Thursday, December 12, 2024

ಬಿಜೆಪಿಯವರು ದುರುದ್ದೇಶದ ಸುಳ್ಳು ಪ್ರಕರಣವನ್ನು ಮಾಡುತ್ತಿದ್ದಾರೆ : ಸಿದ್ದರಾಮಯ್ಯ

Most read

ಬೆಂಗಳೂರು : ʼನನ್ನ ಮೇಲೆ ದುರುದ್ದೇಶದಿಂದ ಕೂಡಿದ ಸುಳ್ಳು ಪ್ರಕರಣ ಇದಾಗಿದ್ದು (ಮುಡಾ ಪ್ರಕರಣ), ವಿಚಾರಣೆಯ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ವಾಸ್ತವಾಂಶ ತಿಳಿಸಿದ್ದೇನೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆಯ ನಂತರ ಟ್ವೀಟ್‌ ಮಾಡಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಕೋರಿದಂತೆ, ರಾಜ್ಯಪಾಲರ ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಈಗ ಬಿಜೆಪಿ ನಾಯಕರು ಲೋಕಾಯುಕ್ತ ವಿಚಾರಣೆ ಬೇಡ, ಸಿಬಿಐಗೆ ವಹಿಸಬೇಕು ಎಂದು ತಗಾದೆ ತೆಗೆದರೆ ಅದು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದಲೇ ಅವರ ಎಲ್ಲಾ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐ ಗೆ ವಹಿಸಿದ್ದಾರೆಯೇ? ಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದಲ್ಲಿ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆಯೂ ಗೌರವವಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮುಡಾದಿಂದ 14 ನಿವೇಶನಗಳು ಕಾನೂನೂಬದ್ಧವಾಗಿಯೇ ಹಂಚಿಕೆ ಆಗಿದೆ. ಬಿಜೆಪಿ – ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದೇನೆ. ತನಿಖೆಯನ್ನು ಕಾನೂನುರೀತ್ಯಾ ಮುಂದುವರೆಸಲಿದ್ದಾರೆ ಎಂದು ಸ್ಪಷ್ಟಣೆ ನೀಡಿದ್ದಾರೆ

ಮುಂದುವರೆದು, ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿಯಿಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ಇಡೀ ಪ್ರಕರಣವೇ ಒಂದು ಷಡ್ಯಂತ್ರವಾಗಿರುವುದರಿಂದ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ. ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇನೆ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

More articles

Latest article