ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತಲೇ ಬಂದಿರುವ ಲಿಂಗಾಯತ ಮಠಗಳ ಸ್ವಾಮಿಗಳು ಈಗ ಅದ್ಯಾಕೆ ಬಸವಣ್ಣನವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಸಾಂಸ್ಕೃತಿಕ ನಾಯಕ ಎನ್ನುತ್ತಿದ್ದಾರೆ? ವಿಶ್ವಗುರುವಿನ ಹೆಸರನ್ನು ಮೋದಿಯವರು ಹೈಜಾಕ್ ಮಾಡಿದ್ದರಿಂದಾಗಿ ಬಸವಣ್ಣನವರಿಗೆ ನಾಯಕ ಸ್ಥಾನ ಮಾತ್ರ ಇರಲಿ ಎಂದು ಈ ನಿರ್ಣಯಕ್ಕೆ ಬಂದಿದ್ದಾರಾ? ಇದು ಪಂಚಾಚಾರ್ಯ ಪೀಠಗಳ ವೀರಶೈವರ ತಂತ್ರಗಾರಿಕೆ ಎನ್ನುವುದು ಈ ವಿರಕ್ತ ಮಠದ ಸ್ವಾಮಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ? – ಶಶಿಕಾಂತ ಯಡಹಳ್ಳಿ, ರಂಗಕರ್ಮಿ
ಈ ಲಿಂಗಾಯತ ಮಠದ ಸ್ವಾಮಿಗಳಿಗೆ ಏನಾಗಿದೆಯೋ ಗೊತ್ತಿಲ್ಲ. ವೀರಶೈವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಲಿಂಗಾಯತವೇ ಬೇರೆ ವೀರಶೈವವೇ ಬೇರೆ ಎಂದು ಹೇಳುವ ಮಠದವರೂ ಸಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರಕಾರ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲೂ ಸಹ ಈ ನಿರ್ಣಯವನ್ನು ಘೋಷಿಸಲಾಗಿತ್ತು. ಅದರ ಅನುಷ್ಠಾನಕ್ಕೆ ಈಗ ಲಿಂಗಾಯತ ಮಠದ ಸ್ವಾಮಿಗಳು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜನವರಿ 8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾದ 48 ಮಠಾಧೀಶರ ನಿಯೋಗ ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು. ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟು ಸ್ವಾಮಿಗಳನ್ನು ಬೀಳ್ಕೊಟ್ಟರು. ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಆಸಕ್ತಿ ವಹಿಸಿ ಈಗಾಗಲೇ ಕೈ ಸುಟ್ಟುಕೊಂಡು ಪಾಠ ಕಲಿತಿರುವ ಸಿದ್ದರಾಮಯ್ಯನವರಿಗೆ ಲಿಂಗಾಯತರ ಆಗ್ರಹಕ್ಕೆ ಒಪ್ಪಿದರೆ ಬೇರೆ ಜಾತಿ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಇದ್ದಿದ್ದರಿಂದಲೇ ಸಚಿವ ಸಂಪುಟ ಸಭೆಯ ನೆಪ ಹೇಳಿ ಸ್ವಾಮಿಗಳನ್ನು ಸಾಗಹಾಕಿದರು.
ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತಲೇ ಬಂದಿರುವ ಲಿಂಗಾಯತ ಮಠಗಳ ಸ್ವಾಮಿಗಳು ಈಗ ಅದ್ಯಾಕೆ ಬಸವಣ್ಣನವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಸಾಂಸ್ಕೃತಿಕ ನಾಯಕ ಎನ್ನುತ್ತಿದ್ದಾರೆ? ವಿಶ್ವಗುರುವಿನ ಹೆಸರನ್ನು ಮೋದಿಯವರು ಹೈಜಾಕ್ ಮಾಡಿದ್ದರಿಂದಾಗಿ ಬಸವಣ್ಣನವರಿಗೆ ನಾಯಕ ಸ್ಥಾನ ಮಾತ್ರ ಇರಲಿ ಎಂದು ಈ ನಿರ್ಣಯಕ್ಕೆ ಬಂದಿದ್ದಾರಾ? ಇದು ಪಂಚಾಚಾರ್ಯ ಪೀಠಗಳ ವೀರಶೈವರ ತಂತ್ರಗಾರಿಕೆ ಎನ್ನುವುದು ಈ ವಿರಕ್ತ ಮಠದ ಸ್ವಾಮಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ?
ಬಸವಣ್ಣನವರು ನಿಜವಾದ ಅರ್ಥದಲ್ಲಿ ವಿಶ್ವಮಾನವ. ಶಿವಶರಣರು ತಮ್ಮ ವಚನಗಳಲ್ಲಿ ವಿಶ್ವಮಾನವ ತತ್ವವನ್ನು ಕಟ್ಟಿಕೊಟ್ಟವರು. ಇಡೀ ಮನುಕುಲಕ್ಕೆ ಕಾಯಕ ಮತ್ತು ದಾಸೋಹ ಎನ್ನುವ ಸಿದ್ಧಾಂತವನ್ನು ಹೇಳಿಕೊಟ್ಟವರು. ಯಾವುದೇ ಒಂದು ಪ್ರದೇಶಕ್ಕೆ, ರಾಜ್ಯಕ್ಕೆ, ದೇಶಕ್ಕೆ ಬಸವಣ್ಣನವರನ್ನು ಸೀಮಿತಗೊಳಿಸುವುದು ಬಸವಾದಿ ಶರಣರಿಗೆ ಮಾಡುವ ಅಪಮಾನ. ವಿಶ್ವಮಾನವರಾದ ಬಸವಣ್ಣನವರನ್ನು ಒಂದು ರಾಜ್ಯಕ್ಕೆ ಕಟ್ಟಿ ಹಾಕುವ ಹುನ್ನಾರವನ್ನು ವೀರಶೈವ ಕುಲಸಂಜಾತರು ಮಾಡುತ್ತಿದ್ದಾರೆ.
ಬಸವಣ್ಣನವರು ಕೇವಲ ನಾಯಕರಲ್ಲಾ, ಅವರು ಲಿಂಗಾಯತ ಧರ್ಮದ ಸ್ಥಾಪಕರು. ಪುರೋಹಿತಶಾಹಿ ಶೋಷಣೆಯ ವಿರುದ್ದ ಸಿಡಿದೆದ್ದು ಎಲ್ಲಾ ಜಾತಿಯ ಕಾಯಕ ಜೀವಿಗಳನ್ನು ಒಂದುಗೂಡಿಸಿ ಶರಣಧರ್ಮವನ್ನು ಅಸ್ತಿತ್ವಕ್ಕೆ ತಂದರು. ಬಹುದೇವೋಪಾಸನೆಯ ವಿರುದ್ಧ ಏಕದೇವೋಪಾಸನೆಯನ್ನು ಬೋಧಿಸಿದರು. ಸ್ಥಾವರ ಶಿವಲಿಂಗಕ್ಕೆ ಪ್ರತಿಯಾಗಿ ಇಷ್ಟಲಿಂಗವನ್ನು ಕೊಟ್ಟರು. ಭಗವಂತ ಮತ್ತು ಭಕ್ತರ ನಡುವೆ ಪೂಜಾರಿ ಪುರೋಹಿತರಿಲ್ಲದ ನೇರ ಸಂಪರ್ಕವನ್ನು ಕರಲಿಂಗದ ಮೂಲಕ ಪ್ರತಿಪಾದಿಸಿದರು. ಲಿಂಗಸಮಾನತೆಯನ್ನು ನಡೆ ನುಡಿಯಲ್ಲಿ ಸಮರ್ಥಿಸಿದರು. ಬಸವಧರ್ಮದ ಈ ಎಲ್ಲಾ ಪರಿಕಲ್ಪನೆಗೆ ವಿರುದ್ಧವಾಗಿರುವಂತಹುದು ವೈದಿಕಶಾಹಿ ಹಾಗೂ ವೀರಶೈವ ಧರ್ಮಾಚರಣೆಗಳು.
ವಾಸ್ತವ ಹೀಗಿದ್ದರೂ ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ವೀರಶೈವರು ಒಪ್ಪುತ್ತಿಲ್ಲ. ವೀರಶೈವ, ಲಿಂಗಾಯತ ಎರಡೂ ಸೇರಿ ಧರ್ಮವಾಗಬೇಕು ಎಂಬುದು ವೀರಶೈವರ ಒತ್ತಾಯ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮವಾಗುವುದಕ್ಕೆ ಹಿಂದುತ್ವವಾದಿ ವೈದಿಕಶಾಹಿ ಬಿಡುತ್ತಿಲ್ಲ. ವೀರಶೈವ ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗಗಳೆಂದು ಪ್ರತಿಪಾದಿಸಲಾಗುತ್ತಿದೆ. ಬಸವಣ್ಣನವರೇ ನಮ್ಮ ಧರ್ಮಗುರುಗಳು, ವಚನಗಳೇ ನಮ್ಮ ಧರ್ಮಗ್ರಂಥಗಳು, ನಮ್ಮದು ಸ್ವತಂತ್ರ ಧರ್ಮ ಎಂದು ಲಿಂಗಾಯತರು ವೀರಶೈವ ಮತ್ತು ವೈದಿಕಶಾಹಿ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರಾದರೂ ಆ ಪುರೋಹಿತಶಾಹಿಗಳು ಸಮ್ಮತಿಸುತ್ತಿಲ್ಲ. ಇಂತಹ ಸಂದರ್ಭದಲ್ಲೇ ಬಸವಣ್ಣನವರನ್ನು ಲಿಂಗಾಯತ ಮತಧರ್ಮ ಸ್ಥಾಪಕರು ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧವಿರದ ವೀರಶೈವ ಮಠ ಪೀಠಗಳು ಬಸವಣ್ಣನವರನ್ನು ಕೇವಲ ಒಂದು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿಸಲು ಸಿದ್ಧತೆ ನಡೆಸಿದ್ದಾರೆ. ಕೆಲವು ಲಿಂಗಾಯತ ಮಠಗಳ ಸ್ವಾಮಿಗಳೂ ಸಹ ಬಸವಣ್ಣನವರಿಗೆ ನಾಯಕನ ಪಟ್ಟ ಕಟ್ಟಲು ತುದಿಗಾಲ ಮೇಲೆ ನಿಂತಿದ್ದಾರೆ. ಅದರ ಹಿಂದೆ ಹುನ್ನಾರಗಳೂ ಬೇಕಾದಷ್ಟಿವೆ.
ಬಸವಣ್ಣನವರನ್ನು ಕೇವಲ ರಾಜ್ಯವೊಂದರ ಸಾಂಸ್ಕೃತಿಕ ನಾಯಕ ಎನ್ನುವುದನ್ನು ಎಂದೂ ಒಪ್ಪಲಾಗದು. ಯಾರು ಏನೇ ಹೇಳಲಿ ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರು. ಬಸವಧರ್ಮ ಸ್ಥಾಪನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿವಶರಣರೂ ಸಾಂಸ್ಕೃತಿಕ ನಾಯಕರೇ. ಉದಾಹರಣೆಗೆ ಗೌತಮ ಬುದ್ಧನನ್ನು ಬೌದ್ಧ ದಮ್ಮ ಸಂಸ್ಥಾಪಕ ಎನ್ನುವುದು ಸೂಕ್ತವೋ ಇಲ್ಲಾ ಸಾಂಸ್ಕೃತಿಕ ನಾಯಕ ಎನ್ನುವುದು ಸರಿಯೋ? ಗುರುನಾನಕ್ ರವರನ್ನು ಸಿಕ್ ಧರ್ಮದ ಪ್ರವರ್ತಕರು ಎನ್ನುವುದು ಸೂಕ್ತವಾ ಇಲ್ಲಾ ಪಂಜಾಬಿನ ಸಾಂಸ್ಕೃತಿಕ ನಾಯಕ ಎನ್ನುವುದು ಒಪ್ಪಿತವಾ? ಅದೇ ರೀತಿ ಬಸವಣ್ಣನವರನ್ನು ಲಿಂಗಾಯತ ಧರ್ಮದ ಸಂಸ್ಥಾಪಕರು ಎನ್ನುವುದು ಸಮರ್ಥನೀಯವಾ ಅಥವಾ ರಾಜ್ಯವೊಂದರ ಸಾಂಸ್ಕೃತಿಕ ನಾಯಕ ಎನ್ನುವುದು ಅಗತ್ಯವಾ? ಲಿಂಗಾಯತರು ಯೋಚಿಸಬೇಕಿದೆ.
ಹಲವಾರು ಜಾತಿ ಧರ್ಮಗಳಿರುವ ನಮ್ಮ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬೇರೆ ಜಾತಿಧರ್ಮೀಯ ಸಮುದಾಯಗಳು ಯಾಕೆ ಒಪ್ಪಿಕೊಳ್ಳಬೇಕು? ಪ್ರಬಲ ಕೋಮಿನ ಒಕ್ಕಲಿಗರು ಕೆಂಪೇಗೌಡರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಾರೆ. ವೈದಿಕರು ಶಂಕರಾಚಾರ್ಯರ ಹೆಸರನ್ನೋ ಪೇಜಾವರರ ಹೆಸರನ್ನೋ ಸಾಂಸ್ಕೃತಿಕ ನಾಯಕ ಎಂದು ಪರಿಗಣಿಸಬೇಕು ಎನ್ನುತ್ತಾರೆ. ಕುರುಬ ಸಮಾಜದವರು ಕನಕದಾಸರನ್ನು ಸಾಂಸ್ಕೃತಿಕ ನಾಯಕ ಎಂದು ಗುರುತಿಸಬೇಕು ಎನ್ನುತ್ತಾರೆ.
ಹೀಗಾಗಿ ವೀರಶೈವರು ಹುಟ್ಟುಹಾಕಿದ ಈ ಸಾಂಸ್ಕೃತಿಕ ನಾಯಕದ ಪಟ್ಟ ಎನ್ನುವುದು ಮತ್ತೆ ವಿವಾದಗಳನ್ನು ಹುಟ್ಟಿಸುತ್ತದೆ. ಅದಕ್ಕಿಂತಲೂ ಬಸವಣ್ಣನವರನ್ನು ಲಿಂಗಾಯತ ಧರ್ಮ ಸ್ಥಾಪಕರು ಎಂದು ಒಪ್ಪಿಕೊಳ್ಳಲು ಹಾಗೂ ಲಿಂಗಾಯತವು ಸ್ವತಂತ್ರ ಧರ್ಮ ಎನ್ನುವ ಮಾನ್ಯತೆ ಪಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಒತ್ತಾಯಿಸಬೇಕಿದೆ. ಪುರೋಹಿತಶಾಹಿಗಳ ಹಿಡಿತದಿಂದ ಬಸವಧರ್ಮವನ್ನು ಮುಕ್ತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಲಿಂಗಾಯತ ಮಠಗಳು, ಮಠಾಧೀಶರುಗಳು ಕಾರ್ಯಪ್ರವೃತ್ತರಾಗಬೇಕಿದೆ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರಕಾರ ಅಧಿಕೃತವಾಗಿ ಘೋಷಿಸಿದರೂ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಪ್ರಯೋಜನವಾಗದು ಹಾಗೂ ಸರಕಾರಿ ಮೀಸಲಾತಿಯೂ ದೊರಕದು. ಅದೇ ಲಿಂಗಾಯತವು ಬೌದ್ಧ, ಜೈನ, ಸಿಕ್ ಧರ್ಮಗಳಂತೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆದಲ್ಲಿ ಅನೇಕ ಅನುಕೂಲಗಳು ಸಾಧ್ಯ. ಸುತ್ತಲೂ ವೀರಶೈವ ಹಾಗೂ ವೈದಿಕಶಾಹಿ ಕಟ್ಟಿರುವ ಅಭೇದ್ಯ ಕೋಟೆಯನ್ನು ಬೇಧಿಸಿ ಲಿಂಗಾಯತವು ಸ್ವತಂತ್ರ ಧರ್ಮವಾಗಬೇಕಿದೆ. ಬುದ್ಧನ ಹಾಗೆ, ಗುರುನಾನಕ್ ರವರ ಹಾಗೆ ಬಸವಣ್ಣನವರು ಸ್ವತಂತ್ರ ಧರ್ಮದ ಸ್ಥಾಪಕರಾಗಿ ಮಾನ್ಯತೆ ಪಡೆಯಬೇಕಿದೆ.
ಕಾಲಕಾಲಕ್ಕೆ ಸಾಂಸ್ಕೃತಿಕ ನಾಯಕರು, ಸಮಾಜ ಸುಧಾರಕರು ಬಂದು ಹೋಗುತ್ತಾರೆ. ಆದರೆ ಸಮಾನತೆಯನ್ನು ಸಾರುವ ಧರ್ಮವೊಂದರ ಸ್ಥಾಪಕರು ಹುಟ್ಟಿ ಬರುವುದು ಅಪರೂಪದಲ್ಲಿ ಅಪರೂಪ. ಮನುವಾದಿ ಧರ್ಮದ ವಿರುದ್ಧ ಮಾನವತಾವಾದಿ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು ಕೇವಲ ರಾಜ್ಯವೊಂದರ ಸಾಂಸ್ಕೃತಿಕ ನಾಯಕನಲ್ಲಾ, ವಿಶ್ವಮಾನವ ಧರ್ಮವೊಂದರ ಸಂಸ್ಥಾಪಕ ಎಂಬುದನ್ನು ಎಲ್ಲಾ ಲಿಂಗಾಯತ ಮಠ ಮಾನ್ಯಗಳು, ಸ್ವಾಮೀಜಿಗಳು ಹಾಗೂ ಲಿಂಗಾಯತರು ಅರಿಯಲೇ ಬೇಕಿದೆ. ಪುರೋಹಿತಶಾಹಿಗಳ ಹಿಡಿತದಿಂದ ಬಿಡಿಸಿಕೊಂಡು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರೆಯುವವರೆಗೂ ರಾಜಿರಹಿತವಾಗಿ ನಿರಂತರ ಹೋರಾಟ ಮಾಡಬೇಕಿದೆ. ವಿಶ್ವಗುರು ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಕಾಯಕ ತತ್ವದ ಲಿಂಗಾಯತ ಧರ್ಮ ವಿಶ್ವದ ಎಲ್ಲಾ ಶೋಷಕ ಧರ್ಮಗಳಿಗೆ ಮಾದರಿಯಾಗಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತ