ಕವಿ, ವನಗಳ ಸೃಷ್ಟಿಕರ್ತ ಭೂಹಳ್ಳಿ ಪುಟ್ಟಸ್ವಾಮಿ: ಒಂದು ನೆನಪು

Most read

2024 ರ  ಜುಲೈ 29 ರ ಸೋಮವಾರದ ಬೆಳಗು ನನಗೆ ಎಂದಿನ ಬೆಳಗಾಗಿರಲಿಲ್ಲ. ಬೆಳಗಿನ ಜಾವದಲ್ಲೇ ಅನೇಕ ಸ್ನೇಹಿತರು ದುರಂತದ ಸುದ್ದಿಯೊಂದನ್ನು ಹಂಚಿಕೊಂಡಿದ್ದರು. ಅದು ಹೀಗಿತ್ತು: “ನನ್ನ ಸಾವಿಗೆ ನಾನೆ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನಯಾತ್ರೆ ಮುಗಿಸುತ್ತಿದ್ದೇನೆ”- ಭೂಹಳ್ಳಿ ಪುಟ್ಟಸ್ವಾಮಿ. 28.07. 2024 ರ ರಾತ್ರಿ 2.40.

ಈ ಆಘಾತಕಾರಿ ಸುದ್ದಿ ಓದಿ ಕ್ಷಣ ಗಲಿಬಿಲಿಗೊಂಡು, ಸುದ್ದಿ ಸುಳ್ಳಾಗಲಿ ಎಂದುಕೊಳ್ಳುತ್ತಿದ್ದಂತೆ, ಪರಿಚಿತರ ಫೋನ್ ರಿಂಗಾಯಿತು. ಅವರು ಮಾತಾಡುತ್ತ, “ಭೂಹಳ್ಳಿ ಸಾರ್, ಫೋನ್  ಸ್ವಿಚ್ ಆಫ್ ಅಂತ ಬರುತ್ತಿದೆ. ಆತ್ಮಹತ್ಯೆಯ ಸುದ್ದಿಯನ್ನು face book  ಗೆ ಹಾಕಿದ್ದಾರೆ ಸಾರ್. ನೀವು ಸುದ್ದಿ ಖಚಿತ ಪಡಿಸಿಕೊಳ್ಳಿ” ಎಂದಾಗ,  “ದಿಗಿಲು, ಭಯ ಶುರುವಾಯ್ತು. ಛೇ! ಎಂಥ ದುಡುಕಿನ ನಿರ್ಧಾರ ತಗೊಂಡುಬಿಟ್ಟ” ಎಂದು ದುಃಖಿಸಿದೆ. ಆಗಲೆ ಅವನ ಸಾವು ಖಚಿತವಾಗಿತ್ತು. ಅವನು ನನ್ನ ಸಾಹಿತ್ಯ ಗೆಳೆಯರ ಗುಂಪಿನ ವಿಶಿಷ್ಟ ಸಾಧಕ. ಪರಿಸರದ ಬಗ್ಗೆ ಅವನಿಗಿದ್ದ ಕಾಳಜಿ, ಬದ್ಧತೆ ನಮ್ಮಲ್ಲಿ ಒಂದು ಭಾಗವೂ ಇರಲಿಲ್ಲ. ಅವನ ನನ್ನ ಮೂರೂವರೆ ದಶಕಗಳ ಸ್ನೇಹದ ನೆನಪು ಬಿಚ್ಚಿಕೊಂಡಿತು.

ಭೂಹಳ್ಳಿ ಪುಟ್ಟಸ್ವಾಮಿ

ಇತಿಹಾಸ ಉಪನ್ಯಾಸಕನಾಗಿದ್ದರೂ, ಗೆಳೆಯ ಭೂಹಳ್ಳಿ ಪುಟ್ಟಸ್ವಾಮಿ ಕಳೆದ ತೊಂಬತ್ತರ ದಶಕದಲ್ಲಿ ಪರಿಚಯವಾಗಿದ್ದು ಕವಿಗೋಷ್ಠಿಯಲ್ಲಿ. ಆಗಲೇ ಒಂದು ಕವನ ಸಂಕಲನ ಹೊರತಂದಿದ್ದು ನನ್ನ ಕೈಗಿತ್ತಿದ್ದ. ನಂತರ ನಾನು ಸಂಪಾದಕನಾಗಿದ್ದ  “ಅನ್ವೇಷಣೆ” ಸಾಹಿತ್ಯ ಪತ್ರಿಕೆಯಲ್ಲು ಕವಿತೆ ಪ್ರಕಟವಾಯಿತು. ಮುಂದೆ ಕವಿ ಕುವೆಂಪು ಶತಮಾನೋತ್ಸವ ೨೦೦೪ರಲ್ಲಿ ನಡೆದಾಗ, ಕುವೆಂಪು ಕುರಿತ ಕೃತಿ ಸಂಪಾದಿಸಿದಾಗ ಅವರ ಬಗ್ಗೆ ಕವನ ಬರೆದಿದ್ದ. ಮುಂದಿನ ದಿನಗಳಲ್ಲಿ  ನಮ್ಮ ಸ್ನೇಹ ಗಾಢವಾಯ್ತು. ಅವನು ನಾನಿದ್ದ ನಾಗರಬಾವಿ ರಸ್ತೆಯ ಮನೆ ಬಳಿಯೇ ವಾಸವಾಗಿದ್ದ.

ಪುಟ್ಟಸ್ವಾಮಿ ಮೃದು ಮಾತುಗಾರ. ಇತಿಹಾಸದ ಅನೇಕ ವಾಸ್ತವ ಸಂಗತಿ, ಹಲವು ಘಟನೆಗಳನ್ನು ಬಿಚ್ಚಿಡುತ್ತಿದ್ದ. ಭಾರತ ಆಳಿದ ಹಿಂದೂ – ಮುಸ್ಲಿಂ, ಬ್ರಿಟಿಷ್ ಆಳ್ವಿಕೆ ಬಗ್ಗೆ ಕರಾರುವಾಕ್ಕು ಇಸವಿ, ವಿಚಾರ ಹೇಳುತ್ತಿದ್ದ.  ಅನೇಕ ಧರ್ಮಗಳ ಬಗ್ಗೆ ಆಳವಾದ ಅಧ್ಯಯನ ಇತ್ತು. ಹಿಂದೂ ಧರ್ಮ ಅನ್ನೋದೆ ಇಲ್ಲ, ಮನುವಾದಿಗಳ ಸುಳ್ಳು ನಮ್ಮ ಮೆದುಳು, ಮನಸ್ಸನ್ನು ಕಲುಷಿತ ಗೊಳಿಸುತ್ತಿದೆ ಎನ್ನುತ್ತಲೆ, ಶೋಷಿತ ಜನಾಂಗ ಹಾಗೂ ರೈತರ ಕಷ್ಟಗಳ ಬಗ್ಗೆ ಕಾಳಜಿಯಿಂದ ಮಾತಾಡುತ್ತಿದ್ದ. ಜನಾಂಗದ ವರ್ಣಸಂಕರಗಳ ಬಗ್ಗೆ ಹೌದೆನ್ನುವಂತೆ ವಾದ ಮಂಡಿಸುತ್ತಿದ್ದ. ತಾನು ಶೋಷಿತ ಬೆಸ್ತ ಜನಾಂಗದಿಂದ ಬಂದಿದ್ದರೂ, ಆಹಾರ ಸೇವನೆಯಲ್ಲಿ ಮೀನು, ಮಾಂಸ ವರ್ಜಿಸಿದ್ದ. ಯುವ ಜನಾಂಗದ ಕುಡಿತ, ಸಿಗರೇಟು ಚಟ ಅವನ ಬಳಿ ಸುಳಿಯಲಿಲ್ಲ. ಸಾತ್ವಿಕ ಆಹಾರದಲ್ಲಿ ಯೋಗ, ವ್ಯಾಯಾಮ ಮಾಡುತ್ತ, ಪರಿಸರ ಪ್ರೇಮಿಯಾದ. ೨೫ಕ್ಕೂ  ಹೆಚ್ಚು ಎಕರೆಗಳಲ್ಲಿ ಹಲವು “ವನಗಳನ್ನು” ಸ್ವಂತ ಹಣ ಖರ್ಚುಮಾಡಿ ಬೆಳೆಸಿದ. ವನಗಳಿಗೆ ಬೇಕಾದ ಸಸ್ಯಗಳನ್ನು ಭಾರತದ ಹಲವು ಭಾಗದಿಂದ ತಂದ. ತಾನು ಉತ್ತರ ಭಾರತದ ದೆಹಲಿ, ಉಜ್ಜಯಿನಿ, ಆಗ್ರಾ, ದಕ್ಷಿಣ ಭಾಗದ ಚೆನ್ನೈ ಪ್ರವಾಸ ಹೋದಾಗ ದೇವಸ್ಥಾನ ಸುತ್ತುವ ಬದಲು ನರ್ಸರಿ ಹುಡುಕಿ ಹೊರಟು, ಕೈಯಿಂದ ಹಣತೆತ್ತು ವಿವಿಧ ಸಸ್ಯ ಸಂಪತ್ತು ಹೊತ್ತುತಂದ.  ರಾಜ್ಯದ ಸಕಲೇಶಪುರ, ಮಂಡ್ಯ, ಮಡಿಕೇರಿ, ಮೈಸೂರು ಮೊದಲಾದೆಡೆಯಿಂದ ಸಸ್ಯಗಳನ್ನು ಖರೀದಿಸಿ  ವನಗಳಲ್ಲಿ ನೆಡಿಸಿದ.  

ರಾಮನಗರ ಜಿಲ್ಲೆ ಚನ್ನಪಟ್ಟಣ ಹಾಗೂ ಸಮೀಪದ ಸ್ವಂತ ಊರು ಭೂಹಳ್ಳಿ ಗೋಮಾಳದಲ್ಲಿ ನೂರಾರು ಗಿಡ ನೆಟ್ಟ. ಅವುಗಳನ್ನು ಬೆಳೆಸಲು ಹರಸಾಹಸ ಮಾಡಿದ. ಊರಿನ ಹಲವರ ವಿರೋಧದ ನಡುವೆಯೂ ಕೂಲಿ ಆಳು‌ ನೇಮಿಸಿ, ಟ್ಯಾಂಕುಗಳಲ್ಲಿ ನೀರು ತರಿಸಿ ಗಿಡಗಳಿಗೆ ಉಣಿಸಿ ಬೆಳೆಸಿದ.

ಬುದ್ಧೇಶ್ವರ ವನದ ಪ್ರತಿಮೆ

ತನ್ನ ಊರಿನ ಆ ವನಕ್ಕೆ ಮೊದಲು “ಕವಿವನ” ಅಂತ ನಾಮಕರಣ ಮಾಡಿ, ನಂತರ “ಬುದ್ದೇಶ್ವರ ವನ” ಎಂದು ನಾಮಕರಣ ಮಾಡಿ, ಅಲ್ಲಿ ಕವಿಗೋಷ್ಠಿ, ಗೀತ ಗಾಯನ, ಚರ್ಚೆ ಏರ್ಪಡಿಸಿದ‌. ರಾಮನಗರ ಜಿಲ್ಲೆ, ಮೈಸೂರು, ಬೆಂಗಳೂರಿನ ಎಷ್ಟೋ ಕವಿಗಳು, ಲೇಖಕರು ಅಲ್ಲಿ ಭಾಗವಹಿಸಿ, ಸಸಿಗಳನ್ನು ನೆಟ್ಟರು.  ಯಾವ ದಾನಿಗಳಿಂದಲೂ ಧನ ಸಹಾಯ ಕೇಳದೆ, ಸ್ವಾಭಿಮಾನಿಯಾಗಿ ತನ್ನ ಉಪನ್ಯಾಸಕ ವೃತ್ತಿಯ ಸಂಬಳದ ಹಣವನ್ನೆಲ್ಲ ಗಿಡ ಬೆಳೆಸಲು ಬಳಸಿದ ಹುಚ್ಚು ಸಾಹಸಿ. 

ಊರಿನ ವನದ ನಂತರ ಚನ್ನಪಟ್ಟಣ, ಅದರ ಸನಿಹದ ಸರ್ಕಾರಿ ಜಮೀನಿನಲ್ಲಿ ವನಗಳ ನಿರ್ಮಾಣಕ್ಕೆ ಕೈ ಹಾಕಿದ. ಊರೊಳಗೆ “ವಿದ್ಯಾರ್ಥಿ ವನ”, ಊರಿಗೆ ಆತುಕೊಂಡಂತೆ “ಜೀವೇಶ್ವರ ವನ” ನಿರ್ಮಿಸಿದ. ಆಗ ಬೆಂಗಳೂರು ಮತ್ತಿತರ ಪ್ರದೇಶದಿಂದ ಬಂದ ಸಾಹಿತಿಗಳಿಂದ ಸಾಮೂಹಿಕವಾಗಿ ಸಸಿ ನೆಡಿಸಿ, ವಿಚಾರ ಸಂಕಿರಣ ಮಾಡಿದ್ದು ಅಚ್ಚ ಹಸಿರಾಗಿದೆ. ಅಲ್ಲಿ 10 ವರ್ಷಗಳ ಹಿಂದೆ ನಾನು, ನನ್ನ ಮಿತ್ರರು ನೆಟ್ಟ ಗಿಡಗಳು ಭರ್ಜರಿ ಮರವಾಗಿ ಬೆಳೆದಿವೆ. ಈ ಪ್ರದೇಶ ಐದು ಎಕರೆ ವಿಸ್ತೀರ್ಣ ಹೊಂದಿದೆ.

ರೂ.100 ರಿಂದ ರೂ.600 ವರೆಗೂ ಕೊಟ್ಟು ಖರೀದಿಸಿದ ಗಿಡಗಳನ್ನು ಬಹಳ ಜೋಪಾನವಾಗಿ ಬೆಳೆಸಿದ. ಕುರಿ, ಮೇಕೆ, ದನಕರುಗಳ ಹಾವಳಿ ನಿಯಂತ್ರಣ ಮಾಡಲು ಹಣ ಕೊಟ್ಟು ಕೆಲಸದವರನ್ನು ನೇಮಿಸಿದ. ಸಸಿಗಳ ಗುಣಿ ತೆಗೆಯಲು, ಗೊಬ್ಬರ ಹಾಕಲು, ನೀರುಣಿಸಲು, ತಾತ್ಕಾಲಿಕ ಬೇಲಿ ಹಾಕಲು ಹಣ ಇಲ್ಲದೆ ಸಾಲ ಮಾಡಿದ. ಸಸಿಗಳು ಸೊಂಪಾಗಿ ಬೆಳೆದಾಗ ತನ್ನ ಆರ್ಥಿಕ ನೋವನ್ನು ಮರೆತ. ತನ್ನ ಸಾಹಿತ್ಯಾಸಕ್ತಿ, ಓದು, ಚರ್ಚೆಯ ಮೂಲಕ ನೆಮ್ಮದಿ ಹುಡುಕಿದ.

ಹೀಗೆ, ಮತ್ತಷ್ಟು ವನಗಳಿಗೆ ಜಾಗ ಹುಡುಕಿದ. ಅವುಗಳಿಗೆ ಬೇಲಿ ಹಾಕಿಸಿ “ನೃಪತುಂಗ ವನ”, “ಪಂಪ ವನ”, “ಕದಂಬ ವನ”, “ಹೊಯಿಸಳ ವನ” ಎಂದು ಇತಿಹಾಸ, ಸಂಸ್ಕೃತಿ ಪ್ರಿಯರ ಹೆಸರು ಇಟ್ಟು ಬೆಳೆಸಿದ. ಈ ಕುರಿತು ರಾಜ್ಯ ಮಟ್ಟದ ಅನೇಕ ಕನ್ನಡ, ಇಂಗ್ಲಿಷ್ ಪತ್ರಿಕೆಗಳು ಲೇಖನ ಬರೆದು ನಾಡಿನ ಜನಮನ ಸೆಳೆದವು. ಹಲವು ವಾಹಿನಿಗಳು, ದೂರರ್ಶನ ಇವನ ಸಂದರ್ಶನ ಬಿತ್ತರಿಸಿದವು. ಇಂಥ ಪ್ರಸಿದ್ದಿ ಪಡೆದ ಗೆಳೆಯನಿಗೆ ಪರಿಸರ ಇಲಾಖೆ, ಸರ್ಕಾರದ ಅರಣ್ಯ ಇಲಾಖೆ ಪ್ರಶಸ್ತಿ, ಗೌರವ ನೀಡಲಿಲ್ಲ. ಅದನ್ನು ಅವನು ನಿರೀಕ್ಷಿಸದಿದ್ದರೂ ಅವನು ಮಾಡಿದ ಪರಿಸರ ಉಳಿಸುವ ಕೆಲಸಕ್ಕೆ ಪ್ರತಿಫಲ ನೀಡಬೇಕಿತ್ತು. ಇಂಥ ಸಾಧಕ ಆತ್ಮಹತ್ಯೆಗೆ ಶರಣಾಗಲು ಮನಸ್ಸು ಹೇಗೆ ಗಟ್ಟಿಮಾಡಿಕೊಂಡಿರಬೇಕು? ಅವನು ಸಾವಿಗೆ ತಲೆಕೊಡಲು ಕಾರಣವಾಗಿದ್ದು “ಅಸ್ತಮ” ಕಾಯಿಲೆ. ಅವನ ಸಾವಿನ ಸುದ್ದಿ ಖಚಿತವಾದ ತಕ್ಷಣ ಬರೆದೆ:

 “ಅಯ್ಯೋ! ಗೆಳೆಯ, 

ಎಂತಹ ಕೆಲಸ ಮಾಡಿಬಿಟ್ಟೆ ಮಾರಾಯ.

ನಡೆದೇ ಬಿಟ್ಟರು…

ಮೊನ್ನೆ ಭಾನುವಾರ (21.07.2024.) ಇಡೀ ದಿನ ಚನ್ನಪಟ್ಟಣ, ಸಮೀಪದ ನಿನ್ನೂರಲ್ಲಿ ನಾನು ಮತ್ತು ಕವಿ, ತಂತ್ರಜ್ಞ ಚಂದ್ರ ಮೊಗೇರ –  ನೀನು ಬೆಳೆಸಿದ ವನಗಳ ಸುತ್ತಿದ್ದೆವು. ನಿನ್ನ ಹುಟ್ಟೂರಿನ “ಬುದ್ಧೇಶ್ವರ ವನ”ದಲ್ಲಿ ಹಲವು ಗಂಟೆಗಳ ಕಾಲ ಕಳೆದೆವು. ಹನ್ನೆರಡು ವರ್ಷದ ಹಿಂದೆ ಅಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ನಾನು ವಹಿಸಿದ ಸ್ಥಳದಲ್ಲಿ ದಟ್ಟವಾಗಿ ಬೆಳೆದ ಕಾಡು ಗಿಡಮರಗಳ ಕಂಡು ಉಲ್ಲಸಿತನಾಗಿದ್ದೆ. ನಿನ್ನ ಜೊತೆ ಆ ಮರಗಳ ಮಧ್ಯದಲ್ಲಿನ ಕಲ್ಲುಹಾಸಿನ ಮೇಲೆ, ಬುದ್ಧೇಶ್ವರನ ಪ್ರತಿಮೆ ಬಳಿ ಕೆತ್ತಿಸಿದ್ದ ಬುದ್ಧನ ಉಕ್ತಿಗಳು ಹಾಗೂ ಅಲ್ಲಿದ್ದ ನಿನ್ನ ಕವನಗಳ ನಿನ್ನಿಂದಲೇ ಓದಿಸಿ ಫೋಟೋ ಕ್ಲಿಕ್ಕಿಸಿದ್ದೆ. ನಿನ್ನ ಮನೆಯಿಂದ ಅಣ್ಣನ ಮಗನಿಂದ ತರಿಸಿದ್ದ ಹುರಿದ ಕಳ್ಳೇಕಾಯಿ, ಬಿಸ್ಕತ್, ಕಾಫಿ, ಬಾಳೆಹಣ್ಣು ರುಚಿನೋಡಿ, ಹರಟೆ ಹೊಡೆದದ್ದು ಹೇಗೆ ಮರೆಯಲಿ? ಅಲ್ಲೆ ನಿನ್ನೂರಿನ ಮಕ್ಕಳಿಗೆ ಸಂಗೀತ – ನೃತ್ಯ ಕಲಿಕೆಯ “ಗಂಗೂಬಾಯಿ ಹಾನಗಲ್” ಮಂಟಪದಲ್ಲಿದ್ದ ಕಸವನ್ನೆಲ್ಲ ಗುಡಿಸಿ ಸ್ವಚ್ಛ ಮಾಡಿದೆ.

ನಂತರ ಊರ ಹೊರಗಿನ ಅದ್ದೂರಿ ಹೋಟೆಲಿಗೆ ಊಟಕ್ಕೆ ಕರೆದೊಯ್ದ. ನಾನು ಇಂಥ ದುಬಾರಿ ಹೋಟೆಲಲ್ಲಿ ತಿನ್ನೊಲ್ಲ. ರಸ್ತೆ ಬದಿ ಎರಡು ಇಡ್ಲಿ ಸಾಕು ಎಂದೆ. ಬಂದಾಗಿದೆ, ಊಟ ಮಾಡು ಎಂದರೂ, ನಾನು ಒಪ್ಪದೆ ದೋಸೆ ತಿಂದೆ. ನನ್ನ ಜೊತೆ ಡ್ರೈವರ್ ಅದನ್ನೆ ತಿಂದರು. ನೀನು ರವೆ ಇಡ್ಲಿ ತಿಂದೆ. ಚಂದ್ರು ಒಬ್ಬ ಊಟ ಮಾಡಿದ. ಚನ್ನಪಟ್ಟಣಕ್ಕೆ ವಾಪಾಸು ಬಂದು ಪತ್ರಕರ್ತ, ಪರಿಸರ ಬರಹಗಾರ ನಾಗೇಶ ಹೆಗಡೆ ಜೊತೆ ಮಾತಾಡಿದಾಗ, “ಭೂಹಳ್ಳಿ ಅವರ ಹೆಸರು ಕೇಳಿದ್ದೇನೆ. ಎರಡು ವಾರ ಬಿಟ್ಟು ಅವರ ವನ ನೋಡಲು ಬರ್ತೀನಿ”  ಅಂದರು. ನಿನಗೆ ಸಂತೋಷವಾಗಿ, ಅವರ ಮನೆಗೆ ಕಾರು ಕಳುಹಿಸುವೆ. ನೀನು ಜೊತೆ ಬಾ ಎಂದೆ.

ನಾನು ನಿನ್ನ ವನದಲ್ಲಿದ್ದ ಸಮೃದ್ಧ ಕರಿಬೇವು ಕಿತ್ತು ಮನೆಗೆ ತಂದಿದ್ದೆ. ಸಂಗಾತಿ ಪುಷ್ಪಾಗೆ, “ನೋಡು, ಇದು ಭೂಹಳ್ಳಿ ಬೆಳೆದ ವನದ್ದು. ಎಷ್ಟೊಂದು ಘಮಘಮ ವಾಸನೆ…” ಎಂದು ಹೆಮ್ಮೆಯಿಂದ ಹೇಳಿದ ಕೆಲವೇ ನಿಮಿಷದಲ್ಲಿ ಪುಷ್ಪ ಜೊತೆ ಸಾಕಷ್ಟು ಹೊತ್ತು ಮಾತಾಡಿದೆ. ನಿನ್ನ ಸಮಗ್ರ ಕವನ ಸಂಕಲನಕ್ಕೆ ಮುನ್ನುಡಿ ಬರೆಯಲು ಹೇಳಿದೆ. ನೀನು ಕೊಟ್ಟ ಎರಡು ಕವನ ಸಂಕಲನ ಆಕೆ ಎದುರೇ ಇಟ್ಟುಕೊಂಡಿದ್ದಳು.

ಇದಾದ ಎರಡು ದಿನಕ್ಕೆ ದಿಢೀರ್ ಎಂದು “ಕಲಾಕ್ಷೇತ್ರದ ಆವರಣದಲ್ಲಿದ್ದೇನೆ, ಸಾಹಿತ್ಯ ಅಕಾಡೆಮಿಗೆ ಪ್ರಶಸ್ತಿಗಾಗಿ ಪುಸ್ತಕ ಕೊಡಲು ಬಂದಿದ್ದೇನೆ” ಎಂದು ಫೋನು ಮಾಡಿದೆ. ನನ್ನ ಕೌಶಲ್ಯಾಭಿವೃದ್ಧಿ ಇಲಾಖೆ ಕಚೇರಿ ಎದುರೆ ಇದೆ. ರಸ್ತೆ ದಾಟಿ ಬಾ. ಲಿಫ್ಟ್ ಇದೆ. ಮೂರನೇ ಮಹಡಿಗೆ ಬಾ ಎಂದು ನಾನೆಂದೆ.  ನೀನು ಕೆಲವೇ ನಿಮಿಷದಲ್ಲಿ ಬಂದೆ. ಆಗಲೂ ಬಾಯಿಗೆ ಮಾಸ್ಕ್ ಧರಿಸಿ ಬಂದೆ. ನಾನೆ “ಯಾವಾಗಲೂ ಏಕೆ ಮಾಸ್ಕ್ ಹಾಕಿರುತ್ತಿ? ತೆಗೆ” ಅಂದೆ. ನನಗೆ ಅನಾರೋಗ್ಯ. ಅಸ್ತಮ ಅದಕ್ಕೆ ಹಾಕಿರುವೆ ಎಂದೆ. ಕಚೇರಿಗೆ ಬಂದವನು ನನ್ನೆದುರು ಕೂತು ಮೃದು ಮಾತಲ್ಲಿ 15-20ನಿಮಿಷ ಮಾತಾಡಿದೆ. ಮತ್ತೆ ಸಮಗ್ರ ಕವಿತೆ ಪುಸ್ತಕ ತರುವ ಬಗ್ಗೆ, ಪರಿಸರ ಕಾಳಜಿಯ ನಾಟಕ ಕುರಿತು, ಪರಿಸರ ಇಲಾಖೆಯ ಪ್ರಶಸ್ತಿ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದೆ. “ಭಾನುವಾರ ಆದರೆ ಬೆಂಗಳೂರಿಗೆ ಬಾ, ಬರಗೂರು ಅವರಿಗೆ ಗೌರವ ಸಮರ್ಪಣೆ ಇದೆ” ಅಂದೆ. “ನಾನು ಕಾರು ಓಡಿಸೊಲ್ಲ, ಮತ್ತೆ ಡ್ರೈವರ್ ಹುಡುಕಿ ಕರೆತರಬೇಕು, ನೋಡ್ತೀನಿ” ಅಂದೆ.  

ಊಟದ ಸಮಯವಾಗಿತ್ತು. ಊಟ ಮಾಡೋಣ ಎಂದರೂ ಏನು ತಿನ್ನೊಲ್ಲ, ಮಗನ ಮನೆಯಿದೆ ಅಲ್ಲಿ ಹೋಗುವೆ ಎಂದೆ.  ನಿನ್ನ ಕಾರು ಡ್ರೈವರಿಗಾದರೂ ತಿನ್ನಿಸು ಎಂದೆ. 

ನಾನು ಮತ್ತೆ ಕೆಳಗೆ ಬಂದು ಲಿಫ್ಟ್ ತೆರೆದು ಹೋಗಿ ಬಾ ಎಂದು ಹೇಳಿದಾಗ, ಏಕೆ ನೀನು ಬರೊಲ್ಲವ? ಅಂದೆ.  “ಇಲ್ಲ, ಹೋಗಿಬಾ ಸಿಕ್ಕೋಣ” ಎಂದು ಕಳುಹಿಸಿದೆ. ಅದೇ ನನ್ನ ನಿನ್ನ ಕೊನೆ ಮಾತಾಯಿತು. ನಾನು ಮೂರನೇ ಮಹಡಿಯ ಕಚೇರಿ ಕಿಟಕಿಯಿಂದ ಇಣುಕಿ ನೋಡುತ್ತಲೇ ಇದ್ದೆ. ನೀನು ದಟ್ಟ ವಾಹನಗಳ ಜೆ.ಸಿ. ರಸ್ತೆ ದಾಟಿ ಕಲಾಕ್ಷೇತ್ರ ಪ್ರವೇಶಿಸಿದೆ…

ಸಾಯುವ ಮೂರು ದಿನದ ಹಿಂದೆ ನನ್ನ ಜೊತೆ ಇದ್ದವನು ನಡೆದೇ ಹೋದೆ. ನಿನ್ನ ಸಾಧನೆ ಬಗ್ಗೆ, ಕನಸುಗಳ ನಾನು ಬರೆಯುವುದು ಸಾಕಷ್ಟಿದೆ.‌.. ನಿನ್ನ ಉಪನ್ಯಾಸಕ ಹುದ್ದೆಯ ಸಂಬಳವನ್ನೆಲ್ಲ ಗುಡ್ಡ, ಮರ, ವನ ಬೆಳೆಸೋದ್ರಲ್ಲೇ ಕಳೆದೆ. ಅಂದಾಜು 40 ಲಕ್ಷದ ಹಣ ಹಾಕಿದ್ದೆ! ಅದೆಲ್ಲ ಲೆಕ್ಕ ಚುಕ್ತಾ ಮಾಡಲು ಯಾರಿಂದ ಸಾಧ್ಯ? ಚನ್ನಪಟ್ಟಣದ, ನಿನ್ನ ಊರಿನ ಜನ ನಿನ್ನ ಹೆಸರು ಉಳಿಸುವ ಕೆಲಸ ಮಾಡಲಿ. “ಜೀವೇಶ್ವರ ವನ”ಕ್ಕೆ “ಭೂಹಳ್ಳಿ ಪುಟ್ಟಸ್ವಾಮಿ ವನ” ಎಂದು ಹೆಸರಿಡಲಿ”

ಹೀಗೆ ಬರೆದ ನಂತರವೂ ಅವನ ಬಗ್ಗೆ, ಅವನ ಕವನ, ಆತ್ಮಚರಿತ್ರೆ, ನಾಟಕಗಳ‌ ಬಗ್ಗೆ ಮಾತಾಡುವುದು ಉಳಿದಿದೆ. ಒಂದು ದಿನ ತನ್ನ ಆತ್ಮಕಥೆಯ ಪುಟಗಳನ್ನು “ಜೀವೇಶ್ವರ ವನ”ದಲ್ಲಿ ಓದಿದ್ದ. ತನ್ನ ಹೊಸ ಸಂಕಲನದ ಕವಿತೆ ವಾಚಿಸಿದ್ದ. ನನ್ನ ಕೆಲವು ಕವಿತೆ ಕೇಳಿಸಿಕೊಂಡು ವಿಮರ್ಶೆ ಮಾಡಿದ್ದ. ಪರಸ್ಪರ ಸಾಹಿತ್ಯ, ಕಲೆ, ಸಂಸ್ಕೃತಿ, ಪರಿಸರದ ಬಗ್ಗೆ ಚರ್ಚೆ ನಡೆಯುತ್ತಿತ್ತೇ ವಿನಃ ಕುಟುಂಬದ ವಿಚಾರ ಚರ್ಚೆಗೆ ಬಂದದ್ದು ಕಡಿಮೆ.

ಪರಿಸರಪ್ರೇಮಿ‌, ಕವಿ ಭೂಹಳ್ಳಿ ಪುಟ್ಟಸ್ವಾಮಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಬೆಂಗಳೂರಿನಲ್ಲಿ, ಮತ್ತೊಬ್ಬರು ಮೈಸೂರಿನಲ್ಲಿ ಕೆಲಸದಲ್ಲಿ ಇದ್ದಾರೆ. ಇವನೊಬ್ಬನೇ ಚನ್ನಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಊಟ ಹೊರಗಿನಿಂದ ತರಿಸಿಕೊಳ್ಳುತ್ತಿದ್ದ. ಸ್ವಂತ ಕಾರು ಇದ್ದರೂ ಓಡಿಸಲು ಭಯಪಡುತ್ತಿದ್ದ. ಬೇಕಾದಾಗ ಚಾಲಕರನ್ನು ಕರೆಯಿಸುತ್ತಿದ್ದ. ನಾವು ಅವನ ಬಳಿ ಹೋದಾಗಲೆಲ್ಲ ಎಲ್ಲ ವನಗಳಿಗೂ ತನ್ನ ಕಾರಿನಲ್ಲೇ ಕರೆದೊಯ್ದು, ಅನೇಕ ಇತಿಹಾಸದ ವಾಸ್ತವ ತೆರೆದಿಟ್ಟು ನಮ್ಮ ಜ್ಞಾನ ಹೆಚ್ಚಿಸುತ್ತಿದ್ದ. ರಾಜಕೀಯ ಚರ್ಚೆಯೂ ಅವನಿಗೆ ಆಸಕ್ತದಾಯಕವಾಗಿತ್ತು. ಕೋಮುವಾದಿಗಳಿಗೆ ಬಿಸಿ ಮುಟ್ಟಿಸಿ ಚಳ್ಳೆಹಣ್ಣು ತಿನ್ನಿಸುತ್ತಿದ್ದ.

ಇಂಥ ಸಮಕಾಲೀನ ವಿಚಾರಗಳ, ಬದ್ಧತೆಯ ಬದುಕು‌ ನಡೆಸಿದ ಗೆಳೆಯ ಪುಟ್ಟಸ್ವಾಮಿ‌ ಇನ್ನೆಂದೂ ಬಾರದ ಜಾಗೆಗೆ ಹೊರಟುಹೋದ. ಅವನು ನೆಟ್ಟು ಬೆಳೆಸಿದ‌ ಸಾವಿರಾರು‌ ಮರಗಳು, ವನಗಳು ಈಗ‌ ಸರ್ಕಾರದ, ನಗರಸಭೆಯ, ಗ್ರಾಮ ಪಂಚಾಯ್ತಿಯ ಶಾಶ್ವತ ಆಸ್ತಿಯ ವನಗಳಾಗಿ ಜೀವಂತವಾಗಿವೆ. ಹಕ್ಕಿಪಕ್ಷಿಗಳಿಗೆ ವಾಸಸ್ಥಳವಾಗಿ, ಹಣ್ಣುಹಂಪಲು ನೀಡುತ್ತಿವೆ. ಬೇಸಗೆಯಲ್ಲಿ‌ ಸಾರ್ವಜನಿಕರಿಗೆ ನೆರಳಿನ ತಾಣವಾಗಿ ಉಳಿದಿವೆ. ಈ ಸಮೃದ್ಧ ಹಸಿರಿನ ವನ ಉಳಿಸಿಕೊಳ್ಳುವುದು ಸರ್ಕಾರದ, ಸಾರ್ವಜನಿಕರ ಕೆಲಸ.

ಕೊನೆಯ ಮಾತು: ಹೋಗಿ ಬಾ ಗೆಳೆಯ, ನೀನು ಬೆಳೆಸಿದ ವನಗಳ ಪ್ರತಿ ಮರಗಳಲ್ಲೂ ನಿನ್ನ ಕನಸು ಅರಳುತ್ತಿದೆ. ಅಲ್ಲಿ ನಿನ್ನ  ಹೆಸರು ಸದಾ ಹಸಿರಾಗಿ ಇರುತ್ತದೆ. 

ಆರ್ ಜಿ ಹಳ್ಳಿ ನಾಗರಾಜ, ಬೆಂಗಳೂರು.‌

ಹಿರಿಯ ಸಾಹಿತಿ

ಇದನ್ನೂ ಓದಿ-ಸಾಂಸ್ಕೃತಿಕ ಕ್ಷೇತ್ರದ ಸಾಧಕ  ಸದಾನಂದರ ಸುವರ್ಣ ಯುಗಾಂತ್ಯ

More articles

Latest article