Tuesday, December 10, 2024

ಭಾರತದಲ್ಲಿನ ಅದಾನಿಯ ಭ್ರಷ್ಟಾಚಾರಕ್ಕೆ ಅಮೆರಿಕದ ಉರುಳು

Most read

ಅದಾನಿ ಗ್ರೀನ್ ಎನರ್ಜಿಯ ಪಾರ್ಟ್‌ನರ್‌ ಆಗಿರುವ ಅಜ್ಯುರ್ ಪವರ್ ಕಂಪನಿಯವರು ಭಾರತದಲ್ಲಿ ರಾಜ್ಯ ಸರಕಾರಗಳಿಗೆ ವಿದ್ಯುತ್ ಮಾರಲು ಯಾರಿಗೂ ಲಂಚ ಕೊಡಬಾರದು ಎಂದು ಹೇಳಿತ್ತು. ಆದರೆ ಅದಾನಿ ಕಂಪನಿಯ ಸಾಗರ್ ಅದಾನಿ ಎಂಬವರು ಭಾರತದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಡಲಾಯಿತು ಎಂಬ ವಿವರವನ್ನು ಇಮೇಲ್ ಮುಖಾಂತರ ಅಜ್ಯುರ್ ಪವರ್ ಕಂಪನಿಯವರಿಗೆ ಕಳುಹಿಸಿ ಕೊಟ್ಟಿದ್ದು ಇದೇ ಇಮೇಲ್ ಅಮೆರಿಕದ ನ್ಯಾಯಾಂಗ ಇಲಾಖೆಯವರ ಕೈಗೆ ಪಕ್ಕಾ ಪುರಾವೆ ಒದಗಿಸಿತು – ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಭಾರತದಲ್ಲಿ ಶೇರು ಮಾರ್ಕೆಟ್ ವಂಚನೆ ಇತ್ತೀಚಿನದಲ್ಲ, ಸ್ವತಂತ್ರ ಭಾರತದಲ್ಲಿಯ ಮೊತ್ತಮೊದಲ ಬೃಹತ್ ಶೇರ್ ಮಾರ್ಕೆಟ್ ವಂಚನೆ ಅಂದರೆ 1957 ರಲ್ಲಿ ನಡೆದ “ಎಲ್‌ಐ‌ಸಿ-ಮುಂಧ್ರಾ ಸ್ಕ್ಯಾಂಡಲ್”.  ಕಲ್ಕತ್ತಾದಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ಹರಿದಾಸ್ ಮುಂಧ್ರಾ ಎಂಬವನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ನೆಪದಲ್ಲಿ 1957 ರಲ್ಲಿ ಎಲ್‌ಐ‌ಸಿ ಗೆ ಮಾಡಿದ ಒಂದು ಕೋಟಿ ಇಪ್ಪತ್ತಾರು ಲಕ್ಷ ರೂಪಾಯಿಯ ಮೋಸವು ಸ್ವತಂತ್ರ ಭಾರತದ ಮೊದಲ ಬೃಹತ್ ಶೇರ್ ಮಾರ್ಕೆಟ್ ವಂಚನೆ. ಆಗಿನ ಎಲ್‌ಐ‌ಸಿ ಚೇರ್ಮನ್ ಆಗಿದ್ದವರು ಕೆ.ಆರ್.ಕಾಮತ್ ಎಂಬ ಕನ್ನಡಿಗ. ಅವರಿಗೆ ಆಗ ಇದ್ದ ಸಂಬಳ ತಿಂಗಳಿಗೆ ರೂ.1500/- ಮಾತ್ರವಂತೆ! (ಎಲ್‌ಐ‌ಸಿ ರಾಷ್ಟ್ರೀಕರಣವಾಗಿದ್ದು 1956 ರಲ್ಲಿ).  ಆದರೆ ಅದರ ಜವಾಬ್ದಾರಿ ವಹಿಸಿಕೊಂಡು ಆಗಿನ ವಿತ್ತ ಸಚಿವ ಟಿ‌ಟಿ ಕೃಷ್ಣಮಾಚಾರಿ ರಾಜೀನಾಮೆ ಕೊಟ್ಟರು! ಈ ವಂಚನೆಯನ್ನು ಲೋಕಸಭೆಯಲ್ಲಿ ಮೊತ್ತಮೊದಲ ಬಾರಿಗೆ ಬಹಿರಂಗ ಪಡಿಸಿದವರು ಆಗಿನ ಆಳುವ ಪಕ್ಷವಾಗಿದ್ದ ಕಾಂಗ್ರೆಸ್ಸಿನ ಸಂಸದ ಫಿರೋಜ್ ಗಾಂಧಿ. ಆಗಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂರವರ ಅಳಿಯನೇ ಈ ಫಿರೋಜ್ ಗಾಂಧಿ. 

ತದನಂತರ ಜಯಂತಿ ಧರ್ಮತೇಜ ಎಂಬವನು 1960 ರಲ್ಲಿ ನೆಹರೂ ಕ್ಯಾಬಿನೆಟ್ಟಿನ ಮಂತ್ರಿಗಳ ಸ್ನೇಹ ಗಳಿಸಿಕೊಂಡು, ಭಾರತದ ಶಿಪ್ಪಿಂಗ್ ಮತ್ತು ಜಲಸಾರಿಗೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆ ಮಾಡಿ ತೋರಿಸುವ ವಾಗ್ದಾನ ಮಾಡಿ ಸರಕಾರದಿಂದ ರೂ.22 ಕೋಟಿ ಬಂಡವಾಳ ಪಡೆದು ಅದನ್ನು ನುಂಗಿ ವಿದೇಶಕ್ಕೆ ಓಡಿ ಹೋಗಿದ್ದನು. (ಅಗಿನ 22 ಕೋಟಿ ಅಂದರೆ ಈಗಿನ 20,000 ಕೋಟಿ).

ಕೇತನ್ ಪಾರೆಖ್

ಅದರ ನಂತರದ ಕಾಲದಲ್ಲಿ ಕಾಂಗ್ರೆಸ್ ಆಡಳಿತ ಇರಲಿ ಅಥವಾ ಜನತಾಪಾರ್ಟಿ-ಬಿ‌ಜೆ‌ಪಿ ಆಡಳಿತ ಇರಲಿ, ಶೇರು ಮಾರುಕಟ್ಟೆ ಮತ್ತು ಬ್ಯಾಂಕ್ ಗಳಲ್ಲಿ ಬಿಲಿಯನ್ ಗಟ್ಟಲೆ ವಂಚನೆ ಮಾಡಿದವರಲ್ಲಿ ಹರ್ಷದ್ ಮೆಹತಾ ಒಬ್ಬನಿಗೆ ಮಾತ್ರ ಶಿಕ್ಷೆ ಆಯಿತು. ಉಳಿದವರೆಲ್ಲಾ ವಿದೇಶಕ್ಕೆ ಪಲಾಯನಗೈದು ಅಲ್ಲಿ ಆರಾಮವಾಗಿದ್ದಾರೆ. ಕೇತನ್ ಪಾರೆಖ್ ಎಂಬ ಗುಜರಾತಿ-ಜೈನ  ಚಾರ್ಟರ್ಡ್ ಅಕೌಂಟೆಂಟ್ ಈ ವಂಚಕರಲ್ಲಿ ಪ್ರಮುಖ. ಯಾಕೆಂದರೆ ಆನಂತರದ ಕಾಲದಲ್ಲಿ ವಿದೇಶದಲ್ಲಿದ್ದುಕೊಂಡೇ ಬ್ಯಾಂಕ್ ಫ್ರಾಡ್ ಮತ್ತು ಶೇರ್ ಮಾರ್ಕೆಟ್ ವಂಚನೆ ಮಾಡಲು ಗುಜರಾತಿಗಳಿಗೆ ಸೂಕ್ಷ್ಮವಾಗಿ ಮಾರ್ಗದರ್ಶನ ಮಾಡಿದವನು ಈ ಕೇತನ್ ಪಾರೆಖ್ ಎಂಬ ಆರೋಪವಿದೆ. ಈ ವಂಚನೆಗಳಿಗೆಲ್ಲಾ ಮೂಲ ಕಾರಣ ಈ ವಂಚಕರಿಗೆ ಇರುವ ಭ್ರಷ್ಟ ರಾಜಕಾರಣಿಗಳ ಶ್ರೀರಕ್ಷೆ ಹಾಗೂ ವಿದೇಶಕ್ಕೆ ಓಡಿ ಹೋಗಲು ಅಧಿಕಾರಸ್ಥರೇ ಮಾಡಿಕೊಟ್ಟ ಅವಕಾಶ!

ಈಗ ಗೌತಮ್ ಅದಾನಿ ಮತ್ತು ಅವರ ತಮ್ಮನ ಮಗ ಸಾಗರ್ ಅದಾನಿಯ ಬಂಧನಕ್ಕೆ ಅಮೆರಿಕದ ನ್ಯಾಯಾಂಗ ಇಲಾಖೆ ವಾರಂಟ್ ಹೊರಡಿಸಿರುವ ಸುದ್ದಿ ಭಾರತದ ಶೇರ್ ಮಾರ್ಕೆಟಿಗೆ ಅಪ್ಪಳಿಸಿದಾಗ ಅದಾನಿಯ ಗುಂಪಿನ ಏಳು ಕಂಪನಿಗಳ ಶೇರು ಬೆಲೆ ಶೇ.10 ರಿಂದ 20 % ಉರುಳಿ ಒಟ್ಟು ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಭಾರತೀಯ ಹೂಡಿಕೆದಾರರಿಗೆ ನಷ್ಟವಾಯಿತಂತೆ.  ಆದರೆ ಗೌತಮ್ ಅದಾನಿಯ ಕಂಪನಿಗೆ ನೇರವಾಗಿ ಭಾರತದ ಅತ್ಯುಚ್ಚ ಪದವಿಯಲ್ಲಿ ಇರುವ ರಾಜಕಾರಣಿಯಿಂದಲೇ ರಕ್ಷಣೆ-ಪೋಷಣೆ ಸಿಗುತ್ತಿದೆಯೆಂದು ಜನರಿಗೆ ಗೊತ್ತಾದಾಗ ಷೇರು ಮಾರುಕಟ್ಟೆ ಮತ್ತೆ ಚಿಗುರಿತು ಎನ್ನಲಾಗುತ್ತದೆ. ಅದಾನಿ ಒಡೆತನದ ಗುಜರಾತಿನ ಮುಂದ್ರಾ ಬಂದರಿನಲ್ಲಿ ಹಿಂದಿನ ಎರಡು ವರ್ಷದಲ್ಲಿ ರೂ.5,000 ಕೋಟಿಗಿಂತಲೂ ಹೆಚ್ಚು ಬೆಲೆಯ ಡ್ರಗ್ಸ್ ಸಿಕ್ಕಿ ಬಿದ್ದಿದ್ದರೂ ಈ ಕುರಿತು ಯಾರ ಮೇಲೂ ಯಾವುದೇ ಕಾನೂನು ಕ್ರಮ ಆಗಿಲ್ಲ. ಅಷ್ಟೇ ಅಲ್ಲ ಅಡಾಣಿಯ ಮೇಲೆ ಬಂದ ಆರೋಪಗಳು ನಮ್ಮ ದೇಶದ ಆರ್ಥಿಕತೆಯ ಮೇಲೆಯೇ ವೈರಿಗಳು ಮಾಡುತ್ತಿರುವ ದಾಳಿ ಎಂಬಂತೆ ಗುಲಾಮಿ ಮಾಧ್ಯಮದಲ್ಲಿ ಬಿಂಬಿಸಿ ಜನರ ಹಾದಿ ತಪ್ಪಿಸಲಾಗುತ್ತಿದೆ. 

ಇತ್ತೀಚಿನ 15 ವರ್ಷಗಳಲ್ಲಿ 28 ವ್ಯಕ್ತಿಗಳು ಭಾರತೀಯ ಬ್ಯಾಂಕುಗಳಿಗೆ 500 ಕೋಟಿ ರೂಪಾಯಿಗಿಂತ ಹೆಚ್ಚು ವಂಚನೆ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ವಿಶೇಷವೆಂದರೆ ಇವರಲ್ಲಿ ಕೇವಲ ವಿಜಯ ಮಲ್ಯ ಒಬ್ಬರೇ ದಕ್ಷಿಣ ಭಾರತೀಯರು ಹಾಗೂ ಲಲಿತ್ ಮೋದಿ ಒಬ್ಬರು ಮಾತ್ರ ರಾಜಸ್ತಾನಿ. ಉಳಿದ 26 ವಂಚಕರೂ ಗುಜರಾತಿನವರು. ಇವರಲ್ಲಿ ಕೇವಲ ಮೂರು ಜನರು ಪಾಟಿದಾರ್ ಪಟೇಲ್ ಸಮುದಾಯದವರಿದ್ದರೆ, ಉಳಿದ 23 ವಂಚಕರು ಜೈನರು ಅಥವಾ ಬನಿಯಾ(ವೈಶ್ಯಾ) ಸಮುದಾಯದವರು.  ಗೌತಮ್ ಅದಾನಿಯೂ ಗುಜರಾತಿ ಜೈನರು. ಗುಜರಾತಿನ ಜನಸಂಖ್ಯೆಯಲ್ಲಿ ಜೈನರು ಕೇವಲ 2% ಇದ್ದರೆ ವೈಶ್ಯರು 6% ಮಾತ್ರ ಇದ್ದಾರೆ. ಈ 8% ಸಮುದಾಯದವರು ಗುಜರಾತಿನ ವ್ಯಾಪಾರ-ಉದ್ಯಮದಲ್ಲಿ 60% ಮಾಲಕತ್ವ ಹೊಂದಿದ್ದಾರೆ. ಸೂರತ್ತಿನ ವಜ್ರೋದ್ಯಮದಲ್ಲಿಯಂತೂ ನೂರಕ್ಕೆ ನೂರು ಉದ್ಯಮಿಗಳು ಜೈನರು ಮತ್ತು ಬನಿಯಾಗಳು.

ಹಾಗೆ ನೋಡಿದರೆ ಗುಜರಾತಿನ ಬ್ರಾಹ್ಮಣರು ಬಹಳ ಪ್ರಾಮಾಣಿಕರು ಅನ್ನಬಹುದು. ಬ್ಯಾಂಕ್ ವಂಚನೆ ಮತ್ತು ಶೇರ್ ಮಾರ್ಕೆಟ್ ವಂಚನೆ ಮಾಡಿದವರಲ್ಲಿ ಒಬ್ಬನೂ ಬ್ರಾಹ್ಮಣ ಇಲ್ಲ. ಗುಜರಾತಿನಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಹಿಂದುಳಿದ ಜಾತಿಯಾದ, ಕೋಲಿ, ಸೋಲಂಕಿ ಮತ್ತು ದಲಿತ ಸಮುದಾಯದ ಒಬ್ಬನೇ ಒಬ್ಬ ವ್ಯಕ್ತಿಯೂ ಈ 28 ವಂಚಕರಲ್ಲಿ ಇಲ್ಲ. ಯಾವುದೇ ಮುಸ್ಲಿಂ ಅಥವಾ ಕ್ರೈಸ್ತನ ಹೆಸರೂ ಈ ವಂಚಕರ ಲಿಸ್ಟ್ ನಲ್ಲಿ ಇಲ್ಲ ಎಂಬುದನ್ನೂ ಗಮನಿಸಬೇಕು. ಗೂಗಲ್ ನಲ್ಲಿ ಈ 28 ವಂಚಕರ ಹೆಸರು ಲಭ್ಯವಿವೆ.  (ನಮ್ಮ ಕರ್ನಾಟಕದ ಜನರಿಗೆ ಗುಜರಾತಿ ಮತ್ತು ಮಾರ್ವಾಡಿಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಗುಜರಾತಿಗಳು ಗುಜರಾತ್ ರಾಜ್ಯದವರಾದರೆ ಮಾರ್ವಾಡಿಗಳು ದಕ್ಷಿಣ ರಾಜಸ್ತಾನದ “ಮಾರ್ವಾಡ್ ಮತ್ತು ಮೇವಾಡ್” ಪ್ರದೇಶದವರು. ಗುಜರಾತಿ ಮತ್ತು ಮಾರ್ವಾಡಿಗಳ ಭಾಷೆ ಮತ್ತು ಆಹಾರ ಪದ್ಧತಿಯಲ್ಲೂ ಬಹಳಷ್ಟು ವ್ಯತ್ಯಾಸವಿದೆ). ನಾನು 17 ವರ್ಷ ಮುಂಬೈಯಲ್ಲಿ ಹಾಗೂ ಮೂರು ವರ್ಷ ಗುಜರಾತಿನಲ್ಲಿ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಿದ್ದೇನೆ. ಮುಂಬೈಯಲ್ಲಿ ನಾನು ಉದ್ಯೋಗದಲ್ಲಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಛೇರಿ ಇದ್ದಿದ್ದು ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ನ ಪಕ್ಕದಲ್ಲಿಯೇ. ಹಾಗಾಗಿ ಈ ನಮ್ಮ ಮುಖ್ಯ ಶಾಖೆಯಲ್ಲಿಯೇ ಹೆಚ್ಚಿನ ಗುಜರಾತಿ ಶೇರ್ ಬ್ರೋಕರ್ ಗಳ ವಹಿವಾಟು ಖಾತೆ ಇದ್ದಿದ್ದು. ಹಾಗಾಗಿ ಅವರನ್ನು ನಾನು ಹತ್ತಿರದಿಂದ ಬಲ್ಲೆ. 

ಗೌತಮ್‌ ಅದಾನಿಮತ್ತು ಸೆಬಿಯ ಮುಖ್ಯಸ್ಥೆ

ಗುಜರಾತಿನಲ್ಲಿಯ ನಕಲಿ ಟೋಲ್ ಗೇಟ್, ನಕಲಿ ಕಾಲ್ ಸೆಂಟರ್, ನಕಲಿ ತೂಗುಸೇತುವೆ, ನಕಲಿ ಕೃಷಿ ಇಲಾಖೆ, ನಕಲಿ ಬ್ಯಾಂಕ್ ಶಾಖೆ, ನಕಲಿ ಇನ್ಸೂರೆನ್ಸ್ ಕಂಪನಿ, ನಕಲಿ ಆಸ್ಪತ್ರೆ, ನಕಲಿ ಡಾಕ್ಟರ್, ನಕಲಿ ಕಾಲೇಜು, ನಕಲಿ ಇಸ್ರೋ ವಿಜ್ಞಾನಿ, ನಕಲಿ ವಿದೇಶಿ ಶರಾಬು, ನಕಲಿ ಚಿನ್ನದ ನಾಣ್ಯ, ನಕಲಿ ಐಫೋನ್ ಇವೆಲ್ಲಾ ಈಗಾಗಲೇ ದೊಡ್ಡ ಸುದ್ದಿಯಾಗಿವೆ. ಆದರೆ ಕಳೆದ ತಿಂಗಳು ಸಿಕ್ಕಿಬಿದ್ದ ನಕಲಿ ಕೋರ್ಟ್ ಮತ್ತು ನಕಲಿ ಜಡ್ಜ್ ಮಾತ್ರ ಅತ್ಯಂತ ನಾವೀನ್ಯಪೂರ್ಣವಾದದ್ದು. ಈ ನಕಲಿ ಕೋರ್ಟ್ ನಲ್ಲಿ ನಕಲಿ ನ್ಯಾಯಾಧೀಶನು ಹಿಂದಿನ ಒಂದೂವರೆ ವರ್ಷದಲ್ಲಿ 20 ಕ್ಕೂ ಹೆಚ್ಚು ಭೂ-ವಿವಾದಕ್ಕೆ ಸಂಬಂಧಿತ ವ್ಯಾಜ್ಯಗಳನ್ನು ರಾಜಿ-ಸಂಧಾನದಲ್ಲಿ ಇತ್ಯರ್ಥ ಗೊಳಿಸಿರುವನಂತೆ!  ಅಮೆರಿಕದ ದಕ್ಷಿಣ ಗಡಿಯಲ್ಲಿ ಪ್ರತಿ ಒಂದು ಗಂಟೆಯಲ್ಲಿ ಐದು ಜನ ಗುಜರಾತಿಗಳು ನಕಲಿ ಪಾಸ್ಪೋರ್ಟ್ ನಕಲಿ ವೀಸಾದೊಂದಿಗೆ ಅಮೆರಿಕಾ ಪ್ರವೇಶಿಸಲು ಪ್ರಯತ್ನಿಸಿ ಸಿಕ್ಕಿ ಬೀಳುತ್ತಿದ್ದಾರೆಂದು ಸ್ವತಃ ಅಮೆರಿಕದ ವಲಸೆ ಇಲಾಖೆ ಅಧಿಕೃತ ಹೇಳಿಕೆ ಕೊಟ್ಟಿದೆ. ಹೀಗೆ ಹೆಜ್ಜೆ ಇಟ್ಟಲ್ಲೆಲ್ಲಾ ಶುದ್ಧ ‘ಸಸ್ಯಾಹಾರಿ ವಂಚಕರು’ ಇರುವ ರಾಜ್ಯ ಎಂಬ ಕುಖ್ಯಾತಿ ಗುಜರಾತ್ ಪಡೆದಿದ್ದರೂ ಕೇಸರಿ ಭಕ್ತಗಣ ಮಾತ್ರ ಗುಜರಾತ್ ವಿರುದ್ಧ ನಾವು ಒಂದಕ್ಷರ ಮಾತಾಡಿದರೂ ಸಾಕು ನಮ್ಮ ಜತೆ ಜಗಳಕ್ಕೆ ಇಳಿಯುತ್ತಾರೆ.

ಈಗ ಸಂಪೂರ್ಣ ಬಿ‌ಜೆ‌ಪಿ ಪಕ್ಷವೇ ಅದಾನಿಯ ವಕಾಲತ್ತಿಗೆ ಇಳಿದಿದೆ. ಅಮೆರಿಕದ ಕೋರ್ಟಿನಲ್ಲಿ ಅದಾನಿಯ ಮೇಲೆ ಇರುವುದು ಕೇವಲ ‘ಆರೋಪ’ ಮಾತ್ರ, ಯಾವುದೇ ಅಪರಾಧ ಸಾಬೀತಾಗಿಲ್ಲ ಮತ್ತು ಯಾವುದೇ ಗಟ್ಟಿ ಸಾಕ್ಷಿ ಇಲ್ಲ ಎಂದು ಬಿ‌ಜೆ‌ಪಿ ಭಕ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ ಅದಾನಿಯಿಂದಾಗಿ ಭಾರತದ ಉದ್ಯಮ ಮತ್ತು ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಜಾರ್ಜ್ ಸೋರೋಸ್ ನಂತಹಾ ಅಮೆರಿಕದ ಉದ್ಯಮಿಗಳು ಅದಾನಿಯ ವಿರುದ್ಧ ಷಡ್ಯಂತ್ರ ಮಾಡಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಧಕ್ಕೆ ತರಲು ಹವಣಿಸುತ್ತಿದ್ದಾರೆ ಮತ್ತು ಅದಾನಿ ಎಂಬ ಒಬ್ಬ ಅಪ್ಪಟ ದೇಶಭಕ್ತನನ್ನು ಕೆಳಕ್ಕೆ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿ‌ಜೆ‌ಪಿ ಭಕ್ತಗಣ ಪ್ರಚಾರ ಮಾಡುತ್ತಿದೆ. ಆದರೆ ಅಮೆರಿಕದ ನ್ಯಾಯಾಂಗವು ಭಾರತದ ನ್ಯಾಯ ವ್ಯವಸ್ಥೆಯಂತೆ ರಾಜಕೀಯ ಒತ್ತಡಕ್ಕೆ ಅಥವಾ ಹಣದ ಪ್ರಭಾವಕ್ಕೆ ಬಗ್ಗುವಂತಹುದಲ್ಲ.. ಅಮೆರಿಕದ ಕೋರ್ಟ್ ಮತ್ತು ನ್ಯಾಯ ವ್ಯವಸ್ಥೆಯು ಅಲ್ಲಿಯ ಪ್ರಬಲ ರಾಷ್ಟ್ರಪತಿಗೇ ಎದುರು ನಿಂತಿರುವ ಅನೇಕ ಉದಾಹರಣೆಗಳಿವೆ ಎಂಬುದು ಭಾರತದಲ್ಲಿಯ ಅನೇಕರಿಗೆ ಗೊತ್ತಿಲ್ಲ. ಯಾವುದೇ ಪಕ್ಕಾ ಪುರಾವೆಗಳಿಲ್ಲದೆ ಅಮೆರಿಕದ ಕೋರ್ಟ್ ಅಡಾಣಿಯನ್ನು ಬಂಧಿಸಲು ಆದೇಶ ಹೊರಡಿಸುವುದೇ ಇಲ್ಲ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಭಾರತೀಯರು ಮಹಾಭ್ರಷ್ಟರಾಗಿದ್ದರೆ ಇಡೀ ಜಗತ್ತಿನ ಎಲ್ಲಾ ನ್ಯಾಯಾಂಗಗಳೂ ನಮ್ಮಂತೆ ಭ್ರಷ್ಟರು ಎಂದು ಭಕ್ತಗಣ ಭಾವಿಸಿರುವುದು ಕುರುಡು ಭಕ್ತಿಯ ಪರಾಕಾಷ್ಠೆ ಅಷ್ಟೇ.

ಗೌತಮ್ ಅದಾನಿಯವರ ಅಣ್ಣ ವಿನೋದ್ ಅದಾನಿಯವರೂ 1996 ರ ವರೆಗೆ ಭಾರತದಲ್ಲಿಯೇ ಇದ್ದು ಅವರು ‘ಕಮಾಡಿಟಿ ಟ್ರೇಡಿಂಗ್’ ಮಾಡುತ್ತಿದ್ದರು. ಆದರೆ ವಿನೋದ್ ಅಡಾಣಿ ಮೇಲೆ ಹೇರಾಫೇರಿಯ ಆರೋಪ ಬಂದ ಮೇಲೆ ಹಾಗೂ ಹರ್ಷದ್ ಮೆಹ್ತಾನಿಗೆ ಆದ ಗತಿ ನೋಡಿ ಭಯಪಟ್ಟು, ವಿನೋದ್ ಅದಾನಿ ಟ್ಯಾಕ್ಸ್-ಸ್ವರ್ಗವಾದ ಸೈಪ್ರಸ್ ದೇಶಕ್ಕೆ ಹೋಗಿ ನೆಲೆಸಿ ಅಲ್ಲಿಯ ನಾಗರಿಕತೆ ಪಡೆದರಂತೆ.  ಈಗಲೂ ಅವರು ದುಬೈಯಲ್ಲಿ ವ್ಯವಹಾರ ಮಾಡುತ್ತಿದ್ದು, ಸಹೋದರ ಗೌತಮ್ ಅದಾನಿಗಾಗಿ ಮಾರಿಷಸ್ ಮತ್ತು ದುಬೈಯಲ್ಲಿ 38 ಶೆಲ್ ಕಂಪನಿಗಳನ್ನು ತೆರೆದು ಅದರ ಉಸ್ತುವಾರಿ ಸ್ವತಃ ವಿನೋದ ಅದಾನಿಯೇ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಈ ವಿನೋದ್ ಅದಾನಿಯ ಮಗಳನ್ನು ಜತಿನ್ ಮೆಹತಾ ಎಂಬವರ ಮಗನಿಗೆ ಮದುವೆ ಮಾಡಿ ಕೊಟ್ಟಿದ್ದು, ಈ ಜತಿನ್ ಮೆಹತಾ ‘ವಿನ್ಸಮ್ ಡೈಮಂಡ್’ ಎಂಬ ಕಂಪನಿಯ ಮೂಲಕ ಭಾರತದಲ್ಲಿ ರೂ.5000 ಕೋಟಿಗೂ ಹೆಚ್ಚಿನ ಬ್ಯಾಂಕ್ ವಂಚನೆ ಮಾಡಿ 8 ವರ್ಷಗಳ ಹಿಂದೆ ಅದೇ ಸೈಪ್ರಸ್ ದೇಶಕ್ಕೆ ಓಡಿಹೋದವರು (ಅವರ ವಿಕಿಪೆಡಿಯಾ ನೋಡಿ). ಈಗ ಅವರು ಅಲ್ಲಿಯ ನಾಗರೀಕತೆ ಪಡೆದಿದ್ದಾರಂತೆ. ನಿರವ್ ಮೋದಿ ಮತ್ತು ಮೇಹುಲ್ ಚೋಕ್ಷಿ ಜೈನ್ ಇವರು ಕೂಡಾ ಜತಿನ್ ಮೆಹತಾ ಮತ್ತು ಸಿಏ ಕೇತನ್ ಪಾರೇಖ್ ರಿಂದಲೇ ಬ್ಯಾಂಕ್ ವಂಚನೆಯ ಮೊಡಸ್-ಅಪೆರೆಂಡಿ ಕಲಿತರಂತೆ. ಹೀಗೆ ಚೋರ್ ಚೋರ್ ಮೌಸೆರೆ ಭಾಯಿ ಆ ಗುರ್ಜರ ದೇಶದಲ್ಲಿ ಮತ್ತು ಮುಂಬೈಯಲ್ಲಿ!          

ಸಾಗರ್‌ ಅದಾನಿ

ಬಿ‌ಜೆ‌ಪಿ ಆಡಳಿತ ರಾಜ್ಯಗಳಿಗೆ ಅದಾನಿ ಯಾವುದೇ ಲಂಚದ ಆಫರ್ ಕೊಟ್ಟಿಲ್ಲ. ಅವರು ಲಂಚದ ಆಫರ್ ಕೊಟ್ಟಿರುವುದು  ಕೇವಲ ಓಡಿಶಾ, ಛತ್ತೀಸ್‌ಗಡ, ತಮಿಳುನಾಡು, ಕಾಶ್ಮೀರ ರಾಜ್ಯಗಳ ಅಧಿಕಾರಿಗಳಿಗೆ ಮಾತ್ರ. ಇವೆಲ್ಲಾ ವಿರೋಧ ಪಕ್ಷಗಳ ಆಡಳಿತದಲ್ಲಿ ಇರುವ ರಾಜ್ಯಗಳು. ಹಾಗಾಗಿ ವಿರೋಧ ಪಕ್ಷಗಳು ಮಾತ್ರ ಭ್ರಷ್ಟಾಚಾರ ನಡೆಸಿರುವುದು ಎಂದು ಬಿ‌ಜೆ‌ಪಿ ಭಕ್ತಗಣ ವಾದಿಸುತ್ತಿದ್ದಾರೆ. ಆದರೆ ಇಲ್ಲಿ ಅವರು ಗಮನಿಸಬೇಕಾದುದು ಏನೆಂದರೆ ‘ಬಿ‌ಜೆ‌ಪಿ ಆಡಳಿತದ’ ರಾಜ್ಯದ ಮುಖ್ಯಮಂತ್ರಿಗೆ ಪ್ರಧಾನಿ ಕಾರ್ಯಾಲಯದಿಂದ ಕೇವಲ ಒಂದೇ ಒಂದು ಫೋನ್ ಕಾಲ್ ಹೋದರೆ ಸಾಕು, ಅಲ್ಲಿಯ ಕೀಲು ಗೊಂಬೆಯಂತಹಾ ಮುಖ್ಯಮಂತ್ರಿ ಕುರುಡಾಗಿ ಅದಾನಿಯೊಂದಿಗೆ ಅವರಿಗೆ ಬೇಕಾದ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಳ್ಳುತ್ತಾರಂತೆ.  ಹಾಗಾಗಿ ಬಿ‌ಜೆ‌ಪಿ ಆಡಳಿತದ ರಾಜ್ಯಗಳಲ್ಲಿ ಅದಾನಿ ಯಾವುದೇ ಲಂಚ ಕೊಡಬೇಕಾಗಿ ಬರಲಿಲ್ಲ. ಆದರೆ ವಿರೋಧ ಪಕ್ಷಗಳ ಸರಕಾರ ಇರುವ ರಾಜ್ಯಗಳಿಗೆ ಪ್ರಧಾನಿ ಕಾರ್ಯಾಲಯದ ಫೋನ್ ಹೋಗಿದ್ದರೂ ಅವರು ಕಣ್ಣು ಮುಚ್ಚಿ ಅದಾನಿಯಿಂದ ವಿದ್ಯುತ್ ಖರೀದಿಸಲಿಲ್ಲ. ಹಾಗಾಗಿ ಈ ವಿರೋಧ ಪಕ್ಷದ ಆಳ್ವಿಕೆ ಇರುವ ರಾಜ್ಯಗಳ ಅಧಿಕಾರಿಗಳಿಗೆ ಅಥವಾ ಅಧಿಕಾರಸ್ಥ ರಾಜಕಾರಣಿಗಳಿಗೆ ಲಂಚ ಕೊಡಬೇಕಾದ ಅನಿವಾರ್ಯತೆ ಉಂಟಾಗಿರಬಹುದು.

ಜತೆಗೆ ಅಡಾಣಿ ಗ್ರೀನ್ ಎನರ್ಜಿಯ ಪಾರ್ಟ್‌ನರ್‌ ಆಗಿರುವ ಅಜ್ಯುರ್ ಪವರ್ ಕಂಪನಿಯವರು ಭಾರತದಲ್ಲಿ ರಾಜ್ಯ ಸರಕಾರಗಳಿಗೆ ವಿದ್ಯುತ್ ಮಾರಲು ಯಾರಿಗೂ ಲಂಚ ಕೊಡಬಾರದು ಎಂದು ಹೇಳಿತ್ತು. ಆದರೆ ಅದಾನಿ ಕಂಪನಿಯ ಸಾಗರ್ ಅದಾನಿ ಎಂಬವರು ಭಾರತದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಡಲಾಯಿತು ಎಂಬ ವಿವರವನ್ನು ಇಮೇಲ್ ಮುಖಾಂತರ ಅಜ್ಯುರ್ ಪಾವರ್ ಕಂಪನಿಯವರಿಗೆ ಕಳುಹಿಸಿ ಕೊಟ್ಟಿದ್ದು ಮಾತ್ರವಲ್ಲ, ಲಂಚ ಕೊಡಲು ಬಳಸಿದ ಮೊತ್ತದಲ್ಲಿ ಅಜ್ಯುರ್ ಕಂಪನಿಯ ರೂ.600 ಕೋಟಿಯ ಪಾಲನ್ನು ತಮಗೆ ಕೊಡಲು ಹೇಳಿದ್ದರು. ಇದೇ ಇಮೇಲ್ ಅಮೆರಿಕದ ನ್ಯಾಯಾಂಗ ಇಲಾಖೆಯವರ ಕೈಗೆ ಪಕ್ಕಾ ಪುರಾವೆ ಒದಗಿಸಿತು.  ಅಂದಿನಿಂದ ಎರಡು ವರ್ಷಗಳ ಕಾಲ ಈ ಕೇಸ್ ಅಮೆರಿಕದ ನ್ಯಾಯಾಂಗದಲ್ಲಿ ವಿಚಾರಣೆ ಆಗಿ ಕೊನೆಗೆ ಕಳೆದ ವಾರ ಅಡಾಣಿಯ ಬಂಧನದ ವಾರಂಟನ್ನು ಅಮೆರಿಕದ ನ್ಯಾಯಾಲಯ ಹಾಗೂ ಎಫ್‌ಬಿ‌ಐ ಹೊರಡಿಸಿತು. ಈ ಸುದ್ದಿ ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲೂ ಬಂದಿರುವುದನ್ನು ಮುಚ್ಚಿಡಲು ಆಗಲಿಲ್ಲ. ಹಾಗಾಗಿ ವಿಶ್ವದೆಲ್ಲೆಡೆ ಅಡಾಣಿಯ ಡಂಕಾ ಬಜಾಯಿಸಿತು. ಅದರ ಪರಿಣಾಮವೆಂದರೆ ಆಫ್ರಿಕದ ಕಿನ್ಯಾ ದೇಶವೂ ಅಡಾಣಿಯೊಂದಿಗಿನ ಎಲ್ಲಾ ವ್ಯವಹಾರಗಳನ್ನು ಕಡಿದುಕೊಂಡಿತು. ಅದರಿಂದಾಗಿ ಈಗ ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ ದೇಶಗಳೂ ಅದಾನಿಯ ಯೋಜನೆಗಳನ್ನು ಮರು ಪರಿಶೀಲಿಸುತ್ತಿವೆ. ಫ್ರಾನ್ಸ್ ದೇಶದ ಬಹಳ ದೊಡ್ಡ ಪವರ್ ಕಂಪನಿಯಾದ ಟೋಟಾಲ್ ಎನರ್ಜಿಸ್ ಕೂಡಾ ಅಡಾಣಿಯೊಂದಿಗಿನ ತಮ್ಮ ಪಾಲುದಾರಿಕೆ ಸ್ಥಗಿತ ಮಾಡುವ ಕುರಿತು ಆಲೋಚಿಸುತ್ತಿದೆ. ಈಗ ಇಸ್ರೇಲಿನ ಪ್ರಧಾನಿ ನೆತನ್ಯಾಹು ಇವರು ಪ್ಯಾಲೆಸ್ಟೀನ್ ಮತ್ತು ನೆರೆಯ ಲೆಬನಾನ್ ಜತೆಗಿನ ಯುದ್ಧಕ್ಕೆ ವಿರಾಮ ಘೋಷಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಸ್ರೇಲ್ ಜತೆಯ ಅದಾನಿಯ ಡಿಫೆನ್ಸ್ ಒಪ್ಪಂದಗಳೂ ಹಿನ್ನಡೆ ಅನುಭವಿಸುವ ಸಾಧ್ಯತೆ ಕಂಡು ಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಭಾರತದೊಳಗಿನ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ರಾಜಕೀಯ ಪಕ್ಷಪಾತ ನೋಡಿ ಜಪಾನ್ ದೇಶವೂ ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೇನ್ ಯೋಜನೆಯಿಂದ ತನ್ನ ಸಹಭಾಗಿತ್ವ ಹಿಂಪಡೆಯಿತೆಂದು ಸುದ್ದಿ ಇದೆ..

ಮೊದಲ ಎರಡು ಹಿಂಡನ್ ಬರ್ಗ್ ವರದಿಯಿಂದ ಅದಾನಿ ಕಂಪನಿಗಳು ಭಾರಿ ಹಿನ್ನಡೆ ಅನುಭವಿಸಿದ್ದವು. ಈಗ ಇನ್ನೊಂದು ವರದಿಯನ್ನು ಮುಂದಿನ ವಾರ ಬಿಡುಗಡೆ ಮಾಡುವುದಾಗಿ ಹಿಂಡನ್ ಬರ್ಗ್ ನವರು ಹೇಳಿಕೆ ಕೊಟ್ಟಿದ್ದಾರೆ. ಸೆಬಿ ಸಹಾ ಅದಾನಿ ಕಂಪನಿಯ ವಿಷಯದಲ್ಲಿ ಕಠಿಣ ನಿಲುವು ತಳೆಯುವಂತೆ ಕಾಣುತ್ತಿದೆ. ಇದರಿಂದ ಅದಾನಿಯ ತೊಂದರೆಗಳು ಇನ್ನೂ ಹೆಚ್ಚಾಗಲಿವೆ. ಜತೆಗೆ ನಿನ್ನೆ ಅಮೆರಿಕದ ರೇಟಿಂಗ್ ಕಂಪನಿ “ಮೂಡಿಸ್” ಕೂಡಾ ಅದಾನಿಯ ಎಲ್ಲಾ ಏಳೂ ಕಂಪನಿಗಳನ್ನು ‘ನೆಗೆಟಿವ್-ಔಟ್ಲುಕ್ ನಲ್ಲಿ’ ಹಾಕಿ, ಈ ಕಂಪನಿಗಳಲ್ಲಿ ಭವಿಷ್ಯದಲ್ಲಿ ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸುವಂತೆ ಸಲಹೆ ಕೊಟ್ಟಿದ್ದಾರೆ. ಮುಂದಿನ ಜನವರಿ 20 ಕ್ಕೆ ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಗೌತಮ್ ಅದಾನಿಯ ಮೇಲಿನ ಆರೋಪಗಳು ಠುಸ್ ಆಗುತ್ತವೆ ಎಂದು ಅದಾನಿ-ಮೋದಾನಿ ಅಭಿಮಾನಿಗಳ ಅಂಬೋಣ! ಕಾದು ನೋಡೋಣ. 

ಪ್ರವೀಣ್ ಎಸ್  ಶೆಟ್ಟಿ

ಸಂಸ್ಕೃತಿ ಚಿಂತಕರು

ಇದನ್ನೂ ಓದಿ- ಭಾರತೀಯ ಬಂಡವಾಳ ಮಾರುಕಟ್ಟೆ ನಡೆದು ಬಂದ ದಾರಿ

More articles

Latest article