“ನಾನು 200 ಕಾರ್ಪೋರೇಟ್ ಕಂಪನಿಗಳ ಅಂಕಿ ಅಂಶ ತೆಗೆದೆ. ಅದರ ಉನ್ನತ ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿ ಒಬ್ಬನೇ ಒಬ್ಬ ಒಬಿಸಿ, ದಲಿತ ಅಥವಾ ಆದಿವಾಸಿ ಇಲ್ಲ. ಅದಾನಿಯ ಕಂಪೆನಿಯ ಉನ್ನತ ಹುದ್ದೆಯಲ್ಲಿ ಯಾವ ಬಡವ, ಒಬಿಸಿ, ದಲಿತ ಅಥವಾ ಆದಿವಾಸಿ ಕಾಣಸಿಗುತ್ತಾನೆ? ಅದು ಕಾಣಸಿಕ್ಕ ದಿನ ನಾನು ಜಾತಿ ಗಣತಿಯ ಬೇಡಿಕೆ ನಿಲ್ಲಿಸುತ್ತೇನೆ”.” – ರಾಹುಲ್ ಗಾಂಧಿ
ನ್ಯಾಯ ಯಾತ್ರೆಯು ಇಂದು ಒಡಿಶಾದಿಂದ ಛತ್ತೀಸ್ ಗಢ ರಾಜ್ಯವನ್ನು ಪ್ರವೇಶಿಸಿದೆ. ಇಂದಿನ (08.02.2024) ಕಾರ್ಯಕ್ರಮಗಳು ಹೀಗಿದ್ದವು.
ಬೆಳಿಗ್ಗೆ 9.15 ಒಡಿಶಾ, ಝಾರ್ಸುಗುಡ, ಹಳೆಯ ಬಸ್ ನಿಲ್ದಾಣದಿಂದ ಕಿಸಾನ್ ಚೌಕದ ವರೆಗೆ ಯಾತ್ರೆ. ಬಳಿಕ ಸಾರ್ವಜನಿಕ ಭಾಷಣ. 10.00 ಕ್ಕೆ ಬೇಲ್ಪಹಾರ್ ನಲ್ಲಿ ಸ್ವಾಗತ. 11.15 ಕ್ಕೆ ಒಡಿಶಾದ ರೆಂಗಲಪಲ್ಲಿ ಛತ್ತೀಸ್ ಘಡ ಗಡಿಯಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ. ಬಳಿಕ ಸಂಜೆಯ ವಿರಾಮ.
ಝಾರ್ಸುಗುಡದಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, “ದೇಶದಲ್ಲಿ ಈಗ ಭಯಂಕರ ಸಾಮಾಜಿಕ ಅನ್ಯಾಯ ನಡೆಯುತ್ತಿದೆ. ನೀವು ಜಿ ಎಸ್ ಟಿ ಪಾವತಿಸುತ್ತೀರಿ, ಅದಾನಿಯಂಥವರು ಮಜಾ ಅನುಭವಿಸುತ್ತಾರೆ. ಯಾಕೆಂದರೆ ಅದಾನಿ ಧಾನ್ಯ ಸಂಗ್ರಹಾಗಾರ ಖರೀದಿಸುತ್ತಾನೆ. ರಸ್ತೆ, ಸೇತುವೆ ಟೆಂಡರ್ ನಲ್ಲಿ ಪಡೆಯುತ್ತಾನೆ. ಮಾಧ‍್ಯಮವನ್ನು ನಿಯಂತ್ರಿಸುತ್ತಾನೆ. ಆನಂತರ ಅದೇ ಮಾಧ‍್ಯಮ ನೀವು ಯಾಕೆ ಜಾತಿಗಣತಿಯ ಮಾತು ಆಡುತ್ತೀರಿ ಎಂದು ನಮ್ಮನ್ನು ಕೇಳುತ್ತದೆ. ನಿಮಗೆ ಮೋದಿಯ ಜಾತಿಯ ಬಗ್ಗೆ ಗೊತ್ತಿದೆಯೇ? ಅವರು ಸಾಮಾನ್ಯ ವರ್ಗದಲ್ಲಿ ಹುಟ್ಟಿದವರು. ಮುಖ್ಯಮಂತ್ರಿಯಾದ ಬಳಿಕ ತನ್ನ ಜಾತಿಯನ್ನು ಒಬಿಸಿಯಾಗಿ ಬದಲಿಸಿಕೊಂಡರು.
ನಾನು ಜಾತಿಗಣತಿ ಮತ್ತು ಸಾಮಾಜಿಕ ನ್ಯಾಯದ ಮಾತು ಆಡಿದ ಕೂಡಲೇ ಮೋದಿ ಹೇಳುತ್ತಾರೆ ದೇಶದಲ್ಲಿ ಎರಡೇ ಜಾತಿ ಇರುವುದು – ಬಡವರು ಮತ್ತು ಧನಿಕರು. ಎರಡೇ ಜಾತಿ ಇರುವುದು ಹೌದಾದರೆ , ಮೋದಿಯವರೇ ನೀವು ಏನು? ನೀವು ಬಡವರೋ ಧನಿಕರೋ? ನೀವು ಕೋಟಿ ಬೆಲೆಬಾಳುವ ಸೂಟ್ ಧರಿಸುತ್ತೀರಿ, ದಿನಕ್ಕೆ ಅನೇಕ ಬಾರಿ ಬಟ್ಟೆ ಬದಲಾಯಿಸುತ್ತೀರಿ, ಅಲ್ಲಿಂದ ನಾನು ಒಬಿಸಿ ಎಂದು ಸುಳ್ಳು ಹೇಳುತ್ತೀರಿ. ಪ್ರಧಾನಮಂತ್ರಿಯವರ ತಿಂಗಳ ಸಂಬಳ 1 ಲಕ್ಷ 60 ಸಾವಿರ ರುಪಾಯಿ. ಅವರು ದಿನ ಇಡೀ ಉಡುಪು ಬದಲಾಯಿಸುತ್ತಾರೆ. 2-3 ಕೋಟಿ ಬೆಲೆ ಬಾಳುವ ಉಡುಪು ಧರಿಸುತ್ತಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ?
ಹಿಂದುಸ್ತಾನದ ದೊಡ್ಡ ದೊಡ್ಡ ಉದ್ಯಮಿಗಳು ಚೀನಾದಿಂದ ಮಾಲು ಖರೀದಿಸಿ ನಮಗೆ ಮಾರುತ್ತಾರೆ. ಇದರಲ್ಲಿ ಚೀನಾ ಹಣ ಮಾಡುತ್ತದೆ. ಉದ್ಯೋಗ ಸಿಗುವುದು ಚೀನಾದ ಯುವಕರಿಗೆ. ಬೆಲೆ ಏರಿಕೆಯಾದಾಗ ಕಷ್ಟವಾಗುವುದು ನಿಮಗೆ. ಅದಾನಿ ಅಥವಾ ಮೋದಿಗೆ ಏನೂ ತೊಂದರೆಯಾಗುವುದಿಲ್ಲ. ಅಂದರೆ ನಿಮಗೆ ಆರ್ಥಿಕ ಅನ್ಯಾಯವಾಗುತ್ತಿದೆ. ಅದು ನಿಮಗೆ ಕಾಣಿಸುವುದಿಲ್ಲ.
ನಾನು 200 ಕಾರ್ಪೋರೇಟ್ ಕಂಪನಿಗಳ ಅಂಕಿ ಅಂಶ ತೆಗೆದೆ. ಅದರ ಉನ್ನತ ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿ ಒಬ್ಬನೇ ಒಬ್ಬ ಒಬಿಸಿ, ದಲಿತ ಅಥವಾ ಆದಿವಾಸಿ ಇಲ್ಲ. ಅದಾನಿಯ ಕಂಪೆನಿಯ ಉನ್ನತ ಹುದ್ದೆಯಲ್ಲಿ ಯಾವ ಬಡವ, ಒಬಿಸಿ, ದಲಿತ ಅಥವಾ ಆದಿವಾಸಿ ಕಾಣಸಿಗುತ್ತಾನೆ? ಅದು ಕಾಣಸಿಕ್ಕ ದಿನ ನಾನು ಜಾತಿ ಗಣತಿಯ ಬೇಡಿಕೆ ನಿಲ್ಲಿಸುತ್ತೇನೆ. ಆದಿನದವರೆಗೂ ಜಾತಿಗಣತಿ ಮಾಡಿಸಿಯೇ ಮಾಡಿಸುತ್ತೇನೆ” ಎಂದರು.
ಒಡಿಶಾ ಮತ್ತು ಛತ್ತೀಸ್ ಗಢ ಗಡಿಯಲ್ಲಿ ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಶರತ್ ಪಟ್ನಾಯಕ್ ಮತ್ತು ಛತ್ತೀಸ್ ಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜಿ ನಡುವೆ ಧ್ವಜ ಹಸ್ತಾಂತರ ನಡೆಯಿತು.
ನರೇಂದ್ರ ಮೋದಿಯವರು ಮೂಲತಃ ಒಬಿಸಿ ಅಲ್ಲ ಎಂದು ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿರುವುದು ದೇಶದಲ್ಲಿ ಭಾರೀ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು