ಅನಿವಾರ್ಯವಾಗಿ ಜನ ಹೋರಾಟಕ್ಕೆ ಮಣಿದ ಸರಕಾರ ಈಗ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿದೆಯಾದರೂ ಏರೋಸ್ಪೇಸ್ ಯೋಜನೆಯನ್ನಂತೂ ರದ್ದು ಮಾಡಿಲ್ಲ. ” ಜಮೀನು ನೀಡಲು ಇಚ್ಚಿಸುವ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿ ಪಡಿಸಿದ ಜಮೀನು ನೀಡಲಾಗುವುದು” ಎಂದು ಮುಖ್ಯಮಂತ್ರಿಗಳು ರೈತರಿಗೆ ಆಮಿಷವನ್ನೂ ಒಡ್ಡಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕೊನೆಗೂ ಆತಂಕ ಪೀಡಿತ ರೈತರ ಹಾಗೂ ರೈತಪರ ಹೋರಾಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಮೂರು ವರ್ಷಕ್ಕೂ ಹೆಚ್ಚು ಕಾಲ ತಮ್ಮ ಭೂಮಿಯನ್ನು ಸರಕಾರಿ ಅತಿಕ್ರಮಣದಿಂದ ಕಾಪಾಡಿಕೊಳ್ಳಲು ಪಟ್ಟು ಬಿಡದೇ ಧರಣಿ ಸತ್ಯಾಗ್ರಹ ಹೋರಾಟ ನಿರತರಾದ ರೈತರ ಮನೆ ಮನಗಳಲ್ಲಿ ಸಂಭ್ರಮ ಮೂಡಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಲು ಸರಕಾರ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದೆ. 1,777 ಎಕರೆ ಅನ್ನ ಬೆಳೆಯುವ ಕೃಷಿ ಜಮೀನು ಅನ್ನದಾತರಿಗೆ ಮರಳಿ ದಕ್ಕಿದೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹಾಗೂ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಸರಕಾರ ನೋಟಿಫಿಕೇಶನ್ ಹೊರಡಿಸಿತ್ತು. ಭೂಮಾಲೀಕರಿಗೆ ಹೆಚ್ಚಿನ ಪರಿಹಾರದ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ಅಲ್ಲಿಯ ರೈತಾಪಿ ಜನರು ಸರಕಾರದ ಶಡ್ಯಂತ್ರಗಳಿಗೆ ಬಲಿಯಾಗದೇ ತಮ್ಮ ಭೂಮಿ ಹಕ್ಕಿಗಾಗಿ ಸಂಘಟಿತರಾದರು. ಮೂರು ವರ್ಷಗಳಿಗೂ ಅಧಿಕ ಕಾಲ ಹೋರಾಟದ ತೀವ್ರತೆಯನ್ನು ಕಾಪಾಡಿಕೊಂಡು ಬಂದರು. ಹಲವಾರು ಸಂಘಟನೆಗಳು ಬೆಂಬಲವನ್ನಿತ್ತರು. ಪ್ರಕಾಶ ರೈ ಯವರಂತಹ ಬಹುಭಾಷಾ ನಟರೂ ರೈತರ ಪರವಾಗಿ ಬೀದಿಗಿಳಿದರು. ಸಾಹಿತಿ ಕಲಾವಿದರುಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದರು. ಹೀಗಾಗಿ ಸರಕಾರ ರೈತರ ಅವಿರತ ಹೋರಾಟಕ್ಕೆ ಮಣಿಯಲೇ ಬೇಕಾಯ್ತು. ಜುಲೈ 15 ರಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ಘೋಷಿಸಬೇಕಾಯ್ತು. ಇದರಿಂದಾಗಿ ಆತಂಕಿತ ಅನ್ನದಾತರಲ್ಲಿ ನೆಮ್ಮದಿ ಮೂಡುವಂತಾಯ್ತು.
ಯಾರು ಏನೇ ಹೇಳಲಿ, ಆಳುವ ಸರಕಾರ ಯಾವುದೇ ಪಕ್ಷದ್ದಾಗಿರಲಿ, ಈ ಪ್ರಭುತ್ವ ಎನ್ನುವುದು ಯಾವಾಗಲೂ ಬಂಡವಾಳಿಗರ ಪರವಾಗಿಯೇ ಇರುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಪೂರಕವಾಗಿ ರೈತರ ಭೂಮಿ ಕಬಳಿಸುವ ಹುನ್ನಾರ ಮಾಡುತ್ತಲೇ ಇರುತ್ತದೆ. ಜನರಿಂದ ಆಯ್ಕೆಯಾದ ಸರಕಾರಗಳು ಜನರ ಪರವಾಗಿ ಇರಬೇಕು ಎಂದುಕೊಳ್ಳುತ್ತೇವೆ. ಆದರೆ ಈ ಆಳುವ ಸರಕಾರವನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಕಾರ್ಪೋರೇಟ್ ಶಕ್ತಿಗಳು ನಿಯಂತ್ರಿಸುತ್ತಲೇ ಇರುತ್ತವೆ. ಜನರಿಂದ ಆಯ್ಕೆಯಾಗಿ ಅಧಿಕಾರದ ಪಟ್ಟಕ್ಕೇರಿದ ಜನಪ್ರತಿನಿಧಿಗಳು ಬಂಡವಾಳಶಾಹಿ ಶಕ್ತಿಗಳ ಸೇವೆಗಾಗಿ ತಮ್ಮ ಅಧಿಕಾರವನ್ನು ಬಳಸುತ್ತಾರೆ. ಹಾಗೂ ಆಳುವ ಸರಕಾರಗಳು ಕಾರ್ಪೋರೇಟ್ ಕುಳಗಳ ಕೃಪಾಪೋಷಿತರಾಗಿ ಕಾರ್ಯ ನಿರ್ವಹಿಸುವುದು ಪ್ರಜಾಪ್ರಭುತ್ವದ ದುರಂತವಾಗಿದೆ.
ಅನಿವಾರ್ಯವಾಗಿ ಜನ ಹೋರಾಟಕ್ಕೆ ಮಣಿದ ಸರಕಾರ ಈಗ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿದೆಯಾದರೂ ಏರೋಸ್ಪೇಸ್ ಯೋಜನೆಯನ್ನಂತೂ ರದ್ದು ಮಾಡಿಲ್ಲ. ” ಜಮೀನು ನೀಡಲು ಇಚ್ಚಿಸುವ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ಹಾಗೂ ಅಭಿವೃದ್ಧಿ ಪಡಿಸಿದ ಜಮೀನು ನೀಡಲಾಗುವುದು” ಎಂದು ಮುಖ್ಯಮಂತ್ರಿಗಳು ರೈತರಿಗೆ ಆಮಿಷವನ್ನೂ ಒಡ್ಡಿದ್ದಾರೆ. ಈಗಾಗಲೇ ಕೆಲವು ಹಣದಾಹಿ ಭೂಮಾಲೀಕರುಗಳು ರಿಯಲ್ ಎಸ್ಟೇಟ್ ದಂಧೆಕೋರರ ಜೊತೆ ಸೇರಿ ಸರಿ ಸುಮಾರಿ 500 ಎಕರೆಯಷ್ಟು ಭೂಮಿಯನ್ನು ಸರಕಾರಕ್ಕೆ ಕೊಡುವುದಾಗಿ ಸಿಎಂ ಸಾಹೇಬರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ. ಹೇಗಾದರೂ ಮಾಡಿ ಬಾಕಿ ರೈತರ ಜಮೀನನ್ನೂ ಆಪೋಷಣ ಪಡೆಯಲು ಈ ಪ್ರಭಾವಿಗಳು ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕೆ ಸರಕಾರ, ಸಚಿವರು ಹಾಗೂ ಕಾರ್ಪೋರೇಟ್ ಬಂಡವಾಳಿಗರು ಕುಮ್ಮಕ್ಕು ಕೊಡುತ್ತಲೇ ಇರುತ್ತಾರೆ.
ಭೂಸ್ವಾಧೀನ ಪ್ರಕ್ರಿಯೆ ರದ್ದು ಘೋಷಿಸಿದ ಸಭೆಯಲ್ಲಿಯೇ ಮುಖ್ಯ ಮಂತ್ರಿಗಳು “ರಾಜ್ಯದ ಅಭಿವೃದ್ಧಿಗೆ, ಬೆಳವಣಿಗೆಗೆ ಕೈಗಾರಿಕಾ ಉತ್ತೇಜನ ನೀಡುವ ಅಗತ್ಯವಿದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಾದರೆ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನ ಪಡೆದುಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ” ಎಂದು ಹೇಳಿದರು.
ಈ ಸರಕಾರಗಳು ಬಂಡವಾಳಿಗರ ಪರ ಅಭಿವೃದ್ಧಿ ಮಾಡಲು ಅನ್ನ ಬೆಳೆವ ಭೂಮಿಯೇ ಬೇಕಾ? ಉದ್ಯಮಿಗಳ ಲಾಭಕೋರತನಕ್ಕೆ ಸಾವಿರಾರು ರೈತ ಕುಟುಂಬಗಳ ಬದುಕು ನಾಶವಾಗಬೇಕಾ? ಕಾರ್ಪೋರೇಟ್ ಕುಳಗಳ ಬಂಡವಾಳ ಸೆಳೆಯಲು ಫಲವತ್ತಾದ ಜಮೀನು ಕಬಳಿಕೆಯಾಗಬೇಕಾ? ದೇವನಹಳ್ಳಿಯ ಸುತ್ತಮುತ್ತ ಹುತ್ತಕಟ್ಟಿ ಹಾವಿನಂತೆ ಬುಸುಗುಡುವ ರಿಯಲ್ ಎಸ್ಟೇಟ್ ದಂಧೆಕೋರರಿಗೆ ರೈತರ ಜಮೀನು ಪರಭಾರೆ ಆಗಬೇಕಾ? ಈ ರಾಜಕೀಯ ಪಕ್ಷಗಳಿಗೆ, ಜನರಿಂದ ಹೇಗೋ ಆಯ್ಕೆಯಾಗಿ ಬಂದ ಪ್ರತಿನಿಧಿಗಳಿಗೆ ಅಧಿಕಾರ ಕೊಡಲು ರೈತಾಪಿ ಜನರ ಮತಗಳು ಬೇಕು. ಹೀಗೆ ಆಯ್ಕೆಯಾದ ಸರಕಾರವನ್ನು ನಿಯಂತ್ರಿಸುವ ಕಾರ್ಪೋರೇಟ್ ಬಂಡವಾಳಿಗರಿಗೆ ರೈತರ ಭೂಮಿ ಬೇಕು. ಇದೇನಾ ಪ್ರಜಾಪ್ರಭುತ್ವ ಎಂದರೆ? ಅದಕ್ಕೆ ಕುವೆಂಪುರವರು ಹೇಳಿದ್ದು ” ಎಲ್ಲರೂ ಜಿಗಣೆಗಳೇ ರೈತರ ನೆತ್ತರಿಗೆ” ಎಂದು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ರೈತ ಹೋರಾಟಕ್ಕೆ ಮಣಿದ ಸರ್ಕಾರ; ದೇವನಹಳ್ಳಿ ಭೂಸ್ವಾಧೀನ ರದ್ದು; ಸಿದ್ದರಾಮಯ್ಯ ಘೋಷಣೆ