ಅತ್ತಿಮಬ್ಬೆ-ದೇಕಬ್ಬೆ: ನಿರ್ಮಾಣ ಮತ್ತು ಸಮರ್ಪಣೆಯ ಕಥನ

Most read

ಅತ್ತಿಮಬ್ಬೆ ಮತ್ತು ದೇಕಬ್ಬೆಯರ ಶಾಸನಗಳು ‘ಮಹಿಳೆ’ ಎಂಬ ಏಕರೂಪಿ ಪರಿಕಲ್ಪನೆಯನ್ನು ನಿರಾಕರಿಸಿ, ಆಕೆಯ ಸ್ಥಾನಮಾನ, ಆಯ್ಕೆ ಮತ್ತು ಆದರ್ಶಗಳು ಅವಳು ಬದುಕುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸನ್ನಿವೇಶಗಳಿಂದ ಹೇಗೆ ರೂಪಿಸಲ್ಪಡುತ್ತಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸಾವಿರ ವರ್ಷಗಳ ಹಿಂದಿನ ಈ ಕಥನಗಳು ಇಂದಿಗೂ ಪ್ರಸ್ತುತಡಾ. ರವಿ ಎಂ ಸಿದ್ಲಿಪುರ.

1

ಇತಿಹಾಸವೆಂದರೆ ಕೇವಲ ಶಿಲೆಯಲ್ಲಿ ಕೆತ್ತಿದ ರಾಜರ ವಂಶಾವಳಿಗಳ ಶುಷ್ಕ ಪಟ್ಟಿಯಲ್ಲ; ಅದು ಒಂದು ಕಾಲಘಟ್ಟದ ಸಾಮಾಜಿಕ ಆತ್ಮಸಾಕ್ಷಿಯ ಕನ್ನಡಿ. ಕರ್ನಾಟಕದ ಇತಿಹಾಸವನ್ನು ಪುನರ್ರಚಿಸುವಲ್ಲಿ ಶಾಸನಗಳು ವಹಿಸುವ ಪಾತ್ರ ಅನನ್ಯ. ಅವು ಅಂದಿನ ಸಮಾಜದ ಆಶೋತ್ತರ, ಮೌಲ್ಯ ವ್ಯವಸ್ಥೆ, ಅಧಿಕಾರ ಕೇಂದ್ರಗಳ ಸಂಕೀರ್ಣ ಸಂಬಂಧಗಳನ್ನು ತಮ್ಮೊಳಗೆ ಬಚ್ಚಿಟ್ಟು ಕೊಂಡಿರುವ ಜೀವಂತ ಪಠ್ಯಗಳಾಗಿವೆ. ಈ ದೃಷ್ಟಿಯಿಂದ, 11ನೇ ಶತಮಾನದ ಕರ್ನಾಟಕದ ಚರಿತ್ರೆಯಲ್ಲಿ ಕೇವಲ ಐವತ್ತು ವರ್ಷಗಳ ಅಂತರದಲ್ಲಿ ನಿಲ್ಲಿಸಲಾದ ಎರಡು ಸ್ತ್ರೀ-ಕೇಂದ್ರಿತ ಶಾಸನಗಳು – ಲಕ್ಕುಂಡಿಯ ಅತ್ತಿಮಬ್ಬೆ ಶಾಸನ (ಕ್ರಿ.ಶ. 1007) ಮತ್ತು ಬೆಳತೂರಿನ ದೇಕಬ್ಬೆ ಶಾಸನ (ಕ್ರಿ.ಶ. 1057) – ಅಂದಿನ ಸಮಾಜದ ಮೂರು ಶಕ್ತಿಗಳಾದ ಪ್ರಭುತ್ವ, ಧರ್ಮ ಮತ್ತು ಯುದ್ಧಗಳ ತ್ರಿವೇಣಿ ಸಂಗಮದಲ್ಲಿ ಮಹಿಳೆಯರ ಅಸ್ತಿತ್ವ, ಆದರ್ಶ ಮತ್ತು ದುರಂತಗಳು ಹೇಗೆ ರೂಪುಗೊಳ್ಳುತ್ತಿದ್ದವು ಎಂಬುದನ್ನು ವಿಭಿನ್ನವಾಗಿ ಅನಾವರಣಗೊಳಿಸುತ್ತವೆ.

ಒಂದೆಡೆ ಸಾಮ್ರಾಜ್ಯದ ಅಧಿಕಾರ ಮತ್ತು ಸಂಪತ್ತಿನ ಬೆಂಬಲದಿಂದ ಧಾರ್ಮಿಕ ಚಟುವಟಿಕೆಗಳ ಮೂಲಕ ಚಿರಸ್ಥಾಯಿಯಾದ ಅತ್ತಿಮಬ್ಬೆಯಾದರೆ, ಇನ್ನೊಂದೆಡೆ ಸಾಮಂತಶಾಹಿ ವ್ಯವಸ್ಥೆಯ ಸಂಘರ್ಷಕ್ಕೆ ಬಲಿಯಾಗಿ, ಪತಿವ್ರತಾ ಧರ್ಮದ ಹೆಸರಿನಲ್ಲಿ ಪ್ರಾಣಾರ್ಪಣೆ ಮಾಡಿದ ದೇಕಬ್ಬೆ. ಈ ಎರಡೂ ನಿರೂಪಣೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿದಾಗ, ಅಧಿಕಾರ, ಹಿಂಸೆ ಮತ್ತು ಆದರ್ಶಗಳ ನಡುವಿನ ಸಂಕೀರ್ಣ ಸಂಬಂಧದಲ್ಲಿ ಮಹಿಳೆಯು ಕೆಲವೊಮ್ಮೆ ಫಲಾನುಭವಿಯಾಗಿ ಮತ್ತು ಹಲವೊಮ್ಮೆ ಬಲಿಪಶುವಾಗಿ ಹೇಗೆ ಪರಿವರ್ತನೆಗೊಳ್ಳುತ್ತಿದ್ದಳು ಎಂಬ ಆಳವಾದ, ಮಾನವೀಯ ಸತ್ಯವು ನಮಗೆ ಗೋಚರಿಸುತ್ತದೆ.

2

ಅತ್ತಿಮಬ್ಬೆ ಕಟ್ಟಿಸಿದ ಬಸದಿ

ಮಹಿಳೆಯರ ಸಾಮಾಜಿಕ ಸ್ಥಾನಮಾನ ಮತ್ತು ಅವರ ಕ್ರಿಯಾಶೀಲತೆಯ ವ್ಯಾಪ್ತಿಯು ಅವರು ಸೇರಿದ ಪ್ರಭುತ್ವದ ಸ್ವರೂಪವನ್ನು ಅವಲಂಬಿಸಿತ್ತು ಎಂಬುದನ್ನು ಈ ಶಾಸನಗಳು ಸ್ಪಷ್ಟವಾಗಿ ತೋರಿಸುತ್ತವೆ. ಲಕ್ಕುಂಡಿ ಶಾಸನವು ಪಶ್ಚಿಮ ಚಾಲುಕ್ಯರ ಪ್ರಬಲ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಅತ್ತಿಮಬ್ಬೆಯನ್ನು ಚಿತ್ರಿಸುತ್ತದೆ. ಚಕ್ರವರ್ತಿ ಆಹವಮಲ್ಲದೇವನನ್ನು(ಸತ್ಯಾಶ್ರಯ) ‘ಸತ್ಯಾಶ್ರಯ ಕುಲತಿಳಕ’, ‘ಚಾಲುಕ್ಯ ವಂಶಾಭರಣ’ ಎಂದು ವೈಭವೀಕರಿಸಲಾಗಿದೆ. ಅತ್ತಿಮಬ್ಬೆಯ ಮಾವ ಧಲ್ಲನು ಚಕ್ರವರ್ತಿಯ ‘ಭುಜಾದಂಡ’ ಎಂದೇ ಖ್ಯಾತನಾದ ಮಹಾಸೇನಾಪತಿ. ಆಕೆಯ ಪತಿ ನಾಗದೇವ ಮತ್ತು ಮಗ ತೈಲಪಯ್ಯ ಕೂಡ ಮಹಾವೀರ ದಂಡನಾಯಕರು. ಹೀಗಾಗಿ, ಅತ್ತಿಮಬ್ಬೆಯು ಕೇವಲ ಓರ್ವ ಶ್ರೀಮಂತ ಮಹಿಳೆಯಾಗಿರದೆ, ಸಾಮ್ರಾಜ್ಯದ ಅಧಿಕಾರ ಕೇಂದ್ರದ ಅವಿಭಾಜ್ಯ ಅಂಗವಾಗಿದ್ದಳು. ಈ ರಾಜಕೀಯ ಶಕ್ತಿಯೇ ಆಕೆಗೆ ‘ದಾನಚಿಂತಾಮಣಿ’ಯಾಗಿ 1500 ಬಸದಿಗಳನ್ನು ಕಟ್ಟಿಸಲು, ಪೊನ್ನನ ‘ಶಾಂತಿಪುರಾಣ’ದ ಸಾವಿರಾರು ಪ್ರತಿಗಳನ್ನು ಮಾಡಿಸಿ ಹಂಚಲು ಬೇಕಾದ ಅಪಾರ ಸಂಪನ್ಮೂಲ ಮತ್ತು ಸಾಮಾಜಿಕ ಮಾನ್ಯತೆಯನ್ನು ಒದಗಿಸಿತು. ಅವಳ ಕರ್ತೃತ್ವವು(Agency) ಪ್ರಭುತ್ವದೊಂದಿಗಿನ ಆಕೆಯ ನಿಕಟ ಸಂಬಂಧದ ಉತ್ಪನ್ನವಾಗಿತ್ತು. ಚಕ್ರವರ್ತಿಯಿಂದ ‘ಚಕ್ರವರ್ತಿದತ್ತಿ’ ಪಡೆದುಕೊಳ್ಳುವುದು, ಪ್ರಭುತ್ವವು ಆಕೆಯ ಧಾರ್ಮಿಕ ಮಹತ್ವಾಕಾಂಕ್ಷೆಗಳಿಗೆ ನೀಡಿದ ಅಧಿಕೃತ ಮುದ್ರೆಯಾಗಿತ್ತು. ಇಲ್ಲಿ, ಸ್ಥಿರವಾದ ಪ್ರಭುತ್ವವು ಆಕೆಯ ವ್ಯಕ್ತಿತ್ವ ನಿರ್ಮಾಣಕ್ಕೆ ರಕ್ಷಾಕವಚ ಮತ್ತು ವೇದಿಕೆಯಾಗಿ ಕಾರ್ಯನಿರ್ವಹಿಸಿದೆ.

ಬೆಳತೂರು ಶಾಸನವು ಇದಕ್ಕೆ ತದ್ವಿರುದ್ಧವಾದ ಚಿತ್ರಣವನ್ನು ನೀಡುತ್ತದೆ. ಇಲ್ಲಿನ ಪ್ರಭುತ್ವವು ಚೋಳ ಸಾಮ್ರಾಜ್ಯದ ಅಧೀನದಲ್ಲಿರುವ, ಪರಸ್ಪರ ಕಚ್ಚಾಡುವ ಸಾಮಂತಶಾಹಿ ವ್ಯವಸ್ಥೆಯಾಗಿದೆ. ದೇಕಬ್ಬೆಯ ತಂದೆ ‘ನುಗುನಾಡಧಿಪತಿ’, ಪತಿ ‘ನವಿಲೆನಾಡಧಿಪತಿ’. ಇವರ ಅಧಿಕಾರ ಸ್ಥಳೀಯ, ಅಸ್ಥಿರ ಮತ್ತು ನಿರಂತರ ಸಂಘರ್ಷಕ್ಕೆ ತೆರೆದುಕೊಂಡಿತ್ತು. ಈ ಸಣ್ಣಪುಟ್ಟ ಅಧಿಕಾರ ಕೇಂದ್ರಗಳ ನಡುವಿನ ವೈಷಮ್ಯವೇ ಆಕೆಯ ಪತಿ ಏಚನ ಸಾವಿಗೆ ಕಾರಣವಾಗುತ್ತದೆ. ಪ್ರಭುತ್ವವು ಇಲ್ಲಿ ರಕ್ಷಣೆ ನೀಡುವ ಬದಲು, ಸಂಘರ್ಷದ ಮೂಲವಾಗಿ ಅವಳ ಬದುಕನ್ನೇ ನಾಶಮಾಡುತ್ತದೆ. ಅತ್ತಿಮಬ್ಬೆಯ ಬದುಕನ್ನು ಸಾಮ್ರಾಜ್ಯದ ಸ್ಥಿರತೆ ರೂಪಿಸಿದರೆ, ದೇಕಬ್ಬೆಯ ಬದುಕನ್ನು ಸಾಮಂತಶಾಹಿ ವ್ಯವಸ್ಥೆಯ ಅರಾಜಕತೆ ಮತ್ತು ಅನಿಶ್ಚಿತತೆ ನಿರ್ಧರಿಸಿತು. ಪ್ರಭುತ್ವದ ವೈಫಲ್ಯವೇ ಆಕೆಯ ದುರಂತಕ್ಕೆ ಕಾರಣವಾಗಿ, ಅವಳನ್ನು ವ್ಯವಸ್ಥೆಯ ಬಲಿಪಶುವನ್ನಾಗಿ ನಿರೂಪಿಸಲಾಗಿದೆ.

3

ಧರ್ಮವು ಎರಡೂ ಶಾಸನಗಳ ಜೀವಾಳ. ಆದರೆ, ಅದರ ಅಭಿವ್ಯಕ್ತಿಯ ರೀತಿ ಮತ್ತು ಅದು ಮಹಿಳೆಯರಿಂದ ನಿರೀಕ್ಷಿಸುತ್ತಿದ್ದ ಆದರ್ಶಗಳು ಸಂಪೂರ್ಣ ಭಿನ್ನವಾಗಿವೆ. ಅತ್ತಿಮಬ್ಬೆಯ ಧರ್ಮವು ಜೈನಧರ್ಮದ ಪುನರುತ್ಥಾನಕ್ಕಾಗಿ ಮೀಸಲಾದ ಒಂದು ಸಾಂಸ್ಥಿಕ ಆಂದೋಲನದಂತಿತ್ತು. ಆಕೆಯನ್ನು ‘ದಾನಚಿಂತಾಮಣಿ’, ‘ಜಿನಶಾಸನದ ಪತಾಕೆ’ ಎಂದು ಬಣ್ಣಿಸುವ ಮೂಲಕ, ಆಕೆಯ ವೈಯಕ್ತಿಕ ಭಕ್ತಿಯನ್ನು ಧರ್ಮದ ಉನ್ನತಿಯೊಂದಿಗೆ ಸಮೀಕರಿಸಲಾಗಿದೆ. 1500 ಬಸದಿಗಳ ನಿರ್ಮಾಣ, ಜಿನಬಿಂಬಗಳ ಪ್ರತಿಷ್ಠಾಪನೆ, ಗ್ರಂಥಗಳ ದಾನ – ಇವೆಲ್ಲವೂ ಧರ್ಮವನ್ನು ಪೋಷಿಸುವ, ಪ್ರಚಾರ ಮಾಡುವ ಮತ್ತು ಚಿರಸ್ಥಾಯಿಯಾಗಿಸುವ ರಚನಾತ್ಮಕ ಪ್ರಯತ್ನಗಳಾಗಿವೆ. ಆಕೆಗೆ ಆರೋಪಿಸಲಾದ ಪವಾಡಗಳು (ನದಿಯ ಪ್ರವಾಹ ಇಳಿಸಿದ್ದು, ಮದದಾನೆಯನ್ನು ಶಾಂತಗೊಳಿಸಿದ್ದು) ಆಕೆಯ ವ್ಯಕ್ತಿತ್ವಕ್ಕೆ ದೈವಿಕ ಆಯಾಮವನ್ನು ನೀಡಿ, ಆಕೆಯ ಧಾರ್ಮಿಕ ನಾಯಕತ್ವವನ್ನು ಸ್ಥಾಪಿಸುತ್ತವೆ. ಇಲ್ಲಿ ‘ಆದರ್ಶ ಸ್ತ್ರೀ’ ಎಂದರೆ ಧರ್ಮವನ್ನು ತನ್ನ ಸಂಪತ್ತು ಮತ್ತು ಪ್ರಭಾವದಿಂದ ರಕ್ಷಿಸಿ, ಬೆಳೆಸುವವಳು. ಅವಳ ಆದರ್ಶವು ‘ನಿರ್ಮಾಣ’ದಲ್ಲಿ ವ್ಯಕ್ತವಾಗಿದೆ.

ದೇಕಬ್ಬೆ ಶಾಸನ

ದೇಕಬ್ಬೆಯ ಶಾಸನದಲ್ಲಿ ಧರ್ಮವು ‘ಪತಿವ್ರತಾ ಧರ್ಮ’ ಎಂಬ ಸಾಮಾಜಿಕ ಕಟ್ಟಳೆಯಲ್ಲಿ ಕೇಂದ್ರೀಕೃತವಾಗಿದೆ. ಪತಿಯ ಮರಣಾನಂತರ ಆಕೆ ಸಾಯಲು ನಿಶ್ಚಯಿಸಿದಾಗ, ಬಂಧುಗಳು ತಡೆದರೂ, ‘ನುಗುನಾಡಧಿಪತಿ ರವಿಗನ ಮಗಳಾಗಿಯುಮನ್ತೆ ನವಿಲೆನಾಡಧಿಪತಿಗಾಂ ನೆಗಳೆ ಸತಿಯಾಗಿ ಬಾಳ್ವುದು ಬಗೆದರ್ಪ್ಪೆನೆ ಕೊಟ್ಟ ಕೊಣ್ಡ ಮನೆಯೆಸಮೞಿಯಲ್’(ಕೊಟ್ಟ ಮನೆಗೂ, ಬಂದ ಮನೆಗೂ ಅಪಕೀರ್ತಿ ತರಲಾರೆ) ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾಳೆ. ಇದು ಅವಳ ವೈಯಕ್ತಿಕ ಆಯ್ಕೆಯಂತೆ ಕಂಡರೂ, ಅದು ಅಂದಿನ ಸಮಾಜವು ಮಹಿಳೆಯ ಮೇಲೆ ಹೇರುತ್ತಿದ್ದ ‘ಕುಲಗೌರವ’ ಮತ್ತು ‘ಪಾತಿವ್ರತ್ಯ’ದ ಆದರ್ಶಗಳ ಪ್ರತಿಫಲನವಾಗಿತ್ತು. ಅವಳ ಆತ್ಮಹತ್ಯೆಯಂತಹ ಕ್ರಿಯೆಯನ್ನು ‘ಉರಿವುರಿಯಂ ಪೊಕ್ಕು… ದೇವಲೋಕಕ್ಕೆ ವೋದಳ್’(ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸಿ ದೇವಲೋಕಕ್ಕೆ ಹೋದಳು) ಎಂದು ವೈಭವೀಕರಿಸಲಾಗುತ್ತದೆ. ಇಲ್ಲಿ ‘ಆದರ್ಶ ಸ್ತ್ರೀ’ ಎಂದರೆ, ತನ್ನ ವೈಯಕ್ತಿಕ ಅಸ್ತಿತ್ವವನ್ನು ಪತಿಯಲ್ಲಿ ವಿಲೀನಗೊಳಿಸಿ, ಕುಲದ ಗೌರವಕ್ಕಾಗಿ ಪ್ರಾಣವನ್ನೇ ಸಮರ್ಪಣೆ ಮಾಡುವವಳು. ಅತ್ತಿಮಬ್ಬೆಯ ಧರ್ಮವು ‘ಜೀವನ’ವನ್ನು ಸಂಭ್ರಮಿಸಿದರೆ, ದೇಕಬ್ಬೆಯ ಧರ್ಮವು ‘ಮರಣ’ವನ್ನು ವೈಭವೀಕರಿಸುತ್ತದೆ.

4

ಯುದ್ಧವು ಎರಡೂ ಶಾಸನಗಳಲ್ಲಿ ಕೇಂದ್ರ ಪ್ರಮೇಯವಾದರೂ, ಅದರ ಚಿತ್ರಣ ಮತ್ತು ಸ್ತ್ರೀಯರ ಮೇಲಿನ ಅದರ ಪರಿಣಾಮದಲ್ಲಿ ಧ್ರುವಕ್ಕೊಂದು ದಿಕ್ಕಿನಷ್ಟು ವ್ಯತ್ಯಾಸವಿದೆ. ಲಕ್ಕುಂಡಿ ಶಾಸನದಲ್ಲಿ ಯುದ್ಧವು ಪುರುಷರ ಶೌರ್ಯ, ಪ್ರಭುತ್ವದ ವಿಸ್ತರಣೆ ಮತ್ತು ಕುಟುಂಬದ ಪ್ರತಿಷ್ಠೆಯ ಸಂಕೇತವಾಗಿದೆ. ‘ಆಂಧ್ರರಾಜನನ್ನು ಬಂಧಿಸುತ್ತೇನೆ, ಮಗಧ ರಾಜನನ್ನು ತುಳಿದು ಮೆಟ್ಟುತ್ತೇನೆ’ ಎಂಬಂತಹ ಸಾಲುಗಳು ಯುದ್ಧದ ವಿಜಯೋತ್ಸವವನ್ನು ಸಾರುತ್ತವೆ. ಈ ಯುದ್ಧಗಳಿಂದ ಗಳಿಸಿದ ಅಧಿಕಾರ, ಸಂಪತ್ತು ಮತ್ತು ಕೀರ್ತಿಯೇ ಅತ್ತಿಮಬ್ಬೆಯ ಬೃಹತ್ ಧಾರ್ಮಿಕ ಕಾರ್ಯಗಳಿಗೆ ಆಧಾರ. ಆಕೆ ಯುದ್ಧದ ನೇರ ಹಿಂಸೆಯಿಂದ ದೂರವಿದ್ದು, ಅದರ ಫಲಾನುಭವಿಯಾಗಿದ್ದಾಳೆ. ಅವಳ ಪಾಲಿಗೆ ಯುದ್ಧವು ವಿನಾಶಕಾರಿಯಲ್ಲ, ಬದಲಾಗಿ ತನ್ನ ಧಾರ್ಮಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಒಂದು ಪರೋಕ್ಷ ಸಾಧನವಾಗಿತ್ತು. ಇಲ್ಲಿ, ಪ್ರಭುತ್ವವು ಯುದ್ಧದ ಮೂಲಕ ಗಳಿಸಿದ ಹಿಂಸಾತ್ಮಕ ಸಂಪತ್ತನ್ನು, ಮಹಿಳೆಯ ಧಾರ್ಮಿಕತೆಯ ಮೂಲಕ ‘ಪವಿತ್ರೀಕರಿಸಿ’, ತಾನು ‘ಧರ್ಮರಕ್ಷಕ’ ಎಂದು ಬಿಂಬಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ.

ಬೆಳತೂರು ಶಾಸನವು ಯುದ್ಧದ ಕ್ರೂರ, ವೈಯಕ್ತಿಕ ಮತ್ತು ದುರಂತಮಯ ಮುಖವನ್ನು ಅನಾವರಣಗೊಳಿಸುತ್ತದೆ. ‘ಕಲಿಕಾಲವೇಳನೆನಿಸಿದ ಕಲಿಚಾಗಿಯನಿಱದು ಕೊನ್ದಱೆಂಬುದು ಮಾತಂ ಲಲಿತಾಂಗಿ ಕೇಳ್ದ ರವಿಗನ ಕುಲದೀಪಕಿ ಸಾಯಲೆನ್ದು ಕೊಣ್ಡಕೆ ನಡೆದಳ್’– ಈ ಹೃದಯವಿದ್ರಾವಕ ಸಾಲುಗಳು, ಯುದ್ಧವು ಕೀರ್ತಿ ತರುವ ಸಂಗತಿಯಲ್ಲ, ಬದಲಾಗಿ ಸಂಸಾರವನ್ನು ನಾಶಮಾಡಿ, ಮಹಿಳೆಯ ಬದುಕನ್ನು ಅಂತ್ಯಗೊಳಿಸುವ ದುರಂತಕಾರಿ ಘಟನೆ ಎಂಬುದನ್ನು ನೇರವಾಗಿ ಹೇಳುತ್ತವೆ. ಇಲ್ಲಿ ಯುದ್ಧವು ವೈಭವದ ವಸ್ತುವಲ್ಲ, ನೋವಿನ ಮೂಲ. ಶಾಸನವು ಯುದ್ಧದ ವೈಭವವನ್ನಲ್ಲ, ಅದರ ಪರಿಣಾಮವಾಗಿ ಸಂತ್ರಸ್ತೆಯಾದವಳ ವ್ಯಥೆಯನ್ನು ದಾಖಲಿಸುತ್ತದೆ. ಅತ್ತಿಮಬ್ಬೆಗೆ ಯುದ್ಧವು ಸೌಭಾಗ್ಯದ ಮೂಲವಾದರೆ, ದೇಕಬ್ಬೆಗೆ ಅದು ವೈಧವ್ಯದ ಕಾರಣವಾಯಿತು. ಅವಳ ದೇಹವೇ ತನ್ನ ಎರಡು ಮನೆತನಗಳ ರಾಜಕೀಯ ಗೌರವವನ್ನು ಪುನರ್ಸ್ಥಾಪಿಸುವ ಅಂತಿಮ ರಣರಂಗವಾಯಿತು.

5

ಅತ್ತಿಮಬ್ಬೆ ಮತ್ತು ದೇಕಬ್ಬೆಯರ ಶಾಸನಗಳು 11ನೇ ಶತಮಾನದ ಕರ್ನಾಟಕದ ಸಮಾಜವು ಮಹಿಳೆಯರನ್ನು ಹೇಗೆ ಆದರ್ಶೀಕರಿಸುತ್ತಿತ್ತು ಎಂಬುದರ ಎರಡು ವಿಭಿನ್ನ, ಆದರೆ ಅಷ್ಟೇ ಮಾನ್ಯತೆ ಪಡೆದಿದ್ದ ಮಾದರಿಗಳನ್ನು ನಮ್ಮ ಮುಂದಿಡುತ್ತವೆ. ಅತ್ತಿಮಬ್ಬೆ ಯುದ್ಧದ ವೈಭವದ ಮೇಲೆ ಧರ್ಮದ ಸೌಧವನ್ನು ಕಟ್ಟಿದರೆ, ದೇಕಬ್ಬೆ ಯುದ್ಧದ ದುರಂತದ ಮೇಲೆ ತನ್ನ ಬದುಕನ್ನೇ ಬಲಿಕೊಟ್ಟು ಧರ್ಮದ ಸ್ಮಾರಕವಾದಳು. ಒಬ್ಬಳು ‘ನಿರ್ಮಾಣ’ದ ಪ್ರತೀಕವಾದರೆ, ಮತ್ತೊಬ್ಬಳು ‘ಸಮರ್ಪಣೆ’ಯ ಸಂಕೇತವಾದಳು. ಅತ್ತಿಮಬ್ಬೆಯು ಬಲಿಷ್ಠ ಪ್ರಭುತ್ವವು ನೀಡಿದ ಅವಕಾಶದ ಸಂಕೇತವಾದರೆ, ದೇಕಬ್ಬೆಯು ಅಸ್ಥಿರ ರಾಜಕಾರಣದ ವೈಫಲ್ಯದ ದುರಂತ ಪ್ರತೀಕವಾಗುತ್ತಾಳೆ.


ಇದನ್ನೂ ಓದಿ- ಬೆರಳ ತುದಿಯ ಜಗತ್ತು, ಬೆಲೆಯಿಲ್ಲದ ಬದುಕು

ಈ ಶಾಸನಗಳು ‘ಮಹಿಳೆ’ ಎಂಬ ಏಕರೂಪಿ ಪರಿಕಲ್ಪನೆಯನ್ನು ನಿರಾಕರಿಸಿ, ಆಕೆಯ ಸ್ಥಾನಮಾನ, ಆಯ್ಕೆ ಮತ್ತು ಆದರ್ಶಗಳು ಅವಳು ಬದುಕುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸನ್ನಿವೇಶಗಳಿಂದ ಹೇಗೆ ರೂಪಿಸಲ್ಪಡುತ್ತಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸಾವಿರ ವರ್ಷಗಳ ಹಿಂದಿನ ಈ ಕಥನಗಳು ಇಂದಿಗೂ ಪ್ರಸ್ತುತ. ಪ್ರಭುತ್ವದ ಅಧಿಕಾರದ ದಾಹ, ಯುದ್ಧದ ಕ್ರೌರ್ಯ ಮತ್ತು ಧರ್ಮದ ಸೈದ್ಧಾಂತಿಕ ಚೌಕಟ್ಟುಗಳು ಒಟ್ಟಾದಾಗ, ಮಹಿಳೆಯ ಬದುಕು ಒಂದು ಉಪಕರಣವಾಗಿಯೋ ಅಥವಾ ಬಲಿಪಶುವಾಗಿಯೋ ಪರಿವರ್ತನೆಗೊಳ್ಳುವ ಕರಾಳ ಸತ್ಯ ಇಂದಿನ ಯುದ್ಧಪೀಡಿತ ರಾಷ್ಟ್ರಗಳಲ್ಲಿಯೂ ಮುಂದುವರಿದಿದೆ. ಆದ್ದರಿಂದ, ಈ ಶಾಸನಗಳನ್ನು ಕೇವಲ ಐತಿಹಾಸಿಕ ದಾಖಲೆಗಳೆಂದು ಓದದೆ, ಅಧಿಕಾರ, ಹಿಂಸೆ ಮತ್ತು ಲಿಂಗತ್ವದ ನಡುವಿನ ಚಾರಿತ್ರಿಕ ಸಂಬಂಧವನ್ನು ಅರ್ಥಮಾಡಿಕೊಳ್ಳುವ ವಿಮರ್ಶಾತ್ಮಕ ಪಠ್ಯಗಳಾಗಿ ನೋಡಿದಾಗ ಮಾತ್ರ, ವರ್ತಮಾನದ ಸಂಘರ್ಷಗಳ ಹಿಂದಿನ ಪಿತೃಪ್ರಧಾನ ಮನಸ್ಥಿತಿಯನ್ನು ಅರಿಯಲು ಮತ್ತು ಅದನ್ನು ಪ್ರಶ್ನಿಸಲು ಸಾಧ್ಯ.

ಡಾ. ರವಿ ಎಂ ಸಿದ್ಲಿಪುರ

ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article