ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಗ್ರರಿಗೆ ಕರ್ನಾಟಕವನ್ನು ಸ್ವರ್ಗವನ್ನಾಗಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಶಾಂತಿ, ನೆಮ್ಮದಿ, ಸಮೃದ್ಧಿ ಹಾಗೂ ಅಭಿವೃದ್ಧಿಗೆ ಹೆಸರಾಗಿದ್ದ ಕರ್ನಾಟಕವನ್ನು ಉಗ್ರರ ಸ್ಲೀಪರ್ ಸೆಲ್ ಆಗಿ ಮಾಡುತ್ತಿದೆ ರಾಜ್ಯದ ಕಾಂಗ್ರೆಸ್ ಸರ್ಕಾರ. ನಿಷೇಧಿತ ಉಗ್ರ ಸಂಘಟನೆಯ ಪಿಎಫ್ಐನ ಕಬಂಧ ಬಾಹುಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಉಗ್ರರನ್ನು ಹೆಡೆಮುರಿ ಕಟ್ಟದೆ, ಅವರಿಗೆ ಅಮಾಯಕರು, ಬ್ರದರ್ಸ್ ಎಂಬ ಪಟ್ಟ ಕಟ್ಟುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವೀನ್ಯತೆಯ ಸೂಚ್ಯಂಕದಲ್ಲಿ ಕರ್ನಾಟಕ ನಂಬರ್ 1 ಸ್ಥಾನ ಗಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಉಗ್ರರ ಅಡಗು ಹಾಗೂ ಚಟುವಟಿಕೆಯ ನಂಬರ್ 1 ತಾಣವಾಗಿ ಬದಲಾಗುತ್ತಿದೆ. ಇದು ಕಾಂಗ್ರೆಸ್ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ’ವೆಂದು ಬಿಜೆಪಿ ಟೀಕಿಸಿದೆ.
ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟಿರುವ ಗ್ಯಾರಂಟಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರವು ಮಹಿಳೆಯರ ಅಸುರಕ್ಷತೆಯ ಗ್ಯಾರಂಟಿ, ಮಾನಭಂಗ ಮಾಡಿದವರ ರಕ್ಷಣೆ ಗ್ಯಾರಂಟಿ, ಇಂಧನ ಇಲಾಖೆಯ ನೌಕರರ ಕಡಿತ ಗ್ಯಾರಂಟಿ, ಹಣವಿಲ್ಲದೆ ಎಮೆರ್ಜೆನ್ಸಿ ಬಜೆಟ್ ಗ್ಯಾರಂಟಿ ಮತ್ತು ರಾಮ ಮಂದಿರ ಬಹಿಷ್ಕಾರದ ಗ್ಯಾರಂಟಿ ನೀಡಿದೆ. ಕನ್ನಡಿಗರ ಕಿವಿ ಮೇಲೆ ಗ್ಯಾರಂಟಿಯ ಹೂವಿಟ್ಟಿರುವ “ಮಜವಾದಿ ಸರ್ಕಾರ” ಅರಾಜಕತೆಯ ಗ್ಯಾರಂಟಿ ನೀಡಿ ಸರ್ವನಾಶ ಮಾಡಲು ಹೊರಟಿದೆ!’ ಎಂದು ಬಿಜೆಪಿ ಕುಟುಕಿದೆ.