ಮುಂಬರುವ ಲೋಕಸಭೆ ಚುನಾವಣೆ 2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್‌ಗೆ 2,000 ರೂ.ಗೆ ಏರಿಕೆಯಾಗಬಹುದು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗುರುವಾರ(ಫೆಬ್ರವರಿ 29) ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ಮತ್ತೆ ಗೆದ್ದರೆ, ಅಡುಗೆ ಅನಿಲ ದರ ₹ 1,500ದಿಂದ ₹ 2,000ಕ್ಕೆ ತಲುಪಬಹುದು. ಇದರಿಂದಾಗಿ ಮರದ ಕಟ್ಟಿಗೆ ಸಂಗ್ರಹಿಸಿ ಒಲೆ ಹಚ್ಚುವ ಹಳೆಯ ಅಭ್ಯಾಸಕ್ಕೆ ನಾವು ಹಿಂತಿರುಗಬೇಕಾಗಬಹುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು MGNREGA ಬಾಕಿ ಪಾವತಿಯನ್ನು ಕೂಡ ನೀಡಿಲ್ಲ ಎಂದು ಕಿಡಿಕಾರಿದರು.
ಮನೆ ಇಲ್ಲದವರಿಗೆ ಮನೆ ಕಲ್ಪಿಸಲು ರೂಪಿಸಲಾಗಿರುವ ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಏಪ್ರಿಲ್‌ನೊಳಗೆ ರಾಜ್ಯದಲ್ಲಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ರಾಜ್ಯ ಸರ್ಕಾರದಿಂದಲೇ ಮನೆಗಳನ್ನು ನಿರ್ಮಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಘೋಷಿಸಿದರು.