ಸ್ವಾಮಿಗೋಳು ಓದಿದ್ದು ತಿಳಿದದ್ದು ಹಾಗೂ ಪಾಲಿಸುತ್ತಿರುವುದೆಲ್ಲಾ ಮನುಸ್ಮೃತಿಯನ್ನೇ ಆಗಿರುವುದರಿಂದ ಅಂಬೇಡ್ಕರ್ ರವರ ಸಂವಿಧಾನದ ಆಳ ಅಗಲ ಹಾಗೂ ಸಮಾನತೆ ಬಗ್ಗೆ ಅವರಿಗೆ ಅರಿವಿಲ್ಲ. ಆದ್ದರಿಂದಲೇ ವೈದಿಕರನ್ನು ಗೌರವಿಸುವ ಸಂವಿಧಾನ ಬರಬೇಕೆಂಬ ಬಯಕೆ ವ್ಯಕ್ತವಾಗುತ್ತದೆ. ಹಿಂದೂ ದೇಶ ಎನ್ನುವ ಸಂವಿಧಾನ ವಿರೋಧಿ ಮಾತುಗಳು ಒತ್ತರಿಸಿಕೊಂಡು ಬರುತ್ತವೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಮಾತು ಬದಲಾಯಿಸುವುದು, ಹಾಗೆ ಹೇಳಿಯೇ ಇಲ್ಲ ಎನ್ನುವುದು, ಮಾತಿನ ಉದ್ದೇಶ ಅದಾಗಿರಲಿಲ್ಲ” ಎನ್ನೋದೆಲ್ಲಾ ಕೇವಲ ರಾಜಕೀಯದವರ ವರಸೆ ಮಾತ್ರವಾಗಿ ಉಳಿದಿಲ್ಲ. ಆಡಿದ ಮಾತುಗಳನ್ನು ತಿರುಚುವ, ವ್ಯರ್ಥ ಸಮರ್ಥನೆಗಳನ್ನು ಕೊಡುವ ಕೌಶಲ್ಯವನ್ನು ಈಗ ಜಾತಿ ಮಠಗಳ ಸ್ವಾಮಿಗಳೂ ರೂಢಿಸಿಕೊಂಡಿದ್ದಾರೆ.
“ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು” ಎಂದು ಸಾರ್ವಜನಿಕ ಸಭೆಯಲ್ಲಿ ಆವೇಶ ಹಾಗೂ ದ್ವೇಷದಿಂದ ಹೇಳಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಚಂದ್ರಶೇಖರನಾಥ ಸ್ವಾಮಿಗಳು ಮರುದಿನವೇ ಮಾತು ಬದಲಾಯಿಸಿ “ವಕ್ಫ್ ವಿವಾದ ಹಿನ್ನೆಲೆಯಲ್ಲಿ ಹಾಗೆ ಬಾಯಿ ತಪ್ಪಿ ಹೇಳಿದ್ದೇನೆಯೇ ಹೊರತು ಮುಸ್ಲಿಂ ದ್ವೇಷದಿಂದಲ್ಲ” ಎಂದು ತಮ್ಮ ಸಂವಿಧಾನ ವಿರೋಧಿ ಹೇಳಿಕೆಗೆ ಸಮರ್ಥನೆ ಕೊಡತೊಡಗಿದರು.
ಇನ್ನೊಬ್ಬರು ಉಡುಪಿ ಪೇಜಾವರ ವೈದಿಕ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ವಿಶ್ವ ಹಿಂದೂ ಪರಿಷತ್ತಿನ ಸ್ವಾಮೀಜಿ ಸಂತ ಸಮಾವೇಶದಲ್ಲಿ ನಿಂತು “ನಮ್ಮನ್ನು ಗೌರವಿಸುವ ಸಂವಿಧಾನ ಬೇಕು” ಎಂದು ಆಗ್ರಹಿಸಿದರು ಹಾಗೂ ರಾಜ್ಯಪಾಲರನ್ನು ಭೇಟಿಯಾಗಿ ಸನಾತನ ಸಂತರ ಪರವಾಗಿ ಮನವಿಯನ್ನೂ ಸಲ್ಲಿಸಿದರು.
ನಮ್ಮನ್ನು ಗೌರವಿಸುವ ಸಂವಿಧಾನ ಅಂದರೆ ವೈದಿಕರನ್ನು ಗೌರವಿಸುವ, ಸನಾತನಿಗಳನ್ನು ಬೆಂಬಲಿಸುವ, ಪುರೋಹಿತಶಾಹಿಗಳ ನೇತೃತ್ವವನ್ನು ಒಪ್ಪಿಕೊಳ್ಳುವ ಸಂವಿಧಾನ, ಅರ್ಥಾತ್ ಪರೋಕ್ಷವಾಗಿ ಮನುಸ್ಮೃತಿ ಸಂವಿಧಾನವಾಗಿ ಇರಬೇಕು ಎನ್ನುವುದೇ ಪೇಜಾವರ ತೀರ್ಥರ ಅಂತರಂಗ ಮತ್ತು ಬಹಿರಂಗದ ಉದ್ದೇಶವಾಗಿತ್ತು. ಭಾರತೀಯರೆಲ್ಲರನ್ನೂ ಸಮಾನವಾಗಿ ಪರಿಗಣಿಸುವ ಅಂಬೇಡ್ಕರರ ಸಂವಿಧಾನ ಬೇಕಾಗಿಲ್ಲ, ಸಂತರು ಸನಾತನಿಗಳನ್ನು ಗೌರವಿಸುವಂತಹ ವರ್ಣಾಶ್ರಮ ವ್ಯವಸ್ಥೆಯ ಸಂವಿಧಾನ ಬೇಕೆನ್ನುವುದೇ ಈ ಸ್ವಾಮಿಗಳ ಆಗ್ರಹದ ಹಿಂದಿರುವ ಆಶಯವಾಗಿತ್ತು. ” ಇದು ಹಿಂದೂಗಳ ದೇಶ, ಜನಗಣತಿ ಅದನ್ನು ಸ್ಪಷ್ಟಪಡಿಸುತ್ತದೆ” ಎಂದೂ ತಮ್ಮ ಹಿಂದುತ್ವವಾದಿ ಅಜೆಂಡಾವನ್ನು ಸಮರ್ಥಿಸಿಕೊಂಡಿದ್ದರು.
ಯಾವಾಗ ಈ ತೀರ್ಥ ಸ್ವಾಮಿಗಳ ಹೇಳಿಕೆ ಸಂವಿಧಾನ ವಿರೋಧಿ ಎಂದು ಟೀಕೆಗಳು ಬರಲು ಶುರುವಾದವೋ, ಸ್ವಾಮಿಗಳ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ ಬಂಧಿಸಿ ವಿಚಾರಣೆ ನಡೆಸಬೇಕೆಂಬ ಜನಾಕ್ರೋಶ ವ್ಯಕ್ತವಾಗತೊಡಗಿತೋ ಆಗ ಹಾಲಿ ಪೇಜಾವರರು ಪೆಚ್ಚಾಗಿ ತಮ್ಮ ಮಾತಿನ ವರಸೆ ಬದಲಿಸಿದರು. ” ನಾನು ಹಾಗೆ ಹೇಳಿಯೇ ಇಲ್ಲ, ಕೆಲವರು ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ, ನಾನು ಸಂವಿಧಾನವನ್ನು ಪಾಲಿಸುತ್ತಿದ್ದೇನೆ” ಎಂದು ಹೇಳುವ ಮೂಲಕ ತಾವು ಹೇಳಿದ ಮಾತನ್ನು ಹೇಳಿಯೇ ಇಲ್ಲಾ ಎಂದು ಸಮರ್ಥಿಸಿಕೊಳ್ಳಲು ಪರದಾಡಿದರು.
‘ಸಂವಿಧಾನವನ್ನು ಪಾಲಿಸುತ್ತೇನೆ, ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ’ ಎನ್ನುವ ಪೇಜಾವರರ ಮಾತಲ್ಲಿ ಅಸಲಿಗಿಂತ ನಕಲಿತನವೇ ಹೆಚ್ಚಾಗಿದೆ. ಯಾಕೆಂದರೆ ಸಂವಿಧಾನ ಎಲ್ಲಾ ಭಾರತೀಯರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಆದರೆ ಮಠದ ಊಟದಲ್ಲೂ ಪಂಕ್ತಿಭೇದವನ್ನು ಆಚರಿಸಿಕೊಂಡು ಬಂದ ಹಾಗೂ ಬ್ರಾಹ್ಮಣರು ಉಂಡುಬಿಟ್ಟ ಮುಸುರೆಲೆ ಮೇಲೆ ದಲಿತರು ಉರುಳಾಡುವ ಅಜಲು ಸೇವೆಯನ್ನು ಸಮರ್ಥಿಸಿಕೊಳ್ಳುವ ಉಡುಪಿ ಮಠದ ಪರಂಪರೆಯೇ ಅಸಮಾನತೆಗೆ ಪ್ರತೀಕವಾಗಿದೆ. ಸಂವಿಧಾನದ ಸಮಾನತೆಯ ವಿರೋಧಿಯಾಗಿದೆ. ಹೀಗಿರುವಾಗ ಸಂವಿಧಾನವನ್ನು ಪಾಲಿಸುತ್ತಾ ಬಂದಿದ್ದೇನೆ ಎನ್ನುವ ಮಾತುಗಳೇ ಬೂಟಾಟಿಕೆಯದ್ದಾಗಿದೆ. ಬಹುಷಃ ಯಾವ ಸಂವಿಧಾನವೆಂದು ಸ್ವಾಮಿಗಳನ್ನು ಕೇಳಬೇಕಿದೆ. ಮನು ಧರ್ಮಶಾಸ್ತ್ರ ಪ್ರಾಯೋಜಿತ ಸಂವಿಧಾನವನ್ನೇ ಈ ಸ್ವಾಮಿಗಳು ಪಾಲಿಸುತ್ತಾ ಬಂದಿರುವುದು ಸ್ಪಷ್ಟವಾಗುತ್ತದೆ.
“ಇದು ಹಿಂದುಸ್ತಾನ, ಬಹುಸಂಖ್ಯಾತ ಹಿಂದುಗಳ ರಾಷ್ಟ್ರ’ ಎಂದು ಹೇಳಿದ ಈ ಸ್ವಾಮಿಗಳ ಮಾತೇ ಹಾಸ್ಯಾಸ್ಪದ. ಯಾಕೆಂದರೆ ಈ ಪೇಜಾವರ ಮಠದ ಹಿಂದಿನ ದಿವಂಗತ ಸ್ವಾಮಿಗಳು ‘ಬ್ರಾಹ್ಮಣ ಧರ್ಮವೇ ಬೇರೆ, ಹಿಂದೂ ಧರ್ಮವೇ ಬೇರೆ’ ಎಂದು ಧರ್ಮದ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದರು. ಆ ಪ್ರಕಾರ ಹಿಂದೂ ಧರ್ಮದವರೇ ಅಲ್ಲದ ಈ ಬ್ರಾಹ್ಮಣ ಧರ್ಮದ ಸ್ವಾಮಿಗಳು ಹಿಂದೂ ಧರ್ಮದ ಬಗ್ಗೆ ಮಾತಾಡುತ್ತಿದ್ದಾರೆ. ಭಾರತ ಹಿಂದೂಗಳ ದೇಶವೆಂದು ಹೇಳುತ್ತಿದ್ದಾರೆ. “ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುವ ಸರಕಾರವನ್ನು ಅಧಿಕಾರಕ್ಕೆ ತರಬೇಕು” ಎಂದು ಸಂತ ಸಮಾವೇಶದಲ್ಲಿ ಕುಂತು ಹೇಳಿದ್ದು ರಾಜಕೀಯ ಮಾತಾಗಿದೆ. ಸ್ವಾಮಿಗಳಾದವರು ಜಪ ತಪ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಪರಲೋಕ ಧ್ಯಾನದಲ್ಲಿ ಮಗ್ನರಾಗಿರಬೇಕು. ಲೌಕಿಕದಿಂದ ಅಂತರ ಕಾಪಾಡಿ ಕೊಂಡಿರಬೇಕು. ಆದರೆ ಆ ತೀರ್ಥರಂತೆ ಈ ತೀರ್ಥರಿಗೂ ರಾಜಕೀಯದಲ್ಲೂ ಮೂಗು ತೂರಿಸುವ ಚಾಳಿ ಇದೆ. ಯಾವ ಸರಕಾರವನ್ನು ಅಧಿಕಾರಕ್ಕೆ ತರಬೇಕು ಹಾಗೂ ತರಬಾರದು ಎಂದು ಹೇಳಲು ಇವರು ಯಾರು? ಇವರ ಮಠಕ್ಕೆ ಎಲ್ಲಾ ರಾಜಕೀಯ ಪಕ್ಷದ ಮುಂಬಾಲಕರು, ಹಿಂಬಾಲಕರು, ನಾಯಕರು ಬಂದು ಕಾಣಿಕೆ ಹುಂಡಿ ತುಂಬಿಸಿರುತ್ತಾರೆ. ಆದರೆ ಈ ಸ್ವಾಮಿಗಳು ಮಾತ್ರ ಹಿಂದುತ್ವವಾದಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ.
ಎಲ್ಲಾ ಧರ್ಮೀಯರ ಭಾವನೆ ಆಚರಣೆಗಳಿಗೆ ಸಮಾನ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಒಂದು ಧರ್ಮದ ಭಾವನೆಗಳಿಗೆ ಬೆಲೆ ಕೊಡುವ ಸರಕಾರ ಅಧಿಕಾರಕ್ಕೆ ಬರಬೇಕು ಎನ್ನುವುದೂ ಸಂವಿಧಾನ ವಿರೋಧಿತನವಾಗುತ್ತದೆ. ಯಾವುದೇ ಸರಕಾರ ಬಂದರೂ ಸಂವಿಧಾನ ಬದ್ಧವಾಗಿಯೇ ಕೆಲಸ ನಿರ್ವಹಿಸಬೇಕು. ಎಲ್ಲಾ ಜಾತಿ ಧರ್ಮ ಮತ ಪಂಥದವರನ್ನೂ ಸಮಾನವಾಗಿ ಕಾಣಬೇಕು. ಯಾವುದೋ ಒಂದು ಧರ್ಮದ ಭಾವನೆಗೆ ಬೆಲೆ ಕೊಟ್ಟು ಬೇರೆ ಧರ್ಮೀಯರ ಭಾವನೆಗಳಿಗೆ ಘಾಸಿ ಮಾಡುವ ಸರಕಾರವೂ ಸಹ ಸಂವಿಧಾನ ವಿರೋಧಿ ಸರಕಾರವೇ ಆಗುತ್ತದೆ. ಅಂತಹ ಸರಕಾರ ಅಧಿಕಾರಕ್ಕೆ ಬರಬೇಕು ಎಂಬ ತೀರ್ಥರ ಹೇಳಿಕೆ ಸಂವಿಧಾನ ವಿರೋಧಿ, ದೇಶದ್ರೋಹದ ಹೇಳಿಕೆಯಾಗಿದೆ.
ಹಿಂದೂ ದೇಶವು ವಾಸ್ತವವಾಗಿ ಬಿಟ್ಟರೆ ಅದು ಅತಿ ದೊಡ್ಡ ವಿಪತ್ತಾಗಿರುತ್ತದೆ. ಹಿಂದೂ ರಾಷ್ಟ್ರವೆಂದರೆ ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳಿಗೆ ಎದುರಾಗುವ ಅಪಾಯವೇ ಆಗಿದೆ. ಹೀಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಹಿಂದೂ ರಾಷ್ಟ್ರವು ವಾಸ್ತವಕ್ಕೆ ಬರದಂತೆ ತಡೆಗಟ್ಟಬೇಕು” ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಹಿಂದುತ್ವವಾದಿಗಳ ಹಿಂದೂ ರಾಷ್ಟ್ರದ ಕುರಿತು 1940 ರಲ್ಲಿಯೇ ಆತಂಕ ವ್ಯಕ್ತಪಡಿಸಿದ್ದು ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ 8, ಪುಟ 358 ರಲ್ಲಿ ದಾಖಲಾಗಿದೆ. ಆದರೆ ಹಿಂದುತ್ವವಾದಿ ಶಕ್ತಿಗಳು ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂದು ಪ್ರಯತ್ನಿಸುತ್ತಲೇ ಇವೆ. ಆ ಪ್ರಯತ್ನದ ಭಾಗವಾಗಿಯೇ ಪೇಜಾವರ ಸ್ವಾಮಿಗಳ ಹಿಂದೂ ದೇಶ ಹೇಳಿಕೆ ಪ್ರಕಟವಾಗಿದೆ. ಹೀಗೆ ಹೇಳಿಕೆ ನೀಡುವುದೂ ಸಹ ಸಂವಿಧಾನ ವಿರೋಧಿ ದೇಶದ್ರೋಹದ ಕೃತ್ಯವಾಗಿದೆ.
ಸಂವಿಧಾನವನ್ನು ಪಾಲಿಸುವೆ ಎನ್ನುವವರು ಈ ದೇಶ ಒಂದು ಧರ್ಮಕ್ಕೆ ಸಂಬಂಧಿಸಿದ್ದು ಎಂದು ಪ್ರತಿಪಾದಿಸುವುದೇ ಸಂವಿಧಾನ ವಿರೋಧಿತನವಾಗುತ್ತದೆ. ಸಂವಿಧಾನದಲ್ಲಿ ಎಲ್ಲೂ ಇದು ಹಿಂದೂ ದೇಶವೆಂದು ಉಲ್ಲೇಖಿಸಿಲ್ಲ. ಹಿಂದುಸ್ತಾನ ಎಂದೂ ಹೇಳಿಲ್ಲ. ಭಾರತವನ್ನು ಜಾತ್ಯತೀತ ಧರ್ಮನಿರಪೇಕ್ಷ ದೇಶವೆಂದೇ ಸಂವಿಧಾನದ ಪೀಠಿಕೆಯಲ್ಲಿ ಹೇಳಲಾಗಿದೆ. ಈ ಸ್ವಾಮಿಗಳು ಸಂವಿಧಾನವನ್ನು ಓದದೇ ಇದ್ದರೂ ಪರವಾಗಿಲ್ಲ ಕನಿಷ್ಟ ಪೀಠಿಕೆಯನ್ನಾದರೂ ಓದಿ ತಿಳಿದುಕೊಳ್ಳಬೇಕಿತ್ತು. ಆದರೆ ಸ್ವಾಮಿಗೋಳು ಓದಿದ್ದು ತಿಳಿದದ್ದು ಹಾಗೂ ಪಾಲಿಸುತ್ತಿರುವುದೆಲ್ಲಾ ಮನುಸ್ಮೃತಿಯನ್ನೇ ಆಗಿರುವುದರಿಂದ ಅಂಬೇಡ್ಕರ್ ರವರ ಸಂವಿಧಾನದ ಆಳ ಅಗಲ ಹಾಗೂ ಸಮಾನತೆ ಬಗ್ಗೆ ಅವರಿಗೆ ಅರಿವಿಲ್ಲ. ಆದ್ದರಿಂದಲೇ ಸಂವಿಧಾನ ವಿರೋಧಿ ಹೇಳಿಕೆಗಳು ಸ್ವಾಮಿಗಳ ಬಾಯಿಂದ ಹೊರಬರುತ್ತವೆ. ವೈದಿಕರನ್ನು ಗೌರವಿಸುವ ಸಂವಿಧಾನ ಬರಬೇಕೆಂಬ ಬಯಕೆ ವ್ಯಕ್ತವಾಗುತ್ತದೆ. ಹಿಂದೂ ದೇಶ ಎನ್ನುವ ಸಂವಿಧಾನ ವಿರೋಧಿ ಮಾತುಗಳು ಒತ್ತರಿಸಿಕೊಂಡು ಬರುತ್ತವೆ. ಸರ್ವರನ್ನೂ ಸಮಾನತೆಯಿಂದ ಕಾಣುವ ಸಂವಿಧಾನದ ಕುರಿತು ಇರುವ ಅಸಹನೆ ಮತ್ತು ಅಸಮಾಧಾನ ಆಗಾಗ ಹೊರಬರುತ್ತಲೇ ಇರುತ್ತದೆ.
“ಎಲ್ಲಾ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಇದ್ದೇನೆ” ಎಂಬುದು ಪೇಜಾವರ ಮಠದ ತೀರ್ಥರ ಪ್ರಾಮಾಣಿಕ ಅನಿಸಿಕೆಯೇ ಆಗಿದ್ದರೆ ನಾಳೆಯೇ ಉಡುಪಿ ಮಠದಲ್ಲಿ ಪಂಕ್ತಿಭೇದ ನಿಲ್ಲಿಸಲಿ. ತಮ್ಮದು ಬ್ರಾಹ್ಮಣ್ಯ ಧರ್ಮವೋ ಇಲ್ಲಾ ಹಿಂದೂ ಧರ್ಮವೋ ಎಂಬುದನ್ನು ಸ್ಪಷ್ಟೀಕರಿಸಲಿ. ಹಿಂದೂ ಧರ್ಮವೇ ಆಗಿದ್ದರೆ ದಲಿತರ ಕೇರಿಗೆ ಹೋಗುವ ನಾಟಕ ಬಿಟ್ಟು ದಲಿತರಿಗೆ ಮಠದೊಳಗೆ ಮುಕ್ತ ಪ್ರವೇಶ ಒದಗಿಸಿ ಜೊತೆಗೆ ಕುಳಿತು ಪ್ರಸಾದ ಸ್ವೀಕರಿಸಲಿ. ಜಾತಿ ಪದ್ಧತಿಯನ್ನು ಅಲ್ಲಗಳೆದು ಎಲ್ಲಾ ಜಾತಿಯವರೂ ಸಮಾನರು ಎಂದು ಸಾರಲಿ. ಮತಾಂತರವನ್ನು ವಿರೋಧಿಸುವ ಪೇಜಾವರ ಮಠವು ಇಚ್ಛಿಸಿದ ಶೂದ್ರ ದಲಿತ ಆದಿವಾಸಿಗಳಿಗೆಲ್ಲಾ ಜನಿವಾರ ಹಾಕಿಸಿ ಬ್ರಾಹ್ಮಣ ದೀಕ್ಷೆ ಕೊಟ್ಟು ಬ್ರಾಹ್ಮಣರನ್ನಾಗಿ ಮತಾಂತರ ಮಾಡಲಿ. ಇಲ್ಲವೇ ಬ್ರಾಹ್ಮಣ ಧರ್ಮದಿಂದ ಈ ಉಡುಪಿಯ ಅಷ್ಟ ಮಠಗಳ ಸ್ವಾಮಿಗಳು ಹಾಗೂ ವೈದಿಕ ಪಡೆ ಜನಿವಾರ ಕಳಚಿಟ್ಟು ಹಿಂದೂ ಧರ್ಮಕ್ಕೆ ಮತಾಂತರ ಹೊಂದಲಿ. ಇದೆಲ್ಲಾ ಆಗದೇ ಹೋದರೆ ಹಿಂದೂಗಳ ಹೆಸರಲ್ಲಿ ವೈದಿಕಶಾಹಿತ್ವವನ್ನು ಹೇರಲು ಪ್ರಯತ್ನಿಸದೆ ಪೂಜೆ ಮಾಡಿಕೊಂಡಿರಲಿ. ಹಿಂದೂಗಳ ಭಾವನೆಗಳನ್ನು ಕೆರಳಿಸಿ ಬ್ರಾಹ್ಮಣ್ಯದ ಕೃಪಾಕಟಾಕ್ಷದ ಸರಕಾರವನ್ನು ಅಧಿಕಾರಕ್ಕೆ ತಂದು ಹಿಂದುತ್ವವನ್ನು ಹಿಂದೂಗಳ ಮೇಲೆ ಹೇರುವ ಹುನ್ನಾರವನ್ನು ಈ ಸ್ವಾಮಿಗಳು ಬಿಟ್ಟು ಆಧ್ಯಾತ್ಮದ ಹಾದಿಯಲ್ಲಿ ಪರಮಾತ್ಮನನ್ನು ಹುಡುಕುತ್ತಿರಲಿ.
ಇಲ್ಲದೇ ಹೋದರೆ ” ಮಧ್ಯ ಏಷ್ಯಾದಿಂದ ದನಕಾಯುತ್ತಾ ಬಂದವರು ಸಂವಿಧಾನವನ್ನು ಒಪ್ಪದೇ ಇದ್ದರೆ ದೇಶ ತೊರೆಯಿರಿ” ಎಂದು ವಿಜಯಪುರದ ಮನಗೂಳಿ ವಿರಕ್ತಮಠದ ವೀರತೀಶಾನಂದ ಸ್ವಾಮಿಗಳು ಹೇಳಿದಂತೆ ಅಬ್ರಾಹ್ಮಣರೆಲ್ಲಾ ಹೇಳಬೇಕಾಗುತ್ತದೆ. ಸನಾತನ ಮನುಸ್ಮೃತಿ ಯನ್ನು ಆರಾಧಿಸಿ ಅನುಷ್ಠಾನಕ್ಕೆ ತರಬೇಕು ಎನ್ನುವ ಮನಸ್ಥಿತಿಯವರ ಮೇಲೆ ಸಂವಿಧಾನ ವಿರೋಧಿ ದೇಶದ್ರೋಹಿ ಆರೋಪ ಹೊರಿಸಿ ವಿಚಾರಣೆ ಮಾಡುವ ಸಮಯ ಇಂದಿಲ್ಲಾ ನಾಳೆ ಬಂದೇ ಬರುತ್ತದೆ. ಸಮಾನತೆ ಸಾರುವ ಅಂಬೇಡ್ಕರ್ ರವರ ಸಂವಿಧಾನ ಈ ದೇಶವನ್ನು ಸನಾತನಿಗಳಿಂದ ಕಾಪಾಡುತ್ತದೆ. ಬಹುಸಂಖ್ಯಾತ ಜನರು ಆ ಸಂವಿಧಾನವನ್ನು ಕಾಪಾಡುತ್ತಾರೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಸಂತರ ಸಮಾವೇಶದ ಹಿಂದೆ ಸಂವಿಧಾನ ವಿರೋಧಿ ಉದ್ದೇಶ