Tuesday, December 10, 2024

ಕನ್ನಡ ನುಡಿ ಪರಂಪರೆಯ ಭವ್ಯ ಇತಿಹಾಸ

Most read

ರಾಜ್ಯ ಪುನರ್‌ವಿಂಗಡಣೆಯಿಂದ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಸ್ಥಾಪನೆಯಾಯಿತು. ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಿದ್ದಾಗ ನವೆಂಬರ್ 1, 1973ರಲ್ಲಿ ಕರ್ನಾಟಕ ರಾಜ್ಯ ಎಂದು ಹೊಸ ನಾಮಕರಣಗೊಂಡಿತು. ಕರ್ನಾಟಕದ ಇತಿಹಾಸ ಪ್ರಾಚೀನತೆಗೆ ಕರೆದೊಯ್ಯುತ್ತದೆ. 

ಕರ್ನಾಟಕದ ಮೂಲ ಹೆಸರು ಕರಾಟ.  ಅಶೋಕ ಚಕ್ರವರ್ತಿ ತನ್ನ ಸರಿಸಮಾನತೆ ತತ್ವ ಸಾರಲು ಕರ್ನಾಟಕವನ್ನು ಆರಿಸಿಕೊಂಡಿದ್ದ ಎಂಬುದಕ್ಕೆ ಮಸ್ಕಿ, ಸಿದ್ದಾಪೂರ, ಮೊಳಕಾಲ್ಮೂರು ಶಿಲಾಶಾಸನಗಳು ಮತ್ತು ಸ್ತಂಭಗಳ ಮೇಲಿನ ಕೆತ್ತನೆಗಳು ಸಾಕ್ಷಿ.. ಇತಿಹಾಸದ ಪುಟ ಕೆದಕುತ್ತಾ ಹೋದರೆ ಮೊಹೆಂಜದಾರೋ, ಹರಪ್ಪಗಳು ಕನ್ನಡಿಗರ ವಂಶಾವಳಿಯನ್ನು ತಿಳಿಸುತ್ತವೆ. ಕನ್ನಡಿಗರು ಆ ಕಾಲದಷ್ಟು ಹಿಂದೆಯೇ ‘ಕಣ್ಣಿನೀರ್’ ಎಂದು ಹೆಸರಾಗಿದ್ದರು ‘ಕಣ್ಣಿನೀರ್’ ಎಂದರೆ ಉನ್ನತವಾದ ದೃಷ್ಟಿಯುಳ್ಳವರು, ವಿಶಾಲ ಮನಸ್ಸಿನವರು ಎಂದರ್ಥ. ಕನ್ನಡ ಜನರಿರುವ ನಾಡು, ಕರುನಾಡು, ಆ ಹೆಸರೇ ಕನ್ನಡಿಗರು.

ಕನ್ನಡ ಭಾಷೆಯ ಭವ್ಯ ಇತಿಹಾಸ

ಭಾರತದ (1600) ಭಾಷೆಗಳಲ್ಲಿ ಕನ್ನಡ, ತಮಿಳುಗಳೇ ಪ್ರಾಚೀನ ಭಾಷೆಗಳು. ದೇಶದ ತುಂಬೆಲ್ಲ ಕನ್ನಡ ಸಂಸ್ಕೃತಿ ಹಬ್ಬಿಕೊಂಡಿದೆ. ಕನ್ನಡ ಭಾಷೆಯು ‘ಎರಡು ಸಾವಿರ’ ವರ್ಷಗಳಷ್ಟು ಹಿಂದೆಯೇ ಪ್ರಬುದ್ಧಾವಸ್ಥೆಗೆ ಬಂದಿತ್ತು ಎನ್ನಲಾಗಿದೆ. ಈಜಿಪ್ತದ ಉತ್ಖನನದಲ್ಲಿ ಕ್ರಿ.ಶ.200ರಲ್ಲಿ ಬರೆದ ಗ್ರೀಕ್ ನಾಟಕ ದೊರಕಿದೆ. ಅದರಲ್ಲಿ ಸಾಕಷ್ಟು ಕನ್ನಡ ಪದಗಳಿವೆ. ಕನ್ನಡಿಗರು ರೋಂ, ಬೀಜಿಂಗ್ ದೇಶಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದರು ಎಂಬುದಕ್ಕೆ ಚಿತ್ರದುರ್ಗ ಬಳಿ ‘ಚಂದ್ರವಳ್ಳಿ’ಯಲ್ಲಿ ಆ ದೇಶದ ನಾಣ್ಯಗಳು ದೊರಕಿವೆ. ಶ್ರೀ ವಿಜಯನು ತನ್ನ ‘ಕವಿರಾಜ ಮಾರ್ಗ’ದಲ್ಲಿ ಹಿಂದೆ ಆಗಿ ಹೋದ ಕನ್ನಡ ಕವಿಗಳನ್ನು ನೆನಪಿಸಿದ್ದಾರೆ. 1200 ವರ್ಷಗಳ ಹಿಂದಿನ ಗ್ರಂಥ ‘ಕವಿರಾಜ’ ಮಾರ್ಗ ಕನ್ನಡಿಗರಿಗೆ ಪ್ರಥಮ ಉಪಲಬ್ದ ಗ್ರಂಥ. ಕನ್ನಡದ ಪ್ರಥಮ ಶಾಸನ ‘ಹಲ್ಮಿಡಿ ಶಾಸನ’. ಅಚ್ಚ ಕನ್ನಡ ದೊರೆಗಳಾದ ‘ಶಿಲಾಹಾರರು’ ಮುಂಬಯಿಯನ್ನು ಆಳುತ್ತಿದ್ದರು. ಮಹಾರಾಷ್ಟ್ರದಲ್ಲಿ ಸಿಕ್ಕಿರುವ ಶಿಲಾಶಾಸನಗಳಲ್ಲಿ 100ಕ್ಕೆ 85 ಕನ್ನಡದಲ್ಲಿವೆ. 10 ಮರಾಠಿ 05 ಬ್ರಾಹ್ಮಿಯಲ್ಲಿವೆ.

ಕನ್ನಡ ಶಿಲ್ಪಿಗಳ ಅದ್ಭುತ ಕೊಡುಗೆಗಳು:

ಕನ್ನಡಿಗರ ಕೆತ್ತನೆಯ ಶಿಲೆಗಳು ಮತ್ತು ದೇವಾಲಯಗಳು ಪ್ರಪಂಚದ ಅದ್ಭುತಗಳಲ್ಲಿ ಸ್ಥಾನ ಪಡೆದಿವೆ. ಅಜಂತಾ, ಎಲ್ಲೋರಾ, ಎಲೆಫಂಟಾ ಶಿಲ್ಪಗಳು ಕನ್ನಡಿಗರೇ ಕೆತ್ತಿದ್ದಾರೆ. ಔರಂಗಬಾದ್ ಜಿಲ್ಲೆಯ ವೆರೂಳ ಗ್ರಾಮದಲ್ಲಿರುವ ‘ಕೈಲಾಸ ದೇವಾಲಯ’ ಅತ್ಯದ್ಭುತವಾಗಿದೆ. ಏಕಶಿಲೆಯಲ್ಲಿ (ಒಂದೇ ಕಲ್ಲಿನಲ್ಲಿ) ಆ ದೇವಾಲಯ ಮತ್ತು ವಿಗ್ರಹಗಳನ್ನು ಕೆತ್ತಿದವರು ಕನ್ನಡಿಗರು. ಕನ್ನಡ ರಾಜರಾದ ರಾಷ್ಟ್ರಕೂಟ ಚಕ್ರವರ್ತಿ ಮೊದಲನೆಯ ಕೃಷ್ಣ ಕಟ್ಟಿಸಿದನೆಂದು ಅಲ್ಲಿನ ಶಿಲಾಲೇಖನ ಹೇಳುತ್ತದೆ.

ಹಲ್ಮಿಡಿ ಶಾಸನ

ಕೊಲ್ಲಾಪುರದ ಮಹಾಲಕ್ಷ್ಮೀ (ಜೈನರ ಪದ್ಮಾವತಿ) ಇದನ್ನು ಕನ್ನಡದ ಚಾಲುಕ್ಯ ದೊರೆ ಕಟ್ಟಿಸಿದನು, ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿರುವ ‘ಪಶುಪತಿನಾಥ’ ದೇವಾಲಯ ಕನ್ನಡಿಗರೇ ಕಟ್ಟಿದ್ದು (ಕ್ರಿ.ಶ.779) ನಾನ್ಯದೇವ ಕನ್ನಡದ ಚಾಲುಕ್ಯ ದೊರೆ, ಬೇಲೂರು, ಹಳೇಬೀಡು, ಹಂಪೆ, ಐಹೊಳೆ, ಪಟ್ಟದಕಲ್ಲು, ಬದಾಮಿ ಹೀಗೆ ನಾಡಿನ ವೈಭವಕ್ಕೆ ಕೊನೆಯಿಲ್ಲ. ಕನ್ನಡಿಗ ಜಕ್ಕಣಾಚಾರಿಯ ಶಿಲ್ಪಕಲೆಗಳು, ದೇವಾಲಯಗಳನ್ನು ನೊಡುವುದೇ ಸೌಭಾಗ್ಯ. ಕೋಲಾರ ಜಿಲ್ಲೆಯ ನಂದೇಶ್ವರ ದೇವಸ್ಥಾನ, ಯಲಬುರ್ಗಾ ತಾಲೂಕಿನ ಮಹಾದೇವ ದೇವಾಲಯ, ಐಹೊಳೆಯಲ್ಲಿ 70 ದೇವಾಲಯಗಳು, ಹಂಪೆಯ ವಿಜಯವಿಠ್ಠಲ ದೇವಾಲಯ, ಶಿಲಾಸ್ತಂಭಗಳು, ಸಂಗೀತದ ಸಪ್ತಸ್ವರದ ಚಮತ್ಕಾರ ಇವೇ ಮುಂತಾದುವುಗಳು ಕನ್ನಡ ಶಿಲ್ಪಿಗಳ ಕೊಡುಗೆಗಳು.

ಕನ್ನಡ ಕವಯತ್ರಿಯರು, ರಾಣಿಯರು

ಪುಲಕೇಶಿಯ ಸೊಸೆ ವಿಜಯಾ ಕಾಳಿದಾಸನಿಗೆ ಸಮನಾದ ಕವಯತ್ರಿ. ವಿಜಯಾಂಕಾ ಕರ್ನಾಟಕ ರಾಜಪ್ರಿಯ ಎಂಬ ನಾಮಾಂಕಿತರು.  ಹನ್ನೆರಡನೆಯ ಶತಮಾನದ ಅಕ್ಕಮಹಾದೇವಿಯ 433 ವಚನಗಳು, ಅವರೊಂದಿಗೆ ಇದ್ದ ಇತರ 32 ವಚನಕಾರ್ತಿಯರು. ವಿಜಯನಗರದ ಬುಕ್ಕರಾಯನ ಮಗ ಕಂಪಣರಾಯನ ಹೆಂಡತಿ ಗಂಗಾದೇವಿ ಅಪ್ರತಿಮ ಕವಯತ್ರಿ ಮಧುರಾ ವಿಜಯಂ ಕಾವ್ಯ ರಚಿಸಿದ್ದಾರೆ. ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮವೂ ಇದೆ.  ಕೆಳದಿಯ ಚೆನ್ನಮ್ಮಾಜಿ 23 ದಿನ ಔರಂಗಜೇಬನೊಂದಿಗೆ ಯುದ್ಧಮಾಡಿ ಗೆದ್ದ ಮಹಾರಾಣಿ. ಬೆಳವಡಿ ಮಲ್ಲಮ್ಮ ಶಿವಾಜಿಗೆ ಪ್ರಾಣ ಭಿಕ್ಷೆ ನೀಡಿದ ಮಹಾರಾಣಿ, ಕಿತ್ತೂರು ರಾಣಿಚೆನ್ನಮ್ಮ ಹೀಗೆ ಕನ್ನಡಿಗ ಮಹಿಳೆಯರು ಶ್ರೇಷ್ಠ ಕವಯತ್ರಿಯಾಗಿ, ರಾಣಿಯರಾಗಿ, ಹಾಗೂ ವಚನಕಾರ್ತಿಯರಾಗಿದ್ದಾರೆ.

ಕನ್ನಡದ ಅರಸು ಮನೆತನಗಳು

ಗಂಗರು ಅವರ ರಾಜಧಾನಿ ಕಳಿಂಗನಗರ, ಕದಂಬರು, ಒರಿಸ್ಸಾದ ರಾಜಧಾನಿ ಭುವನೇಶ್ವರ, ಚಾಲುಕ್ಯರು ರಾಜಧಾನಿ ಆಂಧ್ರ, ಇಮ್ಮುಡಿ ಪುಲಕೇಶಿ ರಾಜಧಾನಿ ಮಹಾರಾಷ್ಟ್ರ, ರಾಷ್ಟ್ರಕೂಟರು ರಾಜಧಾನಿ ಮಾನ್ಯಖೇಟ. ಗುಜರಾತ್ ರಾಜ್ಯವು 224 ವರ್ಷಗಳ ಕಾಲ (ಕ್ರಿ.ಶ. 740-964) ಕರ್ನಾಟಕದ ರಾಷ್ಟ್ರಕೂಟರ ಆಳ್ವಿಕೆಯಲ್ಲಿತ್ತು. ರಾಷ್ಟ್ರಕೂಟರ ಕಾಲದಲ್ಲಿ ‘ಸೇನೆ’ ಎಂಬ ಮನೆತನ ಬಂಗಾಳದಲ್ಲಿ ನೆಲೆಸಿತ್ತು. ಈ ಸೇನ ವಂಶದವರು ಧಾರವಾಡ ಹತ್ತಿರದ ಗ್ರಾಮದವರು. ಇವರು 200 ವರ್ಷ ಅಂದರೆ 9 ರಿಂದ 11ನೇ ಶತಮಾನದವರೆಗೆ ಬಂಗಾಳವನ್ನು ಆಳಿದರು. ಈ ರಾಜವಂಶದಲ್ಲಿ ಪ್ರಸಿದ್ಧ ಅರಸು ‘ಬಲ್ಲಾಳಸೇನ’. ಚಾಳುಕ್ಯ ಅರಸನಾದ ನಾನ್ಯದೇವ ಕನ್ನಡ ಸಾಮಂತ ನೇಪಾಳದಲ್ಲಿ ರಾಜ್ಯವಾಳುತ್ತಿದ್ದನು. ಹೀಗೆ ದೇಶಾದ್ಯಂತ ಕನ್ನಡ ಅರಸು ಮನೆತನಗಳು ರಾಜ್ಯಭಾರಮಾಡಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸಿವೆ.

ಕನ್ನಡ ನುಡಿಗೆ ಮರೆಯಲಾಗದ ಕೊಡುಗೆ

ಕನ್ನಡಿಗರಿಗೆ ಅವರ ನಾಡು-ನುಡಿಗಳ ಬಗ್ಗೆ ಯಥಾವತ್ತಾದ ಎಚ್ಚರಿಕೆಯನ್ನು ಕೊಟ್ಟವರು ಕ್ರೈಸ್ತರು. ಧರ್ಮ ಪ್ರಸಾರಕ್ಕೆಂದು ಬಂದ ಕ್ರಿಶ್ಚಿಯನ್ 115 ಮಿಶನರಿಗಳು ಕನ್ನಡ ನಾಡಿಗೆ ಮರೆಯಲಾರದ ಕೊಡುಗೆ ನೀಡಿದ್ದಾರೆ.  1834 ಬಾಸೆಲ್ ಮಿಶನ್, ಮಂಗಳೂರು, ಉಡುಪಿ, ಧಾರವಾಡ, ಮತ್ತು ತುಮಕೂರುಗಳಲ್ಲಿ ಆರಂಭಿಸಿ 1836 ರಿಂದ ಕನ್ನಡ ಶಾಲೆಗಳನ್ನು ಆರಂಭಿಸಿದ ಕೀರ್ತಿ ಇವರದು. ಜರ್ಮನ್ ಮಿಶನರಿ 1838 ರಲ್ಲಿ ಧಾರವಾಡದಲ್ಲಿ ಕನ್ನಡ ಶಾಲೆ ಆರಂಭಿಸಿತು. ಮಿಶನರಿಗಳು ಕರ್ನಾಟಕ್ಕೆ ಬಂದು ಕನ್ನಡದಲ್ಲಿ ಕವಿಗಳಾದರು.  ಕನ್ನಡ ಸಾಹಿತ್ಯದಲ್ಲಿ ಗದ್ಯ ಲೇಖನ ಬರೆದರು. ರೆವರೆಂಡ್ ಕಿಟೆಲ್ ಎಂಬವರು ಕನ್ನಡ-ಇಂಗ್ಲೀಷ್ 70 ಸಾವಿರ ಶಬ್ದಗಳ ನಿಘಂಟು ಸಿದ್ಧಪಡಿಸಿದರು. ಇವರಿಗೆ ಗೌರವ ಡಾಕ್ಟರೇಟ್ ಪದವಿ ದೊರಕಿತು. ‘ಕಿಟೆಲ್’ 1884ರಲ್ಲಿ ಹುಬ್ಬಳ್ಳಿಗೆ ಬಂದು ಕನ್ನಡಪರ ಕೆಲಸ ಮಾಡಿದರು. ಇವರ ಕುರಿತು ವರದರಾಜ ಹುಯಿಲಗೋಳ್, ಡಾ. ಶ್ರೀನಿವಾಸ್ ಕೆ. ಹಾವನೂರು, ಡಾ. ಆರ್.ಸಿ. ಹಿರೇಮಠ, ರಾ.ಯ. ಧಾರವಾಡಕರ್ ಅನೇಕರು 9 ಪುಸ್ತಕಗಳನ್ನು ಕಿಟೆಲ್‍ರ ಕನ್ನಡ ಪ್ರೀತಿಯ ಬಗ್ಗೆ ಬರೆದಿದ್ದಾರೆ. ಅದರಲ್ಲೂ 115 ಮಿಶನರಿ ಅಧಿಕಾರಿಗಳಲ್ಲಿ 12 ಮಹಿಳಾ ಸೇವಕಿಯರು ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ.

ಕನ್ನಡದ ರತ್ನಗಳಿಂದ ಕನ್ನಡ ಸಾಹಿತ್ಯ

 ಕನ್ನಡ ನೆಲದಲ್ಲಿ ಕನ್ನಡವನ್ನು ಬೆಳೆಸಿದ ಕೀರ್ತಿ ಕನ್ನಡದ ಕವಿಗಳು ಮತ್ತು ಸಾಹಿತಿಗಳದು. ಕನ್ನಡ ರತ್ನಗಳೆಂದು ಕರೆಯಲ್ಪಡುವ ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಚಾಮರಸ, ಹರಿಹರ ರಾಘವಾಂಕ, ಸರ್ವಜ್ಞರು ಕನ್ನಡನಾಡಿನ ರತ್ನಗಳಾಗಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಹೀಗೆ ಎಲ್ಲಾ ವಚನಕಾರರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವಚನಗಳನ್ನು ರಚಿಸಿ ಕನ್ನಡಭಾಷೆಗೆ ಜ್ಯೋತಿಯಾಗಿದ್ದಾರೆ. ಆಧುನಿಕ ಸಂದರ್ಭದಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್, ಶಿವರಾಮ ಕಾರಂತ, ಅನಂತಮೂರ್ತಿ, ಕಾರ್ನಾಡ್, ಚಂದ್ರಶೇಖರ ಕಂಬಾರರಂತವರು ಕನ್ನಡ ನುಡಿ, ಸಾಹಿತ್ಯಕ್ಕೆ ದುಡಿದು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಅಸಂಖ್ಯರು ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯಕ್ಕೆ ದುಡಿದು ಕನ್ನಡಮ್ಮನ ಸೇವೆಗೈದಿದ್ದಾರೆ.

 ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ

ಇದನ್ನೂ ಓದಿ- ಕರ್ನಾಟಕ  ಎಂದರೇನು?

More articles

Latest article