Thursday, December 12, 2024

ದರ್ಶನ್ ಗೆ ಸರ್ಜರಿ ನಡೆಸಲು ವೈದ್ಯರ ನಿರ್ಧಾರ; ಕುಟುಂಬಸ್ಥರ ಸಮ್ಮತಿ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂ 2 ಆಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಬೆನ್ನು ನೋವು ತೀವ್ರವಾಗಿದ್ದು ಶಸ್ತ್ರ ಚಿಕಿತ್ಸೆ ನಡೆಸಲು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


ಆರೋಗ್ಯದ ಹಿತದೃಷ್ಟಿಯಿಂದ ಸರ್ಜರಿ ಸೂಕ್ತ ಎಂದು ವೈದ್ಯರು ಹೇಳಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಇತರರು ಸರ್ಜರಿ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸರ್ಜರಿ ನಡೆಸುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.


ಬೆನ್ನು ಹುರಿಯ ಸಮಸ್ಯೆಗೆ ಚಿಕಿತ್ಸೆ ಪಡೆಯಬೇಕೆಂದು ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರನಟ ದರ್ಶನ್ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಖ್ಯಾತ ನರರೋಗ ತಜ್ಞ ಡಾ.ನವೀನ್ ಅವರು ದರ್ಶನ್ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಡಾ. ನವೀನ್ ಅಪ್ಪಾಜಿಗೌಡ, ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮೊದಲಾದ ಪ್ರಾಥಮಿಕ ಪರೀಕ್ಷೆಗಳನ್ನು ಮಾಡಲಾಗಿದೆ. ಬೆನ್ನು ಮೂಳೆಯ ಎಂಆರ್ ಐ ಸ್ಕ್ಯಾನ್ ಮಾಡಲಾಗಿದೆ. ಎಲ್ಲ ಪರೀಕ್ಷೆಗಳ ವರದಿ ಬಂದ ನಂತರವಷ್ಟೇ ಶಸ್ತ್ರಚಿಕಿತ್ಸೆ ಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದರು. ಇದೀಗ ವರದಿಗಳು ಬಂದಿದ್ದು, ಸರ್ಜರಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
2013ರಲ್ಲಿ ಬೃಂದಾವನ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕುದುರೆ ಮೇಲಿಂದ ಬಿದ್ದಿದ್ದರಿಂದ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಆ ನೋವು ತೀವ್ರವಾಗಿ ಕಾಡುತ್ತಿದೆ. ಮೊದಲ ಬಾರಿ ಬೆನ್ನು ನೋವು ಕಾಣಿಸಿಕೊಂಡಾಗ ದರ್ಶನ್ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಮತ್ತೊಮ್ಮೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದರಾದರೂ ಹೈಕೋರ್ಟ್ ಬೆಂಗಳೂರು ಬಿಟ್ಟು ಹೊರಹೋಗುವಂತಿಲ್ಲ ಎಂದು ಷರತ್ತು ವಿಧಿಸಿದ್ದರಿಂದ ಬಿಜಿಎಸ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ದರ್ಶನ್ ಕಳೆದ ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದರು. ಅವರು ಪತ್ನಿ ವಾಸಿಸುತ್ತಿರುವ ಜೆಪಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಪುತ್ರ ವಿನೀಶ್ ಹುಟ್ಟುಹಬ್ಬ ಆಚರಿಸಿ ವಿಶ್ರಾಂತಿ ಪಡೆದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದರು.


ದರ್ಶನ್ ಗೆ ಪ್ರತಿ ವಾರ ತಾನು ಪಡೆಯುತ್ತಿರುವ ಚಿಕಿತ್ಸೆಯ ವಿವರಗಳನ್ನು ಹೈಕೋರ್ಟ್ ಗೆ ಸಲ್ಲಿಸಬೇಕಾಗಿದೆ. ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11 ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.

More articles

Latest article