ಮೈಸೂರು: ಲೋಕಾಯುಕ್ತ ವಿಚಾರಣೆಗೆ ಮೈಸೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗೋ ಬ್ಯಾಕ್ ಸಿಎಂ ಚಳವಳಿ ನಡೆಸಿದೆ.
ಲೋಕಾಯುಕ್ತ ಕಚೇರಿಯ ಸಮೀಪದಲ್ಲಿ ವಾಹನ ಸಂಚಾರ ಹಾಗು ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಲೋಕಾಯುಕ್ತ ಕಚೇರಿ ಸಮೀಪ ಭದ್ರತೆಗಾಗಿ ನೂರಾರು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಮಸ್ವಾಮಿ ವೃತ್ತದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಪ್ರತಿಭಟನೆಗೆ ತಡೆಯೊಡ್ಡಿದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆಯಿತು. ನಂತರ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕರೆದೊಯ್ದರು.
ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.