ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಮನೆಯನ್ನು ಸ್ವರ್ಗ ಮತ್ತು ನರಕ ಎಂದು ವಿಭಾಗಿಸಿ ಸ್ಪರ್ಧಿಗಳನ್ನು ಆಟವಾಡಿಸಲಾಗುತ್ತಿದೆ. ಇದೀಗ ಈ ಕಾನ್ಸೆಪ್ಟ್ ಹಾಗೂ ಮಹಿಳೆಯರ ಹಕ್ಕುಗಳ ಉಲ್ಲಂಘಟನೆಯಾಗಿದೆ ಎಂದು ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಬಹಿರಂಗವಾಗಿ ಈ ಕುರಿತು ಹೇಳಿಕೆ ಕೊಟ್ಟಿದ್ದಾರೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನರಕವಾಸಿಗಳಲ್ಲಿರುವ ಹೆಣ್ಮಕ್ಕಳ ಸಾಂವಿಧಾನಿಕ ಹಕ್ಕು ದಮನ ಆಗ್ತಿದೆ. ಅವರ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ. ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಪೌಷ್ಟಿಕ ಆಹಾರ ಕೊಡದೆ ಹಿಂಸಿಸುತ್ತಿದ್ದಾರೆ ಎಂದು ಸೂಕ್ತ ಕ್ರಮ ಕೈಗೊಳ್ಳಲು ವಕೀಲೆ ರಕ್ಷಿತಾ ಸಿಂಗ್ ಹಾಗೂ ಸಾಮಾಜಿಕ ಹೋರಾಟಗಾರ್ತಿ ನಾಗಮಣಿ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಿಗ್ ಬಾಸ್ ಇರುವ ಜಾಗ ರಾಮನಗರ ಜಿಲ್ಲಾ ವ್ಯಾಪ್ತಿಗೆ ಬರುವುದರಿಂದ ಈಗಾಗಲೇ ಅಲ್ಲಿನ ಎಸ್ ಪಿಗೆ ಮಾಹಿತಿ ಕೊಟ್ಟಿದ್ದೇನೆ. ಜೊತೆಗೆ ಪತ್ರ ಸಹ ಬರೆದಿದ್ದೇನೆ. ಬಿಗ್ ಬಾಸ್ ಮುಖ್ಯಸ್ಥರಿಗೆ ನಮ್ಮ ಕಚೇರಿಗೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ತಪ್ಪು ಸರಿ ಏನು ಅನ್ನುವುದನ್ನು ಚರ್ಚೆ ಮಾಡುತ್ತೇವೆ.
ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಎಲ್ಲಾ ಷರತ್ತುಗಳಿಗೂ ಒಪ್ಪಿರುತ್ತೇನೆ ಎಂದು ಸಹಿ ಹಾಕಿರುತ್ತಾರೆ. ಅದೆಲ್ಲವನ್ನು ತೆಗೆದುಕೊಂಡು ಬರುವಂತೆ ಬಿಗ್ ಬಾಸ್ ಮುಖ್ಯಸ್ಥರಿಗೆ ಹೇಳಿದ್ದೇವೆ. ಸಂವಿಧಾನ ಮತ್ತು ಮಾನವ ಹಕ್ಕು ಏನು ಹೇಳುತ್ತೇ ಎಂದರೆ ಮನುಷ್ಯ ಹಾಗೂ ಮಹಿಳೆಯರಿಗೆ ಯಾವುದೇ ಮೂಲಭೂತ ಸಮಸ್ಯೆಯಾಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಈಗ ಅಲ್ಲಿ ಈತರದ ಉಲ್ಲಂಘನೆ ಆಗಿದೆಯ ಅಥವಾ ಇಲ್ವ ಅನ್ನೊದು ತನಿಖೆ ನಂತರ ತಿಳಿಯುತ್ತದೆ. ಪೊಲೀಸರ ತಂಡ ಹೋಗಿ ಪರಿಶೀಲನೆ ಮಾಡುತ್ತದೆ ಎಂದು ಹೇಳಿದ್ದಾರೆ.
ಪೊಲೀಸರ ತಂಡ ಈ ಪರಿಶೀಲನೆ ಮಾಡಿ ವರದಿ ಕೊಡುವಂತೆ ಹೇಳಿದ್ದೇನೆ. ಅವಶ್ಯಕತೆ ಬಿದ್ದರೆ ನಾನೇ ಹೋಗುತ್ತೇನೆ ಎಂದು ಹೇಳಿದ್ದಾರೆ.