ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಆದರೆ, ಉದ್ದಿಮೆ ಪರವಾನಗಿ ಪಡೆದಿರುವುದು ಕೇವಲ ಬೆರೆಳೆಣಿಕೆಯಷ್ಟು ಹೋಟೆಲ್‌ಗಳಷ್ಟೇ ಎಂಬುದು ಈಗ ತಿಳಿದುಬಂದಿದೆ.
ಒಂದು ಹೋಟೆಲ್ ಉದ್ಯಮ ಶುರು ಮಾಡಬೇಕಾದರೆ ಉದ್ದಿಮೆ ಪರವಾನಗಿ ( ಟ್ರೇಡ್ ಲೈಸೆನ್ಸ್ ) ಕಡ್ಡಾಯ. ಬಹುತೇಕ ಹೋಟೆಲ್ ಮಾಲೀಕರು ಟ್ರೇಡ್ ಲೈಸೆನ್ಸ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಟ್ರೇಡ್ ಲೈಸೆನ್ಸ್ ಹೆಸರಿನಲ್ಲಿ ಭ್ರಷ್ಟಾಚಾರ.
ಈ ಭ್ರಷ್ಟಾಚಾರದ ಬಗ್ಗೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಕಲಾಪದಲ್ಲಿ ಪ್ರಶ್ನಿಸಿದ್ದರು. ”ಟ್ರೇಡ್ ಲೈಸೆನ್ಸ್ ಮೂಲಕ ಸರಕಾರದ ಬೊಕ್ಕಸಕ್ಕೆ ತಲುಪುವ ಮೊತ್ತ ತೀರಾ ಕಡಿಮೆ. ಶುಲ್ಕದ 10 ಪಟ್ಟು ಅವ್ಯವಹಾರ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲೈಸೆನ್ಸ್ ಪಡೆಯುವ ವಿಧಾನ ಸರಳ ಮಾಡಬೇಕು. ಇಲ್ಲವೇ ರದ್ದು ಮಾಡಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ 207 ಮತ್ತು ಬೆಂಗಳೂರು ನಗರದಲ್ಲಿ 316 ಹೋಟೆಲ್‌ಗಳು ಮಾತ್ರವೇ ಟ್ರೇಡ್ ಲೈಸೆನ್ಸ್ ಪಡೆದುಕೊಂಡಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಅಂದಾಜು 7 ಸಾವಿರ ಮತ್ತು ಬೆಂ.ನಗರದಲ್ಲಿ 25 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿವೆ. ಉದ್ದಿಮೆ ಪರವಾನಗಿ ವಿತರಣೆಯಿಂದ 2023-24ರಲ್ಲಿ ಸರಕಾರಕ್ಕೆ ಬಂದಿರುವ ಆದಾಯ ಕೇವಲ 214 ಕೋಟಿ ರೂಪಾಯಿಗಳು ಮಾತ್ರ.
ಹೆಚ್ಚಿನ ಹೋಟೆಲ್‌ಗಳು ಎಫ್‌ಎಸ್‌ಎಸ್‌ಎಐನಿಂದ ಪರವಾನಗಿ ಪಡೆದುಕೊಂಡಿರುತ್ತವೆ. ರಾಜ್ಯದಿಂದ ಇದೇ ಮಾದರಿಯ ಟ್ರೇಡ್ ಲೈಸೆನ್ಸ್ ಪಡೆಯುವ ಅಗತ್ಯವೇ ಇಲ್ಲ. ರಾಜ್ಯ ಸರ್ಕಾರ ಟ್ರೇಡ್ ಲೈಸೆನ್ಸ್ ಕಡ್ಡಾಯಗೊಳಿಸಿರುವುದು ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂಬುದು ಹಲವರ ಅಭಿಪ್ರಾಯ.
ರೆಸ್ಟೋರೆಂಟ್, ಲಾಡ್ಜ್, ಡ್ರೈ ಕ್ಲೀನಿಂಗ್, ಕೆಮಿಕಲ್ ಉತ್ಪನ್ನ ಮಾರಾಟ ಅಂಗಡಿ, ವಾಟರ್ ಟ್ಯಾಂಕರ್, ಆಹಾರ ಸಂಸ್ಕರಣೆ, ಆಸ್ಪತ್ರೆ ಸೇರಿದಂತೆ ಎಲ್ಲ ರೀತಿಯ ಉದ್ದಿಮೆಗಳಿಗೆ ಉದ್ದಿಮೆ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದೆ. ಆಹಾರ ಉತ್ಪನ್ನ ತಯಾರಿ ಮಾಡುವ ಎಲ್ಲ ಘಟಕಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದಿಂದಲೂ ಪರವಾನಗಿ ಪಡೆಯಬೇಕು.