ಹಿಂದುತ್ವವಾದಿ ಬಾಂಧವ್ಯದಲಿ ಹಾದಿ ತಪ್ಪಿದ ನಾಲಿಗೆ

Most read

ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುತ್ತಿರುವ ಗಂಡಾಳ್ವಿಕೆಯ ಸ್ವಾಭಿಮಾನಕ್ಕೆ ಗ್ಯಾರಂಟಿ ಯೋಜನೆಗಳಿಂದ ಮರ್ಮಾಘಾತವಾಗುತ್ತಿದೆ. ತನ್ನ ಮನೆಯ ಮಹಿಳೆಯರ ಮೇಲಿನ ನಿಯಂತ್ರಣವನ್ನು ಎಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಆತಂಕವೂ ಎದುರಾಗಿದೆ. ಇಂತಹ ಆತಂಕ ಪೀಡಿತ ಪುರುಷರ ಪ್ರತಿನಿಧಿಯಾಗಿ ಕುಮಾರಸ್ವಾಮಿಯವರು ಮಾತಾಡಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾಯತ್ತತೆ ಪಡೆದರೆ ದಾರಿ ತಪ್ಪುತ್ತಾರೆ ಎಂಬಂತೆ ನಾಲಿಗೆ ಹರಿಬಿಟ್ಟಿದ್ದಾರೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

“ಗ್ಯಾರಂಟಿಗಳಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ” ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿ ತಮ್ಮ ಕಾಲ ಮೇಲಲ್ಲಾ ತಲೆ ಮೇಲೆಯೇ ಚಪ್ಪಡಿ ಕಲ್ಲನ್ನು ಹಾಕಿ ಕೊಂಡಿದ್ದಾರೆ.

ದಾರಿ ತಪ್ಪಿದ್ದು ಹಳ್ಳಿಯ ಮಹಿಳೆಯರೋ ಇಲ್ಲಾ ಜೆಡಿಎಸ್ ನ ತೆನೆ ಹೊತ್ತ ಮಹಿಳೆಯೋ ಎನ್ನುವುದು ಈಗ ಚರ್ಚೆಯ ಸಂಗತಿ. ಕುಮಾರಸ್ವಾಮಿಯವರು ಹೇಳಿದ್ದರಲ್ಲಿ ಅಂತಹ ಅಚ್ಚರಿ ಸಂಗತಿ ಏನಿಲ್ಲ. ಯಾಕೆಂದರೆ ಯಾವಾಗ ಜ್ಯಾತ್ಯತೀತ ಸಿದ್ಧಾಂತಕ್ಕೆ ತಿಲಾಂಜಲಿಯನ್ನಿಟ್ಟು ಕೋಮುವಾದಿ ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಪಕ್ಷವನ್ನೇ ಒತ್ತೆ ಇಟ್ಟಾಗಲೇ ಈ ಸ್ವಾಮಿಗಳು ಮನುವಾದಿಯಾಗ ತೊಡಗಿದ್ದರು.

ಮಂಡ್ಯದ ಹನುಮಧ್ವಜ ವಿವಾದದ ಸಮಯದಲ್ಲಿ ಕೇಸರಿ ಶಾಲು ಹಾಕಿದಾಗಲೇ ನಾಲಿಗೆಗೆ ಕೇಸರಿ ಬಣ್ಣ ಲೇಪಿಸಿ ಕೊಂಡರು. ಈಗ ನೀಡಿದ ಮಹಿಳಾ ವಿರೋಧಿ ಹೇಳಿಕೆಯೂ ಸಹ ಸರಸಂಘದ ಮನುವಾದಿ ಸಿದ್ಧಾಂತದ ಪ್ರತಿಪಾದನೆಯೇ ಆಗಿದೆ. “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವುದೇ ಹಿಂದುತ್ವವಾದಿಗಳ ಶಾಸ್ತ್ರಬದ್ಧ ಸಿದ್ಧಾಂತವಾಗಿದೆ. ಹಿಂದುತ್ವವಾದಿ ಸಂಘದ ವಿರುದ್ಧ ಕೆಂಡಕಾರುತ್ತಿದ್ದ ಕುಮಾರಸ್ವಾಮಿಯವರು ಬಿಜೆಪಿಯನ್ನು ಆನಂದದಿಂದ ಆಲಂಗಿಸಿಕೊಂಡಾದ ಮೇಲೆ ಸಂಘದ ಸಿದ್ಧಾಂತಕ್ಕೆ ಬದ್ಧತೆ ತೋರಿಸಲೇಬೇಕಲ್ಲವೇ?. ಆ ಮನುವಾದಕ್ಕೆ ನಿಷ್ಠೆ ತೋರುವ ಜೊತೆಗೆ ಹಿಂದುತ್ವವಾದಿಗಳಿಗೆ ಇಷ್ಟವಾಗುವಂತಹ ಮಾತನ್ನೇ ದಳಪತಿಗಳು ಹೇಳಿದ್ದಾರೆ. ತಪ್ಪೇನಿದೆ?

ಕಾಂಗ್ರೆಸ್ ಪಕ್ಷ  ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದಾಗಿ ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಪುರುಷರ ಹಂಗಿಲ್ಲದೆ ತವರಿಗೋ, ನೆಂಟರ ಮನೆಗೋ ಇಲ್ಲಾ ದೇವಸ್ಥಾನಗಳಿಗೋ ಪ್ರಯಾಣಿಸುವ  ಸ್ವಾತಂತ್ರ್ಯವನ್ನು ಪಡೆದು ಕೊಂಡಿದ್ದಾರೆ. ಸರಕಾರಿ ಬಸ್ ಗಳಲ್ಲಿ ನಿತ್ಯ ಪ್ರಯಾಣಿಸಿದ ಅದೆಷ್ಟೋ ಯುವತಿಯರು ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ನಿತ್ಯ ಬದುಕಿನ ಅಗತ್ಯಗಳನ್ನು ಪೂರೈಸಿ ಕೊಂಡಿದ್ದಾರೆ. ಎಲ್ಲದಕ್ಕೂ ಮನೆಯ ಯಜಮಾನರ ಬಳಿ ಕೈಚಾಚಿ ಕಾಡಿ ಬೇಡುತ್ತಿದ್ದ ಗ್ರಾಮೀಣ ಪ್ರದೇಶದ ಮಹಿಳೆಯರು ಈಗ ಅವರ ಬದುಕಿನಲ್ಲಿ ಮೊದಲ ಬಾರಿಗೆ ಒಂದಿಷ್ಟಾದರೂ ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. 

ಮಹಿಳೆಯರು ಹೀಗೆ ಆರ್ಥಿಕವಾಗಿ ಸಬಲರಾದರೆ ಎಲ್ಲಿ ತಮ್ಮ ಯಜಮಾನಿಕೆಗೆ ಧಕ್ಕೆ ಬರುತ್ತದೋ ಎಂದು ಕೆಲವಾರು ಪುರುಷರೂ ಸಹ ಈ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಮನಸ್ಥಿತಿಯ ಪುರುಷರಿಗೆ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವುದು ಖಂಡಿತಾ ಇಷ್ಟವಿಲ್ಲ. ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುತ್ತಿರುವ ಗಂಡಾಳ್ವಿಕೆಯ ಸ್ವಾಭಿಮಾನಕ್ಕೆ ಗ್ಯಾರಂಟಿ ಯೋಜನೆಗಳಿಂದ ಮರ್ಮಾಘಾತವಾಗುತ್ತಿದೆ. ತನ್ನ ಮನೆಯ ಮಹಿಳೆಯರ ಮೇಲಿನ ನಿಯಂತ್ರಣವನ್ನು ಎಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಆತಂಕವೂ ಎದುರಾಗಿದೆ. ಇಂತಹ ಆತಂಕ ಪೀಡಿತ ಪುರುಷರ ಪ್ರತಿನಿಧಿಯಾಗಿ ಕುಮಾರಸ್ವಾಮಿಯವರು ಮಾತಾಡಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾಯತ್ತತೆ ಪಡೆದರೆ ದಾರಿ ತಪ್ಪುತ್ತಾರೆ ಎಂಬಂತೆ ನಾಲಿಗೆ ಹರಿಬಿಟ್ಟಿದ್ದಾರೆ.

ಬಹುತ್ವವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಿಂದುತ್ವವನ್ನು ಸಮರ್ಥಿಸಿಕೊಳ್ಳುವ ಮನುಸ್ಮೃತಿಯನ್ನು ಜಾರಿಗೊಳಿಸುವುದೇ ಬಿಜೆಪಿ ಪಕ್ಷ ಹಾಗೂ ಅದರ ಮಾತೃ ಸಂಸ್ಥೆ ಆರೆಸ್ಸೆಸ್ ಗುರಿಯಾಗಿದೆ. ಸಂವಿಧಾನವು ಲಿಂಗಬೇಧವನ್ನು ಅಳಿಸಿ ಹಾಕಿ ಹೆಣ್ಣುಮಕ್ಕಳಿಗೂ ಪುರುಷರಷ್ಟೇ ಸಮಾನತೆಯನ್ನು ಕೊಟ್ಟಿದ್ದನ್ನು ಮನುವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಂವಿಧಾನವನ್ನೇ ಬದಲಾಯಿಸಿ ಚಾತುರ್ವರ್ಣ ಪ್ರಣೀತ ಸನಾತನ ಮನುಧರ್ಮಶಾಸ್ರ್ತ ಆಧರಿಸಿದ ಮನುಸ್ಮೃತಿ ಸಂವಿಧಾನವನ್ನು ಭಾರತದಾದ್ಯಂತ ಜಾರಿಗೆ ತರುವುದೇ  ಹಿಂದುತ್ವವಾದಿಗಳ ಅಂತಿಮ ಉದ್ದೇಶವಾಗಿದೆ. ಅದಕ್ಕಾಗಿಯೇ ಬಿಜೆಪಿ ಸಂಸದರು ಸಂವಿಧಾನವನ್ನೇ ಬದಲಾಯಿಸುವ ಹೇಳಿಕೆಯನ್ನು ಆಗಾಗ ಕೊಡುತ್ತಲೇ ಇರುತ್ತಾರೆ. ಬಿಜೆಪಿ ಸಹ ಇದನ್ನು ವಿರೋಧಿಸದೇ ಮೌನ ಸಮ್ಮತಿಯನ್ನು ಸೂಚಿಸುತ್ತಲೇ ಇದೆ. ಸಂಘ ಪರಿವಾರದ ಅಂಗಗಳು ಸಂವಿಧಾನದ ಪ್ರತಿಯನ್ನು ನಡುಬೀದಿಯಲ್ಲಿ ಸುಟ್ಟಿದ್ದರೂ ಆ ಸಂವಿಧಾನ ವಿರೋಧಿಗಳಿಗೆ ಶಿಕ್ಷೆ ಕೊಡಿಸಲೂ ಬಿಜೆಪಿ ಸರಕಾರ ಮುಂದಾಗುವುದಿಲ್ಲ. ಬಹುತ್ವವನ್ನು ನಾಶ ಪಡಿಸಿ ಈ ದೇಶವನ್ನು ಹಿಂದುತ್ವವಾದಿ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಪರೋಕ್ಷವಾಗಿ ಘೋಷಿಸುತ್ತಲೇ ಇರುತ್ತಾರೆ. ಸಂವಿಧಾನ ಕೊಡಮಾಡಿದ ಮೀಸಲಾತಿಯನ್ನು ತೆಗೆದು ಹಾಕುವುದಾಗಿಯೂ ಮನುವಾದಿಗಳು ಹೇಳುತ್ತಲೇ ಇರುತ್ತಾರೆ.

ಗೃಹ ಲಕ್ಷ್ಮಿ ಯೋಜನೆ

ಇದೆಲ್ಲದರ ಒಳಮರ್ಮ ಒಂದೇ. ಸಂವಿಧಾನದ ಆಶ್ರಯದಲ್ಲಿ ಮಹಿಳೆಯರು ಶೂದ್ರರು ದಲಿತರು ಸಮಾನತೆಯನ್ನು ಪಡೆದಿದ್ದಾರೆ. ಇದನ್ನು ತೆಗೆದು ಹಾಕಿ ಮತ್ತೆ ತಾರತಮ್ಯದ ಬ್ರಾಹ್ಮಣ ಕ್ಷತ್ರಿಯ ವೈಶ್ಯರ ನಿಯಂತ್ರಣದ ಆಳುವ ವ್ಯವಸ್ಥೆಯನ್ನು ಜಾರಿಗೊಳಿಸುವುದೇ ಹಿಂದುತ್ವವಾದಿಗಳ ಹಿಡನ್ ಅಜೆಂಡಾ ಆಗಿದೆ.  

ಈ ಬಾರಿ ಮತ್ತೆ ಬಿಜೆಪಿ ಪಕ್ಷ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿದ್ದೇ ಆದರೆ ಅವರ ಆಶಯದಂತೆ ಸಂವಿಧಾನ ಬದಲಾಯಿಸಲಾಗುತ್ತದೆ. ಅದಕ್ಕಾಗಿ ಸರ್ವಾಧಿಕಾರಿ ವ್ಯವಸ್ಥೆ ಘೋಷಣೆಯಾಗುತ್ತದೆ. ಮನುಸ್ಮೃತಿ ಸಂವಿಧಾನವಾಗುತ್ತದೆ. ಮಹಿಳೆಯರು ಗಂಡನಿಗೆ ವಿಧೇಯವಾಗಿದ್ದು ಮನೆ ಮಕ್ಕಳನ್ನು ನೋಡಿಕೊಂಡು ಹೊಸ್ತಿಲ ಒಳಗೆ ಇರಬೇಕಾಗುತ್ತದೆ. ಸಂವಿಧಾನ ಕೊಟ್ಟ ಎಲ್ಲಾ ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ. ಮಕ್ಕಳನ್ನು ಹೆತ್ತು ಹೊತ್ತು ಪೋಷಿಸುವ ಯಂತ್ರವಾಗಿ ಬದುಕು ಸವೆಸ ಬೇಕಾಗುತ್ತದೆ. ಈ ಅನುಶಾಸನವನ್ನು ಮೀರಿದ ಮಹಿಳೆಯರು ದಾರಿ ತಪ್ಪಿದವರಾಗುತ್ತಾರೆ. ಶಿಕ್ಷೆಗೆ ಗುರಿಯಾಗುತ್ತಾರೆ. ಇಂತಹ ಸ್ತ್ರೀ ವಿರೋಧಿ ಧರ್ಮಾಧಾರಿತ ವ್ಯವಸ್ಥೆಗೆ ಅಪಘಾನಿಸ್ತಾನದ ತಾಲಿಬಾನ್ ಸರಕಾರವೇ ಉದಾಹರಣೆಯಾಗಿದೆ. ಕೆಲವಾರು ಧರ್ಮಾಧಾರಿತ ಸರ್ವಾಧಿಕಾರಿ ಆಡಳಿತ ಇರುವ ದೇಶಗಳು ಮಹಿಳಾ ವಿರೋಧಿತನಕ್ಕೆ ಕಾರಣವಾಗಿವೆ. ಭಾರತದಲ್ಲಿ ಪುರೋಹಿತಶಾಹಿ ಬ್ರಾಹ್ಮಣ್ಯ ಧರ್ಮಾಧಾರಿತ ಹಿಂದುತ್ವವಾದಿ ಪ್ರಭುತ್ವ ಜಾರಿಗೆ ಬಂದರೆ ಅದರ ಮೊದಲ ಬಲಿಪಶುಗಳು ಈ ದೇಶದ ಸಮಸ್ತ ಮಹಿಳಾ ಕುಲಸಂಜಾತರು ಎನ್ನುವುದು ಶತಸಿದ್ಧ.

ಇದನ್ನೂ ಓದಿ- ಕುಮಾರಸ್ವಾಮಿಯವರೇ, ನಮ್ಮ ತಾಯಂದಿರು ದಾರಿ ತೋರುವವರೇ ಹೊರತು, ದಾರಿ ತಪ್ಪುವವರಲ್ಲ

ಇಂತಹ ಹಿಂದುತ್ವವಾದಿ ಪಕ್ಷದ ಜೊತೆಗೆ ಒಡಂಬಡಿಕೆ ಕೂಡಿಕೆ ಮಾಡಿಕೊಂಡ ಕುಮಾರಸ್ವಾಮಿಯವರ ನಡೆ ನುಡಿಗಳಲ್ಲೂ ಮನುವಾದಿತನ ಎದ್ದು ಕಾಣಿಸುತ್ತಿದೆ. ಅದರ ಪ್ರಭಾವವೇ ಇಂತಹ ಮಹಿಳಾ ವಿರೋಧಿ ಹೇಳಿಕೆಯನ್ನು ಹೊರಹೊಮ್ಮಿಸುತ್ತದೆ. ನಾಲಿಗೆ ಮನದಾಳದ ಮಾತುಗಳನ್ನೇ ಹೇಳುತ್ತದೆಯಂತೆ. ಅನ್ನಿಸಿದ್ದನ್ನು ಸೀದಾ ಹೇಳೇ ಬಿಡುವ ಕುಮಾರ ಸ್ವಾಮಿಗಳು ತಮ್ಮ ಅಂತರಾಳದಲ್ಲಿರುವ ಸ್ತ್ರೀ ವಿರೋಧಿ ಧೋರಣೆಯನ್ನೆ ನಾಲಿಗೆಯಿಂದ ನುಡಿದಿದ್ದಾರೆ. ಯಾವಾಗ ನಾಡಿನಾದ್ಯಂತ ಆಕ್ರೋಶ ಶುರುವಾಯಿತೋ ಆಗ “ನನ್ನ ಮಾತಿನ ಅರ್ಥ ಹಾಗಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ, ನಾನೂ ಮಹಿಳೆಯರಿಗೆ ಗೌರವ ಕೊಡುತ್ತೇನೆ” ಎಂದೆಲ್ಲಾ ಸಬೂಬು ಹೇಳಿ ಆದ ಡ್ಯಾಮೇಜ್ ನಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿಯವರು ಪ್ರಯತ್ನಿಸುತ್ತಾರೆ. ಇನ್ನೂ ವಿರೋಧ ಮಿತಿ ಮೀರಿದರೆ ಕ್ಷಮೆಯನ್ನೂ ಕೋರುತ್ತಾರೆ. ಆದರೆ ಕುಮಾರಸ್ವಾಮಿಯವರು ಆಡಿದ ಮನುವಾದಿ ಮಾತುಗಳಿಗೆ, ಸ್ತ್ರೀ ಕುಲ ವಿರೋಧಿ ಕೇಡಿನ ನುಡಿಗಳಿಗೆ ಕ್ಷಮೆ ಎನ್ನುವುದೇ ಇಲ್ಲ. ಅದಕ್ಕೆ ತಕ್ಕ ಉತ್ತರವನ್ನು ಈ ಚುನಾವಣೆಯಲ್ಲಿ ಮಹಿಳೆಯರು ಕೊಟ್ಟೇ ಕೊಡುತ್ತಾರೆ. ಮಹಿಳಾ ವಿರೋಧಿ ಮನುವಾದಿ ಬಿಜೆಪಿ ಪಕ್ಷಕ್ಕೂ ಈ ಸಲ ಕರ್ನಾಟಕದ ಮಹಿಳೆಯರು ಖಂಡಿತಾ ಪಾಠ ಕಲಿಸುತ್ತಾರೆ, ಕಲಿಸಲೇಬೇಕು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು.

More articles

Latest article