ಲೋಕಸಭೆ ಚುನಾವಣೆಗೆ ಕರ್ನಾಟಕದ 20 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದ ಬೆನ್ನಲ್ಲೇ ಟಿಕೆಟ್ ವಂಚಿತರ ಆಕ್ರೋಶ ಸ್ಫೋಟಗೊಂಡಿದೆ. ಟಿಕೆಟ್ ಕೈತಪ್ಪಿದ ಹಾಲಿ ಸಂಸದರು, ಟಿಕೆಟ್ ಮೇಲೆ ಕಣ್ಣಿಟ್ಟು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದವರು ತೀರ್ವ ಅಸಮಾಧಾನಗೊಂಡಿದ್ದಾರೆ.
ಲೋಕಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ರಾಜ್ಯದ ಹಲವೆಡೆ ಟಿಕೆಟ್ ವಂಚಿತರ ಆಕ್ರೋಶ ಸ್ಫೋಟಗೊಂಡಿದೆ. ಬಿಜೆಪಿ ನಾಯಕರ ಭಿನ್ನಮತದ ಬೇಗೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣೆ ಪ್ರಚಾರ ಆರಂಭಿಸುವಂತಾಗಿದೆ. ರಾಜ್ಯದ ಎಲ್ಲೆಲ್ಲಿ ಬಿಜೆಪಿ ಬಂಡಾಯ ಹೆಚ್ಚಾಗಿದೆ.
ಯಾವ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ:-
ಹಾವೇರಿ ಕ್ಷೇತ್ರದಿಂದ ಪುತ್ರ ಕಾಂತೇಶ್ ಗೆ ನಿರೀಕ್ಷೆಯಲ್ಲಿದ್ದ ಈಶ್ವರಪ್ಪಗೆ ತೀರ್ವ ನಿರಾಶೆ ಉಂಟಾಗಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ, ಲೋಕಸಭೆ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಬಂಡಾಯ ಶಿವಮೊಗ್ಗ ಕ್ಷೇತ್ರಕಷ್ಟೇ ಸೀಮಿತ. ಬಿಜೆಪಿ ಪಕ್ಷ ಅಪ್ಪ ಮಕ್ಕಳ ಪಕ್ಷವಲ್ಲ, ಅವರ ವಂಚನೆಯಿಂದಾಗಿ ಈ ನಡೆ ಅನಿವಾರ್ಯವಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಈಶ್ವರಪ್ಪಗೆ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರ ಪುತ್ರನಿಗೆ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಟಿಕೆಟ್ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಇದೀಗ ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಘೋಷಣೆಯಾದ ಬೆನ್ನಲ್ಲೇ ಈಶ್ವರಪ್ಪ ಅಸಮಾಧಾನ ಸ್ಫೋಟಗೊಂಡಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ, ಸಿಟಿ ರವಿ ಮತ್ತು ಪ್ರಮೋದ್ ಮದ್ವರಾಜ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಕ್ಷೇತ್ರದ ಹಿಡಿತ ಕಳೆದುಕೊಂಡಿರುವ ಶೋಭಾ ಅವರಿಗೆ ಅವರ ಕ್ಷದ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದಿತ್ತು. ಹಾಗಾಗಿ ಅವರನ್ನು ಬೆಂಗಳೂರು ಉತ್ತರಕ್ಕೆ ಸ್ಥಳಾಂತರ ಗೊಳಿಸಿದ್ದಾರೆ. ಕ್ಷೇತ್ರದಲ್ಲಿ ಸಿಟಿ ರವಿ ಹಾಗೂ ಪ್ರಮೋದ್ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಟಕೆಟ್ ನೀಡುವ ನಿರೀಕ್ಷೆ ಇಟ್ಟಿದ್ದ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡುವಂತಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೌದು, ಆಕಾಂಕ್ಷಿಗಳಾಗಿದ್ದ ಮೂವರನ್ನು ಬಿಟ್ಟು ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ನೀಡಿದೆ. ಇದರಿಂದ ಸಿಟಿ ರವಿ ಹಾಗೂ ಅವರ ಬೆಂಬಲಿಗರು ಅಸಮಧಾನಗೊಂಡಿರುವು ಗುಪ್ತವಾಗಿರುವ ವಿಚಾವೇನಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಧುಸ್ವಾಮಿ ತುಮಕೂರು ಲೋಕಸಭಾ ಟಿಕೆಟ್‌ಗೆ ಟವಲ್ ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಹೊರಗಿನಿಂದ ಬಂದ ವಿ. ಸೋಮಣ್ಣ ಅವರಿಗೆ ಮಣೆ ಹಾಕಿದೆ. ತುಮಕೂರಿನಲ್ಲಿ ಮಾಜಿ ಸಚಿವ ವಿ ಸೋಮಣ್ಣಗೆ ಟಿಕೆಟ್ ಕೊಟ್ಟಿರುವುದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸಿಟ್ಟಿಗೆ ಕಾರಣವಾಗಿದೆ. ಅಭ್ಯರ್ಥಿಯಾಗಿ ಘೋಷಣೆಗೊಂಡಿರುವ ಸೋಮಣ್ಣ ಅವರು ಭೇಟಿಗೆ ಅವಕಾಶ ಕೇಳಿದರೂ ನಿರಾಕರಿಸಿರುವ ಮಾಧುಸ್ವಾಮಿ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಅಭ್ಯರ್ಥಿಯನ್ನು ಸೋಲಿಸಲು ಟೊಂಕಕಟ್ಟಿ ನಿಂತಿದ್ದಾರೆ ಎಂದು ತುಮಕೂರಿನಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ಗೆ ಹಾವೇರಿ ಅಥವಾ ಧಾರವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಎರಡೂ ಕ್ಷೇತ್ರಗಳು ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ಅವರ ಮನವೊಲಿಸಲು ಕೇಂದ್ರ ಗ್ರಹ ಸಚಿವ ಅಮಿತ್ ಶಾ ಖುದ್ದು ಕರೆ ಮಾಡಿದ್ದು, ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ಹೊಲ್ಲದ ಮನಸ್ಸಿನಿಂದ ಶೆಟ್ಟರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಬಹುತೇಕ ಖಚಿತ ಎಂದು ಹಾಲಿ ಸಂಸದ ಮಂಗಳ ಅಂಗಡಿ ಹೇಳುತ್ತಿದ್ದಂತೆ ಬಿಜೆಪಿ ಶಾಸಕ ಅಭಯ್ ಪಾಟೀಲ್, ನಮ್ಮಲ್ಲಿ ಸ್ಥಳೀಯವಾಗಿ ಅನೇಕ ನಾಯಕರು ಸ್ಪರ್ಧೆಗೆ ಸಮರ್ಥರಿದ್ದಾರೆ ಎಂದು ಶೆಟ್ಟರ್ ವಿರುದ್ಧ ಬಹಿರಂಗವಾಗಯೇ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಕೈತಪ್ಪಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತರ ಸಂಗಣ್ಣ ಕರಡಿ ಬದಲಿಗೆ ಡಾ. ಕೆ ಬಸವರಾಜ ಎಂಬುವವರಿಗೆ ಟಿಕೆಟ್ ನೀಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಬಿಜೆಪಿ ಅಭ್ಯರ್ಥಿ ಡಾ. ಕೆ ಬಸವರಾಜ ಮಾಧ್ಯಮಗೋಷ್ಠಿ ನಡೆಯುತ್ತಿದ್ದಾಗಲೇ ಸಂಗಣ್ಣ ಅಭಿಮಾನಗಳು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ.
ಕರಡಿ ಸಂಗಣ್ಣ ಅಸಮಾಧಾನ, ನನಗೆ ನೋವಿನ ಸಂಗತಿ ಅಂದ್ರೆ ಟಿಕೆಟ್ ಮಿಸ್ಸಾದಾಗಿನಿಂದ ಇಲ್ಲಿಯತನಕ ಯಾವೊಬ್ಬ ನಾಯಕರೂ ಕರೆ ಮಾಡಿಲ್ಲ. ಸೌಜನ್ಯಕ್ಕಾದರೂ ಕರೆ ಮಾಡಬೇಕಿತ್ತು, ಅವರು ಬ್ಯುಸಿ ಇದ್ದಾರೋ ಏನೋ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಬರಬಹುದು ಎಂಬ ಚರ್ಚೆಗಳು ಕೂಡ ಕೊಪ್ಪಳದಲ್ಲಿ ಚರ್ಚೆಗಳು ಆಗುತ್ತಿದೆ.
ದಕ್ಷಿಣ ಕನ್ನಡ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಲಾಗಿದೆ. ಮೇಲ್ನೋಟಕ್ಕೆ ಈ ನಿರ್ಧಾರವನ್ನು ಕಟೀಲ್ ಸ್ವಾಗತಿಸಿದ್ದರೂ ಒಳಗಿಂದೊಳಗೆ ಅವರಿಗೂ ಅಸಮಾಧಾನವಿದೆ ಎಂದು ಅಲ್ಲಿನ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅವರ ಬೆಂಬಲಿಗರಿಗೆ ಅಸಮಾಧಾನವಾಗಿದೆ.