Wednesday, May 22, 2024

ಮುಸ್ಲಿಮರ ನೆನಪನ್ನು ಅಳಿಸಿ ಹಾಕಲು ಪ್ರಭುತ್ವದ ಪ್ರಯತ್ನ | ಪುರುಷೋತ್ತಮ ಬಿಳಿಮಲೆ

Most read

ಫಾತಿಮಾ ರಲಿಯಾ ಅವರ ʼಅವಳ ಕಾಲು ಸೋಲದಿರಲಿʼ ಕವನ ಸಂಕಲನ ಬಿಡುಗಡೆ

ಮಂಗಳೂರು: ದೆಹಲಿಯ ಮುಗಲ್‌ ದೊರೆ ಬಹುದ್ದೂರ್‌ ಶಾ ಜಫರ್‌ ಅವರನ್ನು ಪದಚ್ಯುತ ಗೊಳಿಸಿ ಅವನ ಎರಡು ಮಕ್ಕಳನ್ನು ಕೊಂದು ಹಾಕಿದ ಬ್ರಿಟಿಷರ ವಿರುದ್ಧ ಮುಸ್ಲಿಮರು ಬಹಳ ವೀರಾವೇಶದಿಂದ ಹೋರಾಡಿದ್ದರು. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ  ದಂಗೆ ಎದ್ದ ಮುಸ್ಲಿಮರು ಉಗ್ರ ಹೋರಾಟ  ನಡೆಸಿದರು. ಈ ಹೋರಾಟದಲ್ಲಿ ಅನೇಕರು ಗಲ್ಲಿಗೇರಿದರು. ಮತ್ತೆ ಹಲವರು ಬ್ರಿಟಿಷರ ಗುಂಡೇಟಿಗೆ ಸಿಕ್ಕಿ ಪ್ರಾಣ ತ್ಯಜಿಸಿದರು. ಈ ಹೋರಾಟದಲ್ಲಿ ಹಬೀಬಾ, ಅಸ್ಘರಿ ಬೇಗಂ, ಹಜರತ್‌ ಮಹಲ್‌ ಬೇಗಂ, ಅಜೀಜನ್‌ ಬಾಯಿ ಮೊದಲಾದ ಮುಸ್ಲಿಂ ಮಹಿಳೆಯರಿದ್ದರು. ದಾರುಲ ಉಲೇಮಾ ದೇವಬಂದ್‌ ಹೋರಾಟಗಾರರನ್ನು ಸಂಘಟಿಸುವ ಕೆಲಸವನ್ನು ಮಾಡಿತು. ಇತಿಹಾಸಕಾರರು ದಾಖಲಿಸಿದ ಪ್ರಕಾರ ಸುಮಾರು 27,000ಕ್ಕೂ ಹೆಚ್ಚು ಮುಸಲ್ಮಾನರು ಈ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ಸುಭಾಷ್ ಚಂದ್ರ ಭೋಸರ ಅಜಾದ್‌ ಹಿಂದ್‌ ಫೌಜ್‌ ನಲ್ಲಿ ನೂರಾರು ಸಂಖ್ಯೆಯ ಮುಸ್ಲಿಮರಿದ್ದರು. ನೇತಾಜಿ ತೀರಿಕೊಂಡಾಗ ಅವರ ಜೊತೆ ಇದ್ದ  ಏಕೈಕ ವ್ಯಕ್ತಿ ಹಬೀಬುರ್‌ ರೆಹ್ಮಾನ್‌ ಎಂಬವರು. ಈ ಹೋರಾಟದಿಂದಾಗಿ ಭಾರತೀಯ ಮುಸ್ಲಿಮರು ಬ್ರಿಟಿಷರ ಅವಕೃಪೆಗೆ ಒಳಗಾದರು. ಮತ್ತು ಮುಸ್ಲಿಮರನ್ನು ಆ ಕಾಲದ ಆಡಳಿತ ವ್ಯವಸ್ಥೆಯಿಂದ ಹೊರಗಿಡಲಾಯಿತು. ಇದೇ ಕಾಲದಲ್ಲಿ ಹಿಂದೂ ವಿದ್ಯಾವಂತರು ಪಾಶ್ಚಾತ್ಯ ವಿದ್ಯೆಗೂ ತೆರೆದುಕೊಂಡು ಆಧುನಿಕರಾದರು. ಆದರೆ ಮುಸ್ಲಿಮರು ಇಂಗ್ಲಿಷರ ಜತೆಗೆ ಇಂಗ್ಲಿಷ್ ನ್ನೂ ವಿರೋಧಿಸಿದ್ದರು. ಅವರು ಉರ್ದುವನ್ನು ಅಪ್ಪಿಕೊಂಡರು. ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಉರ್ದುವನ್ನು ಹಿಂದಿಕ್ಕಿ ಹಿಂದಿ ಭಾಷೆಯು ಮುನ್ನೆಲೆಗೆ ಬಂತು. ಈ ಕಾರಣದಿಂದ ಭಾರತೀಯ ಮುಸ್ಲಿಮರು ಆ ಕಡೆ ಆಡಳಿತಕ್ಕೂ ಸೇರಿಕೊಳ್ಳದೆ ಈ ಕಡೆ ಉರ್ದುವನ್ನೂ ಉಳಿಸಿಕೊಳ್ಳಲಾಗದೆ ಕಷ್ಟಪಟ್ಟರು. ವಿದ್ಯಾವಂತ ಮುಸಲ್ಮಾನರು ಭಾರತ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ಹೋದರು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರು, ಕನ್ನಡ, ಹಿಂದಿ, ತಮಿಳು, ಮಲೆಯಾಳಂ ಮತ್ತಿತರ ದೇಶೀ ಭಾಷೆಗಳಲ್ಲಿ ಬರೆಯುತ್ತಿರುವುದು ಅಭಿನಂದನೀಯ ವಿಚಾರವಾಗಿದೆ, ಈ ಕಾರಣಕ್ಕೆ ನಾವು ಮುಸ್ಲಿಂ ಲೇಖಕರನ್ನು ಬೆಂಬಲಿಸ ಬೇಕಾಗಿದೆ ಎಂದು ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.  

ನಗರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ  ಇಂದು ನಡೆದ, ಉಡುಗೊರೆ ಪ್ರಕಾಶನ ಪ್ರಕಟಿಸಿದ  ಫಾತಿಮಾ ರಲಿಯಾ ಅವರ ʼಅವಳ ಕಾಲು ಸೋಲದಿರಲಿʼ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತಾಡುತ್ತಿದ್ದರು.

ಪುಸ್ತಕದ ಬಗ್ಗೆ ಮಾತಾಡಿದ ಲೇಖಕಿ ಸುಧಾ ಆಡುಕಳ ಅವರು ರಲಿಯಾ ಕವಿತೆಗಳನ್ನು ವಿಶ್ಲೇಷಿಸುತ್ತಾ  ಕವನದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ನವಿಲಿನ ರೂಪಕವನ್ನು ಆಧರಿಸಿ ಮುಸ್ಲಿಂ ಮಹಿಳೆಯೊಬ್ಬಳು ಬರಹದ ಮೂಲಕ ಸಾರ್ವತ್ರಿಕವಾಗುವ ಬಗೆಯನ್ನು ವಿಶ್ಲೇಷಿಸಿದರು. ಇನ್ನೊಬ್ಬ ಅತಿಥಿ ಕವಿ ವಿಲ್ಸನ್‌ ಕಟೀಲ್‌ ಅವರು ಛಿದ್ರಗೊಳ್ಳುತ್ತಿರುವ ನಾಡಿನಲ್ಲಿ ಲೇಖಕರು ಹೊರಬೇಕಾದ ಜವಾಬ್ದಾರಿಯ ಬಗ್ಗೆ ಮಾರ್ಮಿಕವಾಗಿ ಮಾತಾಡಿದರು

ಲೇಖಕಿ ಉಮೈರತ್‌ ಕುಮೇರು ಸ್ವಾಗತಿಸಿದರು. ಕವಯಿತ್ರಿ ಫಾತಿಮಾ ರಲಿಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಮುಆದ್‌ ರಲಿಯಾ ಕವಿತೆಗಳನ್ನು ಓದಿದರು.

ಪತ್ರಕರ್ತ ಹೆನ್ರಿ ಮೆಂಡೋನ್ಸ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಅರ್ಪಿಸಿದರು.

More articles

Latest article