Sunday, September 8, 2024

ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಗೆ ಸಿ ಎಂ ಪತ್ರ

Most read

ಬೆಂಗಳೂರು: 2024-25 ನೇ ಸಾಲಿನ ಕೇಂದ್ರ ಆಯ-ವ್ಯಯದಲ್ಲಿ ರಾಯಚೂರಿಗೆ ಏಮ್ಸ್ (AIIMS) ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಜನವರಿ 25 ರಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅವರು, ಮುಖ್ಯಮಂತ್ರಿಗಳಿಗೆ ಈ ಸಂಬಂಧ ಪತ್ರದ ಮೂಲಕ ಮನವಿಯನ್ನು ಮಾಡಿಕೊಂಡಿದ್ದರು.

ರಾಯಚೂರು ನಗರದಲ್ಲಿ ALL INDIA INSTITUTE OF MEDICAL SCIENCE (AIIMS) ಸ್ಥಾಪನೆ ಮಾಡಲು ಜಿಲ್ಲೆಯ ಜನರ ಮನವಿಯ ಮೇರೆಗೆ ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ರಾಯಚೂರು ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಹೋರಾಟ ಸಮಿತಿಯಿಂದ ಕಳೆದ 625 ದಿನಗಳಿಂದ ಸರದಿ ಸತ್ಯಾಗ್ರಾಹ ಮುಂದುವರೆದಿದೆ. ರಾಯಚೂರು ಜಿಲ್ಲೆಯನ್ನು ಕೇಂದ್ರ ಸರಕಾರವು ಮಹತ್ವಾಕಾಂಕ್ಷೆ ಜಿಲ್ಲೆಯೆಂದು (Aspiration District) ಘೋಷಣೆ ಮಾಡಿದೆ. ಹಾಗೂ ಸಂವಿಧಾನದ 371 (ಜೆ) ವಿಧಿಯ ಅನ್ವಯ ವಿಶೇಷ ಸ್ಥಾನಮಾನ ನೀಡಲಾಗಿದೆ.

ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್‌ (AIIMS) ಸ್ಥಾಪಿಸುವ ಮೂಲಕ ಆರೋಗ್ಯ, ಉದ್ಯೋಗ, ವೈದ್ಯಕೀಯ ಶಿಕ್ಷಣದ ಬಲವರ್ಧನೆಗಾಗಿ ಹಾಗೂ ಹಿಂದುಳಿದ ಹಣೆಪಟ್ಟಿ ಕಳಚುವ ಹಿನ್ನಲೆಯಲ್ಲಿ ಏಮ್ಸ್‌ ಮಂಜೂರು ಮಾಡಬೇಕಾಗಿದೆ. ಈಗಾಗಲೇ ತಾವು ದಿನಾಂಕ: 17-06-2023 ಮತ್ತು 07-09-2023 ರಂದು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ರಾಯಚೂರು ನಗರದಲ್ಲಿ ಏಮ್ಸ್‌ (AIIMS) ಸ್ಥಾಪನೆ ಮಾಡಲು ಪತ್ರವನ್ನು ಬರೆದಿದ್ದೀರಿ. ಕೇಂದ್ರ ಸರಕಾರದ 2024-25 ನೇ ಸಾಲಿನ ಆಯ-ವ್ಯಯಕ್ಕೂ ಮುನ್ನ ಕೇಂದ್ರ ಸರಕಾರದ ವಿತ್ತ ಸಚಿವರಿಗೆ ಈ ಬಗ್ಗೆ ಇನ್ನೊಮ್ಮೆ ಗಮನಸೆಳೆಯುವಂತೆ ಸಚಿವರು ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 29, 2024 ರಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನು ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೋರಿದ್ದಾರೆ.

More articles

Latest article