ರಾಜಧಾನಿ ಬೆಂಗಳೂರಿನ ಮೂರು ಪ್ರಸಿದ್ಧ ಹೋಟೆಲ್‌ಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇಮೇಲ್‌ಗಳು ಬಂದಿವೆ. ಅಧಿಕಾರಿಗಳು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ಬೆದರಿಕೆ ಇಮೇಲ್‌ಗಳ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ಮತ್ತು ಭದ್ರತಾ ಪಡೆಗಳು ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ವರದಿ ಮಾಡಿದೆ.
ಗುರುವಾರ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಅಧಿಕೃತ ಇಮೇಲ್ ಖಾತೆ ತೆರೆದಾಗ ಬೆದರಿಕೆ ಇಮೇಲ್ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಇದು ಪೋಷಕರು ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ನಂತರ ಮತ್ತು ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳು ಮತ್ತು ಟೆಕ್ಕಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಂಕಿತ ಬಾಂಬರ್ ಪೊಲೀಸ್ ತನಿಖೆ ವೇಳೆ ಬಾಯ್ಬಟ್ಟಿದ್ದ. ಈ ಹಿನ್ನೆಲೆ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿದ್ದಾರೆ.