ಬೆಂಗಳೂರು : ಸಂವಿಧಾನದ 6ನೇ ಶೆಡ್ಯೂಲ್ ಅಡಿ ರಕ್ಷಣೆ, ಲಡಾಕ್ ಗೆ ಸಂಪೂರ್ಣ ರಾಜತ್ವ, ಲಡಾಕ್ ನಂತಹ ದುರ್ಗಮ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ವಿರೋಧಿಸಿ ಇದೇ ಮಾರ್ಚ್ 5 ರಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಉದ್ಯಮಿ, ಎಂಜಿನಿಯರ್ ಹಾಗೂ ಶಿಕ್ಷಣ ತಜ್ಞ ಆಗಿರುವ ಸೋನಮ್ ವಾಂಗ್ ಚುಕ್ ಅವರಿಗೆ ಬೆಂಬಲಿಸಿ ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನ ಲಡಾಕ್ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ತಮ್ಮ ನೆಲದ ಹಕ್ಕಿಗಾಗಿ ಕಳೆದ 20 ದಿನಗಳಿಂದ ವಾಂಗ್ಚುಕ್ ಅವರು ಕೇವಲ ನೀರು ಉಪ್ಪು ಸೇವಿಸಿ ಸಂಪೂರ್ಣ ನಿರಶನ ಹೋರಾಟದ ಮೂಲಕ ತಮ್ಮ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದೆ ಇಡುತ್ತಿದ್ದಾರೆ. ವಾಂಗ್ಚುಕ್ ಅವರ ಕ್ಲೈಮೇಟ್ ಫಾಸ್ಟ್ ಗೆ ಬೆಂಬಲಿಸಿ ನೂರಾರು ಕಿ.ಮೀ. ಪ್ರಯಾಣ ಬೆಳೆಸಿ ಹಲವು ಪರಿಸರ ಪ್ರೇಮಿಗಳು ಆಗಮಿಸಿದ್ದರು. ಅಲ್ಲಿ ಸೇರಿದ 120 ರಿಂದ 140 ಜನರು ಘೋಷಣಾ ಫಲಕಗಳನ್ನು ಹಿಡಿದು ಹೋರಾಟಕ್ಕೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಮಾನವ ಸರಪಳಿ ರಚಿಸಲಾಯಿತು. ಬೆಂಗಳೂರಿನಲ್ಲಿ ಓದುತ್ತಿರುವ ಲಡಾಕ್ ವಿದ್ಯಾರ್ಥಿಗಳ ಲಢಾಕಿ ಪ್ರಾರ್ಥನೆಯೊಂದಿಗೆ ಕೂಡ ಆರಂಭವಾಯಿತು. ನಂತರ ದೇಶಭಕ್ತಿಗೀತೆ ಹಮ್ ಹೋಂಗೆ ಕಾಮಿಯಾಬ್ ಮತ್ತು ವಂದೇ ಮಾತರಂ ಗೀತೆಗಳನ್ನು ಹಾಡಲಾಯಿತು. ಇದೇ ವೇಳೆ ಲಡಾಕ್ ನ ನಿಜವಾದ ಸಮಸ್ಯೆಗಳು, ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ಅಂಶಗಳ ಕುರಿತು ಅರ್ಥಗರ್ಭಿತ ಚರ್ಚೆ ನಡೆಯಿತು. ಜೊತೆಗೆ 6ನೇ ಅನುಸೂಚಿ ಇಂತಹ ಪ್ರದೇಶಗಳಿಗೆ ಏಕೆ ಅವಶ್ಯಕ ಎನ್ನುವ ಕುರಿತು ಚರ್ಚೆಗಳು ನಡೆದವು.
ಇದೇ ವೇಳೆ ಲಡಾಕ್ ಗೆ ಮಾರಕವಾಗಿರುವ ಎಲ್ಲ ನಕಾರಾತ್ಮಕ ಶಕ್ತಿಯ ವಿರುದ್ಧ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಕೇವಲ ಮೂರು ಜನರಿಂದ ಬೆಂಗಳೂರಿನಲ್ಲಿ ಆರಂಭವಾದ ವಾಂಗ್ಚುಕ್ ಬೆಂಬಲಿಗರ ಗುಂಪು ಇಂದು 400 ಜನರನ್ನೂ ಮೀರಿ ಬೆಳೆಯುತ್ತಿದೆ. ಕೇಂದ್ರೀಕೃತ ಆಡಳಿತ, ಹವಾಮಾನ ವೈಪರೀತ್ಯ ಬೆಂಗಳೂರಿನ ನಿವಾಸಿಗಳ ಮೇಲೂ ಪರಿಣಾಮ ಬೀರುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ www.consciouscommunities ನ ಸಂಸ್ಥಾಪಕ ಸಂದೀಪ್ ಅನಿರುಧನ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟನ ಟ್ರಸ್ಟಿ ಡಿ.ಟಿ. ದೇವರೆ ಅವರು, ಹವಾಮಾನ ವ್ಯವಸ್ಥೆಗಳು ಹೇಗೆ ಬದಲಾಗುತ್ತಿವೆ, ಈ ಬದಲಾವಣೆಗಳಲ್ಲಿ ಜನರ ಹಾಗೂ ಸರಕಾರದ ಪಾತ್ರವೇನು, ಹವಾಮಾನ ತುರ್ತುಪರಿಸ್ಥಿತಿಯಿಂದ ಮುಂಬರುವ ದುಷ್ಪರಿಣಾಮಗಳಿಂದ ಭವಿಷ್ಯದ ಪೀಳಿಗೆಯನ್ನು ಉಳಿಸುವ ಬಗೆಗಳಾವುವು, 6ನೇ ಶೆಡ್ಯೂಲ್ ಬೇಡಿಕೆಯು ಗಾಂಧೀಜಿಯವರ ಸ್ವಾರಾಜ್ಯದ ಕನಸನ್ನು ಹೇಗೆ ಪುನರುಚ್ಛರಿಸುತ್ತದೆ, ಅವರ ದೂರದೃಷ್ಟಿಯ ಕೃತಿ ಹಿಂದ್ ಸ್ವರಾಜ್ ಮತ್ತು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಲ್ಲಿ ಮತ್ತು ಅರಣ್ಯ ಹಕ್ಕುಗಳ ಕಾಯಿದೆಯನ್ನು 6ನೇ ಅನುಸೂಚಿಯಲ್ಲಿ ಹೇಗೆ ಪ್ರತಿಪಾದಿಸಲಾಗಿದೆ ಎನ್ನುವ ಕುರಿತು ವಿವರಿಸಿದರು.
ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ನಮ್ರತಾ, ನೂಪುರ್, ಯಶಸ್ ಸಭೆಯ ಸಂಘಟಕರಾಗಿದ್ದರು.