ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಜನವರಿ 14 ರಂದು ಮಣಿಪುರದ ರಾಜಧಾನಿ ಇಂಫಾಲ್ ಬದಲಿಗೆ ತೌಬಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಫ್ಲ್ಯಾಗ್ ಆಫ್ ಮಾಡುವ ಮೂಲಕ ಆರಂಭ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಇಂಫಾಲ್‌ನ ಹಪ್ತಾ ಕಾಂಗ್ಜೆಬುಂಗ್ ಮೈದಾನದಿಂದ ಯಾತ್ರೆಯನ್ನು ಪ್ರಾರಂಭಿಸಲು ಅನುಮತಿ ಕೋರಲಾಗಿತ್ತು. ಆದರೆ ರಾಜ್ಯ ಸರ್ಕಾರವು ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿತು, ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಲು ಒತ್ತಾಯಿಸಲಾಯಿತು ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಹೇಳಿದ್ದಾರೆ.
ಜನವರಿ 10 ರಂದು ಈ ಸಂಬಂಧ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇವೆ. ಆದರೆ ಅವರು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದರು. ನಂತರ ಹಪ್ತಾ ಕಾಂಗ್ಜೆಬುಂಗ್ ಮೈದಾನಕ್ಕೆ ಅನುಮತಿ ನೀಡುವ ಆದೇಶವನ್ನು ಹೊರಡಿಸಿ, ಸೀಮಿತ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದರು.
ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗುವ ಸ್ಥಳಕ್ಕೆ ಒಂದು ಸಾವಿರಕ್ಕಿಂತ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದರು.ಅನುಮತಿ ನೀಡದ ಕಾರಣ ಗುರುವಾರ ತಡರಾತ್ರಿ ತೌಬಲ್ ನ ಖಾಸಗಿ ಮೈದಾನದಿಂದ ಯಾತ್ರೆಯನ್ನು ಫ್ಲ್ಯಾಗ್ ಆಫ್ ಮಾಡಲು ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಮೊದಲ ದಿನ ಯಾತ್ರೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ಜನವರಿ 14 ರಂದು ಮಣಿಪುರದಲ್ಲಿ ಆರಂಭಗೊಂಡ ನಂತರ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ. 15 ರಾಜ್ಯಗಳ 110 ಜಿಲ್ಲೆಗಳ ಮೂಲಕ 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲು ನಿರ್ಧರಿಸಲಾಗಿದೆ.