ಮಾರ್ಚ್ 1ನೇ ತಾರೀಕು ಮಾತ್ರ ಅಂದರೆ ಶುಕ್ರವಾರದಂದು ಮಧ್ಯಾಹ್ನದ ಮೇಲೆ ಪರೀಕ್ಷೆ ಮಾಡ್ತಾ ಇರೋದು ಏಕೆ?” ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಯತಿರಾಜ್, “ಅಲ್ಲಾ ಸರ್, ಅಂದು ಬೆಳಿಗ್ಗೆ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಹೀಗಾಗಿ ಕನ್ನಡ, ಅರೇಬಿಕ್ ವಿಷಯಗಳ ಪರೀಕ್ಷೆ ಬೆಳಿಗ್ಗೆ ನಡೆಯುತ್ತವೆ. ಎಸ್ಎಸ್ಎಲ್ಸಿ ಪರೀಕ್ಷೆ ಮಧ್ಯಾಹ್ನದ ಮೇಲೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ?”- ಎಂದು ಕೇಳಿದ ಮರುಪ್ರಶ್ನೆಗೆ, ಸ್ವಲ್ಪ ತಡವರಿಸಿದ ಕೋಣೆಮನೆ, “ಹಾಗಾದರೆ ಒಂದು ನೋಟ್ ಹಾಕಬೇಕಿತ್ತು. ಜನರೆಲ್ಲ ಚರ್ಚೆ ಮಾಡುತ್ತಿದ್ದರು. ಇದನ್ನು ನಾನಾಗಿಯೇ ಪೋಸ್ಟ್ ಮಾಡಿದ್ದಲ್ಲ. ಜನರ ಚರ್ಚೆಯ ಭಾಗವಾಗಿ ಪ್ರತಿಕ್ರಿಯಿಸಿದ್ದೇನೆ” ಎಂದು ತಿಪ್ಪೆ ಸಾರಿಸಿದ್ದಾರೆ.
ಮತ್ತೆ ಪಟ್ಟುಬಿಡದ ಯುವ ಪತ್ರಕರ್ತ, “ನೀವು ಪತ್ರಕರ್ತರಾಗಿದ್ದವರು. ಹೀಗೆ ಹೇಳಬಹುದೇ? ಯಾರೋ ಹೇಳಿದ ಮಾತ್ರಕ್ಕೆ ಅದನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದಾಗ, ಕೋಣೆಮನೆಯವರು, “ನೀವು ಸ್ಪಷ್ಟನೆ ಕೇಳಲು ಫೋನ್ ಮಾಡಿದ್ದೀರೋ, ವಾದ ಮಾಡಲು ಫೋನ್ ಮಾಡಿದ್ದೀರೋ?” ಎಂದು ಹೇಳಿ ಫೋನ್ ಕರೆ ಕಟ್ ಮಾಡಿರುವುದಾಗಿ ಯತಿರಾಜ್ ತಿಳಿಸಿದ್ದಾರೆ.
ವಾಸ್ತವ ಸಂಗತಿ ಏನೆಂದರೆ….
ಅಸಲಿಗೆ ರಾಜ್ಯ ಶಿಕ್ಷಣ ಮಂಡಳಿ ನಿಗದಿಪಡಿಸಿ ಪ್ರಕಟಿಸಿದ್ದ ಪರೀಕ್ಷಾ ವೇಳಾಪಟ್ಟಿಯಲ್ಲಿ ಇವರು ಆರೋಪಿಸಿದಂತೆ ಏನೂ ಆಗಿರಲಿಲ್ಲ, ಯಾರ ತುಷ್ಟೀಕರಣವೂ ಇರಲಿಲ್ಲ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಒಂದೇ ಸಮಯದಲ್ಲಿ ನಡೆಯುತ್ತಿರುವುದರಿಂದ ಬೆಳಿಗ್ಗೆ ಪಿಯುಸಿ ಪರೀಕ್ಷೆ ಇದ್ದ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ನಿಗದಿಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಪಿಯುಸಿಗೆ ಇದ್ದುದರಿಂದ ಮದ್ಯಾಹ್ನ ಹತ್ತನೇ ತರಗರಿಯ ಪರೀಕ್ಷೆ ನಿಗದಿಯಾಗಿತ್ತು ಎಂದು ಶಿಕ್ಷಣ ಮಂಡಳಿ ಸ್ಪಷ್ಟನೆಯನ್ನೂ ನೀಡಿದೆ.
ಇಷ್ಟು ಸರಳ ವಿಷಯ ಅರ್ಥಮಾಡಿಕೊಳ್ಳದ ಹರಿಪ್ರಕಾಶ್ ಕೋಣೆಮನೆ ಇದರಲ್ಲಿ ಮುಸ್ಲಿಂ ದ್ವೇಷ ಹರಡಿಸಲು ಪ್ರಯತ್ನಿಸಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.
ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಟ್ರೋಲ್ ಆದ ಚಕ್ರವರ್ತಿ ಸೂಲಿಬೆಲೆ ಕೂಡ ‘ಕರ್ನಾಟಕ ರಾಜ್ಯದ 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಬೆಳಗಿನ ಅವಧಿಯಲ್ಲಿ ಎಲ್ಲಾ ಪರೀಕ್ಷೆಗಳು ನಡೆಯುತ್ತವೆ. ಆದರೆ ಶುಕ್ರವಾರ. ಏಕೆ? ಓಹ್.. ನಮಾಜ್ಗೆ ಸಮಯ?ʼ ಎಂದು ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಬರೆದುಕೊಂಡು ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾರೆ.