ಇಂದು ಐತಿಹಾಸಿಕ ದಿನ. ಕಾಂಗ್ರೆಸ್ ಪ್ರತಿಯೊಬ್ಬ ರೈತನಿಗೆ ಆತನ ಬೆಳೆಗೆ ಸ್ವಾಮಿನಾಥನ್ ಆಯೋಗದ ಅನುಸಾರ ಎಂ ಎಸ್ ಪಿ ಯ ಕಾನೂನಿನ ಗ್ಯಾರಂಟಿ ನೀಡಲು ನಿರ್ಧರಿಸಿದೆ. ಇದು ದೇಶದ 15 ಕೋಟಿ ರೈತ ಕುಟುಂಬಗಳಿಗೆ ಸಮೃದ್ಧಿಯನ್ನು ಖಾತರಪಡಿಸಿ ಅವರ ಬದುಕನ್ನು ಬದಲಿಸಲಿದೆ. ನ್ಯಾಯದ ಪಥದಲ್ಲಿ ಇದು ಕಾಂಗ್ರೆಸ್ ನ ಮೊದಲ ಗ್ಯಾರಂಟಿ” – ರಾಹುಲ್ ಗಾಂಧಿ
ನ್ಯಾಯ ಯಾತ್ರೆಯು ಛತ್ತೀಸ್ ಗಢ ರಾಜ್ಯದಲ್ಲಿ ಮುಂದುವರಿದಿದೆ. ಇಂದಿನ (13.02.2024) ಕಾರ್ಯಕ್ರಮಗಳು ಹೀಗಿದ್ದವು.
ಬೆಳಿಗ್ಗೆ 8.00 ಕ್ಕೆ ಛತ್ತೀಸ್ ಗಢದ ಉದಯಪುರ ರಾಮಗಢ ಚೌಕ ಬಸ್ ನಿಲ್ದಾಣದಿಂದ ಯಾತ್ರೆ ಪುನರಾರಂಭ. ಬೆಳಿಗ್ಗೆ 11.00 ಕ್ಕೆ ವಿರಾಮ, ಅಂಬಿಕಾಪುರದ ಭಾಟು ತಾಲಾಬ್ ಹತ್ತಿರ. 2.00 ಕ್ಕೆ ಅಂಬಿಕಾಪುರ ಕಾಲಾ ಕೇಂದ್ರದಲ್ಲಿ ಸಾರ್ವಜನಿಕ ಸಭೆ. ಬಲರಾಮ ಪುರ ಝಿಂಗೋದಲ್ಲಿ ರಾತ್ರಿ ವಾಸ್ತವ್ಯ.
ಯಾತ್ರೆಯ ಸಮಯದಲ್ಲಿ ಪ್ರೀತಿಯ ಅಗತ್ಯವನ್ನು ಒತ್ತಿ ಹೇಳುತ್ತಾ, “ದ್ವೇಷವನ್ನು ಪ್ರೀತಿಯಿಂದ ಮಾತ್ರ ನಿವಾರಿಸಬಹುದು” ಎಂದು ರಾಹುಲ್ ಗಾಂಧಿ ಹೇಳಿದರು. ಅಲ್ಲದೆ, “ ಹಿಂದುಸ್ತಾನದಲ್ಲಿ ಎಲ್ಲೇ ನೋಡಲಿ ಅಲ್ಲಿ ಅದಾನಿಯ ಹೆಸರು ನಿಮಗೆ ಕಾಣಿಸುತ್ತದೆ. ಮೋದಿ ಸರಕಾರವು ಬಂದರು, ವಿಮಾನ ನಿಲ್ದಾಣ, ಮೂಲಸೌಕರ್ಯ, ಅರಣ್ಯ, ಸಮುದ್ರ ಎಲ್ಲವನ್ನೂ ಅದಾನಿಯ ವಶಕ್ಕೆ ಒಪ್ಪಿಸಿದೆ” ಎಂದರು. ಯಾತ್ರೆಯ ಸಮಯದಲ್ಲಿ ಆದಿವಾಸಿ ಯುವಕನೊಬ್ಬನಿಗೆ “ಹೆದರಬೇಡ, ಹೆದರಬೇಕಾಗಿಲ್ಲ” ಎಂದು ಹೇಳಿದ ರಾಹುಲ್, “ಆದಿವಾಸಿಯು ಹಿಂದುಸ್ತಾನದ ಮೊದಲ ಮಾಲೀಕ, ಆದರೆ ಬಿಜೆಪಿ ಹೊಸ ಶಬ್ದವನ್ನು ಹುಟ್ಟುಹಾಕಿದೆ. ಅದೇ ವನವಾಸಿ. ನೀವು ಹಿಂದುಸ್ತಾನದ ಮೊದಲ ನಿವಾಸಿಗಳಲ್ಲ, ನೀವು ವನವಾಸಿಗಳು ಎಂದು ಬಿಜೆಪಿ ಹೇಳುತ್ತದೆ. ನೀವು ಅರಣ್ಯದಲ್ಲಿ ಇರಬೇಕು ಎಂದು ಅದರ ಇರಾದೆ. ಅಂದರೆ, ಆದಿವಾಸಿಗಳ ಮಕ್ಕಳು ಡಾಕ್ಟರ್, ಇಂಜೀನಿಯರ್, ಬಿಸಿನೆಸ್ ಮನ್ ಆಗಲು ಬಯಸಿದರೆ ಅದನ್ನು ಮಾಡುವಂತಿಲ್ಲ. ಇದು ಆದಿವಾಸಿಗಳಿಗೆ ಮಾಡುವ ಅನ್ಯಾಯ” ಎಂದರು.
ಛತ್ತೀಸ್ ಗಢದ ಅಂಬಿಕಾಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, “ನಾನು ಈ ಯಾತ್ರೆಗೆ ಎಷ್ಟು ಜನಪ್ರೀತಿ ಮತ್ತು ಬೆಂಬಲ ಸಿಗುತ್ತಿದೆ ಎಂಬುದನ್ನು ನೋಡಲು ಈ ಯಾತ್ರೆಯಲ್ಲಿ ಶಾಮೀಲಾಗಿದ್ದೇನೆ, ಜನರು ಈ ಯಾತ್ರೆಯನ್ನು ಹೃದಯಪೂರ್ವಕ ಬಯಸುತ್ತಿದ್ದಾರೆ, ಒಂದಾಗಿ ಅನ್ಯಾಯದ ವಿರುದ್ಧ ಎದ್ದುನಿಂತಿದ್ದಾರೆ. ರಾಹುಲ್ ಗಾಂಧಿಯವರ ಈ ಯಾತ್ರೆ ಯುವನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ‍್ರಮಿಕ ನ್ಯಾಯ, ಭಾಗೀದಾರಿ ನ್ಯಾಯ ಹೀಗೆ ಐದು ನ್ಯಾಯಗಳನ್ನು ಆಧರಿಸಿದೆ. ಈ ನ್ಯಾಯದ ಸಂದೇಶ ಇಡೀ ದೇಶವನ್ನು ತಲಪಿದೆ. ಆದ್ದರಿಂದ ನಾನೂ ರಾಹುಲ್ ಗಾಂಧಿಯವರಿಗೆ ಧನ್ಯವಾದ ಹೇಳುತ್ತೇನೆ” ಎಂದರು. “ನಾವು ಕಾಂಗ್ರೆಸ್ ನ ಗ್ಯಾರಂಟಿ ಎಂದು ಹೇಳುತ್ತೇವೆ. ಆದರೆ ಪ್ರಧಾನಿಯವರು ಮೋದಿ ಕಿ ಗ್ಯಾರಂಟಿ ಎನ್ನಲಾರಂಭಿಸಿದ್ದಾರೆ. ಇಷ್ಟೊಂದು ಅಹಂಕಾರ ಇರುವ ಮನುಷ್ಯ ಪ್ರಜಾತಂತ್ರದಲ್ಲಿ ವಿಶ್ವಾಸ ಇರಿಸಲಾರ. ಅಂತಹ ವ್ಯಕ್ತಿ ಕೇವಲ ತನಗಾಗಿ ಕೆಲಸ ಮಾಡುತ್ತಾನೆ. ಅಂಥವರನ್ನು ಸರ್ವಾಧಿಕಾರಿ ಎನ್ನುತ್ತೇವೆ” ಎಂದೂ ಮಾತು ಸೇರಿಸಿದರು.
ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ದೇಶದ ರೈತರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ. ಆದ್ದರಿಂದ ಅವರು ದಿಲ್ಲಿಯತ್ತ ಸಾಗುತ್ತಿದ್ದಾರೆ. ಆದರೆ, ಅವರನ್ನು ತಡೆಯಲಾಗುತ್ತಿದೆ. ಅವರ ಮೇಲೆ ಅಶ್ರುವಾಯು ಬಾಂಬು ಸಿಡಿಸಲಾಗುತ್ತಿದೆ. ನಮಗೆ ನಮ್ಮ ಶ್ರಮದ ಫಲ ದೊರೆಯಬೇಕು ಎಂದಷ್ಟೇ ರೈತರು ಹೇಳುತ್ತಿರುವುದು. ಆದ್ದರಿಂದ ನಾವು ರೈತರಿಗೆ ಸ್ವಾಮಿನಾಥನ್ ಕಮಿಷನ್ ಅನುಸಾರ ಎಂ ಎಸ್ ಪಿಯ ಗ್ಯಾರಂಟಿ ನೀಡುತ್ತಿದ್ದೇವೆ ಎಂದರು.
ರೈತ ಬಂಧುಗಳೇ ಇಂದು ಐತಿಹಾಸಿಕ ದಿನ. ಕಾಂಗ್ರೆಸ್ ಪ್ರತಿಯೊಬ್ಬ ರೈತನಿಗೆ ಆತನ ಬೆಳೆಗೆ ಸ್ವಾಮಿನಾಥನ್ ಆಯೋಗದ ಅನುಸಾರ ಎಂ ಎಸ್ ಪಿ ಯ ಕಾನೂನಿನ ಗ್ಯಾರಂಟಿ ನೀಡಲು ನಿರ್ಧರಿಸಿದೆ. ಇದು ದೇಶದ 15 ಕೋಟಿ ರೈತ ಕುಟುಂಬಗಳಿಗೆ ಸಮೃದ್ಧಿಯನ್ನು ಖಾತರಪಡಿಸಿ ಅವರ ಬದುಕನ್ನು ಬದಲಿಸಲಿದೆ. ನ್ಯಾಯದ ಪಥದಲ್ಲಿ ಇದು ಕಾಂಗ್ರೆಸ್ ನ ಮೊದಲ ಗ್ಯಾರಂಟಿ” ಎಂದು ರಾಹುಲ್ ಗಾಂಧಿ ಘೋಷಿಸಿದರು.
ಸಾರ್ವಜನಿಕ ಸಭೆಗೆ ಮುನ್ನ ರಾಹುಲ್ ಗಾಂಧಿಯವರು ಅಂಬಿಕಾಪುರ ಮಂಡಿಯಲ್ಲಿ ರೈತಸಂಗಾತಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಯಾತ್ರೆ- 3೦ ನ್ನು ಓದಿ- ಭಾರತ್ ಜೋಡೋ ನ್ಯಾಯ ಯಾತ್ರೆ | 30ನೆಯ ದಿನ