“ಮೋದಿ ಸರಕಾರ ಮೊದಲು ಜನರನ್ನು ಪರಸ್ಪರ ಜಗಳಾಡಿಸುತ್ತದೆ. ಈ ನಡುವೆ ನಿಮ್ಮ ಹಣವನ್ನು ಲೂಟಿ ಮಾಡುತ್ತಾರೆ. ನಿಮ್ಮ ಹಣ ದೋಚಿ ಅದಾನಿಗೆ ಕೊಡುತ್ತಾರೆ. ಇದೇ ರೀತಿಯಲ್ಲಿ ಮೋದಿ ಸರಕಾರ ‘ಅಗ್ನಿವೀರ’ ಯೋಜನೆಯನ್ನು ತಂದು ತನ್ನ ದೋಸ್ತಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಬಿಜೆಪಿ ಸರಕಾರ ನಿಮ್ಮ ಕಿಸೆಗಳ್ಳತನ ಹೇಗೆ ಮಾಡುತ್ತದೆ ನೋಡಿ“- ರಾಹುಲ್ ಗಾಂಧಿ
ಎರಡು ದಿನಗಳ ಬಳಿಕ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಉತ್ತರಪ್ರದೇಶದಲ್ಲಿ ಮತ್ತೆ ಮುಂದುವರಿದಿದೆ. ಮುರಾದಾಬಾದ್ ನಿಂದ ಆರಂಭವಾದ ಇಂದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಇಂದಿನ (24.02.2024) ಕಾರ್ಯಕ್ರಮಗಳು ಹೀಗಿದ್ದವು. ಬೆಳಿಗ್ಗೆ 10.00 ಕ್ಕೆ ಉತ್ತರಪ್ರದೇಶದ ಮೊರಾದಾಬಾದ್, ಜಾಮಾ ಮಸ್ಜಿದ್ ಚೌರಾಹದಿಂದ ಸಂಭಾಲ್ ಚೌರಾಹದ ವರೆಗೆ ಪಾದಯಾತ್ರೆ. ಬಳಿಕ ಸಾರ್ವಜನಿಕ ಭಾಷಣ. ಯಾತ್ರಾ ಮಾರ್ಗ, ಇಂದ್ರಾ ಚೌಕ್ – ಗಲ್ಶಹೀದ್ ಚೌರಾಹ – ಬುಧ್ ಕಾ ಚೌರಾಹ – ಈದ್ಗಾ ಕಾ ಚೌರಾಹ – ಸಂಭಾಲ್ ಚೌರಾಹ. ಅಮರೋಹದ ರವಿದಾಸ ಚೌಕದಲ್ಲಿ ಸಂತ ರವಿದಾಸ ಪ್ರತಿಮೆಗೆ ಗೌರವ ಸಮರ್ಪಣೆ. ಅಮರೋಹ, ಗಾಂಧಿ ಮೂರ್ತಿ ಚೌರಾಹದಲ್ಲಿ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ಮಧ‍್ಯಾಹ್ನ 1.30 ಕ್ಕೆ ಮಧ‍್ಯಾಹ್ನದ ವಿರಾಮ, ಉತ್ತರಪ್ರದೇಶದ ಚಕ್ ತಿಕಿಯಾದ WTM ಕಾಲೆಜ್ ಆಫ್ ಪಾಲಿಟೆಕ್ನಿಕ್ ನಲ್ಲಿ. ಮಧ‍್ಯಾಹ್ನ 3.00 ಕ್ಕೆ ಸ್ವಾಗತ ಕಾರ್ಯಕ್ರಮ ಮತ್ತು ಸಾರ್ವಜನಿಕ ಭಾಷಣ. ಸಂಭಾಲ್, ಚಂದೌಸಿ ಚೌರಾಹದಲ್ಲಿ. ಸಂಜೆಯ ವಿರಾಮ ದಿಬಾಯಿ ಅನುಪಶಹರ್ ಚೌರಾಹದಲ್ಲಿ. ರಾತ್ರಿ ವಿಶ್ರಾಂತಿ ಉತ್ತರಪ್ರದೇಶ ಬುಲಂದಶಹರ್ ಪಂಡ್ರವಾಲ ದೌರಾಹದಲ್ಲಿ.
ಯಾತ್ರೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿಯವರು, “ಉತ್ತರಪ್ರದೇಶದಲ್ಲಿ ಪೇಪರ್ ಲೀಕ್ ತಡೆಯಲು ನಾವು ಘೋಷಣಾ ಪತ್ರದಲ್ಲಿ ಉದ್ಯೋಗ ಕ್ಯಾಲೆಂಡರ್ ಮತ್ತು ಒಂದು ಕಮಿಷನ್ ನ ಯೋಜನೆ ರೂಪಿಸಿದ್ದೆವು. ಅದರಲ್ಲಿ ಪರೀಕ್ಷೆಗಳು ಮತ್ತು ನಿಯುಕ್ತಿಗಳ ದಿನಾಂಕಗಳು ಮೊದಲೇ ನಿರ್ಧಾರವಾಗಿರುತ್ತವೆ. ಆಗ ಸಮಸ್ಯೆ ತಡೆಯುವುದು ಸಾಧ್ಯವಾಗುತ್ತದೆ. ನೀವು ನಿಮ್ಮ ಅನುಭವದಿಂದ ಕಲಿಯಿರಿ. ಕಳೆದ 10 ವರ್ಷಗಳಲ್ಲಿ ನಿಮಗೆ ಏನು ಸಿಕ್ಕಿದೆ? ನಿಮ್ಮ ಪರಿಸ್ಥಿತಿಯನ್ನು ನೋಡಿಕೊಳ್ಳಿ. ಅಂತಿಮವಾಗಿ ಮೋದಿ ಸರಕಾರದಿಂದ ನಿಮಗೆ ಏನು ಸಿಕ್ಕಿದೆ? ನಿಮ್ಮ ಪರಿಸ್ಥಿತಿ ನೋಡಿಕೊಂಡು ನೀವು ಮತ ಚಲಾಯಿಸಿದಾಗ ಮಾತ್ರ ಬದಲಾವಣೆ ಬರುವುದು ಸಾಧ‍್ಯ” ಎಂದರು.
ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, “ಮೋದಿ ಸರಕಾರ ಮೊದಲು ಜನರನ್ನು ಪರಸ್ಪರ ಜಗಳಾಡಿಸುತ್ತದೆ. ಈ ನಡುವೆ ನಿಮ್ಮ ಹಣವನ್ನು ಲೂಟಿ ಮಾಡುತ್ತಾರೆ. ನಿಮ್ಮ ಹಣ ದೋಚಿ ಅದಾನಿಗೆ ಕೊಡುತ್ತಾರೆ. ಇದೇ ರೀತಿಯಲ್ಲಿ ಮೋದಿ ಸರಕಾರ ‘ಅಗ್ನಿವೀರ’ ಯೋಜನೆಯನ್ನು ತಂದು ತನ್ನ ದೋಸ್ತಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಬಿಜೆಪಿ ಸರಕಾರ ನಿಮ್ಮ ಕಿಸೆಗಳ್ಳತನ ಹೇಗೆ ಮಾಡುತ್ತದೆ ನೋಡಿ. ಮೊದಲು ನರೇಂದ್ರ ಮೋದಿ ಜನರ ಗಮನ ಬೇರೆಡೆ ತಿರುಗಿಸುತ್ತಾರೆ. ನಿಮ್ಮ ಗಮನ ಬೇರೆಡೆ ತಿರುಗಿದಾಗ ಹಿಂದಿನಿಂದ ಅದಾನಿಯ ಜನರು ನಿಮ್ಮ ಕಿಸೆ ಕತ್ತರಿಸುತ್ತಾರೆ. ಈ ನಡುವೆ ಅಮಿತ್ ಶಾ ಲಾಠಿ ಹಿಡಿದುಕೊಂಡು ತಿರುಗುತ್ತಾರೆ. ನೀವು ಏನನ್ನೂ ಮಾತನಾಡಬಾರದು. ಇದು ಅವರ ಉದ್ದೇಶ. ಯುಪಿಯ ಪೊಲೀಸ್ ಭರ್ತಿ ಪರೀಕ್ಷೆ ರದ್ದಾಗಿದೆ. ಇಲ್ಲಿ ಪೇಪರ್ ಲೀಕ್ ಯಾಕಾಗುತ್ತದೆ ಎಂದರೆ, ಬಿಜೆಪಿ ಸರಕಾರ ಯುವಜನರಿಗೆ ಉದ್ಯೋಗ ನೀಡಲು ಬಯಸುವುದಿಲ್ಲ. ಮೋದಿ ಸರಕಾರ ದೇಶದ ಸಾರ್ವಜನಿಕ ವಲಯವನ್ನು ಖಾಸಗೀಕರಿಸಿ ಅದಾನಿಗೆ ಕೊಡಲು ಬಯಸುತ್ತದೆ. ಇಲ್ಲಿ ಬ್ರಾಸ್, ಕರಕುಶಲ ವಸ್ತುಗಳು, ಕಾರ್ಪೆಟ್ ನ ಬಿಸಿನೆಸ್ ನಡೆಯುತ್ತಿತ್ತು. ಅದನ್ನು ಇವರು ಮುಗಿಸಿಬಿಟ್ಟರು. ಸತ್ಯ ಏನೆಂದರೆ, ಉದ್ಯೋಗ ಬರುವುದು ಸಣ್ಣ ವ್ಯಾಪಾರಗಳಿಂದ. ಭಾರತದಲ್ಲಿ ಭಯಂಕರ ನಿರುದ್ಯೋಗ ಇದೆ. ಇಲ್ಲಿ ಯುವಜನರ ಕೈಯಲ್ಲಿ ಉದ್ಯೋಗ ಇಲ್ಲ. ಪರಿಣಾಮ- ಅವರು 12- 12 ಗಂಟೆ ಫೋನ್ ನಲ್ಲಿ ರೀಲ್ಸ್ ನೋಡುತ್ತಾರೆ” ಎಂದರು.
ರಾಹುಲ್ ಮತ್ತು ಪ್ರಿಯಾಂಕಾರ ಯಾತ್ರೆಯನ್ನು ಎದುರುಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಹಿಂದಿನ ಯಾತ್ರೆ –ಭಾರತ್ ಜೋಡೋ ನ್ಯಾಯ ಯಾತ್ರೆ | 39ನೆಯ ದಿನ