ಬೆಂಗಳೂರು : ಪ್ರತಿಪಕ್ಷಗಳ ಒತ್ತಡ, ಹೈಕಮಾಂಡ್ ಸೂಚನೆ ಮೇರೆಗೆ ಯೋಜನಾ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ಕೊನೆಗೂ ರಾಜೀನಾಮೆ ಘೋಷಿಸಿದ್ದಾರೆ.
ಎರಡು ದಿನಗಳ ಹೈಕಮಾಂಡ್ ನಾಯಕರ ಭೇಟಿ ಬಳಿಕ ಶುಕ್ರವಾರ ಸಂಜೆ ಬೆಂಗಳೂರಿಗೆ ಬಂದಿಳಿದ ಸಚಿವ ನಾಗೇಂದ್ರ ನೇರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಬಳಿಗೆ ತೆರಳಿ ಚರ್ಚಿಸಿದರು. ಬಳಿಕ ವಿಧಾನಸೌಧದಲ್ಲಿ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕುತ್ತಾ ಸಚಿವ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ಸಚಿವರಾಗಿ ಅಧಿಕಾರ ವಹಿಸಿಕೊಂಡು 25 ದಿನಗಳಲ್ಲಿಯೇ ನಾಗೇಂದ್ರ ರಾಜೀನಾಮೆ ಕೊಡುವ ಅನಿವಾರ್ಯತೆ ಸೃಷ್ಟಿಯಾತು. ಇದು ಡಿ.ಕೆ. ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನವೂ ಹೌದು. ವಾಲ್ಮೀಕಿ ನಿಗಮದ ಹಗರಣದಲ್ಲಿ ಕಳಂಕ ಹೊತ್ತು 2024ರ ಜೂ.6ರಂದು ನಾಗೇಂದ್ರ ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದು ಬಾರಿ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸಿಐಡಿ, ಇಡಿ ತನಿಖೆ ಎದುರಿಸಿ ಜೈಲಿಗೂ ಹೋಗಿ ಬಂದಿದ್ದರು. ಈಗ ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಮತ್ತೊಮ್ಮೆ ಮಂತ್ರಿ ಸ್ಥಾನ ಪಡೆದಿದ್ದ ನಾಗೇಂದ್ರ, ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಒಂದು ತಿಂಗಳೊಳಗೆ ಮತ್ತೊಮ್ಮೆ ಅಧಿಕಾರ ಕಳೆದುಕೊಂಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ:
ಪತ್ರಿಕಾಗೋಷ್ಠಿಯಲ್ಲಿ ಬಾವುಕರಾಗಿ ಮಾತನಾಡಿದ ನಾಗೇಂದ್ರ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ, ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ಹೈಕಮಾಂಡ್ ನಾಯಕರಿಗೆ ಮುಜುಗರ ಆಗಬಾರದು, ನೂರು ಕುದುರೆಗಳ ವೇಗದಲ್ಲಿ ಸಾಗುತ್ತಿರುವ ನನ್ನ ಸರ್ಕಾರಕ್ಕೆ ನನ್ನಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಾಗೇಂದ್ರ, ರಾಜ್ಯದಲ್ಲಿ ಬರ ಸೇರಿ ಜ್ವಲಂತ ಸಮಸ್ಯೆಗಳು ಕಾಡುತ್ತಿದ್ದರೂ ಪ್ರತಿಪಕ್ಷದವರು ರಾಜ್ಯದ ಬಗ್ಗೆ ಚರ್ಚೆ ನಡೆಸಲಿಲ್ಲ. ಒಬ್ಬ ಪರಿಶಿಷ್ಟ ಸಮುದಾಯದ ವ್ಯಕ್ತಿ, ಆದಿವಾಸಿ ವ್ಯಕ್ತಿ ಸಚಿವರಾಗಬಾರದು, ಬೆಳೆಯಬಾರದು ಎಂಬುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಇಡೀ ಸದನವನ್ನು ಬಲಿಕೊಟ್ಟರು ಎಂದು ಅರೋಪಿಸಿದರು.
ಪ್ರತಿಪಕ್ಷಗಳು ಇಂದಿಗೂ ಮನುಸ್ಮೃತಿಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿವೆ. ಇದು ವೇದ ಕಾಲವಲ್ಲ, ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕಾಲ. ದಲಿತರು, ಮಹಿಳೆಯರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಬದುಕಬಾರದು ಎಂಬ ಮನೋಭಾವದವರು ಬಿಜೆಪಿಯವರು. ಶಂಭೂಕನಂತೆ ನನ್ನನ್ನು ಹತ್ಯೆ ಮಾಡಲು ಹೊರಟಿದ್ದಾರೆ, ಆದರೆ ನಾನು ಶಂಭೂಕನಲ್ಲ, ಅನ್ಯಾಯದ ವಿರುದ್ಧ ಹೋರಾಡುವವನು ಎಂದು ಹೇಳಿದರು.
ವಾಲ್ಮೀಕಿ ನಿಗಮದ ಪ್ರಕರಣವನ್ನು ಇಡಿ ಮತ್ತು ಸಿಬಿಐ ಬಳಸಿಕೊಂಡು ರಾಜಕೀಯ ದುರುದ್ದೇಶದಿಂದ ಹೆಣೆಯಲಾಗಿದೆ. ನನ್ನ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ನನ್ನ ಸಹಿ ಇಲ್ಲದಿದ್ದರೂ ನನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ ಮೂಲಕ ಅನಗತ್ಯವಾಗಿ ನನ್ನನ್ನು ಬಂಧಿಸಿ, ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟುಮಾಡಲಾಗುತ್ತಿದೆ. ಈ ಕುತಂತ್ರ ರಾಜಕಾರಣಕ್ಕೆ ನಾನು ಬಗ್ಗುವುದಿಲ್ಲ. ರಾಜ್ಯಪಾಲರು ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಸ್ವಾಗತಿಸಿದ ಅವರು, ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಕರಣದ ಬಗ್ಗೆಯೂ ಪ್ರಶ್ನಿಸಿದರು. “ಕುಮಾರಸ್ವಾಮಿ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಕೆ ಪ್ರಾಸಿಕ್ಯೂಷನ್ ನೀಡಿಲ್ಲ? ನನಗೆ ಮಾತ್ರ ಏಕೆ ಇಂತಹ ತಾರತಮ್ಯ? ಎಂದು ಪ್ರಶ್ನಿಸಿದರು.
ಶಾಸಕ ಸ್ಥಾನಕ್ಕೂ ರಾಜೀನಾಮೆ ಸವಾಲು:
ನಾನು ಕೇವಲ ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ನನ್ನ ಪಕ್ಷದ ಮುಖಂಡರಿಗೆ ಮನವಿ ಮಾಡುತ್ತೇನೆ. ನನ್ನ ಶಾಸಕ ಸ್ಥಾನಕ್ಕು ರಾಜೀನಾಮೆ ನೀಡಿ ಜನತಾ ನ್ಯಾಯಾಲಯಕ್ಕೆ ಹೋಗಲು ನಾನು ಸಿದ್ದ ಇದ್ದೇನೆ. ಜನತಾ ನ್ಯಾಯಾಲಯಕ್ಕಿಂತ ಮಿಗಿಲಾಗಿದ್ದು ಯಾವುದೂ ಇಲ್ಲ. ನಾನು ಆರೋಪಿಯೇ, ಇಲ್ಲವೇ ಎಂಬುದು ಜನತಾ ನ್ಯಾಯಾಲಯದಲ್ಲಿಯೇ ತೀರ್ಮಾನವಾಗಲಿ ಎಂದು ಸವಾಲು ಹಾಕಿದರು.
ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರಿಗೆ ನೇರ ಸವಾಲು ಹಾಕಿದ ನಾಗೇಂದ್ರ, ನೀವು ಬಳ್ಳಾರಿಯಲ್ಲಿ ಚಲಾವಣೆಯಿಲ್ಲದ ನಾಣ್ಯಗಳು. ನಿಮಗೆ ತಾಕತ್ತು ಇದ್ದರೆ ನೇರವಾಗಿ ನನ್ನನ್ನು ಎದುರಿಸಿ. ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಮ್ಮ ಸಂಸ್ಕೃತಿ. ಸದನದಲ್ಲಿ ಸುಳ್ಳುಗಳನ್ನು ಬರೆದ ಚೀಟಿ ಕೊಟ್ಟು ಮಾತನಾಡಲು ಹೇಳುತ್ತಿದ್ದೀರಿ. ಅದನ್ನು ಬಿಟ್ಟು ಜನತಾ ನ್ಯಾಯಾಲಯಕ್ಕೆ ಬನ್ನಿ. ನಾನು ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂದು ಸವಾಲು ಹಾಕಿದರು.
ಎಲ್ಲಾ ಕ್ಷೇತ್ರಗಳಿಗೂ ಹೋಗುತ್ತೇನೆ:
ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮ್ಮನೆ ಕೂಡುವುದಿಲ್ಲ. ಪರಿಶಿಷ್ಟ ಪಂಗಡದ 15 ಕ್ಷೇತ್ರಗಳಲ್ಲಿ ಓಡಾಡುತ್ತೇನೆ. ಜನರಿಗೆ ಸತ್ಯ ಏನೆಂಬುದನ್ನು ತಿಳಿಸುತ್ತೇನೆ. ವಿರೋಧ ಪಕ್ಷದವರು ಮಾಡುತ್ತಿರುವ ಅನ್ಯಾಯವನ್ನು ಬಟಾಬಯಲು ಮಾಡುತ್ತೇನೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗಲಿದೆ. ಸತ್ಯದ ಹಾದಿಯಲ್ಲಿ ನಡೆಯುವವನಿಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ರಿಜ್ವಾನ್ ಅರ್ಷದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್, ಸಿಎಂ ರಾಜಕೀಯ ಸಲಹೆಗಾರ ಡಾ. ಜಿ ಸಿ ಚಂದ್ರಶೇಖರ್ ಉಪಸ್ಥಿತರಿದ್ದರು.
———
ಬಾಕ್ಸ್..
ನನ್ನ ಮನಸ್ಸಿಗೆ ನೋವಾಗುತ್ತಿದೆ: ಸಿಎಂ
ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡುತ್ತಿರುವುದು ನನ್ನ ಮನಸ್ಸಿಗೆ ನೋವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಾಗೇಂದ್ರ ಅವರು ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯಕ್ಕೆ ದೂರವಾದ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಒಬ್ಬರ ದಲಿತ, ಪರಿಶಿಷ್ಟ ವ್ಯಕ್ತಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯದಂತೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಗೇಂದ್ರ ಪಕ್ಷಕ್ಕಾಗಿ ಎಲ್ಲಾ ತ್ಯಾಗಕ್ಕೆ ಸಿದ್ಧರಿದ್ದಾರೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಆದಷ್ಟು ಬೇಗ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಿಎಂ ಹೇಳಿದರು.

