Wednesday, May 22, 2024

ತೀರ್ಥಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಸಂವಿಧಾನಕ್ಕೆ ಅಪಚಾರ: ಭಗವದ್ಗೀತೆ ಹಂಚಿಕೆ ; ನ್ಯಾಯಾಧೀಶರಿಂದಲೇ ಜೈಶ್ರೀರಾಮ್ ಘೋಷಣೆ!!

Most read

ಶಿವಮೊಗ್ಗ/ತೀರ್ಥಹಳ್ಳಿ: ‘ಭಗವದ್ಗೀತೆಯು ಭಾರತದ ಸಂವಿಧಾನಕ್ಕೆ ಸಮವಾದ ಗ್ರಂಥವಾಗಿದೆ’ ಎಂದು ಸ್ವತಃ ನ್ಯಾಯಾಧೀಶರೊಬ್ಬರು ಮಾತನಾಡಿ ‘ಜೈ ಶ್ರೀರಾಮ್’ ಎಂದು ತಮ್ಮ ಭಾಷಣ ಮುಗಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕಾಲೇಜೊಂದರಲ್ಲಿ ನಡೆದಿದೆ.

ದಿನಾಂಕ 25-01-2024ರ ಗುರುವಾರ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಸಿದ ಗೌರವಾನ್ವಿತ ಹಿರಿಯ ವ್ಯವಹಾರಿಕ (ದಿವಾಣೆ) ನ್ಯಾಯಾಧೀಶರಾದ ಶ್ರೀ ಎಸ್ ಎಸ್ ಭರತ್ ಅವರು ತಮ್ಮ ಭಾಷಣದಲ್ಲಿ ಆಡಿದ ಮಾತುಗಳು ವಿವಾದಕ್ಕೆ ಒಳಗಾಗಿವೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಾರ್ಯಾಲಯವು ಭಗವದ್ಗೀತೆ ಕೃತಿಯನ್ನು ನೆನಪಿನ ಕಾಣಿಕೆಯಾಗಿ ನೀಡಿರುವ ಕುರಿತು ತೀವ್ರ ಆಕ್ಷೇಪ ವಿದ್ಯಾರ್ಥಿಗಳ ಪೋಷಕ ವಲಯದಿಂದ ಕೇಳಿಬಂದಿದೆ.

ಈ ಘಟನೆಯ ಕುರಿತು ಕನ್ನಡ ಪ್ಲಾನೆಟ್ ಮೀಡಿಯಾ ಕಾಲೇಜಿನ ಪ್ರಿನ್ಸಿಪಾಲರಾದ ಧರ್ಮಣ್ಣ, ಕಾರ್ಯಕ್ರಮದ ದಿನ ಚಾರ್ಜ್ ವಹಿಸಿಕೊಂಡಿದ್ದ ವಿಜಯೇಂದ್ರ ಹಾಗೂ ತೀರ್ಥಹಳ್ಳಿಯ ತಹಶೀಲ್ದಾರರಾದ ಜಿ.ಬಿ.ಜಕ್ಕನ ಗೌಡರ್ ಅವರನ್ನು ಸಂಪರ್ಕಿಸಿ ದೃಢೀಕರಿಸಿಕೊಂಡಿತು.

ಚುನಾವಣಾ ಸಾಕ್ಷರತಾ ಕ್ಲಬ್, ಐಕ್ಯುಎಸಿ, ತಹಶೀಲ್ದಾರ್ ಕಚೇರಿ ಹಾಗೂ ಕಾಲೇಜಿನ ಇಎಲ್ಸಿ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನ್ಯಾ. ಎಸ್ ಎಸ್ ಭರತ್, ನ್ಯಾ.ಯಶವಂತ್ ಕುಮಾರ್ ಕೆ, ಎಪಿಪಿ ಶ್ರೀಮತಿ ಕವಿತಾ ಎಚ್ ಡಿ, ಜಕ್ಕನಗೌಡರ್ ಭಾಗವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲರಾದ ಧರ್ಮಣ್ಣ ಅವರು ರಜೆಯಲ್ಲಿದ್ದುದರಿಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಅಧ್ಯಾಪಕ ವಿಜೇಂದ್ರ ಅವರು ವಹಿಸಿಕೊಂಡಿದ್ದರು. ರಾಷ್ಟ್ರೀಯ ಮತದಾನದ ದಿನಾಚರಣೆಯ ಪ್ರಯುಕ್ತ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೇಶಕ್ಕೆ ಸಂವಿಧಾನ ಜಾರಿಯಾದ ಮುನ್ನಾದಿನ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನ್ಯಾಯಾಧೀಶರು, ‘ನಮ್ಮ ಧರ್ಮಗ್ರಂಥ ಭಗವದ್ಗೀತೆಯು ಸಂವಿಧಾನಕ್ಕೆ ಸಮವಾಗಿದೆ.’ ಎಂದು ಹೇಳಿದ್ದಾರೆನ್ನಲಾಗಿದೆ. ಅವರು ತಮ್ಮ ಮಾತನ್ನು ಮುಗಿಸುವಾಗ “ಜೈ ಶ್ರೀರಾಮ್” ಎಂದು ಹೇಳಿ ತಮ್ಮ ಮಾತು ಮುಗಿಸಿದ್ದಾರೆ. ಈ ಕುರಿತು ಕನ್ನಡ ಪ್ಲಾನೆಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯೇಂದ್ರ ಅವರನ್ನು ವಿಚಾರಿಸಿದಾಗ ಅವರು, ‘ಕಾರ್ಯಕ್ರಮದಲ್ಲಿ ಯಾರು ಯಾರು ಏನೇನು ಮಾತಾಡಿದರು ಎಂದು ಎಲ್ಲವನ್ನೂ ಗಮನಿಸಲು ಆಗುವುದಿಲ್ಲ. ಆದರೆ ನ್ಯಾಯಮೂರ್ತಿಗಳು ತಮ್ಮ ಭಾಷಣದ ಕೊನೆಯಲ್ಲಿ ಜೈಶ್ರೀರಾಮ್ ಎಂದು ಹೇಳಿದ್ದಂತೆ ಕೇಳಿಸಿತು. ವಿದ್ಯಾರ್ಥಿಗಳು ಯಾರೂ ಜೈ ಶ್ರೀರಾಮ್ ಎಂದು ಕೂಗಲಿಲ್ಲ” ಎಂದು ತಿಳಿಸಿದರು. “ಒಬ್ಬ ನ್ಯಾಯಾಧೀಶರಾದವರು ಸಂವಿಧಾನದ ಪರಮೋಚ್ಚ ಅಧಿಕಾರವನ್ನು ಎತ್ತಿ ಹಿಡಿಯುವ ಬದಲು ಭಗವದ್ಗೀತೆಯನ್ನೋ ಕುರಾನ್ ಬೈಬಲ್ ಇತ್ಯಾದಿ ಧರ್ಮಗ್ರಂಥಗಳನ್ನು ಸಂವಿಧಾನದಕ್ಕೆ ಸಮ ಎಂದು ಹೇಳುವುದು ಸರಿಯೇ?”  ಎಂಬ ಪ್ರಶ್ನೆಗೆ ವಿಜಯೇಂದ್ರ ಅವರು, ‘ನಾವು ನ್ಯಾಯಾಧೀಶರನ್ನು ಪ್ರಶ್ನೆ ಮಾಡವುದಕ್ಕಾಗಲೀ, ತಿಳಿಹೇಳುವುದಕ್ಕಾಗಲೀ ಸಾಧ್ಯವಿಲ್ಲ. ಆದರೆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯ್ತು’ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ತಹಶೀಲ್ದಾರ್ ಕಚೇರಿಯ ವತಿಯಿಂದ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ ಕುರಿತು  ಕನ್ನಡ ಪ್ಲಾನೆಟ್ ತೀರ್ಥಹಳ್ಳಿ ತಹಶೀಲ್ದಾರರಾದ ಜಕ್ಕನ ಗೌಡರ್ ಅವರಿಗೆ ಕರೆ ಮಾಡಿ ಕೇಳಿದಾಗ, ‘ಅಲ್ಲಿ ಯಾವ ಪುಸ್ತಕ ಕೊಟ್ಟರು ಎಂದು ನನಗೆ ಗೊತ್ತಿಲ್ಲ, ವಿಚಾರಿಸುತ್ತೇನೆ’ ಎಂದು ಹೇಳಿದರು.   

ಈ ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ನಡೆಸಿದ್ದ ಕೆಲವು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ವಿತರಿಸಲಾಗಿದ್ದು ಈ ಬಹುಮಾನಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಪ್ರಾಯೋಜಿಸಿತ್ತೆಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿದ ವಿಜೇಂದ್ರ ಅವರು, “ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯ್ತು” ಎಂದು ಮಾಹಿತಿ ನೀಡಿದರು. “ಭಗವದ್ಗೀತೆ ಹಂಚಿದ ಕುರಿತು ಕೇಳಿದಾಗ, ವಿದ್ಯಾರ್ಥಿಗಳಿಗೆ ಭಗವದ್ಗೀತೆ ಹಂಚಲಾಗಿಲ್ಲ, ವೇದಿಕೆಯ ಮೇಲಿದ್ದ ಅತಿಥಿಗಳಿಗೆ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಿಂದಲೇ ಪ್ರಾಯೋಜಿಸಿ ನೀಡಲಾಗಿತ್ತು ಎಂದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಗವದ್ಗೀತೆಯ ಕುರಿತು ಸುದೀರ್ಘ ವಿಶ್ಲೇಷಣೆ ನಡೆಸಿ ಬರೆದಿರುವ ಕೃತಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿರುವುದೇನೆಂದರೆ, ಭಗವದ್ಗೀತೆಯು ಯುದ್ಧ ಮತ್ತು ಹಿಂಸೆಗೆ ತಾತ್ವಿಕ ಸಮರ್ಥನೆ ಒದಗಿಸುವ ಗ್ರಂಥ. ಅದು ಚಾತುರ್ವರ್ಣ್ಯ ವ್ಯವಸ್ಥೆಗೆ ಸಮರ್ಥನೆ ಒದಗಿಸುವ ಹಾಗೂ ಮೋಕ್ಷ ಸಿಗಲು ಯಜ್ಞ ಯಾಗದಂತ ವೈದಿಕ ಕರ್ಮ ಮಾರ್ಗಗಳನ್ನು ಉಪದೇಶಿಸುವ ಒಂದು ಪ್ರತಿಕ್ರಾಂತಿ ತತ್ವ ಹೊಂದಿರುವ ಗ್ರಂಥ ಎಂದಿದ್ದಾರೆ. ಅಷ್ಟೇ ಅಲ್ಲದೇ ಬೌದ್ಧ ಧರ್ಮ ಪ್ರತಿಪಾದಿಸಿದ್ದ ಕ್ರಾಂತಿಕಾರಕ ಹಾಗೂ ವೈಚಾರಿಕ ತತ್ವಗಳ ಮೇಲೆ ದಾಳಿ ನಡೆಸುವ ತತ್ವ ಹೊಂದಿರುವ ಗ್ರಂಥ ಭಗವದ್ಗೀತೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಭಾರತದ ಸಂವಿಧಾನದ ತತ್ವಗಳು ಅಹಿಂಸೆ, ಸಮಾನತೆ ಹಾಗೂ ನ್ಯಾಯದ ತತ್ವಗಳನ್ನು ಹೇಳುತ್ತದೆ. ಹೀಗಿರುವಾಗ ನ್ಯಾಯಾಧೀಶರು ಭಗವದ್ಗೀತೆ ಸಂವಿಧಾನಕ್ಕೆ ಸಮವಾಗುತ್ತದೆ ಎಂದು ಹೇಳಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಭಾರತದ ಸಂವಿಧಾನವು ಧರ್ಮದ ವಿಷಯದಲ್ಲಿ ಸರ್ಕಾರ ಮತ್ತು ಆಡಳಿತಾಂಗಗಳು ಕಡ್ಡಾಯವಾಗಿ ತಟಸ್ಥತೆ (neutrality) ವಹಿಸಬೇಕೆನ್ನುತ್ತದೆ, ಯಾವುದೇ ಧರ್ಮವನ್ನಾಗಲೀ, ಧಾರ್ಮಿಕ ಗ್ರಂಥಗಳನ್ನಾಗಲೀ ಸರ್ಕಾರ ಉತ್ತೇಜಿಸುವುದು ಸಂವಿಧಾನದ ಮೂಲತತ್ವಗಳಿಗೆ ವಿರೋಧಿಯಾದುದು. ಯಾಕೆಂದರೆ ಭಾರತವು ಪಾಕಿಸ್ತಾನ ಅಥವಾ ಇರಾನ್ ದೇಶಗಳಂತೆ ಥಿಯೋಕ್ರಟಿಕ್ ದೇಶವಲ್ಲ. ಇದು ಡೆಮಕ್ರಟಿಕ್ ದೇಶ. ಹೀಗಿರುವಾಗ ಒಂದು ಸರ್ಕಾರಿ ಕಾಲೇಜಿನಲ್ಲಿ ಸರ್ಕಾರದ ಆಡಳಿತಾಂಗವೇ ಆಯೋಜಿಸಿದ ಕಾರ್ಯಕ್ರಮದಲ್ಲಿ ವೈದಿಕ ಪುರೋಹಿತಶಾಹಿಯ ಹಿತ ಕಾಪಾಡುವ ಗ್ರಂಥವಾದ ಭಗವದ್ಗೀತೆಯನ್ನು ಹಂಚುವುದಾಗಲೀ, ನ್ಯಾಯಮೂರ್ತಿಯೊಬ್ಬರು ಜೈಶ್ರೀರಾಮ್ ಎಂದು ವಿದ್ಯಾರ್ಥಿಗಳ ಎದುರು ಘೋಷಣೆ ಮಾಡುವುದಾಗಲೀ ಎಷ್ಟು ಸಂವಿಧಾನಬದ್ಧ ಎಂಬ ಪ್ರಶ್ನೆ ಕೇಳಿ ಬಂದಿದೆ. ಕನ್ನಡ ಪ್ಲಾನೆಟ್ ಬಳಿ ತಮ್ಮ ಆತಂಕ ಹಂಚಿಕೊಂಡ ಕಾಲೇಜಿನ ವಿದ್ಯಾರ್ಥಿಯ ಪೋಷಕರಾದ ನರೇಂದ್ರ ಕುಮಾರ್ ಅವರು, ‘ಉನ್ನತ ಸ್ಥಾನದಲ್ಲಿ ಕುಳಿತವರು ಜೈಶ್ರೀರಾಮ್ ಎಂದು ಹೇಳಿದ ಕುರಿತು ನನ್ನ ಮಗ ಬಂದು ಹೇಳಿದ. ಕಾಲೇಜೊಂದು ಹೀಗೆ ರಾಜಕೀಯ ಕೇಂದ್ರವಾದರೆ ನಮ್ಮ ಮಕ್ಕಳು ಪೂರ್ವಾಗ್ರಹಪೀಡಿತರಾಗುವ ಸಾಧ್ಯತೆ ಇರುತ್ತದೆ. ಹೊರಗಡೆ ರಾಜಕೀಯ ಧಾರ್ಮಿಕ ಉನ್ಮಾದ ವಾತಾವರಣ ಇರುವಾಗ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಸಂಯಮ, ಸಹಬಾಳ್ವೆ, ಸರ್ವಧರ್ಮ ಸಮನ್ವಯಗಳನ್ನು ಬೋಧಿಸಬೇಕು, ಸಂವಿಧಾನದ ಮೌಲ್ಯಗಳನ್ನು ತಿಳಿಸಬೇಕು. ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಹುಟ್ಟಿದ ನೆಲಕ್ಕೆ ಯಾರೂ ಕಳಂಕ ಹಚ್ಚಬಾರದು” ಎಂದು ಹೇಳಿದರು.

More articles

Latest article