ಮುಸ್ಲೀಮರು, ಜನಿವಾರ, ಓಂ, ದೇವಸ್ಥಾನ ಮತ್ತು ಹಿಂದುತ್ವ ರಕ್ಷಣೆಯ ಹೋಂ ಸ್ಟೇ ದಾಳಿ..!

Most read

ಹಿಂದುತ್ವ, ಹಿಂದೂ ಸಂಸ್ಕೃತಿ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ದೇವಸ್ಥಾನದ ಉಳಿವು ಇವೆಲ್ಲಾ ಹಿಂದೂ ಸಂಘಟನೆಗಳ ಬಾಯಿ ಮಾತಿನ ಘೋಷಣೆಗಳಷ್ಟೆ. ವಾಸ್ತವವಾಗಿ ಈ ಘೋಷಣೆಗಳು ವಿಕೃತದ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ವಾಮಮಾರ್ಗಗಳು ಎಂಬುದು ಹೋಂ ಸ್ಟೇ ಕೇಸ್ ನ ದಾಖಲೆಗಳು ಹೇಳುತ್ತವೆ – ನವೀನ್ ಸೂರಿಂಜೆ

ಹೋಂ ಸ್ಟೇ ಮೇಲೆ ಹಿಂದೂ ಜಾಗರಣಾ ವೇದಿಕೆಯು ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿ ರಕ್ಷಣೆ ನೆಪದಲ್ಲಿ ನಡೆಸಿದ್ದು ಭೀಭತ್ಸ ಕೃತ್ಯ ! ಆರೋಪಿಗಳ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗದಿದ್ದರೂ ನ್ಯಾಯಾಲಯದ ದಾಖಲೆಗಳು ಹಿಂದೂ ಜಾಗರಣಾ ವೇದಿಕೆಯ ಮುಖವಾಡ ಬಯಲು ಮಾಡಿದೆ. 

ಮಂಗಳೂರಿನ ಪಡೀಲ್ ನಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಮುಸ್ಲಿಂ ಯುವಕರು ಮತ್ತು ಹಿಂದೂ ಯುವತಿಯರು ರೇವ್ ಪಾರ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. “ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಿಂದೂ ಯುವತಿಯ ಎದೆಗೆ ಕೈ ಹಾಕಲು ಯತ್ನಿಸಿದರು. ಆಗ ಯುವತಿ ಮೊದಲನೇ ಮಹಡಿಯಿಂದ ನೆಲ ಮಹಡಿಗೆ ಜಿಗಿದಳು. ಇಷ್ಟಾದರೂ ಸುಮ್ಮನಾಗದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನಮ್ಮ‌ ಸ್ನೇಹಿತೆಯರ ಮಾನಭಂಗಕ್ಕೆ ಯತ್ನಿಸಿದರು” ಎಂದು ಸಂತ್ರಸ್ತ ಯುವಕರ ಪೈಕಿ ಒರ್ವ ಸಾಕ್ಷಿ ನುಡಿದಿದ್ದಾರೆ. 

ಸಾಕ್ಷಿ ಮುಂದುವರೆದು “ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ನನ್ನನ್ನು ಮುಸ್ಲಿಂ ಎಂದುಕೊಂಡಿದ್ದರು. ನೀನು ಮುಸ್ಲಿಂ ಎಂದು ಹೇಳಿ ನನಗೆ ಹಲ್ಲೆ ಮಾಡಿದರು. ಆಗ ನಾನು ಮುಸ್ಲೀಮನಲ್ಲ, ನಾನು ಬ್ರಾಹ್ಮಣ ಎಂದು ನನ್ನ ಅಂಗಿಯೊಳಗಿದ್ದ ಜನಿವಾರವನ್ನು ಹೊರತೆಗೆದು ತೋರಿಸಿದೆ” ಎಂದು ನ್ಯಾಯಾಲಯದ ಮುಂದೆ ಹೇಳಿರುವುದು ದಾಖಲಾಗಿದೆ.

“ಪೊಲೀಸರು ಹೋಂ ಸ್ಟೇಗೆ ಬಂದ ಬಳಿಕವೂ ದಾಳಿಕೋರ ಹಿಂದೂ ಜಾಗರಣ ವೇದಿಕೆಯವರು ಹೊಡೆಯುವುದನ್ನು ನಿಲ್ಲಿಸಲಿಲ್ಲ. ಪೊಲೀಸರ ಬಂದ ಬಳಿಕವೂ ನನ್ನ ಮೇಲೆ ಹಲ್ಲೆ ನಡೆಯಿತು” ಎಂದು ಸಂತ್ರಸ್ತರು ಸಾಕ್ಷಿ ನುಡಿದಿದ್ದಾರೆ. 

ದಾಳಿ ಮಾಡುತ್ತಿದ್ದ ಹಿಂದೂ ಜಾಗರಣಾ ವೇದಿಕೆಯವರನ್ನು ಘಟನಾ ಸ್ಥಳದಲ್ಲೇ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುವ ಬದಲು ಅವರನ್ನು ಪೊಲೀಸರೇ ಬಿಟ್ಟು ಕಳುಹಿಸಿದ್ದು ಸಾಕ್ಷಿ ಹೇಳಿಕೆಯ ದಾಖಲೆಗಳು ಹೇಳುತ್ತದೆ. “ಪೊಲೀಸರು ಸಂತ್ರಸ್ತರಾದ ನಮ್ಮನ್ನು ರಕ್ಷಣೆಗಾಗಿ ಕೋಣೆಯೊಂದರಲ್ಲಿ ಕೂಡಿ ಹಾಕಿದರು. ದಾಳಿ ನಡೆಸಿದವರನ್ನು ಹೋಂ ಸ್ಟೇಯ ಹೊರಗೆ ಕಳುಹಿಸಿದರು” ಎಂದು ಸಂತ್ರಸ್ತರು ಸಾಕ್ಷಿ ನುಡಿಯುವಾಗ ಹೇಳಿದ್ದಾರೆ. 

“ಆರೋಪಿಗಳು ನಮ್ಮ ಸ್ನೇಹಿತೆಯರ ಬಟ್ಟೆಯನ್ನು ಬಿಚ್ಚಿ ಮಾನಭಂಗಕ್ಕೆ ಯತ್ನಿಸಿದರು. ಈ ಸಂದರ್ಭದಲ್ಲಿ ಸ್ನೇಹಿತೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೂ ದರೋಡೆ ಮಾಡಿದ್ದಾರೆ” ಎಂದು ಸಂತ್ರಸ್ತರು ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆದಿತ್ತು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಈ ದಾಳಿ ನಡೆಸಿದ್ದರು ಎಂದು ಹೇಳಲಾಗಿತ್ತು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ತಂಡ ದಾಳಿ ಮಾಡಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಒಬ್ಬರ ಮೇಲಿನ ಪ್ರಕರಣ ಕೈಬಿಡಲಾಗಿತ್ತು. ಇದೀಗ (ಆ.06) ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. 

ಆರೋಪಿಗಳ ಪೈಕಿ ಇಬ್ಬರು ಪ್ರಮುಖ ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ “ನಾವಿಬ್ಬರೂ ಸೇರಿ ಓರ್ವ ಹುಡುಗಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ತುಂಡು ಮಾಡಿ ತೆಗೆದಿದ್ದು ಈ ಸಂದರ್ಭದಲ್ಲಿ ಚಿನ್ನದ ಸರವು ಎರಡು ತುಂಡಾಗಿದ್ದು ಒಂದು ತುಂಡು ಚಿನ್ನದ ಸರ ನನ್ನ ಕೈಗೆ ಸಿಕ್ಕಿದ್ದು ಅದನ್ನು ನಾನು ಅವಿತಿಟ್ಟಿದ್ದು ನನ್ನ ಜೊತೆಯಲ್ಲಿ ಬಂದರೆ ತೋರಿಸುತ್ತೇನೆ” ಎಂದು ಸ್ವ ಇಚ್ಚಾ ಹೇಳಿಕೆ ನೀಡಿದ್ದರು. ತಕ್ಷಣ ಪೊಲೀಸರು ಪಂಚರನ್ನು ಸಿದ್ಧಪಡಿಸಿ ಆರೋಪಿಗಳನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿ ಅವಿತಿಟ್ಟಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದರು. ಹುಡುಗಿಯಿಂದ ಹಿಂದೂ ಜಾಗರಣಾ ವೇದಿಕೆಯವರು ಹಿಂದೂ ಧರ್ಮದ ಹೆಸರಿನಲ್ಲಿ ದರೋಡೆ ಮಾಡಿದ್ದ ಚಿನ್ನದ ಸರದ ಪೆಂಡೆಂಟ್ ನಲ್ಲಿ “ಓಂ” ಎಂದು ಕೆತ್ತಲಾಗಿತ್ತು ! ಇದನ್ನು ಆಗಿನ ಪೊಲೀಸ್ ಅಧಿಕಾರಿ ನ್ಯಾಯಾಲಯದ ಮುಂದೆ ದೃಢೀಕರಿಸಿದ್ದಾರೆ. ಇವೆಲ್ಲವೂ ಕೋರ್ಟ್ ದಾಖಲೆಗಳಲ್ಲಿ ದಾಖಲಾಗಿದೆ.

ಹಿಂದುತ್ವದ ರಕ್ಷಣೆಗೆ ಹೋಂ ಸ್ಟೇಗೆ ಹೊರಟಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ದೇವಸ್ಥಾನ ಧ್ವಂಸಕ್ಕೂ ಹೋಗಿದ್ದರು ಎಂಬುದು ಕೋರ್ಟ್ ನಲ್ಲಿ ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದಾರೆ. ಪ್ರಾಸಿಕ್ಯೂಶನ್ ಸಾಕ್ಷಿ 34 ಆಗಿದ್ದ ಹೋರಾಟಗಾರ್ತಿ ವಿದ್ಯಾ ದಿನಕರ್ 06.04.2023 ರಂದು ನ್ಯಾಯಾಲಯಕ್ಕೆ ಹಾಜರಾಗಿ ಭೀಭತ್ಸ ಘಟನೆಯನ್ನು ವಿವರಿಸುತ್ತಾ “ಆರೋಪಿಗಳು 2012 ರ ಮೇ ತಿಂಗಳಲ್ಲಿ ಎಸ್ ಇಝಡ್ ಬಜಪೆಯಲ್ಲಿ ನೆಲ್ಲಿದಡಿ ಗುತ್ತುನಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಸಿರುತ್ತಾರೆ” ಎಂದು ಹೇಳಿಕೆ ನೀಡಿದ್ದು ದಾಖಲಾಗಿದೆ. 

ಹಿಂದುತ್ವ, ಹಿಂದೂ ಸಂಸ್ಕೃತಿ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ದೇವಸ್ಥಾನದ ಉಳಿವು ಇವೆಲ್ಲಾ ಹಿಂದೂ ಸಂಘಟನೆಗಳ ಬಾಯಿ ಮಾತಿನ ಘೋಷಣೆಗಳಷ್ಟೆ. ವಾಸ್ತವವಾಗಿ ಈ ಘೋಷಣೆಗಳು ವಿಕೃತದ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ವಾಮಮಾರ್ಗಗಳು ಎಂಬುದು ಹೋಂ ಸ್ಟೇ ಕೇಸ್ ನ ದಾಖಲೆಗಳು ಹೇಳುತ್ತವೆ.

ನವೀನ್‌ ಸೂರಿಂಜೆ

ಪತ್ರಕರ್ತರು, ಲೇಖಕರು

ಇದನ್ನೂ ಓದಿ- http://ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಸಂವಿಧಾನವನ್ನು ‘ಪಿಕ್ & ಚೂಸ್ & ಯೂಸ್’ ಎಂಬಂತೆ ಬಳಸಬಹುದೇ ? https://kannadaplanet.com/can-governor-use-constitution-as-pick-choose-use-for-prosecution-against-cm/

More articles

Latest article