ಪರಮ ದುರಹಂಕಾರಿಯ ವಿರಾಟ ರೂಪ ‘ದರ್ಶನ’

Most read

ಸ್ಟಾರ್ ನಟನ ಅಂಧಾಮಾನಿಗಳು ಈಗಲೂ ದರ್ಶನ್ ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗಾದರೆ ಇದಕ್ಕೆಲ್ಲಾ ಯಾರು ಕಾರಣ? ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ವಿಜಯಲಕ್ಷ್ಮಿಯವರಾ? ತನಗೆ ಯಾರೋ ಕಿರುಕುಳ ಕೊಡುತ್ತಿದ್ದಾರೆ ಎಂದು ಅಲವತ್ತುಕೊಂಡ ಪವಿತ್ರಾಗೌಡರಾ? ಮತ್ತೊಬ್ಬರ ಖಾಸಗಿ ಬದುಕನ್ನು ಆಕ್ಷೇಪಿಸಿ ಅತಿರೇಕವಾಗಿ ವರ್ತಿಸಿ ಕೊಲೆಗೀಡಾದ ಸಂಘಿ ರೇಣುಕಾಸ್ವಾಮಿಯಾ? ಇಲ್ಲಾ ಕೋಪವನ್ನು ನಿಯಂತ್ರಿಸಿ ಸಮಾಧಾನದಿಂದ ಸಮಸ್ಯೆಗಳನ್ನು ಪರಿಹರಿಸದೇ ಅಪಹರಣ, ಹಲ್ಲೆ, ಹತ್ಯೆಗಳಿಗೆ ಕಾರಣರಾದ ದುರಹಂಕಾರಿ ದರ್ಶನ್ ರವರಾ? – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಕನ್ನಡ ಚಲನಚಿತ್ರ ನಟ ದರ್ಶನ್ ಮತ್ತೆ ಬೇಡದಿರುವ ಸಂಗತಿಯ ಬಲೆಗೆ ಬಿದ್ದು ಸದ್ದು ಮಾಡುತ್ತಿದ್ದಾರೆ. ಪತ್ನಿ ಮೇಲಿನ ಹಲ್ಲೆ ಆರೋಪದಿಂದ ಪ್ರೇಯಸಿಯನ್ನು ಪೀಡಿಸಿದವನನ್ನು ಕೊಲೆ ಮಾಡಿದ ಆರೋಪಕ್ಕೆ ಬಡ್ತಿ ಪಡೆದು ಬಂಧನದಲ್ಲಿದ್ದಾರೆ. 

ಅರ್ಹತೆಗೆ ಮೀರಿದ ಯಥೇಚ್ಚ ಹಣ, ಅಗತ್ಯ ಮೀರಿದ ಜನಪ್ರಿಯತೆ, ಜೊತೆಗೆ ಅಹಂಕಾರಗಳೂ ಸೇರಿದರೆ ಈ ರೀತಿಯ ಆತಂಕಕಾರಿ ಅತಿರೇಕಗಳು ಘಟಿಸುತ್ತವೆ. ಪುರುಷಹಂಕಾರ ಎನ್ನುವುದು ಆಗಾಗ ಮಾರ್ದನಿಸುತ್ತದೆ. 

2011 ರಲ್ಲಿ ಇದೇ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಕಾರಿನಲ್ಲಿ ಚಪ್ಪಲಿಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದರು. ಮಹಿಳೆಯ ಮೇಲಾದ ದಮನವನ್ನು ವಿರೋಧಿಸುವ ಬದಲಾಗಿ ಅನೇಕ ಮಹಿಳೆಯರು ಪೊಲೀಸ್ ಸ್ಟೇಶನ್ನಿಗೆ ಮುತ್ತಿಗೆ ಹಾಕಿ ಬಿಡುಗಡೆಗೆ ಆಗ್ರಹಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದರು. ಹಲ್ಲೆಗೊಳಗಾದ ವಿಜಯಲಕ್ಷ್ಮಿಯವರನ್ನೇ ನಿಂದಿಸಿದ ದರ್ಶನ್ ಅಭಿಮಾನಿ ಪಡೆ ತಮ್ಮ ಆರಾಧ್ಯ ದೈವದ ಪರ ನಿಂತಿತು. ಆಗಲೇ ಈ ನಟ ಮಾಡಿದ ತಪ್ಪನ್ನು ಅಭಿಮಾನಿಗಳು ಮನ್ನಿಸುವ ಬದಲು ಖಂಡಿಸಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಹಣ ಪ್ರಸಿದ್ದಿ ಹಾಗೂ ಅಸಂಖ್ಯಾತ ಅಭಿಮಾನಿಗಳಿರುವಾಗ ತಾನು ಏನು ಮಾಡಿದರೂ ನಡೆಯುತ್ತೆ ಎನ್ನುವ ದುರಹಂಕಾರದಿಂದ ಆಗಾಗ ತಪ್ಪುಗಳನ್ನು ಮಾಡುತ್ತಲೇ ಬಂದ ದರ್ಶನ್ ಎನ್ನವ ನಟ ಈ ಸಲ ಕೊಲೆಯನ್ನೇ ಮಾಡಿಸುವ ಹಾಗೂ ಮಾಡಿದ ಆರೋಪ ಹೊತ್ತು ಮತ್ತೆ ಜೈಲು ಸೇರುತ್ತಿರುವುದು ಅಭಿಮಾನಿಗಳಿಗೆ ಬೇಸರದ ಸಂಗತಿ.

ಪವಿತ್ರಾ ಗೌಡ ಮತ್ತು ದರ್ಶನ್ ಈ ಇಬ್ಬರ ಲಿವ್‌ ಇನ್‌ ರಿಲೇಷನ್‌ಶಿಪ್ ಸಂಬಂಧ ಗೊತ್ತಿರುವಂತಹುದೇ. ಇದೇ ವಿಷಯಕ್ಕೇ ವಿಜಯಲಕ್ಷ್ಮಿಯವರು ಜಗಳವಾಡಿ ಹಲ್ಲೆಗೊಳಗಾಗಿದ್ದರು. ಈಗ  ಹತ್ಯೆಯಂತಹ ಅತಿರೇಕದ ಕೃತ್ಯಕ್ಕೆ ಕಾರಣವಾಗಿದ್ದೂ ಇದೇ ಪವಿತ್ರಾಗೌಡ ಎನ್ನುವುದು ದರ್ಶನ್ ಅಭಿಮಾನಿಗಳ ಅನಿಸಿಕೆ. 

ಹೋಗಲಿ, ಯಾರು ಯಾರ ಜೊತೆಗೆ ಏನಾದರೂ ಸಂಬಂಧ ಹೊಂದಿರಲಿ ಅದು ಅವರ ಖಾಸಗಿ ವಿಷಯ. ಆದರೆ ವ್ಯಕ್ತಿಗತ ಪ್ರೀತಿ ಪ್ರೇಮ ಪ್ರಕರಣಗಳನ್ನು ಅಕ್ರಮ ಸಂಬಂಧಗಳೆಂದು ನಿರ್ಧರಿಸಿ ನಿಂದನೆ ಖಂಡನೆ ಹಾಗೂ ಹಲ್ಲೆಗಳ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ (ಅ)ನೈತಿಕ ಪೋಲೀಸ್‌ ಗಿರಿ ಮಾಡುವ ಸಂಘಿಗಳ ಗುಂಪು ಕ್ರಿಯಾಶೀಲವಾಗಿದೆ. ಅಂತಹ ಮಿಲಿಟೆಂಟ್ ಗುಂಪಾದ ಭಜರಂಗದಳದ ಸಕ್ರಿಯ ಕಾರ್ಯಕರ್ತ ಚಿತ್ರದುರ್ಗದ ರೇಣುಕಾ ಸ್ವಾಮಿ. ದರ್ಶನ್ ಅಭಿಮಾನಿ ಎನ್ನಲಾದ ಈ ಸಂಘಿಗೆ ಪವಿತ್ರಾಗೌಡರ ಮೇಲೆ ಅತೀವ ಆಕ್ರೋಶ.‌ ದರ್ಶನ್ ವಿವಾಹೇತರ ಸಂಬಂಧ ಹೊಂದಿದ್ದರ ಮೇಲೆ ಅಸಾಧ್ಯ ಸಿಟ್ಟು. ಹೀಗಾಗಿ ಪವಿತ್ರಗೌಡರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ನಿಂದನೆಗೆ ಇಳಿದ ರೇಣುಕಾಸ್ವಾಮಿ ತನ್ನ ಸಾವಿಗೆ ತಾನೇ ಆಹ್ವಾನ ಕೊಟ್ಟಿದ್ದ.

ಮೊದಲೇ ಸ್ವಭಾವದಲ್ಲಿ  ಉಗ್ರಪ್ರತಾಪಿಯಾದ ದರ್ಶನ್ ತನ್ನ ಆಪ್ತವಲಯದವರ ಜೊತೆ ಸೇರಿ ರೇಣುಕಾಸ್ವಾಮಿಯನ್ನು ಸಂಚು ಮಾಡಿ ಅಪಹರಿಸಿ ಅಮಾನುಷವಾಗಿ ಹಲ್ಲೆ ಮಾಡಿ ಸಾಯಿಸಿ ಮೋರಿಗೆ ಎಸೆಯಲಾಯ್ತು. ಉಗುರಿಗೆ ಹೋಗಬಹುದಾದ ಸಮಸ್ಯೆಗೆ ಕೊಡಲಿ ತೆಗೆದು ಕೊಂಡಂತಾಯ್ತು. ಯಾರೋ ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ಕೊಡುತ್ತಿದ್ದರೆ, ಅಸಹನೀಯವಾಗಿ ವರ್ತಿಸಿದ್ದರೆ, ಆತ್ಮಗೌರವಕ್ಕೆ ಧಕ್ಕೆ ತಂದಿದ್ದರೆ ಸೈಬರ್ ಠಾಣೆಗೆ ಪವಿತ್ರಾ ಗೌಡ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಬೇಕಾಗಿತ್ತು. ಈ ರೀತಿ ಮಾಡಲು ದರ್ಶನ್ ಆದರೂ ಸಲಹೆ ಕೊಡಬಹುದಾಗಿತ್ತು. ಆದರೆ ಸಣ್ಣ ವಿಷಯಕ್ಕೆ ಕಾನೂನನ್ನೇ ಕೈಗೆ ತೆಗೆದುಕೊಂಡ ದರ್ಶನ್ ಮಾಡಬಾರದ ಕೆಲಸ ಮಾಡಿ ಬಂಧನಕ್ಕೊಳಗಾಗಿದ್ದು ಆಘಾತಕಾರಿ.

ಮೊದಲಿನಿಂದಲೂ ದರ್ಶನ್ ಮಹಿಳಾ ದಮನ ಕೃತ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ತನ್ನ ಪತ್ನಿಯ ಮೇಲೆಯೇ ಹಲ್ಲೆ ಮಾಡಿ 28 ದಿನ ಜೈಲಿಗೆ ಹೋಗಿ ಬಂದಾದ ಮೇಲಾದರೂ ಬುದ್ಧಿ ಕಲಿಯಬೇಕಿತ್ತು. ಕಲಿಯಲಿಲ್ಲ. ಮತ್ತೊಬ್ಬ ಮಹಿಳೆಯ ಜೊತೆ ಸ್ನೇಹವನ್ನೋ, ಸಂಬಂಧವನ್ನೋ ಹೊಂದಿರುವುದು ವ್ಯಕ್ತಿಗತ ಸಂಗತಿ. ಆದರೆ ಆ ಮಹಿಳೆಗೆ ಯಾರೋ ಅನಾಮಿಕ ಕಿರುಕುಳ ಕೊಟ್ಟನೆಂದು ಕೊಲೆ ಮಾಡುವ ನಿರ್ಧಾರ ತೆಗೆದು ಕೊಂಡಿದ್ದು ಅಕ್ಷಮ್ಯ. ಹತ್ಯೆಯಿಂದಾಗಿ ಆಗಂತುಕ ಸತ್ತ ಮೇಲೆ ಆತಂಕದಿಂದ ಕೋಪಗೊಂಡು ‘ ಇದಕ್ಕೆಲ್ಲಾ ನೀನೇ ಕಾರಣ’ ಎಂದು ಪವಿತ್ರಾಗೌಡಳ ಮೇಲೂ ಆಸ್ಪತ್ರೆ ಸೇರುವಂತೆ ಹಲ್ಲೆ ಮಾಡಿದ್ದು ಅಸಹನೀಯ. 

ಇಡೀ ಪ್ರಕರಣದಲ್ಲಿ ಕಲಿಯಬಹುದಾದ ಪಾಠಗಳು ಬೇಕಾದಷ್ಟಿವೆ.

  • ಬೇರೆಯವರ ಖಾಸಗಿ ಬದುಕಿನಲ್ಲಿ ಅನ್ಯರು ಅನಗತ್ಯವಾಗಿ ಮೂಗು ತೂರಿಸಬಾರದು.
  • ಸಾಮಾಜಿಕ ಜಾಲತಾಣಗಳು ಇರುವುದು ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೇ ಹೊರತು ಮತ್ತೊಬ್ಬರ ನೆಮ್ಮದಿಯ ಭಂಗತರುವುದಕ್ಕಲ್ಲ.
  • ಒತ್ತಾಯವಿಲ್ಲದ ಒಪ್ಪಿತ ಪ್ರೀತಿ ಪ್ರೇಮ ಪ್ರಣಯಗಳು ಆಯಾ ವ್ಯಕ್ತಿಗಳ ಖಾಸಗೀತನವೇ ಹೊರತು ಅನೈತಿಕ ಪೊಲೀಸ್ ಗಿರಿ ಮಾಡುವವರ ಕಾನೂನು ವಿರೋಧಿಗಳ ಸರಕಲ್ಲ.
  • ಮದುವೆ ಎಂದರೆ ಹೆಂಡತಿಯ ಮೇಲೆ ಸಿಟ್ಟಿಗೆದ್ದು ನಿಂದಿಸಿ ಹಲ್ಲೆ ಮಾಡಲು ಕೊಟ್ಟ ಪರವಾನಿಗೆಯಲ್ಲ.
  • ಹಣ ಮದ, ಯೌವನ ಮದ, ಯಶಸ್ಸಿನ ಮದಗಳನ್ನು ನಿಯಂತ್ರಿಸದೇ ಮೆರೆದರೆ ಅನಾಹುತಗಳು ತಪ್ಪಿದ್ದಲ್ಲ.
  • ಯಾರೋ ಏನೋ ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಪೊಲೀಸ್ ಸಹಾಯ ಪಡೆಯಬೇಕೆ ಹೊರತು ಜೊತೆಗಾರನನ್ನು ಪ್ರಚೋದಿಸಿ ಹತ್ಯೆಗೆ ಸಂಚುಮಾಡುವುದಲ್ಲ.‌
  • ಸ್ಟಾರ್ ನಟರನ್ನು ದೇವರಂತೆ ಆರಾಧಿಸುವ ಅಂಧಾಭಿಮಾನಿಗಳು ಇನ್ನಾದರೂ ನಟರೂ ಸಹ ಎಲ್ಲರಂತೆ ಮನುಷ್ಯರು ಎಂಬುದನ್ನು ಅರಿತು ತಮ್ಮ ಅಭಿಮಾನವನ್ನು ಸಿನೆಮಾನುಭವಕ್ಕೆ ಮಾತ್ರ ಸೀಮಿತ ಗೊಳಿಸಬೇಕಿದೆ.

ಸ್ಟಾರ್ ನಟನ ಅಂಧಾಮಾನಿಗಳು ಈಗಲೂ ದರ್ಶನ್ ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದರ್ಶನ್ ಸಂಕಷ್ಟಕ್ಕೆ ಆಗ ವಿಜಯಲಕ್ಷ್ಮಿ ಕಾರಣವೆಂದು ಆರೋಪಿಸಿದವರು ಈಗ ಪವಿತ್ರಾಗೌಡ ಕಾರಣವೆಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಯಾರು ಕಾರಣ? ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ವಿಜಯಲಕ್ಷ್ಮಿಯವರಾ? ತನಗೆ ಯಾರೋ ಕಿರುಕುಳ ಕೊಡುತ್ತಿದ್ದಾರೆ ಎಂದು ಅಲವತ್ತುಕೊಂಡ ಪವಿತ್ರಾಗೌಡರಾ? ಮತ್ತೊಬ್ಬರ ಖಾಸಗಿ ಬದುಕನ್ನು ಆಕ್ಷೇಪಿಸಿ ಅತಿರೇಕವಾಗಿ ವರ್ತಿಸಿ ಕೊಲೆಗೀಡಾದ ಸಂಘಿ ರೇಣುಕಾಸ್ವಾಮಿಯಾ? ಇಲ್ಲಾ ಕೋಪವನ್ನು ನಿಯಂತ್ರಿಸಿ ಸಮಾಧಾನದಿಂದ ಸಮಸ್ಯೆಗಳನ್ನು ಪರಿಹರಿಸದೇ ಅಪಹರಣ ಹಲ್ಲೆ ಹತ್ಯೆಗಳಿಗೆ ಕಾರಣರಾದ ದುರಹಂಕಾರಿ ದರ್ಶನ್ ರವರಾ? 

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

ಇದನ್ನೂ ಓದಿ-ಒಬ್ಬಳ ಇಗೋ ತಣಿಸಲು ಇಂಥ ಕ್ರೌರ್ಯವೇ? ದರ್ಶನ್, ನಿಮಗೆ ಕ್ಷಮೆಯೇ ಇಲ್ಲ

More articles

Latest article