ದೆಹಲಿಯಲ್ಲಿ ಏಳು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.
ದೆಹಲಿ ಸರ್ಕಾರವನ್ನು ಉರುಳಿಸಲು ಪ್ರತೀ ಶಾಸಕರಿಗೆ ತಲಾ 25 ಕೋಟಿ ಆಫರ್ ನೀಡಿತ್ತಿದೆ. ಇದಲ್ಲದೇ ನಿಮ್ಮ ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ನಾಯಕರ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು Xನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಇತ್ತೀಚೆಗೆ ಬಿಜೆಪಿ ಕೆಲವು ನಾಯಕರು ನಮ್ಮ ಎಎಪಿ ಪಕ್ಷದ 7 ಶಾಸಕರನ್ನು ಸಂಪರ್ಕಿಸಿ, ವಿವಿಧ ಆಮಿಷ ತೋರಿಸಿ, ಭಯಪಡಿಸುತ್ತಿದ್ದಾರೆ. ಶೀಘ್ರದಲ್ಲೇ ನಿಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ, ದೆಹಲಿ ಸರ್ಕಾರವನ್ನು ಉರುಳಿಸುತ್ತೇವೆ. ಎಲ್ಲಾ 21 ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ನೀವು ಪಕ್ಷಕ್ಕೆ ಬಂದರೆ ತಲಾ 25 ಕೋಟಿ ನೀಡಿ ಚುನಾವಣೆಗೆ ಟಿಕೆಟ್ ಸಹ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ನಮ್ಮ ಮಾಹಿತಿ ಪ್ರಕಾರ ಬಿಜೆಪಿ ಕೇವಲ 7 ಮಂದಿಯನ್ನು ಸಂಪರ್ಕಿಸಿದ್ದು ಅವರೆಲ್ಲರೂ ಕೂಡ ಬಿಜೆಪಿಗೆ ಹೋಗಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಎಎಪಿ ಪಕ್ಷವನ್ನು ಸೋಲಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಬಿಜೆಪಿ ಈತರದ ಮಾರ್ಗದಲ್ಲಿ ನಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಅವರು ನನ್ನನ್ನು ಯಾವುದೇ ಹಗರಣದಲ್ಲಿ ಬಂಧಿಸುತ್ತಿಲ್ಲ ಬದಲಾಗಿ ದೆಹಲಿ ಸರ್ಕಾರ ಉರುಳಿಸುವುದಕ್ಕೆ ನನ್ನನ್ನು ಬಂಧಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ನಮ್ಮ ಸರ್ಕಾರವನ್ನು ಬೀಳಿಸಲು ಅನೇಕ ಪಿತೂರಿಗಳು ವಿಫಲ ಪ್ರಯತ್ನಗಳು ನಡೆದಿವೆ ಆದರೆ ದೆಹಲಿ ಜನರು ಮತ್ತು ದೇವರು ನಮ್ಮ ಸರ್ಕಾರದ ಪರವಾಗಿದ್ದಾರೆ. ನಮ್ಮ ಎಲ್ಲಾ ಶಾಸಕರು ಕೂಡ ಎಎಪಿ ಪರವಾಗಿದ್ದು ಈ ಬಾರಿಯೂ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸೃಷ್ಟಿಸಿದ ಹಲವು ಕೋಲಾಹಲಗಳ ನಡುವೆಯೂ ನಮ್ಮ ಸರ್ಕಾರ ಜನರ ಪರವಾಗಿ ಕೆಲಸ ಮಾಡಿದೆ. ಅದು ನಮ್ಮ ದೆಹಲಿ ಜನತೆಗೆ ಚನ್ನಾಗಿಯೇ ತಿಳಿದಿದೆ. ಬಿಜೆಪಿಯವರು ಕಾಲ್ ಮಾಡಿ ಆಮಿಷ ಒಡ್ಡಲು ಪ್ರಯತ್ನಿಸಿದ ಕರೆಯೂ ಸಂಪೂರ್ಣ ರೆಕಾರ್ಡ್ ಆಗಿದೆ ಎಂದು ಹೇಳಿದ್ದಾರೆ.