ಬೆಂಗಳೂರು: ಗುತ್ತಿಗೆದಾರನಿಗೆ ಶಾಸಕ ಮುನಿರತ್ನ ಜೀವ ಬೆದರಿಕೆಯೊಡ್ಡಿ, ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒಕ್ಕಲಿಗ ಸಮುದಾಯದ ಶಾಸಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸಚಿವ ಚೆಲುವರಾಯಸ್ವಾಮಿ ನೇತೃತ್ವದ ಶಾಸಕರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಒಕ್ಕಲಿಗ ಮತ್ತು ದಲಿತ ಸಮುದಾಯಗಳ ಬಗ್ಗೆ ಮುನಿರತ್ನ ಕೀಳಾಗಿ ಮಾತಾಡಿದ್ದಾರೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಸಿ.ಟಿ ರವಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಚುನಾವಣೆಗೆ ಮಾತ್ರ ಈ ಸಮುದಾಯಗಳು ಬೇಕು, ಈಗ ಬೇಡವೇ ಎಂದು ಬಿಜೆಪಿ ನಾಯಕರ ವಿರುದ್ದ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಅಮಿತ್ ಶಾ ಬಳಿ ಇವರೆಲ್ಲರೂ ಹೋಗಿ ಮಾತನಾಡಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯ ಮಾಡಬೇಕು ಎಂದು ಅವರು ಹೇಳಿದರು.
ಮುನಿರತ್ನರದ್ದು ಇದೇ ಮೊದಲಲ್ಲ, ಅವರ ಇತಿಹಾಸ ತುಂಬಾ ಇದೆ. ಅಧಿಕಾರಿಗಳು, ಸಾರ್ವಜನಿಕರಿಗೆ ಇದೇ ರೀತಿಯ ಪದ ಬಳಕೆ ಮಾಡುತ್ತಾರೆ. ಒಕ್ಕಲಿಗ ಹೆಣ್ಣು ಮಕ್ಕಳು, ದಲಿತರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಕಾನೂನಿನಡಿ ಶಾಸಕ ಮುನಿರತ್ನ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಗೆ ಭೇಟಿ ನೀಡಿದ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗದಲ್ಲಿ ಡಾ. ಎಂ.ಸಿ.ಸುಧಾಕರ್ , ಟಿ.ಬಿ. ಜಯಚಂದ್ರ, ಬಾಲಕೃಷ್ಣ, ಪುಟ್ಟಣ್ಣ, ನಂಜೇಗೌಡ, ಡಾ. ರಂಗನಾಥ್, ಶರತ್ ಬಚ್ಚೇಗೌಡ ಮೊದಲಾದವರು ಇದ್ದರು.