ಅಗಾಧ ಪಾಂಡಿತ್ಯ-ವಿದ್ವತ್ತನ್ನು ಎದೆಯಲ್ಲಿರಿಸಿಕೊಂಡಿದ್ದ ಮಿತಭಾಷಿ ಮುಝಫರ್ ಅಸ್ಸಾದಿ ನಿರ್ಗಮಿಸಿದ್ದಾರೆ. ಅಸ್ಸಾದಿ ಬೌದ್ಧಿಕವಾಗಿ ನಮ್ಮೊಳಗೆ, ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ. ಅವರ ಚಿಂತನಾ ಕ್ರಮ, ಆಲೋಚನಾ ವಿಧಾನ ಮತ್ತು ಬೌದ್ಧಿಕ ಸರಕುಗಳು ನನ್ನಂತಹ ಸಾವಿರಾರು ಆಪ್ತರ ಅರಿವಿನ ಗ್ರಂಥಾಲಯದಲ್ಲಿ ಉಪಯುಕ್ತವಾಗಿ ಮುಂದುವರೆಯುತ್ತವೆ – ನಾ ದಿವಾಕರ, ಅಸ್ಸಾದಿಯವರ ಆಪ್ತರು.
ಪ್ರತಿಯೊಬ್ಬ ಆಪ್ತನ ಸಾವಿನ ಸಮಯದಲ್ಲೂ ಕಾಡುವ ಪ್ರಶ್ನೆ , ಏಕೆ ಈ ಹಠಾತ್ ನಿರ್ಗಮನ ? ಬಹುಶಃ ಬದುಕು ಕೊನೆಗಾಣುವವರೆಗೂ ಈ ಪ್ರಶ್ನೆ ಪದೇಪದೇ ಎದುರಾಗುತ್ತಲೇ ಇರುತ್ತದೆ, ಉತ್ತರ ದೊರೆಯದೆ. ಆದರೂ ಕೆಲವೊಮ್ಮೆ ಇನ್ನೆಷ್ಟು ಗೆಳೆಯರನ್ನು ಕಳೆದುಕೊಳ್ಳುವುದು ಅನ್ನಿಸುವುದುಂಟು. ಅಗಲಿ ಹೋದವರ ಸಾಲಿಗೆ ಬೇಗನೆ ಸೇರುವ ತವಕವಾದರೂ ಏಕೆ ಎಂಬ ಪ್ರಶ್ನೆ ಭಾವುಕ ಎನಿಸಿದರೂ ಸಹಜವಾಗಿ ಮೂಡುವಂತಹುದು. ಆತ್ಮೀಯ ವಲಯದಲ್ಲಿರುವ ಒಬ್ಬರ ಹಿಂದೊಬ್ಬರು ಪರಸ್ಪರ ಮಾತನಾಡಿಕೊಂಡಂತೆ ಮರೆಯಾಗುತ್ತಲೇ ಇರುವಾಗ ಈ ಪ್ರಶ್ನೆ ಮತ್ತಷ್ಟು ಕಾಡುತ್ತದೆ. ಇಂತಹುದೇ ಒಂದು ಪ್ರಶ್ನೆಯನ್ನು ಆತ್ಮೀಯ ಗೆಳೆಯ, ಆಪ್ತ ಸಂಗಾತಿ ಮುಝಫರ್ ಅಸ್ಸಾದಿ ಬಿಟ್ಟು ಹೋಗಿದ್ದಾರೆ. ತನ್ನ 63ನೇ ವಯಸ್ಸಿನಲ್ಲೇ ನಿರ್ಗಮಿಸಿರುವ ಈ ಗೆಳೆಯನನ್ನು ಇನ್ನು ಹೇಗೆ ಪ್ರಶ್ನಿಸಲು ಸಾಧ್ಯ ? ಕಳೆದ ಏಪ್ರಿಲ್ ತಿಂಗಳ ಒಂದು ದಿನ ಮತ್ತೋರ್ವ ಸಂಗಾತಿ ಲಕ್ಷ್ಮೀನಾರಾಯಣ್ ನಿರ್ಗಮಿಸಿದಾಗ ವೈಯುಕ್ತಿಕ ಬದುಕಿನಲ್ಲಿ, ಸಾರ್ವಜನಿಕ ಜೀವನದಲ್ಲಿ ಒಂದು ದೊಡ್ಡ ಶೂನ್ಯ ಸೃಷ್ಟಿಯಾದಂತೆ ಭಾಸವಾಗಿತ್ತು. ಈ ಶೂನ್ಯದ ಬಯಲು ಕಿರಿದಾಗುವ ಬದಲು ಹಿಗ್ಗುತ್ತಲೇ ಇರುವುದು ನಮ್ಮ ದುರದೃಷ್ಟವಲ್ಲವೇ ? ಅವರನ್ನೇ ಹಿಂಬಾಲಿಸಿದ ಹಲವು ಆಪ್ತರ ಸಾಲಿಗೆ ಈಗ ಸಂಗಾತಿ ಅಸ್ಸಾದಿ ಸೇರಿಕೊಂಡಿದ್ದಾರೆ.
ಅರಿವಿನ ಕಣಜ ಎನ್ನಬಹುದೇ?
ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅಸ್ಸಾದಿ ಮಾನಸ ಗಂಗೋತ್ರಿಯ ಕ್ಯಾಂಪಸ್ನಿಂದಾಚೆಗೆ ಕಂಡಿದ್ದು ಒಬ್ಬ ಸಹೃದಯಿ ಸಮಾಜಮುಖಿಯಾಗಿ. ಅಧ್ಯಯನ, ಸಂಶೋಧನೆ, ಬೋಧನೆ ಈ ಚೌಕಟ್ಟುಗಳಿಂದಾಚೆ, ಹೊರಗಿನ ಸಮಾಜವನ್ನೇ ಅರಿವಿನ ಅವಶ್ಯಕತೆ ಇರುವ ಒಂದು ಪಾಠಶಾಲೆಯಂತೆ ಕಾಣುವ ಮನುಜ ಸೂಕ್ಷ್ಮತೆಯನ್ನು ಬದುಕಿನುದ್ದಕ್ಕೂ ಅಳವಡಿಕೊಂಡ ಒಬ್ಬ ವಿದ್ವತ್ಪೂರ್ಣ ಚಿಂತಕರಾಗಿ ಅಸ್ಸಾದಿ ನನಗೆ ಕಂಡಿದ್ದಾರೆ. ಗಂಗೋತ್ರಿಯ ನಾಲ್ಕು ಗೋಡೆಗಳ ನಡುವೆ ಅಥವಾ ವಿಶಾಲ ಅಂಗಳದಲ್ಲಿ ಈ ಸಂಗಾತಿ ಸೃಷ್ಟಿಸಿರುವ ಒಂದು ಬೌದ್ಧಿಕ ಜಗತ್ತು ಅವರ ಬಹುಮುಖೀ ಚಿಂತನೆ ಮತ್ತು ಬಹು ಆಯಾಮದ ಅಧ್ಯಯನ ಶಿಸ್ತಿಗೆ ಕನ್ನಡಿಯಾಗಿದೆ.. ನಾ ಕಂಡಂತೆ ಮುಝಫರ್ ಅಸ್ಸಾದಿ ಸೂಕ್ಷ್ಮ ಒಳನೋಟ ಹೊಂದಿದ್ದ ವಿದ್ವಾಂಸರು. ಹಾಗಾಗಿಯೇ ನನಗೆ ಅಸ್ಸಾದಿ ಸಾಮಾಜಿಕ ಕಳಕಳಿ, ಕಾಳಜಿ ಮತ್ತು ಸೂಕ್ಷ್ಮ ಸಂವೇದನೆಯುಳ್ಳ ಒಬ್ಬ ವ್ಯಕ್ತಿಯಾಗಿ ಕಂಡಿದ್ದರು.
ಬೌದ್ಧಿಕವಾಗಿ ಅಸ್ಸಾದಿ ಅವರ ಪರಿಶ್ರಮ ಮತ್ತು ಅಧ್ಯಯನದ ವಿಸ್ತಾರ ಅಪಾರ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಲಾ ನಿಕಾಯದ ಡೀನ್ ಆಗಿ, ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಅಸ್ಸಾದಿ ಪ್ರತಿಷ್ಠಿತ ಜೆಎನ್ಯು ಸಂಸ್ಥೆಯಲ್ಲಿ ಎಂಫಿಲ್ ಮತ್ತು ಪಿಎಚ್ಡಿ ಪಡೆದಿದ್ದೇ ಅಲ್ಲದೆ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಪದವಿ ಪಡೆದಿದ್ದರು. ತಮ್ಮ ಅಕಾಡೆಮಿಕ್ ವೃತ್ತಿಯಿಂದಾಚೆಗೂ ಅಧ್ಯಯನ ಶಿಸ್ತನ್ನು ರೂಢಿಸಿಕೊಂಡಿದ್ದ ಅಸ್ಸಾದಿ ಕೃಷಿ ಅಧ್ಯಯನ, ಜಾಗತೀಕರಣ ಮತ್ತು ನವ ಉದಾರವಾದಿ ಆರ್ಥಿಕತೆ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ ಹೀಗೆ ಹಲವು ಶಿಸ್ತುಗಳಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ್ದರು. ಅವರ ಈ ಬಹುಮುಖಿ ಚಿಂತನಾಧಾರೆಯೇ ಅವರನ್ನು ಆದಿವಾಸಿಗಳ ಬಗ್ಗೆ ಸಂಶೋಧನೆಗೂ ಸೆಳೆದೊಯ್ದಿತ್ತು.
ಕರ್ನಾಟಕದ ಅಭಿವೃದ್ಧಿ ಮಾದರಿ ಎಂಬ ವಿಷಯದಲ್ಲಿ ಅಸ್ಸಾದಿ ಕೈಗೊಂಡ ಸಂಶೋಧನೆ ಮತ್ತು ಆಳವಾದ ಅಧ್ಯಯನದ ಹಿನ್ನೆಲೆಯಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸ್ಥಿತಿಗತಿಗಳ ಅಧ್ಯಯನದ ಮಹತ್ತರ ದಾಖಲೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯ ನ್ಯಾಯಾಲಯ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಬದ್ಧತೆಯಿಂದ ಪೂರೈಸಿರುವುದೇ ಅಲ್ಲದೆ ಬುಡಕಟ್ಟು ಸಮುದಾಯಗಳನ್ನು ಒಳಗೊಳ್ಳುವ ಅಭಿವೃದ್ಧಿ ಮಾದರಿಗೆ ಅಗತ್ಯವಾದ ನಿರ್ದೇಶನ ಸೂತ್ರಗಳನ್ನೂ ಅಸ್ಸಾದಿ ತಮ್ಮ ಸಂಶೋಧನೆಯ ಮೂಲಕ ಒದಗಿಸಿದ್ದಾರೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳನ್ನು ಕುರಿತ ಅವರ ಸಂಶೋಧನೆ ರಾಜ್ಯದ ಕೃಷಿ ಬಿಕ್ಕಟ್ಟು ಮತ್ತು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಮಹತ್ತರ ಗ್ರಂಥವಾಗಿದೆ. ಭಾರತೀಯ ಸಮಾಜವನ್ನು ಗಾಢವಾಗಿ ಕಾಡುತ್ತಿರುವ ಜಾತಿ ವ್ಯವಸ್ಥೆ, ಮುಸ್ಲಿಮರೊಳಗಿನ ಜಾತಿ ಪದ್ಧತಿಗಳು, ಪಿತೃಪ್ರಧಾನತೆ ಮತ್ತು ಕೋಮುವಾದದ ವಿರುದ್ಧ ಅಸ್ಸಾದಿ ಅವರ ಲೇಖನಗಳು ಸಾರ್ವಕಾಲಿಕ ಪ್ರಸ್ತುತತೆ ಪಡೆದುಕೊಳ್ಳುತ್ತವೆ.
ಸ್ನೇಹ ಬಾಂಧವ್ಯದ ನೆಲೆಯಲ್ಲಿ
ವೈಯುಕ್ತಿಕವಾಗಿ ನನಗೆ ಅಸ್ಸಾದಿ ಒಬ್ಬ ಗಂಭೀರ, ಮಿತಭಾಷಿ ಚಿಂತಕರಾಗಿ ಕಾಣುತ್ತಿದ್ದರು. ಮೈಸೂರಿಗೆ ಬಂದ ಮೇಲೆ ಸಂಗಾತಿ ಡಾ. ಲಕ್ಷ್ಮೀನಾರಾಯಣ್ ಅವರ ಒಡನಾಟದಲ್ಲಿದ್ದಾಗ ಪರಿಚಯವಾದ ಅಸ್ಸಾದಿ ಮೂಲತಃ ಪಿಯುಸಿಎಲ್ ಚಟುವಟಿಕೆಗಳ ಮೂಲಕವೇ ಆಪ್ತರಾದವರು. Anything under the sky ಎಂಬ ಆಂಗ್ಲ ನಾಣ್ಣುಡಿ ಇದೆ. ಅದರಂತೆ ಯಾವುದೇ ಪ್ರಚಲಿತ ಸಮಸ್ಯೆ, ವಿಷಯವನ್ನು ಕುರಿತು ಚರ್ಚೆ ಮಾಡಬೇಕಾದರೂ ಅಸ್ಸಾದಿ ತೆರೆದ ಮನಸ್ಸಿನಿಂದ ಮಾತನಾಡುತ್ತಿದ್ದರು. ಅವರೊಡನೆ ಅವರ ಮನೆಯಲ್ಲೇ ಕುಳಿತು ಹರಟಿದ ಸಂದರ್ಭಗಳು ಹಲವು. ದೇಶವನ್ನು ಕಾಡುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಅಪಾರ ಕಾಳಜಿ ಮತ್ತು ಆತಂಕ ಹೊಂದಿದ್ದ ಅಸ್ಸಾದಿ ತಮ್ಮ ಬರವಣಿಗೆಯ ಮೂಲಕ ಅದನ್ನು ಹೊರಹಾಕುತ್ತಿದ್ದರು. ವ್ಯಕ್ತಿಗತ ಸಂವಾದದಲ್ಲಿ ಇಂತಹ ಹಲವು ವಿಚಾರಗಳನ್ನು ಅವರೊಡನೆ ಹಂಚಿಕೊಂಡಿದ್ದಿದೆ.
ಅವರ ಓದಿಗೆ ಸಿಕ್ಕಿದ ನನ್ನ ಬರಹಗಳನ್ನು ಓದಿ ಸುಮ್ಮನಾಗದೆ ಅದರ ಬಗ್ಗೆ ನನ್ನೊಡನೆ ಅಭಿಪ್ರಾಯ ಹಂಚಿಕೊಂಡ ಸಂದರ್ಭಗಳು ಅನೇಕ. ಮೂರು ವರ್ಷಗಳ ಹಿಂದೆ ನನ್ನ ಅಂಕಣ ಬರಹಗಳ ಸಂಕಲನ “ ಸಂವೇದನೆ ” ಹೊರತಂದಾಗ ಅದರ ಮುನ್ನುಡಿಯಲ್ಲಿ ಅಸ್ಸಾದಿ ಹೀಗೆ ಹೇಳಿದ್ದರು “ ನಾ ದಿವಾಕರ್ ಒಬ್ಬ ಗಂಭೀರ ಬರಹಗಾರ, ಚಿಂತಕ, ವಿಶ್ಲೇಷಕ, ಸಂಶೋಧಕ,,,,,, ಅವರ ಚಿಂತನೆಗಳು ಎಡಪಂಥೀಯ ಆದರೂ ಉದಾರವಾದಿ ನೆಲೆಯ ಆಲೋಚನೆಗಳೂ ಇವೆ,,,,, ಇದೊಂದು ಜ್ಞಾನದ ಹೈಬ್ರಿಡಿಟಿ ( ಸಂಕುರ) ,,,,,”. ಈ ಆತ್ಮೀಯ ನುಡಿಗಳು ನನ್ನ ಮುಂದಿನ ಬರವಣಿಗೆಗಳಿಗೆ ಸ್ಫೂರ್ತಿ ನೀಡುವಂತಿದ್ದವು. ಗಾಂಧಿಯ ಹಿಂದ್ ಸ್ವರಾಜ್ ಕೃತಿಯನ್ನು ಕುರಿತ ವಿಮರ್ಶಾತ್ಮಕ ಸಂಕಲನವೊಂದನ್ನು ಅಸ್ಸಾದಿ ಅವರ ಸಂಪಾದಕತ್ವದಲ್ಲೇ ಹೊರತಂದಿದ್ದರು. ಆ ಕೃತಿಗೆ ಹಿಂದ್ ಸ್ವರಾಜ್ ಕುರಿತ ವಿಮರ್ಶೆ-ವಿಶ್ಲೇಷಣೆಯನ್ನು ಬರೆಯುವ ಅವಕಾಶವನ್ನು ನನಗೂ ಕಲ್ಪಿಸಿದ್ದರು. ಸಮಕಾಲೀನ ಭಾರತಕ್ಕೆ ಹಿಂದ್ ಸ್ವರಾಜ್ ಪ್ರಸ್ತುತವಾಗಲಾರದು ಎಂಬ ನನ್ನ ನಿಲುವನ್ನು ಅದರಲ್ಲಿ ಬಿಂಬಿಸಿದ್ದೆ. “ ದಿವಾಕರ್, ಎಲ್ಲ ಲೇಖಕರ ಪೈಕಿ ನೀವೊಬ್ಬರೇ ನೇರವಾಗಿ ಹಾಗೆ ಹೇಳಿರುವುದು,,,,,” ಎಂದು ಹೇಳುವ ಮೂಲಕ ಭಿನ್ನಮತವನ್ನು ಸಹಿಸಿಕೊಳ್ಳುವ ಅವರ ಸಜ್ಜನಿಕೆಯನ್ನು ಅಸ್ಸಾದಿ ಪರಿಚಯಿಸಿದ್ದರು.
ಇಂತಹ ಒಬ್ಬ ಸಂಗಾತಿ ಏಕಾಏಕಿ ಸದ್ದಿಲ್ಲದೆ ಮರೆಯಾಗಿ ಹೋದಾಗ ಏನೆಂದು ಹೇಳಲು ಸಾಧ್ಯ ? ಹೋಗಿ ಬನ್ನಿ ಎನ್ನುವುದಕ್ಕೆ ಅವರು ಮರಳಿ ಬರುವುದಿಲ್ಲ. ಹೋಗಿ ಎನ್ನಲು ಮನಸ್ಸು ಬಾರದು. ನಮ್ಮೊಡನೆ ಇರಿ ಎನ್ನುವುದು ಅಭಾಸ ಎನಿಸುತ್ತದೆ. ಏಕೆಂದರೆ ಅವರ ಅಂತಿಮ ಪಯಣಕ್ಕೆ ಸಾಕ್ಷಿಯಾಗಿದ್ದೇನೆ. ಆದರೆ ಒಂದು ಮಾತಂತೂ ಸತ್ಯ, ಮುಝಫರ್ ಅಸ್ಸಾದಿ ಬೌದ್ಧಿಕವಾಗಿ ನಮ್ಮೊಳಗೆ, ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ. ಅವರ ಚಿಂತನಾ ಕ್ರಮ, ಆಲೋಚನಾ ವಿಧಾನ ಮತ್ತು ಬೌದ್ಧಿಕ ಸರಕುಗಳು ನನ್ನಂತಹ ಸಾವಿರಾರು ಆಪ್ತರ ಅರಿವಿನ ಗ್ರಂಥಾಲಯದಲ್ಲಿ ಉಪಯುಕ್ತವಾಗಿ ಮುಂದುವರೆಯುತ್ತವೆ. ರಹಮತ್ ತರೀಕೆರೆ ಅವರು ಹೇಳಿದಂತೆ ಅಸ್ಸಾದಿ “ ವಿದ್ವತ್ತಿನ ಬಹುತ್ವದ ಪ್ರತೀಕ ”.
ಅಂತಿಮವಾಗಿ,,,,, ಇಷ್ಟೇಕೆ ಅವಸರ ಮಾಡಿದಿರಿ ಅಸ್ಸಾದಿ ? ಎಂಬ ಪ್ರಶ್ನೆ. ಉತ್ತರ ಎಲ್ಲಿಂದ ನಿರೀಕ್ಷಿಸಲು ಸಾಧ್ಯ. ನಿಟ್ಟುಸಿರು ಬಿಡುತ್ತಾ ನೀವೂ ಹೊರಟುಬಿಟ್ಟಿರಾ,,,,,, ಎಂಬ ಉದ್ಗಾರ ಹೊರಟಾಗ ಕಣ್ಣಂಚಿನಲ್ಲಿ ಸಣ್ಣ ಹನಿ ತೊಟ್ಟಿಕ್ಕುತ್ತದೆ. ಅದೇ ಸಂಗಾತಿ ಮುಝಫರ್ ಅಸ್ಸಾದಿಗೆ ಸಲ್ಲಿಸಬಹುದಾದ ಬಾಷ್ಪಾಂಜಲಿ.
ಲಾಲ್ ಸಲಾಂ ಅಸ್ಸಾದಿ. ನಿಮ್ಮ ನೆನಪು ಚಿರಸ್ಮರಣೀಯ.
ನಾ ದಿವಾಕರ
ಅಸ್ಸಾದಿಯವರ ಆಪ್ತರು
ಈ ಸುದ್ದಿಯನ್ನೂ ಓದಿ- ರಾಜಕೀಯ ತಜ್ಞ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ ನಿಧನ; ಸಿಎಂ ಸಿದ್ದರಾಮಯ್ಯ ಸಂತಾಪ