ಮನುಷ್ಯ ಜಾತಿಗಿಂತ ಮರವೇ ವಲಂ

Most read

ಕುವೆಂಪು ಅವರು ತಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಎಲ್ಲರೂ ಸಮಾನವಾಗಿ ಬಾಳುವ ಆದರ್ಶ ಸಮಾಜದ ಕನಸನ್ನು ಕಂಡರೆ, ಚಿನ್ನಸ್ವಾಮಿಯವರು ಆ ತೋಟದಿಂದ ಹೊರಗೆ ನಿಲ್ಲಿಸಲ್ಪಟ್ಟವನೊಬ್ಬನ ದೃಷ್ಟಿಯಿಂದ, ಆ ತೋಟದ ಭಾಗವಾಗಲು ಇರುವ ಅಡೆತಡೆಗಳನ್ನು ಮರದ ರೂಪಕದ ಮೂಲಕ ವಿವರಿಸುತ್ತಾರೆ – ಡಾ. ರವಿ ಎಂ. ಸಿದ್ಲಿಪುರ.

ದಲಿತ-ಬಂಡಾಯ ಸಾಹಿತ್ಯ ಚಳವಳಿಯು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತಂದುಕೊಟ್ಟ ಮಹತ್ತರ ತಿರುವುಗಳಲ್ಲಿ ಒಂದು. ಅದು ಕೇವಲ ಆಕ್ರೋಶದ ಅಭಿವ್ಯಕ್ತಿಯಾಗಿರದೆ, ಶತಶತಮಾನಗಳ ಕಾಲ ಮೂಕವಾಗಿದ್ದ ಸಮುದಾಯವೊಂದರ ನೋವು, ಅವಮಾನ, ಕನಸು ಮತ್ತು ಜೀವನಪ್ರೀತಿಯನ್ನು ದಾಖಲಿಸಿದ ಚಾರಿತ್ರಿಕ ದನಿಯಾಗಿತ್ತು. ಆ ಸತ್ವಪೂರ್ಣ ಪರಂಪರೆಯಲ್ಲಿ, ತಮ್ಮದೇ ಆದ ಸೌಮ್ಯ ಆದರೆ ಖಚಿತವಾದ ದನಿಯಲ್ಲಿ ಇಂದಿಗೂ ಸತ್ಯವನ್ನು ನುಡಿಯುತ್ತಿರುವ ಪ್ರಮುಖ ಕವಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ. ಅವರಿಗೆ ಎಪ್ಪತ್ತೊಂದು ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಅವರ ಕಾವ್ಯ ಪಯಣವನ್ನು, ವಿಶೇಷವಾಗಿ ಅವರ ಅತಿ ಮುಖ್ಯ ಕವಿತೆಗಳಲ್ಲೊಂದಾದ ‘ನಾನೊಂದು ಮರವಾಗಿದ್ದರೆ’ ಕವಿತೆಯ ಮೂಲಕ ವಿಶ್ಲೇಷಿಸುವುದು, ಕನ್ನಡ ಸಾಹಿತ್ಯದ ಒಂದು ಮಹತ್ವದ ಘಟ್ಟವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಸರಿ.

ಗಡಿನಾಡು ಚಾಮರಾಜನಗರದ ಮಣ್ಣಿನಿಂದ ಬಂದ ಚಿನ್ನಸ್ವಾಮಿಯವರು, ವೃತ್ತಿಯಲ್ಲಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯದ ಗಂಭೀರ ಚಿಂತಕರಾಗಿ, ಕವಿಯಾಗಿ, ನಾಟಕಕಾರರಾಗಿ ಮೂಡಿಬಂದವರು. ದಲಿತ ಲೋಕದ ಅನುಭವಗಳನ್ನು ಕೇವಲ ನೋವಿನ ಕಥನವನ್ನಾಗಿಸದೆ, ಅದನ್ನು ಬೌದ್ಧ ತಾತ್ವಿಕತೆಯ ಬೆಳಕಿನಲ್ಲಿ, ಮಾನವೀಯತೆಯ ವಿಶಾಲವಾದ ನೆಲೆಯಲ್ಲಿಟ್ಟು ನೋಡುವ ಅವರ ಗುಣವೇ ಅವರನ್ನು ಸಮಕಾಲೀನರಲ್ಲಿ ವಿಶಿಷ್ಟರನ್ನಾಗಿಸಿದೆ. ‘ನಾನೊಂದು ಮರವಾಗಿದ್ದರೆ’ ಕವಿತೆಯು ಅವರ ಈ ತಾತ್ವಿಕ ನಿಲುವಿನ, ಸಾಮಾಜಿಕ ಕಳಕಳಿಯ ಮತ್ತು ಕಾವ್ಯಾತ್ಮಕ ಪ್ರಬುದ್ಧತೆಯ ಅತ್ಯುತ್ತಮ ಉದಾಹರಣೆಯಾಗಿದೆ.

 ‘ನಾನೊಂದು ಮರವಾಗಿದ್ದರೆ’ ಕವಿತೆಯು ಮೇಲ್ನೋಟಕ್ಕೆ ಸರಳವಾದ ಆಶಯವನ್ನು ವ್ಯಕ್ತಪಡಿಸುವಂತೆ ಕಂಡರೂ, ಅದು ತನ್ನೊಳಗೆ ಅಡಗಿಸಿಕೊಂಡಿರುವ ಸಾಮಾಜಿಕ ಆತಂಕ, ಭಯ ಮತ್ತು ಅಸಮಾನತೆಯ ವಿಮರ್ಶೆ ಅತ್ಯಂತ ತೀವ್ರವಾದುದು. ಕವಿ ಮನುಷ್ಯನಾಗಿ ಬದುಕುವುದಕ್ಕಿಂತ ಮರವಾಗಿ ಬದುಕುವುದನ್ನು ಏಕೆ ಬಯಸುತ್ತಾರೆ ಎನ್ನುವ ಪ್ರಶ್ನೆಯೇ ಕವಿತೆಯ ಜೀವಾಳ. ಮನುಷ್ಯ ಸಮಾಜವು ಸೃಷ್ಟಿಸಿರುವ ಜಾತಿ, ಕುಲ, ಮೈಲಿಗೆಯಂತಹ ಕೃತಕವಾದ ಆದರೆ ಕ್ರೂರವಾದ ವಿಭಜನೆಗಳಿಂದ ಪಾರಾಗುವ ಹಂಬಲವೇ ಈ ಕವಿತೆಯ ಹಿಂದಿನ ಪ್ರೇರಣೆ.

‘ನಾನೊಂದು ಮರವಾಗಿದ್ದರೆ / ಹಕ್ಕಿ ಗೂಡು ಕಟ್ಟುವ ಮುನ್ನ / ಕೇಳುತ್ತಿರಲಿಲ್ಲ ನೀನು ಯಾವ ಕುಲ’ ಎಂಬ ಆರಂಭಿಕ ಸಾಲುಗಳು, ಹುಟ್ಟಿನಿಂದ ಸಾವಿನವರೆಗೂ ಒಬ್ಬ ದಲಿತನು ಅನುಭವಿಸುವ ಸಾಮಾಜಿಕ ಬಹಿಷ್ಕಾರ ಮತ್ತು ಮಾನಸಿಕ ಹಿಂಸೆಯ ಪದರಗಳನ್ನು ಒಂದೊಂದಾಗಿ ಬಿಚ್ಚಿಡುತ್ತವೆ. ಮಾನವ ಸಮಾಜದ ಜಾತಿ ವ್ಯವಸ್ಥೆಯ ಅಡಿಪಾಯವನ್ನೇ ಪ್ರಶ್ನಿಸುತ್ತವೆ. ಪ್ರಕೃತಿಯಲ್ಲಿ ಸಹಜವಾಗಿರುವ ಸಮಾನತೆ ಮತ್ತು ಸ್ವೀಕಾರ ಮನೋಭಾವ ಮಾನವ ಸಮಾಜದಲ್ಲಿ ಇಲ್ಲವಲ್ಲ ಎಂಬ ವಿಷಾದವೇ ಇಲ್ಲಿ ಕಾವ್ಯರೂಪ ತಾಳಿದೆ. ಬಿಸಿಲು ನೆರಳನ್ನು ಅಪ್ಪಿಕೊಳ್ಳುವಾಗ ‘ಮೈಲಿಗೆ’ಯಾಗುವುದಿಲ್ಲ, ಮಳೆ ಹನಿಗಳು ‘ಶ್ವಪಚ’ನೆಂದು ಹಿಂದೆ ಸರಿಯುವುದಿಲ್ಲ, ಬೇರೂರಿ ನಿಲ್ಲುವಾಗ ‘ಭೂದೇವಿ ಮಡಿ ಮಡಿ’ ಎಂದು ಓಡುವುದಿಲ್ಲ ಎಂಬ ಪ್ರತಿಮೆಗಳು ಕೇವಲ ಕಾವ್ಯಾತ್ಮಕ ಅಲಂಕಾರಗಳಲ್ಲ; ಅವು ಅಸ್ಪೃಶ್ಯತೆಯ ಆಚರಣೆಯ ಬೇರುಗಳಿಗೆ ಕೊಡಲಿಪೆಟ್ಟು ಕೊಡುವ ತಾತ್ವಿಕ ಅಸ್ತ್ರಗಳು.

ಈ ಕವಿತೆಯನ್ನು ದಲಿತ ಪ್ರಜ್ಞೆಯ ನೆಲೆಯಿಂದ ನೋಡಿದಾಗ, ಅದು ಶತಮಾನಗಳಿಂದ ದಮನಿತ ಸಮುದಾಯ ಅನುಭವಿಸಿದ ಅವಮಾನ ಮತ್ತು ತಿರಸ್ಕಾರದ ಸಾಕ್ಷ್ಯಪ್ರಜ್ಞೆಯಾಗಿ ಗೋಚರಿಸುತ್ತದೆ. ದಲಿತರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಟ್ಟಿರುವ, ಅವರ ಸ್ಪರ್ಶವನ್ನು, ನೆರಳನ್ನು, ಅಸ್ತಿತ್ವವನ್ನೇ ‘ಅಪವಿತ್ರ’ವೆಂದು ಪರಿಗಣಿಸಿರುವ ವ್ಯವಸ್ಥೆಯ ವಿರುದ್ಧ ಮರವು ಒಂದು ಮೌನ ಪ್ರತಿಭಟನೆಯ ಸಂಕೇತವಾಗುತ್ತದೆ. ಪವಿತ್ರವೆಂದು ಪೂಜಿಸಲ್ಪಡುವ ಗೋವು, ತನ್ನ ತುರಿಕೆಗೆ ಮರದ ತೊಗಟೆಯನ್ನು ಉಜ್ಜಿಕೊಳ್ಳುವಾಗ, ಅದರ ಅಂಗಾಂಗಗಳಲ್ಲಿರುವ ‘ಮುಕ್ಕೋಟಿ ದೇವತೆಗಳು’ ಮರವನ್ನು ಮುಟ್ಟಿಸಿಕೊಳ್ಳುತ್ತಾರೆ ಎಂಬ ಸಾಲು, ಪಾವಿತ್ರ್ಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಮನುಷ್ಯರು ಕಲ್ಪಿಸಿಕೊಂಡಿರುವ ಪಾವಿತ್ರ್ಯಕ್ಕಿಂತ ಪ್ರಕೃತಿಯ ಸಹಜ ಸ್ಪರ್ಶವೇ ಹೆಚ್ಚು ದೈವಿಕ ಮತ್ತು ಶುದ್ಧವಾದುದು ಎಂದು ಕವಿ ಪ್ರತಿಪಾದಿಸುತ್ತಾರೆ. ಇದು ಸಮಾಜದ ಧಾರ್ಮಿಕ ಕಟ್ಟುಪಾಡುಗಳ ಮತ್ತು ಶ್ರೇಣೀಕೃತ ವ್ಯವಸ್ಥೆಯ ಬಗೆಗಿನ ಕಟು ವಿಡಂಬನೆಯಾಗಿದೆ. ಮನುಷ್ಯನಾಗಿ ನಿರಾಕರಣೆಗೊಳಗಾದವನು, ಮರವಾಗಿ ದೇವತೆಗಳಿಂದಲೇ ಸ್ಪರ್ಶಿಸಲ್ಪಡುವ ಸಾಧ್ಯತೆಯನ್ನು ಕವಿ ಕಲ್ಪಿಸಿಕೊಳ್ಳುವುದು, ಅಸ್ತಿತ್ವದ ಹುಡುಕಾಟದ ಒಂದು ಆರ್ತ ರೂಪವಾಗಿದೆ.

ಕವಿತೆಯು ದಲಿತರ ಆತಂಕವನ್ನು ದಾಖಲಿಸುವುದರ ಜೊತೆಗೇ, ಅದರಾಚೆಗಿನ ನಿರಾಳತೆಯ ಹುಡುಕಾಟವನ್ನೂ ನಡೆಸುತ್ತದೆ. ಮನುಷ್ಯನಾಗಿ ಹುಟ್ಟಿದ ಕಾರಣಕ್ಕೆ ಎದುರಿಸಬೇಕಾದ ತಾರತಮ್ಯ, ಅವಮಾನ ಮತ್ತು ನಿರಂತರ ಅನಿಶ್ಚಿತತೆಯ ಬದುಕಿನಿಂದ ಪಾರಾಗಿ, ಪ್ರಕೃತಿಯಲ್ಲಿರುವ ನಿಷ್ಕಲ್ಮಶ, ನಿರಪೇಕ್ಷ ಮತ್ತು ನಿಸ್ವಾರ್ಥ ಬದುಕನ್ನು ಸೇರುವ ಬಯಕೆಯೇ ಇಲ್ಲಿನ ನಿರಾಳತೆ. ಮರವು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ, ದಣಿದವರಿಗೆ ನೆರಳು ನೀಡುತ್ತದೆ, ಪ್ರಾಣಿಗಳಿಗೆ ಆಸರೆಯಾಗುತ್ತದೆ. ಈ ನಿಸ್ವಾರ್ಥ ಸೇವೆಯಲ್ಲಿ ಅದಕ್ಕೆ ಯಾವುದೇ ಲಾಭವಿಲ್ಲ, ಯಾವುದೇ ಭೇದಭಾವವಿಲ್ಲ. ಈ ಗುಣವೇ ಮನುಷ್ಯ ಸಮಾಜ ಕಳೆದುಕೊಂಡಿರುವ ಆದರ್ಶ. ಕವಿತೆಯ ಅಂತ್ಯದಲ್ಲಿ ಬರುವ ಸಾಲುಗಳು ಈ ಆತಂಕ ಮತ್ತು ನಿರಾಳತೆಯ ದ್ವಂದ್ವವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ‘ಯಾರಿಗೆ ಗೊತ್ತು / ನನ್ನ ಅಂತ್ಯಕಾಲದಲ್ಲಿ / ಕಡಿದು ತುಂಡಾದ ಒಣ ಸೀಳೊಂದು / ಹೋಮಾಗ್ನಿಯಲ್ಲಿ ಬೆಂದು / ಪಾವನವಾಗುತ್ತಿತ್ತೇನೊ / ಅಥವಾ / ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ / ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?’ ಎಂಬ ಪ್ರಶ್ನೆಗಳು, ಸಾವಿನಲ್ಲೂ ಒಂದು ಸಾರ್ಥಕತೆಯನ್ನು, ಸಾಮಾಜಿಕ ಸ್ವೀಕಾರವನ್ನು ಬಯಸುವ ದಮನಿತ ಸಮುದಾಯದ ಆಳವಾದ ಹಂಬಲವನ್ನು ಪ್ರತಿನಿಧಿಸುತ್ತವೆ. ಬದುಕಿದ್ದಾಗ ಸಿಗದ ಗೌರವ, ಸತ್ತ ಮೇಲಾದರೂ ಪವಿತ್ರ ಕಾರ್ಯಕ್ಕೆ ಬಳಕೆಯಾಗುವ ಮೂಲಕ ಸಿಗಬಹುದೇ ಎಂಬ ಆಶಯ, ಕರುಳನ್ನು ಹಿಂಡುವಂತಿದೆ.

ಕವಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ

ಇಲ್ಲಿ ಕವಿತೆ ಯಾವುದನ್ನು ವಿರೋಧಿಸುತ್ತಾ ಬಂದಿತ್ತೋ ಅದನ್ನೇ ಒಪ್ಪಿಕೊಳ್ಳುತ್ತಿದೆ ಎನಿಸಿದರೂ, ಮೋಕ್ಷ, ಮುಕ್ತಿ, ಪಾವನದ ಕಲ್ಪನೆಯಿಂದ ಹೊರಗಿಟ್ಟಿರುವವರಿಗೆ ನೀಡಬಹುದಾದ ಶುದ್ಧೀಕರಣದ ಸಂಕೇತ. ಹೊರಗಿಟ್ಟವರಿಂದಲೇ ಶುದ್ಧೀಕರಣ ಮಾಡಿಸಿಕೊಳ್ಳಬೇಕೆ? ಎಲ್ಲ ಮರಗಳೂ ಹೋಮಕ್ಕೆ ಬಳಕೆಯಾಗುತ್ತವೆಯೆ? ಸವರ್ಣೀಯರು ಸೃಷ್ಟಿಸಿದ ಮೋಕ್ಷ ಕಲ್ಪನೆಯೊಳಗೆ ಬೆಂದು ಶುದ್ಧರಾಗಬೇಕೆ? ಎಂಬ ಕೇಳ್ವಿಗಳು ಶುದ್ಧತೆಯ, ಪಾವಿತ್ರತೆಯ ಕಲ್ಪನೆಯನ್ನು ನಿರ್ಮಿಸಿದವರನ್ನು ವಿರೋಧಿಸುತ್ತವೆ. ಆದರೆ ಮನುಷ್ಯನಾಗಿ ಸತ್ತರೆ ಹೂಳುವುದಕ್ಕೂ ಜಾಗ ನೀಡದ ವ್ಯವಸ್ಥೆಯಲ್ಲಿ ಮರದ ತುಂಡಾಗಿ ಯಾವ ಬೆಂಕಿಯಲಿ ಬೆಂದರೇನು? ಬದುಕಿದ್ದಾಗ ಮನುಷ್ಯನಂತೆ ಕಾಣದ ಸಮಾಜದಲ್ಲಿ ಮಾನವನು ಸತ್ತ ನಂತರವೂ ‘ಪಾವನತೆ’ಯನ್ನು ಹುಡುಕುವ ಅಸಂಗತತೆಯಿದೆ. ಹೋಮಾಗ್ನಿಯಲಿ ದಹಿಸುವ ಬಯಕೆ ಜೊತೆಗೆ ಚಟ್ಟವಾಗುವುದು ಬರುತ್ತದೆ. ಕವಿತೆ ಈ ಎರಡೂ ಶ್ರೇಷ್ಠ ಎನ್ನುವ ಅರ್ಥ ನೀಡುತ್ತದೆ. ಈ ಚರ್ಚೆಗಳಿಗಿಂತ ಮುಖ್ಯವಾಗಿ ಶೋಷಿತರು ಸಮಾಜಕ್ಕೆ ಕೊಡುಗೆ ನೀಡುವ ಸಾಮರ್ಥ್ಯದ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇವರು ಸಮಾಜದಲ್ಲಿ ತುಳಿತಕ್ಕೊಳಾಗುತ್ತಲೇ, ಸಮಾಜವನ್ನು ಕಟ್ಟಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿರುವುದನ್ನು ಮರೆಯುವಂತಿಲ್ಲ.

ಕುವೆಂಪು ಅವರು ತಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಎಲ್ಲರೂ ಸಮಾನವಾಗಿ ಬಾಳುವ ಆದರ್ಶ ಸಮಾಜದ ಕನಸನ್ನು ಕಂಡರೆ, ಚಿನ್ನಸ್ವಾಮಿಯವರು ಆ ತೋಟದಿಂದ ಹೊರಗೆ ನಿಲ್ಲಿಸಲ್ಪಟ್ಟವನೊಬ್ಬನ ದೃಷ್ಟಿಯಿಂದ, ಆ ತೋಟದ ಭಾಗವಾಗಲು ಇರುವ ಅಡೆತಡೆಗಳನ್ನು ಮರದ ರೂಪಕದ ಮೂಲಕ ವಿವರಿಸುತ್ತಾರೆ. ಇನ್ನೂ ನವೋದಯ ಕಾಲಘಟ್ಟದ ಪ್ರಕೃತಿ ಪ್ರೇಮ ಮತ್ತು ಮಾನವ-ಪ್ರಕೃತಿ ಸಂಬಂಧದ ಕಲ್ಪನೆಗಳನ್ನು ಚಿನ್ನಸ್ವಾಮಿಯವರು ಜಾತಿ ವ್ಯವಸ್ಥೆಯ ಕ್ರೂರ ವಾಸ್ತವದ ಮೂಲಕ ಪುನರ್‌ ವ್ಯಾಖ್ಯಾನಿಸುತ್ತಾರೆ. ದಲಿತ-ಬಂಡಾಯ ಪರಂಪರೆಯ ಪ್ರಮುಖ ಕವಿ ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಕಾಣುವ ನೇರ, ಸಿಡಿಲಿನಂತಹ ಆಕ್ರೋಶಕ್ಕೆ ಪ್ರತಿಯಾಗಿ, ಚಿನ್ನಸ್ವಾಮಿಯವರ ಕಾವ್ಯವು ಒಂದು ಗಂಭೀರವಾದ, ತಾತ್ವಿಕವಾದ ವಿಷಾದ ಮತ್ತು ಪ್ರಶ್ನೆಗಳ ಮೂಲಕ ವ್ಯವಸ್ಥೆಯನ್ನು ಎದುರುಗೊಳ್ಳುತ್ತದೆ. ಈ ವಿಶಿಷ್ಟ ಶೈಲಿಯೇ ಚಿನ್ನಸ್ವಾಮಿಯವರನ್ನು ಕನ್ನಡ ಕಾವ್ಯಲೋಕದಲ್ಲಿ ಅನನ್ಯರನ್ನಾಗಿಸಿದೆ.

ಭಾಷೆ ಮತ್ತು ಶೈಲಿಯ ದೃಷ್ಟಿಯಿಂದ ನೋಡಿದಾಗ, ಈ ಕವಿತೆಯು ತನ್ನ ಸರಳತೆಯಿಂದಲೇ ಓದುಗರನ್ನು ಆಳವಾಗಿ ತಟ್ಟುತ್ತದೆ. ಯಾವುದೇ ಅಲಂಕಾರಿಕ, ಭಾರವಾದ ಪದಗಳಿಲ್ಲದೆ, ನೇರವಾದ, ಸಂಭಾಷಣೆಯ ಧಾಟಿಯಲ್ಲಿ ಕವಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಾರೆ. ಈ ಸರಳತೆಯೇ ಕವಿತೆಯ ಶಕ್ತಿ. ಬಳಸಲಾದ ಪ್ರತಿಮೆಗಳೆಲ್ಲವೂ (ಮರ, ಹಕ್ಕಿ, ಬಿಸಿಲು, ಮಳೆ, ಭೂಮಿ, ಗೋವು) ಪ್ರಕೃತಿಯಿಂದ ಆಯ್ದುಕೊಂಡವಾದರೂ, ಜನಸಾಮಾನ್ಯರ ಬದುಕಿಗೆ ಹತ್ತಿರವಾದವು. ಆದರೆ ಈ ಸಾಮಾನ್ಯ ಪ್ರತಿಮೆಗಳಿಗೆ ಅಸಾಮಾನ್ಯವಾದ ಸಾಮಾಜಿಕ ಮತ್ತು ರಾಜಕೀಯ ಅರ್ಥಗಳನ್ನು ಹೊದಿಸುವ ಮೂಲಕ ಚಿನ್ನಸ್ವಾಮಿಯವರು ತಮ್ಮ ಕಾವ್ಯ ಪ್ರತಿಭೆಯನ್ನು ಮೆರೆದಿದ್ದಾರೆ.

‘ನಾನೊಂದು ಮರವಾಗಿದ್ದರೆ’ ಕವಿತೆಯು ಪ್ರಕಟಗೊಂಡು ದಶಕಗಳೇ ಕಳೆದಿದ್ದರೂ, ಅದರ ಪ್ರಸ್ತುತತೆ ಇಂದಿಗೂ ಕಡಿಮೆಯಾಗಿಲ್ಲ. ಎಲ್ಲಾ ನಗರಗಳಲ್ಲಿ ಜಾತಿ ಕೇಳಿ ಮನೆ ಬಾಡಿಗೆಗೆ ನೀಡುವ ವಾಸ್ತವವನ್ನು ಗಮನಿಸಿದಾಗ, ಈ ಕವಿತೆಯಲ್ಲಿನ ಆತಂಕಗಳು ಜೀವಂತವಾಗಿವೆ ಎನಿಸುತ್ತದೆ. ಆದ್ದರಿಂದ ‘ನಾನೊಂದು ಮರವಾಗಿದ್ದರೆ’ ಕೇವಲ ಒಂದು ಕವಿತೆಯಾಗಿ ಉಳಿಯುವುದಿಲ್ಲ. ಅದು ಜಾತಿ ವ್ಯವಸ್ಥೆಯ ಶ್ರೇಣೀಕೃತ ಸಮಾಜದಲ್ಲಿ, ಘನತೆಗಾಗಿ ಹಂಬಲಿಸುವ ಪ್ರತಿಯೊಬ್ಬ ದಲಿತನ ಆತ್ಮಕಥೆಯಾಗುತ್ತದೆ. ಭಾರತೀಯ ಸಮಾಜದ ಆಳದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ಬಗೆಗಿನ ಒಂದು ಪ್ರಬಲವಾದ ಸಾಮಾಜಿಕ ಪ್ರಣಾಳಿಕೆಯಂತಿದೆ. ಕೇವಲ ದಲಿತ ಸಮುದಾಯದ ನೋವನ್ನಲ್ಲದೆ, ಮನುಷ್ಯತ್ವವನ್ನೇ ಮರೆತ ಒಂದು ಸಮಾಜದ ವಿಕೃತ ಚಿತ್ರಣವನ್ನು ಪ್ರದರ್ಶನಕ್ಕಿಡುತ್ತದೆ.

ಎಪ್ಪತ್ತೊಂದರ ಹರೆಯದಲ್ಲೂ ತಮ್ಮ ಬರಹದ ಮೂಲಕ ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲುವ ಚಿನ್ನಸ್ವಾಮಿಯವರ ಕಾವ್ಯವು ಕೇವಲ ನೋವು ಮತ್ತು ಪ್ರತಿಭಟನೆಯ ಅಭಿವ್ಯಕ್ತಿಯಲ್ಲ, ಅದೊಂದು ಘನತೆಯ ಹುಡುಕಾಟ. ಬೌದ್ಧ ತಾತ್ವಿಕತೆಯ ಬೆಳಕಿನಲ್ಲಿ ಬಹುತ್ವ ಭಾರತವನ್ನು ನೋಡುವ ಅವರ ಚಿಂತನೆಗಳು, ಸಮಾನತೆ ಮತ್ತು ಕರುಣೆಯನ್ನು ಆಧರಿಸಿದ ಸಮಾಜ ನಿರ್ಮಾಣದ ಕನಸನ್ನು ಬಿತ್ತುತ್ತವೆ. ಈ ಕವಿತೆಯು, ‘ಧಮ್ಮಯಾನ’ದ ಸಮಾಜವನ್ನು ಕಟ್ಟುವವರೆಗೂ ತನ್ನ ಪ್ರಸ್ತುತತೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.

ಡಾ.ರವಿ ಎಂ ಸಿದ್ಲಿಪುರ

ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More articles

Latest article