ವಿಕ್ರಂ ಗೌಡ ಎನ್‌ಕೌಂಟರ್‌ ; ನ್ಯಾಯಾಂಗ ತನಿಖೆ ನಡೆಸಲು ಶಾಂತಿಗಾಗಿ ನಾಗರಿಕರ ವೇದಿಕೆ ಆಗ್ರಹ

Most read

ಬೆಂಗಳೂರು: ನಕ್ಸಲ್‌ ಚಳುವಳಿಗಾರರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೊಟ್ಟಿರುವ ಕರೆಯನ್ನು “ಶಾಂತಿಗಾಗಿ ನಾಗರಿಕರ ವೇದಿಕೆ” ಸ್ವಾಗತಿಸುತ್ತದೆ. ಹಾಗೆಯೇ  ನವೆಂಬರ್‌ 18 ರಂದು ನಡೆದ ವಿಕ್ರಂ ಗೌಡ ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದೂ ವೇದಿಕೆ ಆಗ್ರಹಪಡಿಸಿದೆ. ಜತೆಗೆ ಈಗಾಗಲೇ ಇರುವ ಶರಣಾಗತಿ ನೀತಿಯನ್ನು ಇನ್ನಷ್ಟು ಸರಳಗೊಳಿಸಿ, ಸಮರ್ಪಕವಾಗಿ ಜಾರಿ ಮಾಡಲಾಗುವುದು ಎಂಬ ಭರವಸೆಯನ್ನು ಕೂಡಾ ನೀಡಿದ್ದಾರೆ. ಇದು ಶಾಂತಿ ಸ್ಥಾಪನೆಗೆ ಅತ್ಯಂತ ಅಗತ್ಯವಾದ ಮುನ್ನಡೆ ಎಂದು ನಾವು ಭಾವಿಸುತ್ತೇವೆ.  ಮುಖ್ಯಮಂತ್ರಿಗಳ ಈ ಕರೆಗೆ ನಕ್ಸಲ್ ಹೋರಾಟಗಾರರು ಇತ್ಯಾತ್ಮಕವಾಗಿ  ಸ್ಪಂದಿಸುತ್ತಾರೆ ಎಂದು ನಾಗರಿಕ ಸಮಾಜ ಆಶಿಸುತ್ತದೆ. ಸಂವಿಧಾನಾತ್ಮಕ, ಪ್ರಜಾ ತಾಂತ್ರಿಕ ಹೋರಾಟಗಳು ಆರೋಗ್ಯಕರ ಸಮಾಜಕ್ಕೆ ಮುಖ್ಯ. ಆದರೆ ಅದನ್ನು ಹಿಂಸಾತ್ಮಕ ಚಳುವಳಿಗಳ ಮೂಲಕವೇ ಮಾಡಬೇಕೆನ್ನುವುದು ಸರಿಯಾದ ಮಾರ್ಗವಲ್ಲ. ಈ ವಾಸ್ತವವನ್ನು ಮನಗಂಡ ಅನೇಕ ನಕ್ಸಲ್‌ ಹೋರಾಟಗಾರರು ಈಗ ಮುಖ್ಯವಾಹಿನಿಯ ಭಾಗವಾಗಿ ಪ್ರಜಾಸತ್ತಾತ್ಮಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ವಾಸ್ತವವನ್ನು ಗ್ರಹಿಸಿ ನಕ್ಸಲರು ತಮ್ಮ ಶಸ್ತ್ರಗಳನ್ನು ತ್ಯಜಿಸಿ ಹೊರಬಂದು, ತಮ್ಮ ಹೋರಾಟಗಳನ್ನು ಕಾನೂನಾತ್ಮಕವಾಗಿ ಮುಂದುವರೆಸಲು ಇದೊಂದು ಅವಕಾಶ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಹೇಳಿದೆ.

ವೇದಿಕೆಯ ಪರವಾಗಿ  ಎನ್‌ ವೆಂಕಟೇಶ್‌, ಬಿ.ಟಿ ಲಲಿತಾ ನಾಯ್ಕ್ , ಡಾ. ಕಲ್ಕುಳಿ ವಿಠ್ಠಲ್‌ ಹೆಗಡೆ, ಪ್ರೊ. ವಿ. ಎಸ್‌ ಶ್ರೀಧರ, ಪ್ರೊ. ನಗರಗೆರೆ ರಮೇಶ್ ಮತ್ತು  ತಾರಾ ರಾವ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಅದೇ ವೇಳೆಯಲ್ಲಿ ಸರ್ಕಾರವೂ ಕೂಡ ತಾನು ಹೇಳಿರುವ ರೀತಿಯಲ್ಲಿ ಸರಳವಾಗಿ ಮತ್ತು ಶೀಘ್ರಗತಿಯಲ್ಲಿ ಇತ್ಯರ್ಥವಾಗುವ ʼಶರಣಾಗತಿ ಯೋಜನೆʼಯನ್ನು ಜಾರಿಗೆ ತರುತ್ತದೆ ಎಂದು ನಾವು ನಂಬುತ್ತೇವೆ.  ಮುಖ್ಯವಾಹಿನಿ ಸಮಾಜ ಬಯಸಿ ಬರುವವರ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯ ಮತ್ತು ಕಾನೂನು ನೆರವನ್ನು ನೀಡುವುದರ ಮೂಲಕ ಇವರನ್ನು ಘನತೆಯಿಂದ  ನಡೆಸಿಕೊಳ್ಳುವುದು ಸರ್ಕಾರದ ಹೊಣೆ. ಇದರ ಮೊದಲ ಹೆಜ್ಜೆಯಾಗಿ, ಈಗಾಗಲೇ  ಹೊರಗೆ ಬಂದಿರುವ ನಕ್ಸಲರಿಗೆ ಬೇಕಾದ ಕಾನೂನಾತ್ಮಕ ನೆರವನ್ನು ಮತ್ತು ಬದುಕಿಗೆ ಆಧಾರವನ್ನು ಒದಗಿಸಬೇಕಾಗಿದೆ. ಆದರೆ, ಈಗ ಅವರ ಪರಿಸ್ಥಿತಿ ಅಯೋಮಯವಾಗಿದೆ. ಹಲವಾರು ಕೋರ್ಟುಗಳಲ್ಲಿ ಹರಡಿಹೋಗಿರುವ ಅಸಂಖ್ಯಾತ  ಕೇಸುಗಳು, ನಿಧಾನಗತಿಯ ವಿಚಾರಣೆ, ಕೊಟ್ಟ ಭರವಸೆಯಂತೆ ನೀಡಬೇಕಾದ ಭೂಮಿ ಹಂಚಿಕೆಯಲ್ಲಿನ ಆಡಳಿತ ನಿರ್ಲಕ್ಷ್ಯ,. ಇತ್ಯಾದಿ ಸಮಸ್ಯೆಗಳಿಂದಾಗಿ ಅವರ ಬದುಕು ಅತಂತ್ರವಾಗಿದೆ. ವಕೀಲರಿಗೆ ಕೊಡಬೇಕಾದ ಹಣ ಇರಲಿ, ದೈನಂದಿನ ಜೀವನ ನಿರ್ವಹಣೆಗೇ ತೊಳಲಾಟ ಉಂಟಾಗಿದೆ.  ಸರ್ಕಾರವು ತಕ್ಷಣವೇ ಇವರ ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸಬೇಕು ಮತ್ತು ಅದರ ಮೂಲಕ ಹೊರ ಬರಲು ಇಚ್ಛಿಸುವವರಲ್ಲಿ ಭರವಸೆಯನ್ನು ಮೂಡಿಸಲು ಸಾಧ್ಯ ಎಂಬುದು ನಮ್ಮ ಗ್ರಹಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಂತಿ ಬಯಸುವ ನಾಗರಿಕರಾಗಿ ನಕ್ಸಲ್‌ ಚಳುವಳಿಗಾರರನ್ನು ಮುಖ್ಯವಾಹಿಗೆ ಕರೆತಂದು ಸರ್ಕಾರಕ್ಕೆ ಒಪ್ಪಿಸುವುದಕ್ಕೆ ಮೇಲೆ ಸೂಚಿಸುರುವ ಸರ್ಕಾರದ ಮುಂದೊಡುಗು ನೆರವಾಗುತ್ತದೆ. ಈ ಭರವಸೆಯ ಮೂಲಕ ಮಾತ್ರ ಮುಖ್ಯವಾಹಿನಿಗೆ ಬರುವವರ ಜತೆ ಮಾತುಕತೆ ನಡೆಸಲು ಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ ಮತ್ತು ಶಾಂತಿಯುತ ಪರಿಹಾರಕ್ಕೆ ದಾರಿಮಾಡಿಕೊಡುತ್ತದೆ. ಹೀಗಾಗಿ ಸರ್ಕಾರವು ಈಗಾಗಲೇ ಹೊರಬಂದಿರುವವರ ಮರುವಸತಿ ಮತ್ತು ಕಾನೂನು ನೆರವಿಗೆ ಅದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನಾವು ಮನವಿ ಮಾಡುತ್ತೇವೆ. ಇದೇ ಸಂದರ್ಭದಲ್ಲಿ, ನವೆಂಬರ್‌ 18 ರಂದು ನಡೆದ ವಿಕ್ರಂ ಗೌಡ ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಕೂಡ ಮಾನವ ಹಕ್ಕುಗಳ ಕಾರ್ಯಕರ್ತರಾಗಿ ನಾವು ಆಗ್ರಹಿಸುತ್ತೇವೆ.  ನಾಗರಿಕ ಸಮಾಜ ಮುಂದಿಡುವ ಈ ನ್ಯಾಯೋಚಿತ ಬೇಡಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ವಂದಿಸುತ್ತಾರೆ ಎಂದು ಈ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More articles

Latest article