ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು; ಖರ್ಗೆ ಆಕ್ಷೇಪ; ಸಂಸತ್‌ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಆಗ್ರಹ

Most read

ನವದೆಹಲಿ:  ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧ ಸರ್ಕಾರ ಹಾಗೂ ಸಶಸ್ತ್ರ ಪಡೆಗಳು ನಡೆಸಿರುವ ಆಪರೇಷನ್‌ ಸಿಂಧೂರ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿರುವುದಕ್ಕೆ ಎಐಸಿಸಿ ಅಧ್ಯಕ್ಷ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ವಪಕ್ಷ ಸಭೆ ನಂತರ ಮಾತನಾಡಿದ ಅವರು  ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಕೈಗೊಂಡಿರುವ ಎಲ್ಲ ಕ್ರಮಗಳನ್ನು ಬೆಂಬಲಿಸುವುದಾಗಿಯೂ ಹೇಳಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂಬಂಧ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಎಲ್ಲ ವಿಪಕ್ಷಗಳು ಸರ್ಕಾರ ಹಾಗೂ ಸಶಸ್ತ್ರ ಪಡೆಗಳನ್ನು ಒಕ್ಕೊರಲಿನಿಂದ ಬೆಂಬಲಿಸಿವೆ. ಈ ಸಭೆಯಲ್ಲಿ  ಪ್ರಧಾನಿ ಮೋದಿ ಮಾತನಾಡಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಆದರೆ ಅವರು ಸಭೆಗೆ ಹಾಜರಾಗಲಿಲ್ಲ. ಕಳೆದ ಸಭೆಗೂ ಗೈರುಹಾಜರಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ವ ಪಕ್ಷ ಸಭೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಇದು ಒಳ್ಳೆಯ ಸಂದೇಶವಾಗಿದೆ. ಒಂದು ವೇಳೆ ಅಧಿವೇಶನವನ್ನು ಕರೆದರೆ ಸಂಸದರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಲಭ್ಯವಾಗುತ್ತದೆ. ಆ ಮೂಲಕ ದೇಶದ ಜನರ ವಿಶ್ವಾಸವನ್ನು ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಾಚರಣೆ ನಡೆಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಸೇನೆ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮದೂ  ಬೆಂಬಲವಿದೆ ಎಂದು ಖರ್ಗೆ ಪುನರುಚ್ಛರಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಯಾವುದೇ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಬಾರದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ವಿನಂತಿ ಮಾಡಿದ್ದಾರೆ. ಆದರೆ ಗಡಿಯಲ್ಲಿರುವ ಜನರು ಹಾಗೂ ದೇಶದ ಭದ್ರತೆಯ ಬಗ್ಗೆ ನಾಯಕರು ಪ್ರಸ್ತಾಪಿಸಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಪಾಕ್ ಶೆಲ್ ದಾಳಿಯಲ್ಲಿ ಮೃತಪಟ್ಟ ನಾಗರಿಕರ ಕುಟುಂಬದವರ ರಕ್ಷಣೆಯನ್ನು ಸರ್ಕಾರ ನೋಡಿಕೊಳ್ಳಬೇಕು. ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದೂ ಹೇಳಿದ್ದಾರೆ.

ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು.

More articles

Latest article