ಆಂಟಿಗುವಾ: ಭಾರತ ತಂಡದ ಬತ್ತಳಿಕೆಯ ಎಲ್ಲ ಗನ್ ಗಳೂ ಸಿಡಿಯುತ್ತಿದ್ದರೆ ಅದನ್ನು ಸೋಲಿಸುವುದು ಯಾವ ತಂಡಕ್ಕಾದರೂ ಕಷ್ಟ. ಬಾಂಗ್ಲಾದೇಶ ತಂಡ ಭಾರತಕ್ಕೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವ ವಿಭಾಗದಲ್ಲೂ ಸಮನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ ವಿವಿಯನ್ ರಿಚರ್ಡ್ಸ್ಸ ಮೈದಾನದಲ್ಲಿ50 ರನ್ ಗಳ ಸೋಲು ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಬೇಕಾಗಿ ಬಂದಾಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಗಳಿಸುವುದು ಎಷ್ಟು ಮುಖ್ಯ ಎಂಬುದನ್ನು ಅರಿತು ಆಡಿದರು. ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿ ಅಪಾಯಕಾರಿಯಾಗಿ ಆಡುತ್ತಿದ್ದಾಗ ಕೆಟ್ಟ ಹೊಡೆತವೊಂದಕ್ಕೆ ಪ್ರಯತ್ನಿಸಿ ಔಟಾದರು. ಆದರೆ ಅವರಷ್ಟೇ ಅಪಾಯಕಾರಿ ಆಟಗಾರ ರಿಷಬ್ ಪಂಥ್ ಆಟಕ್ಕೆಕುದುರಿಕೊಂಡು ಗಾಬರಿ ಹುಟ್ಟಿಸಿದರು.
ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಆಟದ ಬಗ್ಗೆ ನೂರೆಂಟು ಪ್ರಶ್ನೆಗಳು ಎದ್ದಿದ್ದವು. ಕೊಹ್ಲಿ ಇದಕ್ಕೆ ಉತ್ತರವೆಂಬಂತೆ 28 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಕೊಹ್ಲಿ ಬೆನ್ನಲ್ಲೇ ಸೂರ್ಯಕುಮಾರ್ ಔಟಾಗಿ ತೆರಳಿದ್ದು ಆತಂಕಕ್ಕೆ ಕಾರಣವಾಯಿತು. ಆದರೆ ಪಂಥ್ ಮತ್ತು ಶಿವಂ ದುಬೆ ತಾಳ್ಮೆಯಿಂದ ಆಡಿ ನಂತರ ರನ್ ಗತಿ ಹೆಚ್ಚಿಸುತ್ತ ಬಂದರು.
ಆದರೆ ನಿನ್ನೆ ಇನ್ನಿಂಗ್ಸ್ ಕೊನೆಯಲ್ಲಿ ಹೇಗೆ ಆಡಬೇಕೆಂಬುದನ್ನು ತೋರಿಸಿಕೊಟ್ಟಿದ್ದು ಉಪನಾಯಕ ಹಾರ್ದಿಕ್ ಪಾಂಡ್ಯ. 160 ರನ್ ಗಳಿಗೆ ನಿಂತುಬಿಡಬಹುದಾಗಿದ್ದ ಭಾರತದ ಇನ್ನಿಂಗ್ಸ್ ಅನ್ನು 196ಕ್ಕೆ ಏರಿಸಿದ್ದು ಪಾಂಡ್ಯ. 27 ಎಸೆತಗಳಲ್ಲಿ ಅವರು ಗಳಿಸಿದ 50 ರನ್ ಗಳಲ್ಲಿ ಮೂರು ಸಿಕ್ಸರ್, ನಾಲ್ಕು ಬೌಂಡರಿಗಳಿದ್ದವು. ಕೊನೆಯ ಹಂತದಲ್ಲಿ ಬೌಲ್ ಮಾಡಲು ಬಂದ ಯಾವ ಬೌಲರ್ ಗಳೂ ಅವರು ಕರುಣೆ ತೋರಲಿಲ್ಲ.
ಬಾಂಗ್ಲಾದೇಶದ ಬೌಲಿಂಗ್ ಕಳಪೆಯಾಗೇನೂ ಇರಲಿಲ್ಲ. ಆದರೆ ಇಂಥ ಪಿಚ್ ನಲ್ಲಿ ಹೇಗೆ ರನ್ ಗಳಿಸಬೇಕು ಎಂಬ ಭಾರತದ ಬ್ಯಾಟ್ಸ್ ಮನ್ ಗಳ ಲೆಕ್ಕಾಚಾರದ ಆಟದಿಂದ ಅವರು ರನ್ ಬಿಟ್ಟುಕೊಡಬೇಕಾಗಿ ಬಂದಿತು.
197 ರನ್ ಚೇಸ್ ಮಾಡಬೇಕಿದ್ದ ಬಾಂಗ್ಲಾದೇಶ ಅನಿವಾರ್ಯವಾಗಿ ಆಕ್ರಮಣಕಾರಿಯಾಗಿಯೇ ಆಡಬೇಕಿತ್ತು. ಆರಂಭಿಕ ಆಟಗಾರರಾದ ತಂಜೀದ್ ಹಸನ್ (29), ಲಿಟನ್ ದಾಸ್ (13) ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿದರು. ಆದರೆ ಹಾರ್ದಿಕ್ ಪಾಂಡ್ಯ ಎಸೆದ ಬೌನ್ಸರ್ ಗೆ ಬಾಂಗ್ಲಾದೇಶದ ಅತ್ಯಂತ ಅಪಾಯಕಾರಿ ಬ್ಯಾಟ್ಸ್ ಮನ್ ಲಿಟನ್ ದಾಸ್ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಬಾಂಗ್ಲಾ ನಾಯಕ ನಜ್ಮುಲ್ ಹುಸೇನ್ ಶಾಂತೋ ಬಾಂಗ್ಲಾದೇಶದ ಗೆಲುವಿನ ಆಸೆ ಕಮರಲು ಬಿಡದೆ ಪ್ರತಿರೋಧ ತೋರಿದರು.ಆದರೆ ಇನ್ನೊಂದು ಬದಿಯಲ್ಲಿ ಒಂದೊಂದಾಗಿ ವಿಕೆಟ್ ಗಳು ಉರುಳಿದವು. ಕುಲದೀಪ್ ಯಾದವ್ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು. ಬಾಂಗ್ಲಾದೇಶದ ಸವಾಲು ಅಲ್ಲಿಗೆ ಬಹುತೇಕ ಅಂತ್ಯವಾಗಿಹೋಯಿತು. ನಿಗದಿತ 20 ಓವರ್ ಗಳಲ್ಲಿ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಜಸ್ಪೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು. ಔಟಾಗದೇ 50 ರನ್ ಗಳಿಸಿದ್ದಷ್ಟೇ ಅಲ್ಲದೆ, ಒಂದು ವಿಕೆಟ್ ಉರುಳಿಸಿದ ಹಾರ್ದಿಕ್ ಪಾಂಡ್ಯ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಪಡೆದರು.
ಭಾರತ ಗ್ರೂಪ್ 1 ರಲ್ಲಿ ಎರಡು ಗೆಲುವಿನೊಂದಿಗೆ 4 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು.