ಬಿಲ್ಲವರು 2024 ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯವನ್ನು ಬಳಸಿಕೊಳ್ಳಬೇಕು. ಇಲ್ಲದೇ ಇದ್ದರೆ ಬಿಲ್ಲವ ಸಮುದಾಯ ಮತ್ತೆ ಗತ ಕಾಲಕ್ಕೆ ಹಿಂದಿರುಗುವ ಅಪಾಯವಿದೆ. “ನಾವು ಕೊಲ್ಲುವವರೂ ಅಲ್ಲ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು” ಎಂಬುದನ್ನು ಈ ಚುನಾವಣೆಯ ಮೂಲಕ ಬಿಲ್ಲವರು ಸಾರಿ ಸಾರಿ ಹೇಳಬೇಕಿದೆ – ನವೀನ್ ಸೂರಿಂಜೆ, ಪತ್ರಕರ್ತರು
ಹಿಂದುತ್ವ ಮತ್ತು ಬಿಲ್ಲವರ ಸಂಬಂಧದ ಬಗೆಗಿನ ಸಣ್ಣ ಘಟನೆ ನೆನಪು ಮಾಡಿಕೊಳ್ಳಿ. 2006 ಡಿಸೆಂಬರ್ 1 ರಂದು ಈ ಘಟನೆ ಎಲ್ಲವೂ ನನ್ನ ಕಣ್ಣ ಮುಂದೆಯೇ ನಡೆದಿತ್ತು. ಸುಖಾನಂದ ಶೆಟ್ಟಿ ಎಂಬ ಬಿಜೆಪಿ ಮುಖಂಡನ ಶವಯಾತ್ರೆ ನಡೆದಿತ್ತು. ಆಗ ಬಿಜೆಪಿ ಸರ್ಕಾರದ ಕಾಲ. ಬಿಜೆಪಿಯ ನಾಗರಾಜ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು ಅವರ ಖುದ್ದು ಉಪಸ್ಥಿತಿಯಲ್ಲೇ ಶವಯಾತ್ರೆ ನಡೆಯುತ್ತಿತ್ತು. ಮಂಗಳೂರಿನಿಂದ ಮೂಲ್ಕಿಗೆ ಶವಯಾತ್ರೆ ತಲುಪುತ್ತಿದ್ದಂತೆ ಪೊಲೀಸ್ ಮತ್ತು ಹಿಂದುತ್ವ ಕಾರ್ಯಕರ್ತರ ಮಧ್ಯೆ ಸ್ವಲ್ಪ ಗೊಂದಲ ಉಂಟಾಗಿತ್ತು. ಸ್ಥಳದಲ್ಲಿದ್ದ ಸಚಿವ ನಾಗರಾಜ ಶೆಟ್ಟಿಯವರು ಗೊಂದಲ ಬಗೆಹರಿಸುವ ಬದಲು ಬದಿಗೆ ನಿಂತರು. ಯಾತ್ರೆಯಲ್ಲೇ ಇದ್ದ ಪೊಲೀಸ್ ವರಿಷ್ಠಾಧಿಕಾರಿಯವರು ಶೂಟೌಟ್ ಗೆ ಆದೇಶ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿಯ ಗನ್ ಮ್ಯಾನ್ ತನ್ನ ರಿವಾಲ್ವರ್ ನಿಂದ ಶೂಟ್ ಮಾಡಿದರು. ನಮ್ಮ ಕಣ್ಣೆದುರೇ ಪ್ರೇಮನಾಥ್ ಅಮೀನ್, ದಿನೇಶ್ ಕೋಟ್ಯಾನ್ ಎಂಬ ಬಿಲ್ಲವ ಹಿಂದುತ್ವದ ಹುಡುಗರು ರಕ್ತದೊಂದಿಗೆ ನೆಲಕ್ಕುರುಳಿದರು. ಶವಯಾತ್ರೆಗೆ ಇನ್ನೆರಡು ಬಿಲ್ಲವರ ಶವಗಳು ಸೇರ್ಪಡೆಗೊಂಡವು. ಅದಾದ ನಂತರ ಚುನಾವಣೆ ನಡೆದು ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಇಬ್ಬರು ಬಿಲ್ಲವ ಹುಡುಗರನ್ನು ವಿನಾಕಾರಣ ಶೂಟೌಟ್ ಮಾಡಿದ್ದ ಪೊಲೀಸ್ ಕಾನ್ಸ್ಟೇಬಲ್ ರನ್ನು ಬಿಜೆಪಿಯ ಮಂತ್ರಿ ತನ್ನ ಗನ್ ಮ್ಯಾನ್ ಆಗಿ ನೇಮಿಸಿಕೊಂಡರು. ಹಿಂದುತ್ವ ಕಾರ್ಯಕರ್ತರು ಬಿಜೆಪಿಯ ಮಂತ್ರಿಯನ್ನು ಸಂಪರ್ಕಿಸಬೇಕಾದರೆ ಆ ಗನ್ ಮ್ಯಾನ್ ಮೂಲಕವೇ ಹೋಗಬೇಕಿತ್ತು ಅನ್ನುವಷ್ಟರ ಮಟ್ಟಿಗೆ ಮಂತ್ರಿಗೆ ಆ ಗನ್ ಮ್ಯಾನ್ ಆಪ್ತರಾಗಿದ್ದರು. ಆ ಮಂತ್ರಿಯ ಅವಧಿ ಮುಗಿಯುವ ವೇಳೆಗೆ ಆ ಗನ್ ಮ್ಯಾನ್ ಕಾನ್ಸ್ಟೇಬಲ್ ನಿಂದ ಎಎಸ್ಐ ಆಗಿ ಪದೋನ್ನತಿ ಹೊಂದಿದ್ದರು. ಶೂಟೌಟ್ ಗೆ ಆದೇಶ ನೀಡಿದ್ದ ಐಪಿಎಸ್ ಅಧಿಕಾರಿ ಮುಂದೆ ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅತ್ಯುನ್ನತ ಹುದ್ದೆಗಳನ್ನು ಪಡೆದರು. ಇವೆಲ್ಲವೂ ಏನನ್ನು ಸೂಚಿಸುತ್ತದೆ? ಅಧಿಕಾರಕ್ಕಾಗಿಯೇ ಬಿಸಿರಕ್ತದ ಬಿಲ್ಲವ ಯುವಕರನ್ನು ಬಲಿ ಕೊಡಲಾಯಿತು ಎನ್ನುವುದಕ್ಕೆ ಬೇರೆ ಪುರಾವೆಗಳು ಬೇಕೇ ?
ಹಿಂದುತ್ವ ರಾಜಕಾರಣದ ಮೊದಲ ಗುರಿ ಮುಸ್ಲೀಮರು ಎಂದು ಮೇಲ್ನೋಟಕ್ಕೆ ಭಾಸವಾಗುವಂತಿದ್ದರೂ ನಿಜವಾಗಿ ಹಿಂದುತ್ವದ ಮೊದಲ ಗುರಿ ಬಿಲ್ಲವ ಸೇರಿದಂತೆ ಹಿಂದೂ ಸಮುದಾಯದ ಹಿಂದುಳಿದ ವರ್ಗಗಳು. ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ಮುಸ್ಲಿಂ, ಕ್ರಿಶ್ಚಿಯನ್ನರ ವಿರುದ್ಧ ಕೊಲ್ಲು ಮತ್ತು ಕೊಲ್ಲಲ್ಪಡು ಎಂಬ ಸೂತ್ರದಂತೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಕರಾವಳಿಯ ಕೋಮುಗಲಭೆಯಲ್ಲಿ ಸತ್ತವರ ಪಟ್ಟಿ ನೋಡಿ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
2018 ಜನವರಿ 3 ರಂದು ಕಾಟಿಪಳ್ಳದಲ್ಲಿ ದೀಪಕ್ ಎಂಬವರ ಕೊಲೆಯಾಯಿತು. ಈ ಕೊಲೆಗೆ ಪ್ರತೀಕಾರವಾಗಿ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಬಳಿ ಮುಬ್ಬಶ್ಶೀರ್ ಎಂಬಾತನ ಮೇಲೆ ಕೊಲೆಯತ್ನ ನಡೆಯಿತು. ಇದಾದ ಕೆಲ ಹೊತ್ತಲ್ಲೇ ಕೊಟ್ಟಾರ ಚೌಕಿ ಬಳಿ ಬಶೀರ್ ಎಂಬಾತನ ಕೊಲೆಯಾಯಿತು. ಈ ಎರಡೂ ಪ್ರಕರಣಗಳಲ್ಲಿ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆ ಪೈಕಿ 11 ಯುವಕರು ಬಿಲ್ಲವರು !
ಹೋಂ ಸ್ಟೇ ಅಟ್ಯಾಕ್ ನಲ್ಲಿ ಹಿಂದೂ ಜಾಗರಣಾ ವೇದಿಕೆಯ 43 ಯುವಕರನ್ನು ಬಂಧಿಸಲಾಯ್ತು. ಅದರಲ್ಲಿ ಎಷ್ಟು ಬಂಟರು? ಎಷ್ಟು ಬ್ರಾಹ್ಮಣರಿದ್ದರು ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಕೇವಲ ಇಬ್ಬರು ಬಂಟರು ಮತ್ತು ದೊಡ್ಡ ೦ ಸಂಖ್ಯೆಯ ಬ್ರಾಹ್ಮಣರು. 43 ಆರೋಪಿಗಳ ಪೈಕಿ 39 ಯುವಕರು ಬಿಲ್ಲವರಾಗಿದ್ದರು. ಅದಕ್ಕೂ ಮೊದಲು ಅಮ್ನೇಶಿಯಾ ಪಬ್ ದಾಳಿ ಪ್ರಕರಣ ನಡೆಯಿತು. ಅಮ್ನೇಶಿಯಾ ಪಬ್ ಅಟ್ಯಾಕ್ ಪ್ರಕರಣದಲ್ಲಿ 30 ಶ್ರೀರಾಮ ಸೇನೆಯ ಯುವಕರನ್ನು ಬಂಧಿಸಲಾಗುತ್ತದೆ. ಆ ಪಟ್ಟಿಯಲ್ಲೂ ಮೂವರು ಬಂಟರು ಮತ್ತು 28 ಜನ ಬಿಲ್ಲವರು. ಸಂಪತ್ ಪೂಜಾರಿ, ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ರಮೇಶ್ ಕೋಟ್ಯಾನ್ ಎಂದು ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಣ್ಣಿಗೆ ರಾಚುತ್ತದೆ.
ಬಂಟ್ವಾಳದಲ್ಲಿ ಸಾವಿಗೀಡಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರು ಜೈಲು ಸೇರಿದ್ದರು. ಈ ಮೂವರು ಯುವಕರೂ ಕೂಡಾ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.
ಸಾಯಿಸೋದಕ್ಕೆ, ಸಾಯೋದಕ್ಕೆ ಬಿಲ್ಲವರು. ಸಾಮಾಜಿಕ-ರಾಜಕೀಯ ಅಧಿಕಾರ ಮಾತ್ರ ಬಂಟ, ಬ್ರಾಹ್ಮಣರಿಗೆ ಎಂಬುದು ಈ ಘಟನೆಗಳ ತಾತ್ಪರ್ಯ. “ಇದೆಲ್ಲವೂ ಸರಿ. ಆದರೆ ಕಾಂಗ್ರೆಸ್ ಮುಸ್ಲೀಮರನ್ನು ಬೆಂಬಲಿಸುತ್ತದೆ. ಹಾಗಾಗಿ ಯಾರೇ ಸತ್ತರೂ ನಾವು ಕಾಂಗ್ರೆಸ್ ಜೊತೆ ನಿಲ್ಲುವುದಿಲ್ಲ” ಎನ್ನುವ ಹಿಂದುತ್ವವಾದಿ ಬಿಲ್ಲವ ಯುವಕರಿದ್ದಾರೆ. ಇವತ್ತಿನ ಬಿಲ್ಲವರ ಸ್ವಾಭಿಮಾನದ ಬದುಕಿನ ಹಿಂದೆ ಮುಸ್ಲೀಮರೂ ಇದ್ದಾರೆ ಎನ್ನುವುದನ್ನು ಅಂತಹ ಬಿಲ್ಲವ ಯುವಕರು ಅರ್ಥ ಮಾಡಿಕೊಳ್ಳಬೇಕು. ಅಂದು ಕೊರಗಪ್ಪ ಪೂಜಾರಿಯ ಜೊತೆ ಅಬ್ದುಂಞ ರಝಾಕಾರ್ ನಿಲ್ಲದೇ ಇದ್ದರೆ ನಾರಾಯಣ ಗುರುಗಳು ಮಂಗಳೂರಿಗೆ ಬರುತ್ತಿರಲಿಲ್ಲ. ಹಾಗೇನಾದರೂ ನಾರಾಯಣ ಗುರುಗಳು ಮಂಗಳೂರಿಗೆ ಬರದೇ ಇರುತ್ತಿದ್ದರೆ ಬಿಲ್ಲವರಿಗೆ ಧಾರ್ಮಿಕ, ರಾಜಕೀಯ ಸ್ವಾತಂತ್ರ್ಯ, ಸ್ವಾಭಿಮಾನ ಬದುಕು ಸಿಗುತ್ತಿರಲಿಲ್ಲ. ಕೊರಗಪ್ಪ ಪೂಜಾರಿಯವರ ಹೆಂಚಿನ ಕಾರ್ಖಾನೆ ಮತ್ತು ಹಲವು ಉದ್ಯಮಗಳನ್ನು ವಿದೇಶದ ಜೊತೆ ಲಿಂಕ್ ಮಾಡಿಸಿ, ಅವರು ಕೋಟ್ಯಾಧಿಪತಿಗಳಾಗಲು ಕಾರಣ ಅವರ ಪಾಲುದಾರರಾಗಿದ್ದ ಗೆಳೆಯ ಅಬ್ದುಂಞ ರಝಾಕಾರ್! ಕೊರಗಪ್ಪ ಪೂಜಾರಿಯವರು ಪಾಲುದಾರ ಅಬ್ದುಂಞ ರಝಾಕಾರ್ ಜೊತೆ ಸೇರಿ ಕರಾವಳಿಯ ದೊಡ್ಡ ಉದ್ಯಮಿ ಆಗಿದ್ದರಿಂದಲೇ ಮೇಲ್ವರ್ಗಗಳಿಗೆ ಸೆಡ್ಡು ಹೊಡೆದು ಬಿಲ್ಲವರ ಸ್ವಾಭಿಮಾನದ ಬದುಕನ್ನು ಕುದ್ರೋಳಿಯ ಮೂಲಕ ಪ್ರತಿಷ್ಠಾಪಿಸಲು ಸಾಧ್ಯವಾಯಿತು.
ಬಿಲ್ಲವರು ಮೇಲ್ವರ್ಗಗಳ ಎದುರು ನಿಲ್ಲಲೂ ಹೆದರುತ್ತಿದ್ದ ದಿನಗಳಲ್ಲಿ ಅಂದರೆ 1908 ನೇ ಇಸವಿಯಲ್ಲಿ ಬಿಲ್ಲವರ ಸ್ವಾಭಿಮಾನದ ಬದುಕಿಗಾಗಿ ಕೊರಗಪ್ಪ ಪೂಜಾರಿಯವರು ನಾರಾಯಣ ಗುರುಗಳನ್ನು ಭೇಟಿಯಾಗುತ್ತಾರೆ. ಬಿಲ್ಲವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲದ ದಿನಗಳಲ್ಲಿ ಕುದ್ರೋಳಿ ಗೋಕರ್ಣನಾಥ ದೇಗುಲವನ್ನು ನಿರ್ಮಿಸುತ್ತಾರೆ. ಇದು ಬಿಲ್ಲವರಿಗೆ ಸಾಮಾಜಿಕ ಸ್ಥಾನಮಾನ ಪಡೆಯಬೇಕು ಎಂಬ ಕೆಚ್ಚನ್ನು ಮೂಡಿಸಿದರೆ, ಸ್ವಾತಂತ್ರ್ಯಾ ನಂತರ ಇಂದಿರಾಗಾಂಧಿ-ದೇವರಾಜ ಅರಸು ಮತ್ತು ಕರಾವಳಿಯ ಕಮ್ಯೂನಿಷ್ಟರು ಉಳುವವನೇ ಹೊಲದೊಡೆಯ ಕಾನೂನನ್ನು ಸಶಕ್ತವಾಗಿ ಜಾರಿಗೆ ತಂದಿದ್ದರಿಂದ ಬಿಲ್ಲವರಿಗೆ ನಿಜವಾದ ಆರ್ಥಿಕ, ಸಾಮಾಜಿಕ ಸ್ಥಾನಮಾನ ದೊರೆಯಿತು. ಜನಾರ್ಧನ ಪೂಜಾರಿಯವರು ಈ ಕಾಲದಲ್ಲೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು, ಕುದ್ರೋಳಿ ಗೋಕರ್ಣನಾಥ ದೇಗುಲವನ್ನು ಪುನರ್ ನಿರ್ಮಿಸಿದರು. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ದುರ್ಷರ್ಮಿಗಳ ಗುಂಡಿಗೆ ಬಲಿಯಾಗುವ ಕೆಲ ದಿನಗಳ ಮೊದಲು ನವೀಕೃತ ಕುದ್ರೋಳಿ ದೇಗುಲವನ್ನು ಉದ್ಘಾಟಿಸಿದ್ದರು. ಇದೆಲ್ಲವೂ ನಡೆದಿದ್ದು ಬಿಲ್ಲವರ ಸ್ವಾಭಿಮಾನದ ಬದುಕಿಗಾಗಿ..!
ಇದೆಲ್ಲವನ್ನು ಈ ಚುನಾವಣೆಯ ಸಂದರ್ಭದಲ್ಲಿ ಯಾಕೆ ನೆನಪಿಸಿಕೊಳ್ಳಬೇಕು ಎಂದರೆ, ನಾವು ಯಾವುದೇ ಅಜೆಂಡಾದ ಕಾಲಾಳುಗಳು ಅಲ್ಲ ಎನ್ನುವುದನ್ನು ಬಿಲ್ಲವ ಸಮುದಾಯ ಈ ಚುನಾವಣೆಯಲ್ಲಿ ಸಾಬೀತು ಮಾಡಬೇಕಿದೆ. ಹಾಗಿದ್ದರೆ ಬಿಜೆಪಿಯಲ್ಲಿರುವ ಬಿಲ್ಲವರನ್ನೂ ಬಿಲ್ಲವ ಸಮುದಾಯ ಬೆಂಬಲಿಸಬೇಕೇ ಎಂಬ ಪ್ರಶ್ನೆ ಎದುರಾಗಬಹುದು. “ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ ?” ಎಂದು ಕುವೆಂಪು ಪ್ರಶ್ನಿಸಿದಂತೆ, ಬ್ರಾಹ್ಮಣ್ಯದ ಮೂಸೆಯಿಂದ ಹೊರಬಂದ ಬಿಲ್ಲವ ನಾಯಕರನ್ನೂ ಬಿಲ್ಲವರು ತಿರಸ್ಕರಿಸಿ ನಾರಾಯಣ ಗುರುಗಳು, ಕೊರಗಪ್ಪ ಪೂಜಾರಿಯವರ ತತ್ವದಡಿಯಲ್ಲಿ ನಡೆಯುವ ಬಿಲ್ಲವರನ್ನೂ, ಹಿಂದುಳಿದ ನಾಯಕರನ್ನೂ ಪಾರ್ಲಿಮೆಂಟಿಗೆ ಕಳುಹಿಸಬೇಕಿದೆ.
ನವೀನ್ ಸೂರಿಂಜೆ
ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?