Sunday, July 14, 2024

ದಲಿತೆ ಎಂಬ ಕಾರಣಕ್ಕೆ ಅಧ್ಯಕ್ಷೆ ಆಯ್ಕೆ ಪ್ರಕ್ರಿಯೆಗೆ ಗೈರಾದ ಮೇಲ್ಜಾತಿ ಸದಸ್ಯರು: ಅಳುತ್ತಾ ಹೊರಟ ದಲಿತ ಅಭ್ಯರ್ಥಿ!

Most read

ಸಕಲೇಶಪುರ: ನಿಯಮಾನುಸಾರ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಬೇಕಿದ್ದ ವನಜಾಕ್ಷಿ ಅವರು ದಲಿತ ಮಹಿಳೆ ಎನ್ನುವ ಕಾರಣಕ್ಕೆ ಉಳಿದ ಸದಸ್ಯರು ಬೆಂಬಲಿಸದಿರುವ ಕಾರಣ ಅವರ ಆಯ್ಕೆಯ ಅಧಿಕೃತ ಘೋಷಣೆ ಬಾಕಿ ಉಳಿಸಿಕೊಂಡಿರುವ ಘಟನೆ ಸಕಲೇಶಪುರದ ಹೊಂಗಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಸ್ತುತ ಸ್ಥಳೀಯ ಗ್ರಾಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿತ್ತು. ಇದರಲ್ಲಿ ವನಜಾಕ್ಷಿ ಒಬ್ಬರೇ ಈ ಸಮುದಾಯಕ್ಕೆ ಸೇರಿದ ಸದಸ್ಯೆಯಾಗಿದ್ದರು. ಹೀಗಾಗಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆಯ್ಕೆಗೆ ಆರು ಜನ ಸದಸ್ಯರಿರುವ ಗ್ರಾಪಂಗೆ ಮೂರು ಜನರ ಕೋರಂ ಅಗತ್ಯವಿತ್ತು. ಆದರೆ ಇಬ್ಬರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ಅರ್ಧಗಂಟೆ ಹೆಚ್ಚುವರಿ ಸಮಯ ನೀಡಿದರೂ ಯಾರೂ ಬಾರದ ಕಾರಣ ಅಧ್ಯಕ್ಷರ ಆಯ್ಕೆ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಆದಿತ್ಯ ಅವರು, ಕೋರಂ ಕೊರತೆಯಿಂದ ಅಧ್ಯಕ್ಷರ ಅಧಿಕೃತ ಘೋಷಣೆಯಾಗಿಲ್ಲ. ಸೋಮವಾರಕ್ಕೆ ಸಭೆ ಮುಂದೂಡಲಾಗಿದ್ದು, ಆ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಘೋಷಣೆಯಾಗಲಿದೆ ಎಂದಿದ್ದಾರೆ.

ಈ ವಿಷಯವಾಗಿ ಕನ್ನಡ ಪ್ಲಾನೆಟ್ ನೊಂದಿಗೆ ತಮ್ಮ ಅಳಲು ತೋಡಿಕೊಂಡಿರುವ ವನಜಾಕ್ಷಿ ಅವರು, ನಾನು ಮಹಿಳೆಯಾಗಿರುವುದರಿಂದ, ಅದರಲ್ಲೂ ದಲಿತ ಮಹಿಳೆ ಆಗಿರುವುದರಿಂದ ನನ್ನ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಉಳಿದ ಸದಸ್ಯರು ವಿರೋಧಿಸುತ್ತಿದ್ದಾರೆ. ಹೀಗಾಗಿ ಇಂದು ಕೃತಕ ಕೋರಂ ಕೊರತೆ ಸೃಷ್ಟಿಸಿದ್ದಾರೆ. ನಾನು ಜೆಡಿಎಸ್ ನಿಂದ ಆಯ್ಕೆಯಾಗಿದ್ದರೂ ಸ್ಥಳೀಯ ಜೆಡಿಎಸ್ ನಾಯಕರು ನನಗೆ ಯಾವುದೇ ರೀತಿಯ ಬೆಂಬಲ ನೀಡಿಲ್ಲ. ನನ್ನ ಹೊರತುಪಡಿಸಿ ಉಳಿದ 5 ಸದಸ್ಯರು ಬಿಜೆಪಿ ಪಕ್ಷದವರಾಗಿದ್ದಾರೆ. ಇವರಲ್ಲಿ ಒಬ್ಬರು ಮಹಿಳೆ ಆಗಿರುವುದರಿಂದ ಸದಾ ನನ್ನ ಜೊತೆಗೆ ಇರುತ್ತಾರೆ. ಉಳಿದ ನಾಲ್ಕು ಜನ ಸದಸ್ಯರು ಆಯ್ಕೆಯಾದ ಎರಡೂವರೆ ವರ್ಷವೂ ನನಗೆ ಯಾವುದೇ ರೀತಿಯ ಬೆಂಬಲ ನೀಡಿಲ್ಲ. ನನ್ನ ವಿರುದ್ಧ ಪಿತೂರಿಗಳನ್ನು ಮಾಡುತ್ತಾ,

ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿದ್ದಾರೆ. ಜೆಡಿಎಸ್ ನಾಯಕರ ನಿರ್ಲಕ್ಷ್ಯ ಧೋರಣೆ, ಬಿಜೆಪಿಯವರ ಅಸಹಕಾರಕ್ಕೆ ಬೇಸತ್ತು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನನ್ನನ್ನು ಇಂದು ಬಿಜೆಪಿಯವರು ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ದಲಿತಳಾದ ನನಗೆ ಮುಂದೆಯೂ ಇವರು ಸಹಕಾರ ನೀಡುವ ಭರವಸೆ ನನಗಿಲ್ಲ. ಸೋಮವಾರ ಅಧಿಕಾರಿಗಳು ಮತ್ತೊಮ್ಮೆ ಸಭೆ ಕರೆದಿದ್ದಾರೆ. ಅಂದೂ ಉಳಿದ ಸದಸ್ಯರು ಬರುವ ನಿರೀಕ್ಷೆ ಇಲ್ಲ. ಅಂದು ನನ್ನ ಅಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

More articles

Latest article