ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಂದು ತಮ್ಮನ್ನು ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ನಿನ್ನೆ ಪ್ರಕಟವಾದ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಲ್ಲಿ ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ 2026ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಬರೆಯಲಾಗಿದೆ. ಇದಕ್ಕಾಗಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದೆ.
ಕಳೆದ ವಾರ ಅಮೆರಿಕದ ಸೇನಾಪಡೆಗಳು ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ವಾಯುದಾಳಿ ನಡೆಸಿ ಆ ದೇಶದ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿತ್ತು. ಟ್ರಂಪ್ ಅವರು ಇವರ ವಿರುದ್ಧ ಡ್ರಗ್ಸ್ ಕಳ್ಳಸಾಗಣೆ, ಭಯೋತ್ಪಾದನಾ ಪಿತೂರಿ ಆರೋಪಗಳನ್ನು ಹೊರಿಸಿದ್ದಾರೆ. ತಮ್ಮ ದೇಶಕ್ಕೆ ವ್ಯಾಪಕ ಪ್ರಮಾಣದಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು ಎಂದೂ ಆಪಾದಿಸಿದ್ದಾರೆ.
ಮುಂದುವರೆದು ವೆನೆಜುವೆಲಾದಲ್ಲಿ ಪರಿವರ್ತನೆಯಾಗಿ ಸರಿಯಾದ ಹಾದಿ ಹಿಡಿಯುವವರೆಗೂ ನಾವು ಆಡಳಿತ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ದುರಾಡಳಿತಕ್ಕೆ ಅವಕಾಶ ನೀಡುವುದಿಲ್ಲ. ವೆನೆಜುವೆಲಾದಲ್ಲಿ ಗುಣಮಟ್ಟದ 30ರಿಂದ 50 ಮಿಲಿಯನ್ ಬ್ಯಾರೆಲ್ ತೈಲ ಲಭ್ಯವಿದ್ದು, ಅದನ್ನು ಅಮೆರಿಕ ಪಡೆದುಕೊಳ್ಳಲಿದೆ. ಅದನ್ನು ಮಾರಾಟ ಮಾಡಿ ಆ ಹಣವನ್ನು ವೆನೆಜುವೆಲಾ ಮತ್ತು ಅಮೆರಿಕ ಜನರ ಕಲ್ಯಾಣಕ್ಕೆ ಬಳಸುವುದಾಗಿಯೂ ಟ್ರಂಪ್ ತಿಳಿಸಿದ್ದಾರೆ.

