ನೆನಪು |ಪಂಡಿತ್‌ ರಾಜೀವ ತಾರಾನಾಥರೊಡನೆ ಒಂದು ದಿನ- ರಹಮತ್‌ ತರೀಕೆರೆ

Most read

ರಾಜೀವ ತಾರಾನಾಥ್ (1931), ಭಾರತದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಕಲಾವಿದರು. ಬೆಂಗಳೂರಿನಲ್ಲಿ ಹುಟ್ಟಿದ ರಾಜೀವ್, ತಂದೆ ಪಂಡಿತ ತಾರಾನಾಥರ ಮೂಲಕ ಬಾಲ್ಯದಿಂದಲೇ ಸಂಗೀತ ಕಲಿತರು; ಹೈದರಾಬಾದ್ ತಿರುಚನಾಪಲ್ಲಿ  ಹಾಗೂ ಯೆಮನ್ ದೇಶದ ಆಡೆನ್‍ನಲ್ಲಿ ಆಂಗ್ಲಸಾಹಿತ್ಯದ ಅಧ್ಯಾಪನ ಮಾಡಿದರು; ಅಧ್ಯಾಪಕ ವೃತ್ತಿ ಬಿಟ್ಟು ಸಂಗೀತಲೋಕಕ್ಕೆ ಹೊರಳಿಕೊಂಡರು. ಖ್ಯಾತ ಸರೋದ್ ವಾದಕರಾದ ಉಸ್ತಾದ್ ಅಲಿ ಅಕ್ಬರ್‌ ಖಾನರ ಶಿಷ್ಯರಾಗಿದ್ದ ಇವರು, ಅನ್ನಪೂರ್ಣಾದೇವಿ, ಪಂಡಿತ್ ರವಿಶಂಕರ್ ಮುಂತಾದವರಿಂದಲೂ ಕಲಿತರು. `ಸಂಸ್ಕಾರ’ ಚಲನಚಿತ್ರಕ್ಕೆ ಹಿನ್ನೆಲೆ  ಸಂಗೀತ ಒದಗಿಸಿದ ರಾಜೀವ್, ಜಗತ್ತಿನ ಹಲವಾರು ದೇಶಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ಈ ಮಾತುಕತೆ ಯನ್ನು ಮೈಸೂರಿನ ಸರಸ್ವತಿಪುರಂನ ಅವರ ಮನೆಯಲ್ಲಿ (2015) ನಡೆಸಲಾಯಿತು.

ಭಾಗ-2

ರಾಜೀವರ ಆತ್ಮಕಥೆಯ ಭಾಗಗಳು, ಸುಮಂಗಲಾ ಅವರು ಸುದೀರ್ಘ ಸಂದರ್ಶನ ಮಾಡಿ ರಚಿಸಿದ `ಸರೋದ್ ಮಾಂತ್ರಿಕ’ ಕೃತಿಯಲ್ಲಿವೆ; ಶೈಲಜ-ವೇಣುಗೋಪಾಲ್ ಸಂಪಾದಿಸಿರುವ ‘ವಾದಿ-ಸಂವಾದಿ’ ಸಂಗೀತ ಸಂಚಿಕೆಯಲ್ಲೂ ಇವೆ. ಆದರೂ  ಅವರ ಜೀವನದ ವಿಶಿಷ್ಟಾನುಭವಗಳು ಇನ್ನೂ ಬಾಕಿಯಿವೆ ಅನಿಸಿತು. ಹೀಗಾಗಿ “ನೀವು ನಿಮ್ಮ ವಿಮರ್ಶೆಯ ಬರೆಹಗಳನ್ನ ಪ್ರಕಟಿಸದೇ ಇದ್ದರೂ ಪರವಾಯಿಲ್ಲ. ಆತ್ಮಕತೆ ಬರೀರಿ. ಯಾಕಂದರೆ ನೀವು ಸೂಫಿಗಳ ಪ್ರೇಮದ ಕಲ್ಪನೆಯಲ್ಲಿ ಬಂದವರು. ನಿಮ್ಮ ಜೀವನ ಚರಿತ್ರೆ ನಿಮ್ಮೊಬ್ಬರದು ಮಾತ್ರ ಅಲ್ಲ. ಅದರಲ್ಲಿ ವೈಚಾರಿಕತೆ, ಹಿಂದೂಸ್ತಾನಿ ಸಂಗೀತ, ಅದರೊಳಗಿನ ಧರ್ಮಾತೀತ ಪರಂಪರೆಯ ಚಿತ್ರವೇ ಇದೆ’’ ಎಂದು ಕೇಳಿಕೊಂಡೆ. `‘ಆಗಲಿ. ಬರೀತೀನಿ. ಆತ್ಮಕತೆ ಅಂತ ಇರಬೇಕಾಗಿಲ್ಲ. ಮಾತುಕತೆ ಅಂತಿರಬಹುದು’’ ಎಂದು ಒಪ್ಪಿದರು.

ರಾಜೀವ್ ಬಹುಧಾರ್ಮಿಕ ಬಹುಸಾಂಸ್ಕೃತಿಕ ಮಾತ್ರವಲ್ಲ, ಬಹುಭಾಷಿಕ ಪರಂಪರೆ ಯಲ್ಲಿ ಬೆಳೆದು ಬಂದವರು. ಅಪ್ಪನ ಕಡೆಯಿಂದ ಸಂಸ್ಕೃತ ಮತ್ತು ಕೊಂಕಣಿ, ತಾಯಿ ಕಡೆಯಿಂದ ತಮಿಳು ಅವರಿಗೆ ಉಸಿರಾಟದಂತೆ ಬಂದಿವೆ. ಬಾಲ್ಯವನ್ನು ರಾಯಚೂರು-ತುಂಗಭದ್ರಾಗಳಲ್ಲಿ ಕಳೆದ ಕಾರಣ, ತೆಲುಗು ಮತ್ತು ಕನ್ನಡಗಳಿವೆ. ಬಂಗಾಳದ ಅಲಿ ಅಕ್ಬರ್‌ಖಾನರ ಸಂಗದಲ್ಲಿದ್ದುದರಿಂದ ಉರ್ದು ಮತ್ತು ಬಂಗಾಳಿಗಳಲ್ಲಿ ಪ್ರವೇಶವಿದೆ. ಅಭ್ಯಾಸ ಮಾಡಿದ್ದು ಮತ್ತು ಕಲಿಸಿದ್ದು ಇಂಗ್ಲಿಶ್ ಸಾಹಿತ್ಯ. ಹೀಗಾಗಿ ಅವರ ಅಭಿವ್ಯಕ್ತಿಯ ಭಾಷೆಯಾದ ಕನ್ನಡದಲ್ಲಿ ಸಂಕರ ಗುಣಗಳಿವೆ. ಅವರ ಮಾತುಕತೆಯಲ್ಲಿ ‘ಬಾರಿಸಾಣಿಕೆ’ ‘ಇಂಬು’ ಇತ್ಯಾದಿ ಅಚ್ಚಗನ್ನಡ ಶಬ್ದಗಳು ಸಹಜವಾಗಿ ಬರುತ್ತಿದ್ದವು. ಸರೋದ್ ಕುರಿತು ಹೇಳುವಾಗ ‘ನುಡಿಸು’ ಎಂಬ ಕ್ರಿಯಾಪದಕ್ಕೆ ಬದಲಾಗಿ ಚರ್ಮವಾದ್ಯಗಳಿಗೆ ಸಂಬಂಧಪಟ್ಟ ‘ಬಾರಿಸು’ ಎಂದೇ ಬಳಸುತ್ತಿದ್ದರು. ಅವರ ಪ್ರಕಾರ ಸಂಸ್ಕೃತ ದ್ರಾವಿಡ ಭಾಷೆಗಳ ಜತೆ ಅಷ್ಟು ಹೊಂದಾಣಿಕೆ ಆಗುವುದಿಲ್ಲ. ಬಂಗಾಳಿಗೆ ಚೆನ್ನಾಗಿ ಒಗ್ಗಿಕೊಳ್ಳುತ್ತೆ. ಇದನ್ನರಿಯದ ಕನ್ನಡಿಗರು ಅನಗತ್ಯವಾಗಿ ಸಂಸ್ಕೃತ ಬಳಸಿದರು ಎನ್ನುತ್ತ, ಕನ್ನಡದ ಕೆಲವು ನವೋದಯ ಲೇಖಕರಿಗಿದ್ದ ಸಂಸ್ಕೃತ ವ್ಯಾಮೋಹವನ್ನು ಗೇಲಿ ಮಾಡಿದರು. ಬಂಗಾಳದಲ್ಲಿ ಮಕ್ಕಳ ಕೀರ್ತಿ ಹೆಚ್ಚಲಿ ಅಂತ ಮುಂಗೈಗೆ ಅತ್ತರ್ ಹಚ್ಚುವ ಪದ್ಧತಿ ಇದೆಯಂತೆ. ಒಮ್ಮೆ ಹಾಗೆ ಹಚ್ಚುವಾಗ ಮೂರು ವರ್ಷದ ಮಗುವೊಂದು ಅದನ್ನು ಆಘ್ರಾಣಿಸುತ್ತ ‘ಕಿಂ ಮೊಧುರ ಸುಗಂಧೊ?’ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.

ರಾಜೀವ್ ಕನ್ನಡದಲ್ಲಿ ಉರ್ದು ಶಬ್ದಗಳು ಹದವಾಗಿ ಸೇರುತ್ತವೆ. ಅವರ ಮಾತಲ್ಲಿ ‘ದುನಿಯಾದೊಳಗೆ’ ‘ದುನಿಯಾನೇ ಮಾಡ್ತೀನಿ’ ಎಂಬ ನುಡಿಗಟ್ಟುಗಳು ಹೊಮ್ಮುತ್ತಿದ್ದವು. ಅವರ ಪ್ರಕಾರ, ಭಾಷೆಯ ವಿಷಯದಲ್ಲಿ ಕನ್ನಡಿಗರು ಮಹಾಉದಾರಿಗಳು. “ನನಗ ತಿಳಿದ್ಹಂಗ ಯಾವ ಭಾಷೆಯೂ ಆ ಭಾಷೆಯಾಡದ ಒಬ್ಬನಿಗೆ ಆ ಭಾಷೆಯ ಕಿರೀಟ ಕೊಡಲ್ಲ. ಆದರೆ ಕನ್ನಡಕ್ಕೆ ಮಾತ್ರ ಆ ಔದಾರ್ಯ ಅದ. ನಾ ಕನ್ನಡದವ್ಞ ಅಲ್ಲಾ; ಬೇಂದ್ರೆ-ಗಿರೀಶ್ ಕನ್ನಡದವರಲ್ಲ. ಕನ್ನಡಿಗರ ಒಂದು ದೊಡ್ಡತನ ಅಲ್ಲಿದೆ”.

ಪಂಡಿತ್‌ ರಾಜೀವ ತಾರಾನಾಥ

ಹೀಗೆ ಮಾತಾಡುತ್ತಿರುವಾಗ ಅಮೆರಿಕದಲ್ಲಿರುವ ಅವರ ಮಗನ ಫೋನು ಕರೆ  ಬಂತು. ಅದೆಷ್ಟೋ ಹೊತ್ತು ಮಾತಾಡಿದರು. ಮಾತು ಮುಗಿದ ಬಳಿಕ “ಮಗ! ಅಮೇರಿಕದಲ್ಲಿರ್ತಾನ. ಯಾವುದಾದರೂ ಒಂದು ಹುಡುಗಿ ಮುದುವೆಯಾಗು ಅಥವಾ ಕೂಡಕೊ. ಪುರುಷನಿಗೆ ಒಂದು ಹೆಣ್ಣಿನ ಅನುಭವ ಆಗಬೇಕು ಅಂತೀನಿ. ಇಲ್ಲಿಲ್ಲ ನೀನೇ  ನೋಡು ಅಂತಾನ. ಒಳ್ಳೆಯವನು. ಅಂದರೆ ಏನೂ ಇಲ್ಲ. ತಾಯಿ ಮನೀಗ್ ಹೋಗ್ತಾನ. ತೊವ್ವೆ ಅನ್ನ ತಿಂತಾನ. ಮೋಟಾರ್ ಸೈಕಲ್ ರೇಸಿಂಗ್ ನೋಡ್ಕೊಂಡು ನಿದ್ದಿ  ಮಾಡ್ತಾನ ಎಂದು ಕಪಾಟಿನ ಮೇಲಿದ್ದ ಮಗನ ಫೋಟೊ ದಿಟ್ಟಿಸುತ್ತ ಕೊಂಚಹೊತ್ತು ಗಾಢಮೌನಕ್ಕೆ ಸಂದರು. ಅವರೊಳಗೆ ಯಾವ ಭಾವ ಹೊಯ್ದಾಡುತ್ತಿತ್ತೊ ಊಹಿಸಲಾಗಲಿಲ್ಲ. ನಾವೂ ತುಸು ಹೊತ್ತು ಮಾತಿಗೆಳೆಯಲಿಲ್ಲ.

ರಾಜೀವರ ಮಾತುಕತೆಯಲ್ಲಿ ‘ಗೊತ್ತಿಲ್ಲ’ ಎಂಬ ಶಬ್ದ ಬಹಳ ಸಲ ಬರುತ್ತದೆ. ಉಚ್ಚಸ್ವರದಲ್ಲಿ ಲಹರಿಯಲ್ಲಿ ನಿಧಾನವಾಗಿ ಕೇಳುಗರ ಕಣ್ಣಲ್ಲಿ ಕಣ್ಣು ನೆಡದೆ ಎತ್ತಲೊ ಧ್ಯಾನದಲ್ಲಿ ಹುಬ್ಬುಗಂಟಿಕ್ಕಿ  ಗೌಡಿಕೆಯ ಗತ್ತಿನಲ್ಲಿ ಅವರು ಮಾತಾಡುತ್ತಾರೆ. ಅವರ ನುಡಿಯಲ್ಲಿ ಧಾರವಾಡ ಕನ್ನಡದ ಎಳೆಗಳು ಸೇರಿವೆ. ಸನ್ನಿವೇಶವನ್ನು ನಾಟಕೀಯವಾಗಿ ಕಣ್ಣಿಗೆ ಕಟ್ಟುವಂತೆ ಹೇಳುವ ಕಲೆಗಾರಿಕೆ ಅವರಲ್ಲಿದೆ. ನಡುನಡುವೆ ನುಸುಳುವ ಬೇರೆಬೇರೆ ಅನುಭವ- ವಿಚಾರಗಳಿಗೆ ಲಗತ್ತಿಸುತ್ತ ಮಾತಾಡುವುದರಿಂದ, ಮಾತುಕತೆ ಹೂವಿನ ಗೊಂಚಲಾಗುತ್ತದೆ. ಆದರೆ ಯಾವ ಸಂಗತಿಯನ್ನು ಹೇಳುವುದಕ್ಕೆ ಆರಂಭಿಸಿದ್ದರೋ ಅಲ್ಲಿಗೆ ಅದು ಸರಿಯಾಗಿ ಮರಳಿ ಬರುತ್ತದೆ. ಇದು ರಾಗವನ್ನು ನುಡಿಸುವಾಗ, ಬೇರೆಬೇರೆ ಆಲಾಪಗಳಲ್ಲಿ ಹರಿದಾಡಿದರೂ ಮೂಲಕ್ಕೆ ಮರಳುವ ತಾನಿನ ಗುಣವಿದ್ದೀತು. ಕೆಲವು ಶಬ್ದಗಳಿಗೆ ಒತ್ತುಕೊಟ್ಟು ಜೋರಾದ ದನಿಯಲ್ಲಿ ಮಾತಾಡುವ ರಾಜೀವ್, ತಮಗೆ ಇಷ್ಟವಿಲ್ಲದ ವಿಷಯ ಬಂದಾಗ ತೀಕ್ಷ್ಣವಾದ ವ್ಯಂಗ್ಯ ವಿಡಂಬನೆ ಬಳಸುವರು. ಇದನ್ನು ನೋಡುವಾಗ ಅವರು ಕೈಲಾಸಂ ತರಹ ನಾಟಕ ಬರೆಯಬಹುದಿತ್ತು ಅನಿಸುತ್ತದೆ. ಕತೆ ಕೇಳಲು ಸುತ್ತ ಕೂತುಕೊಂಡ ಮೊಮ್ಮಕ್ಕಳಿಗೆ ಅಜ್ಜಿಯೊಬ್ಬಳು, ಮಡಿಲಲ್ಲಿ ತುಂಬಿಕೊಂಡ ವಿವಿಧ ತಿನಿಸನ್ನು ಹಂಚುವಂತೆ ಅವರ ಮಾತುಕತೆಯಿರುತ್ತದೆ. ಆ ದಿನದ ಹರಟೆಯಲ್ಲಿ ಅವರು ಕೋಳಿಫಾರಂ ಇಟ್ಟ ಕತೆ, ಬಸವನಗುಡಿಯಲ್ಲಿ ಸಂಗೀತ ಕಾರ್ಯಕ್ರಮ ಮುಗಿದಾಗ ಸಂಘಟಕರು ಹಳೇ ವೃತ್ತಪತ್ರಿಕೆಯ ಚೂರಿನಲ್ಲಿಟ್ಟು ಮಸಾಲೆವಡೆ ಕೊಟ್ಟ ಪ್ರಸಂಗ, ರಸ್ತೆ ನಡುವೆ ಹಠಮಾಡಿಕೊಂಡು ನಿಂತ ದಸರಾ  ಆನೆಗೆ ಒಬ್ಬ ರಸಿಕ ಕಿವಿಯಲ್ಲಿ ಏನನ್ನೋ ಹೇಳಲು, ಅದು ಬೆದರಿ ಓಡಿಹೋಗಿದ್ದು-ಹೀಗೆ ಅದೆಷ್ಟೋ ಸ್ವಾರಸ್ಯಕರ ಪ್ರಸಂಗಗಳು ಬಂದುಹೋದವು.

ಬಹುಶಃ ಕಾರಂತರ ಬಳಿಕ ಜೀವನದಲ್ಲಿ ಇಷ್ಟೊಂದು ಬಗೆಯಲ್ಲಿ ಪ್ರಯೋಗ ಮಾಡಿದವರು ರಾಜೀವರೇ ಇರಬೇಕು. ಅವರ ಜೀವನ ಈ ಅರ್ಥದಲ್ಲಿ ‘ಭುಜಂಗಯ್ಯನ ದಶಾವತಾರಗಳು’ ಅಥವಾ `ಹುಚ್ಚುಮನಸ್ಸಿನ ಹತ್ತು ಮುಖಗಳು’ ಎನ್ನಬಹುದು. ಕೇಂಬ್ರಿಜ್ ಪರೀಕ್ಷೆಯ ಮೂಲಕ ಪ್ರಾಥಮಿಕ ವಿದ್ಯಾಭ್ಯಾಸ ಆರಂಭಿಸಿದ ಅವರು, ಪುಣೆಯ  ಫಿಲ್ಮ್ ಇನ್ಸ್‌ಟಿಟ್ಯೂಟ್‌, ಹೈದರಾಬಾದಿನ ಇಂಗ್ಲಿಶ್ ಮತ್ತು ವಿದೇಶಿ ಭಾಷೆಗಳ ಸಂಸ್ಥೆಯಂತಹ ಉನ್ನತಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಿದರು. ಜೀವಕ್ಕೆ ಬೇಡವೆನಿಸಿದಾಗ ಅವನ್ನೆಲ್ಲ ತ್ಯಜಿಸಿದರು. ಸಾಂಪ್ರದಾಯಿಕ ಗುರುಕುಲ ಪದ್ಧತಿಯ ಪ್ರಕಾರ ಅಲಿ ಅಕ್ಬರ್‌ಖಾನರ ಮನೆಯಲ್ಲಿದ್ದು ಸಂಗೀತ ಕಲಿತರು. ಹೀಗಾಗಿ ಪಾಶ್ಚಾತ್ಯ-ಪೌರ್ವಾತ್ಯಗಳ ವಿಶಿಷ್ಟ ಸಂಕರವನ್ನು ಸಾಧಿಸಿದರು. ಪಂಡಿತ ತಾರಾನಾಥರ ಮೇಲೆ ಅವರು ಬರೆದಿರುವ ‘ಪವಾಡ -ಪ್ರಭಾವ’ ಎಂಬ ಪುಟ್ಟ ಲೇಖನವಿದೆ. ಪರಂಪರೆಯ ಹೆಸರಲ್ಲಿ ಜಡಸಂಪ್ರದಾಯಕ್ಕೆ ಜಾರುವ ಭಾರತೀಯ ಮನೋಭಾವವನ್ನು ಪಾಶ್ಚಿಮಾತ್ಯ ವೈಚಾರಿಕತೆಯಿಂದ ವಿಮರ್ಶಿಸುವ ಈ ಲೇಖನ, ನಿಷ್ಠುರ ಚಿಂತನೆಯಿಂದ ಕೂಡಿದೆ. ‘ಮನ್ವಂತರ’ದಲ್ಲಿ ಪ್ರಕಟವಾಗಿರುವ ಲೇಖನ ಕೂಡ, ಪಾಶ್ಚಾತ್ಯ ಚಿಂತನೆಯು ಭಾರತದ ಲೇಖಕರು ತಮ್ಮ ಪರಂಪರೆಯೊಳಗೆ ಆಳವಾಗಿ ಬೇರುಬಿಡಲಾಗದಂತೆ ತಡೆಹಿಡಿದಿರುವ ದಿಟಗಳನ್ನು ಕಾಣಿಸುತ್ತದೆ. ಈ ಎರಡೂ ಲೇಖನಗಳು ನಮ್ಮ ಸಂಸ್ಕೃತಿ ಪರಂಪರೆಯ ಸಂಕೀರ್ಣವಾದ ಸಂಗತಿಗಳನ್ನು ಚರ್ಚಿಸಬಲ್ಲ ಅವರ ಜಿಜ್ಞಾಸಿಕೆಗೆ ಪುರಾವೆಗಳಂತಿವೆ. 

ಆ ದಿನ ರಾತ್ರಿ ರಾಜೀವ್ ನಮಗೊಂದು ಪಾರ್ಟಿ ಕೊಟ್ಟರು. ಅವರು ದುಂಡನೆಯ ತೆಳ್ಳನೆಯ ಗಾಜಿನ ಬಟ್ಟಲಲ್ಲಿ ಸ್ಕಾಚ್ ವಿಸ್ಕಿಯನ್ನು ಹಾಕಿಕೊಂಡು ಮುಕ್ಕಳಿಸುವಂತೆ ಒಮ್ಮೆ ಅದನ್ನು ಒಳಗೇ ಕುಲಕಿಸಿ ಬಾಯಿಯ ಸಮಸ್ತ ಗೋಡೆಗಳಿಗೂ ಢಿಕ್ಕಿಹೊಡೆಸಿ, ಹಲ್ಲುಗಳ ಸಂದಿಸಂದಿಗೂ ಒಳಿಸಿ, ತಾಲವ್ಯಕ್ಕೆ ಎರಚಿ, ಬಳಿಕ ಕಿರುನಾಲಗೆಯನ್ನು ದಾಟಿಸಿ ಗಂಟಲಿಗೆ ಇಳಿಸುತ್ತಿದ್ದರು. ಅವರ ಜತೆ ಗುಂಡುಹಾಕುತ್ತ ಮಾತುಕತೆ ಮಾಡುವುದೆಂದರೆ, ಮಲೆನಾಡಿನ ಮುಂಗಾರು ಮಳೆಗೆ ಮೈಯೊಡ್ಡಿದಂತೆ. ಬೇಡವಾದವರನ್ನು ಝಂಕಿಸಲು ಅವರ ಶಬ್ದಕೋಶದಲ್ಲಿರುವ ಬೈಗುಳ ಗುಡುಗುತ್ತವೆ; ಸಂಗೀತ ಸಾಹಿತ್ಯ ಕುರಿತ ಒಳನೋಟಗಳು ಹಾದುಹೋಗುತ್ತವೆ;  ಕಾರ್ಮುಗಿಲು ನೀರುಸುರಿಸಿ ಹೋದಂತೆ ಆಪ್ತವಾದ ನೆನಪುಗಳು ಹಾಯುತ್ತವೆ. ತನಗೆ ಕಲಿಸಿದ ಗುರುಗಳ ಹಾಗೂ ಬೆಚ್ಚನೆಯ ಪ್ರೀತಿಕೊಟ್ಟ ಗೆಳೆಯರ-ಶಿಷ್ಯರ ಚಿತ್ರಗಳು ಮಿಂಚುಗಳಂತೆ ಬೆಳಕು ಚಿಮುಕಿಸುತ್ತವೆ. ಹಾಸ್ಯ ಮತ್ತು ವ್ಯಂಗ್ಯದ ಬಿರುಗಾಳಿ ಬೀಸುತ್ತದೆ. ಹೀಗೆ ನಡೆಯುತ್ತ ನಡುರಾತ್ರಿ ಆಗುತ್ತಿತ್ತು. ಅವರ ನಾಯಿ-ತನ್ನೊಡೆಯನ ಸಮಯವನ್ನೆಲ್ಲ ನಾವು ಕಬಳಿಸುತ್ತಿರುವ ಅಸೂಯೆಯಿಂದಲೋ ಏನೋ-ನಿಷ್ಕಾರಣ ಬೊಗಳಿತು. ಆಗ ರಾಜೀವ್ `ಏ ಕುತ್ತಾ ಹಮಾರ ಹೈ. ಲೇಕಿನ್ ಹಮಾರೇ ಘರಾಂಣೇಕ ನಹಿ’ ಎಂದು ತಮಾಶೆ ಮಾಡಿದರು.

ರಾಜೀವ್ ಹೊರನೋಟಕ್ಕೆ ಬಿರುಸಾದ ಕಾಂಡವುಳ್ಳ ಮರದಂತೆ. ಮರದ  ತುಂಬ ತಾಯ್ತನದ ಪ್ರೀತಿ ತುಂಬಿದ ಮೆತ್ತನೆಯ ಹಂಪಲುಗಳಿವೆ. ನಡುವೆ ಬರುತ್ತಿದ್ದ  ಫೋನ್ ಕರೆಗಳನ್ನು ಅವರು ‘ಹಲೊ! ರಾಜೀವ್ ತಾರಾನಾಥ್ ಹಿಯರ್’ ಎಂದು ಕಿರಿಕಿರಿಯ ಭಾವವಿಲ್ಲದೆ ಸ್ವೀಕರಿಸುತ್ತಿದ್ದರು. ಫೋನಲ್ಲಿ ಸಿಕ್ಕವರನೆಲ್ಲ ಮನೆಗೆ ಆಹ್ವಾನಿಸುತ್ತಿದ್ದರು. ಅವರು ಊಟೋಪಚಾರದಲ್ಲಿ ಅತಿಥಿಗಳನ್ನು ದಣಿಸಿಬಿಡುತ್ತಾರೆ. ಊಟ-ಪಾನೀಯಗಳು ಅವರ ಪಾಲಿಗೆ ಪ್ರೀತಿ ಪ್ರಕಟಿಸುವ ಅವಕಾಶಗಳು. ಅವರ ಮನೆಯೊಂದು ಗುರುಕುಲವಲ್ಲ ಮಾತ್ರವಲ್ಲ, ಅನ್ನಸತ್ರ ಕೂಡ; ‘ಪ್ರೇಮಾಯತನ’ದ ಮೈಸೂರು ಆವೃತ್ತಿ. ಅವರು ಹಸಿಮೆಣಸನ್ನು ಕರಕರ ತಿನ್ನುವುದನ್ನು ನೋಡಿ ನನಗೆ ಮೈನವಿರೆದ್ದಿತು. ಮೈತುಂಬ ಪ್ರೀತಿ ತುಂಬಿಕೊಂಡ ಈ ಜೀವಕ್ಕೆ ಖಾರ ಇಷ್ಟೊಂದು ಪ್ರಿಯವೇ? ತಪ್ತಸಿಟ್ಟಿಗೆ ಇದೂ ಕಾರಣವಿರಬೇಕು. ಅವರ ಸ್ಮೃತಿಸಂಚಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಊಟದ ಪ್ರಸಂಗಗಳ ದಾಸ್ತಾನಿತ್ತು. ತಿರುಚ್ಚಿಯಲ್ಲಿ ಸವಿದ ಬಿರಿಯಾನಿಯ ಬಗ್ಗೆ ವರ್ಣಿಸಿದರು. ಬೆಂಗಳೂರಿನಲ್ಲಿ ಮೆದ್ದ ಪುಳಿಯೋಗರೆ ಬಗ್ಗೆ ತಿಳಿಸಿದರು: “ಬಿ.ಎಸ್.ರಂಗಾನ ತಂದೆಯವರು  ಒಂದು ಪ್ರೆಸ್ ಇಟ್ಟಿದ್ರು ಕಾಟನ್‍ಪೇಟೇಲಿ. ಅಲ್ಲಿ ತಾರಾನಾಥರು, ಕೈಲಾಸಂ, ಟೈಗರ್ ವರದಾಚಾರ್ಯರು ಎಲ್ಲ ಸೇರತಿದ್ದರು. ನನ್ನ ಜೀವನದಲ್ಲಿ ಮೊಟ್ಟಮೊದಲು ಪುಳಿಯೋಗರೆಯನ್ನ ಅಲ್ಲಿ ತಿಂದೆ. ಒಂದು ದೊನ್ನೇಲಿ ಕೊಟ್ಟಿದ್ದರು. ಈಗಲೂ ಅದರ ರುಚಿ ನಾಲಗೇಲೇ ಇದೆ ಕಂಡ್ರಿ’ ಎಂದು ನೆನಪಿಸಿಕೊಂಡರು.

ರಹಮತ್‌ ತರೀಕೆರೆ

ನನಗೂ ಶ್ರೀಧರ್ ಅವರಿಗೂ ಬೆಳಗಿನ ಜಾವ ಅವರು ಮಾಡುವ ರಿಯಾಜ್‍ನಲ್ಲಿ ಕೂರುವ ಬಯಕೆಯಿತ್ತು. ತಡರಾತ್ರಿ ಮಲಗಿದ್ದರಿಂದ ನಮಗೆ ಗಾಢವಾದ ನಿದ್ದೆ.  ಬೆಳಗಿನ ಐದು ಗಂಟೆಗೇ ತಂತಿ ಮೀಟುವ ದನಿ ಎಲ್ಲಿಂದಲೋ ಬಂದು ಕಿವಿಯನ್ನು ಹೊಕ್ಕಿತು. ತಟ್ಟನೆದ್ದು ಮುಖಕ್ಕೆ ನೀರು ಬಡಿದುಕೊಂಡು ಹೋಗಿ ಕುಳಿತೆವು. ಚಹದ ಸರಬರಾಯಿ ಆಯಿತು. ತಬಲ ಕಲಿಯಲು ಬಂದ ಎಳೆಯ ಶಿಷ್ಯರು ಬಂದು ಕಾಲಿಗೆ ನಮಸ್ಕರಿಸಿ ಕೂತರು. ರಾಜೀವ, ತಮ್ಮ ದೊಡ್ಡದೇಹಕ್ಕೆ ಪ್ರಮಾಣದ ಔಚಿತ್ಯವಿಲ್ಲದಂತೆ ಚಿಕ್ಕದಾಗಿ ತೋರುವ ಚಿಕ್ಕ ಕಾಲನ್ನು ಮುಂದೆಚಾಚಿ ನುಡಿಸತೊಡಗಿದರು. ಸರೋದದಲ್ಲಿ ಕೈಬೆರಳುಗಳದ್ದೇ ಕರಾಮತ್ತು. ಆಗ ಅವರ ಬಿಗಿದ ಮೊಗದಲ್ಲಿ ಹುಬ್ಬುಗಳು ಕೊಂಕಾಗಿ, ಅವುಗಳ ನಡುವೆ ನಿರಿಗೆಗಳೆದ್ದು, ಸೊಡ್ಡು ಬಿಗಿಯಾಗಿ ತುಟಿ ಮುಂಚಾಚಿ ಕೊಳ್ಳುತ್ತದೆ. ಅವರು ನುಡಿಸುತ್ತ ತಮ್ಮೊಳಗೆ ಮುಳುಗಿ ಹೋಗುತ್ತಾರೆ. ಪ್ರತಿಕ್ರಿಯೆಗಾಗಿ ಕೇಳುಗರತ್ತ ನೋಡುವುದಿಲ್ಲ. ಆದರೆ ಆಗಾಗ್ಗೆ ಎಳೆಯ ತಬಲಾ ಸಾಥಿಗಳ ಮುಖ ನೋಡುತ್ತಾರೆ. ಆಗವರ ತುಟಿಗಳಲ್ಲಿ ಸಣ್ಣಗಿನ ಮುಗುಳುನಗೆ ಹುಟ್ಟಿ, ಗುಟುಕು ಕೊಡುವಾಗ ತಾಯತ್ತ ಬಾಯಿ ಚಾಚುವ ಹಕ್ಕಿಮರಿಗಳಂತೆ ನೋಡುತ್ತ ಕಾಯುತ್ತ ಕುಳಿತ ಶಿಷ್ಯರಿಗೆ ದಾಟುತ್ತಿತ್ತು. ಶಿಷ್ಯರು ಎದೆಹಾಲನ್ನು ಹೀರಿದ ಮಕ್ಕಳಭಾವದಲ್ಲಿ ಅದನ್ನು ಸ್ವೀಕರಿಸಿ ತಮ್ಮಲ್ಲೇ ಹಂಚಿಕೊಂಡು ಸಂತೃಪ್ತಗೊಂಡು, ಮತ್ತೆ ಗುರುವಿಗೆ ಅದನ್ನು ವಾಪಾಸು ಮಾಡುತ್ತಿದ್ದರು. ಈ ಮಂದಸ್ಮಿತದ ಸುಳಿದಾಟವು ಸರೋದಿನ ತಂತಿ ಮತ್ತು ತಬಲಗಳ ಚರ್ಮದಿಂದ ಹುಟ್ಟುತ್ತಿದ್ದ ನಾದದ ಜತೆಗೆ, ಸೇರಿ ಜುಗಲ್‍ಬಂದಿ ನಡೆಸುತ್ತಿತ್ತು.

 ರಾಜೀವ್ ನುಡಿಸಿದ ಮೊದಲನೇ ಕೃತಿ ನನ್ನೊಳಗೆ ಇಳಿಯಲಿಲ್ಲ. ಎರಡನೆಯದು ಅಲೆಯಲೆಯಾಗಿ  ಒಳಗನ್ನು ತುಂಬಿಕೊಳ್ಳತೊಡಗಿತು. ಅದನ್ನು ತುಂಬಿಕೊಂಡು ತನ್ಮಯವಾಗಿರುವಾಗ ತಾರು ಫಟ್ಟನೆ ತುಂಡಾಯಿತು. ಚಿಮ್ಮಟದಂತಹ ಕಟಿಂಗ್ ಪ್ಲೇಯರ್ ಎತ್ತಿಕೊಂಡು ಮೆಕ್ಯಾನಿಕನಂತೆ ತಂತಿಕಟ್ಟಿ ಬಿಗಿಮಾಡಿದರು. ಮತ್ತೆ ನಾದ ಉಕ್ಕತೊಡಗಿತು. ಅದು ಉತ್ತುಂಗಕ್ಕೆ ಏರುತ್ತಿರುವಾಗ ಮತ್ತೊಮ್ಮೆ ತಂತಿ ಕೈಕೊಟ್ಟಿತು. ನಾದವು ತುರಿಯಾವಸ್ಥೆಯಲ್ಲಿ ಇರುವಾಗಲೇ ತಂತಿ ತುಂಡಾಗಿದ್ದು, ಪಂಪನ `ಆದಿಪುರಾಣ’ದಲ್ಲಿ ಬರುವ ನೀಲಾಂಜನಾ ನೃತ್ಯ ಪ್ರಸಂಗವನ್ನು ನೆನಪಿಸಿತು. ರಾಜೀವ್ ರಿಯಾಜ್ ನಿಲ್ಲಿಸಿ ಎತ್ತಲೊ ನೋಡುತ್ತ ಅಂದರು:

“ಮೇರಿ ತಬಿಯತ್ ಜರಾ ಢೀಲಿ ಹೈ. ಉಮರ್ ಕಾ ತಕಾಜಾ ಹೈ. ಥೋಡಾ ಸ ಪರ್ಹೇಜ್ ಕರನಾ ಪಡ್ತಾ ಹೈ. ಮೇರೆ ಪಾಸ್ ಜೋಭಿ ತಾಖತ್ ಬಚೀಹೈ, ಓ ಸಬ್ ಸರೋದ್ ಪರ್ ಲಗಾತಾ ಹ್ಞೂ’’ (ನನ್ನ ಆರೋಗ್ಯ ತುಸು ಶಿಥಿಲವಾಗಿದೆ. ವಯಸ್ಸಿನ ಕಾರಣ ಕೊಂಚ ಪಥ್ಯ ಮಾಡಬೇಕಾಗುತ್ತೆ. ನನ್ನೊಳಗೆ ಏನು ಕಸುವು ಉಳಿದಿದೆಯೋ ಅದನ್ನೆಲ್ಲ ಸರೋದಿನ ಮೇಲೆ ಹಾಕುತ್ತಿದ್ದೇನೆ.) ಎರಡು ಸಲ ಹೃದಯಕ್ಕೆ ಆಘಾತವಾಗಿದೆ. ಮೂರನೆಯದಕ್ಕೆ ಕಾಯುತ್ತಿರುವೆ. ಈ ಕೈಗೆ ಯಾವಾಗ ಪಾರಸಿ ಹೊಡೆಯುತ್ತದೆಯೊ ಅಲ್ಲೀತನಕ ಬಾರಿಸ್ತೇನೆ’’ ಎಂದರು. ಹಠಾತ್ತನೆ ನುಸುಳಿದ ಮೃತ್ಯುಚಿಂತನೆ ಮತ್ತು ಉಳಿದ ಕಾಲವನ್ನು ತೀವ್ರವಾಗಿ ಬದುಕುವ ಹವಣಿಕೆಗೆ ನಮಗೆ ಬೆರಗೂ ದಿಗಿಲೂ ಆಯಿತು.

ರಾಜೀವರ ಮಾತುಕತೆ ಇಂಗ್ಲೀಶ್ ಉರ್ದು ಕನ್ನಡ ಎತ್ತಬೇಕತ್ತ ಪಾತರಗಿತ್ತಿಯಂತೆ ತಿರುಗುತ್ತಿತ್ತು. ನನ್ನ ಮನೆಮಾತೆಂದೊ ಏನೋ ಭರಪೂರ ಉರ್ದು ಬಳಸುತ್ತಿದ್ದರು. ಅದು ಸರೋದ್ ವಾದನಕ್ಕಿಂತ ಮಧುರವಾಗಿತ್ತು. ನನಗೆ ಅವರೊಟ್ಟಿಗೆ ಉರ್ದುವಿನಲ್ಲಿ ಚರ್ಚಿಸಲು ತವಕ. ಆದರೆ ಅದಕ್ಕೆ ತಕ್ಕ ಶಬ್ದಸಂಪತ್ತಿನ ಕುವ್ವತ್ತಿಲ್ಲ. ನಾನು ‘`ಬಹುತ್ ಹಸರತ್ ಥೀ ಆಪ್ ಕೆ ದೀದಾರ್ ಕಿ’’ (ನಿಮ್ಮ ದರ್ಶನದ ಬಯಕೆ ಬಹುದಿನದಿಂದ ಇತ್ತು) ಎಂದೆ. ಅವರಿಗೆ ಮಾತಲ್ಲಿ ಆಡಂಬರ ಕಂಡಿರಬೇಕು. “ಇತನೆ ಊಂಚೆ ಖಯಾಲ್ ಮತ್ ರಖೋ. ದೀದಾರ್! ಎ ಲಬ್ಸ್ ಕಹ್ಞಾ ಲಗಾನ? ಇತನೀ ಬಡೀ ಅಲ್ಫಾಸ್ ಏ ನಾಚೀಸ್ ಬಂದೆಪರ್ ಇಸ್ತೆಮಾಲ್ ನ ಕರೊ’'(ಇಷ್ಟೊಂದು ದೊಡ್ಡ ನಿರೀಕ್ಷೆ ಇರಿಸಿ ಕೊಳ್ಳಬೇಡಿ. ದರ್ಶನ! ಈ ಶಬ್ದವನ್ನು ಎಲ್ಲಿ ಬಳಸಬೇಕು? ಇಷ್ಟೊಂದು ಭಾರವಾದ ಶಬ್ದಗಳನ್ನು ಈ ಸಾಮಾನ್ಯ ವ್ಯಕ್ತಿಯ ಮೇಲೆ ಬಳಸಬೇಡಿ) ಎಂದರು.

ಕೀರ್ತಿನಾಥ ಕುರ್ತಕೋಟಿಯವರು ತಮ್ಮೊಂದು ಲೇಖನದಲ್ಲಿ ರಾಜೀವರನ್ನು `ಅವಧೂತ’ ಎಂದು ಕರೆದಿರುವುದುಂಟು. ದಿಟ. ರಾಜೀವರ ಹಾಗೆ ಆರ್ಥಿಕ ಭದ್ರತೆಯುಳ್ಳ ದೊಡ್ಡದೊಡ್ಡ ಹುದ್ದೆಗಳನ್ನು ತ್ಯಜಿಸಿ, ಆತ್ಮಕ್ಕೆ ಹತ್ತಿರವಾದ ಸಂಗೀತವನ್ನು ಕಲಿಯಲು ಹೋಗಿದ್ದನ್ನು ಗಮನಿಸಿದರೆ, ಅವರೊಬ್ಬ ಯೋಗಿಯೇ. `ಸಾಧನೆ’ ಶಬ್ದವು ಸಂಗೀತ ಮತ್ತು ಯೋಗ ಎರಡೂ ಕಡೆ ಸಮಾನಾರ್ಥದಲ್ಲೇ ಬಳಕೆಯಾಗುತ್ತದೆ. ಈ ಎರಡೂ ಕ್ಷೇತ್ರದಲ್ಲಿ ಸಾಧಕನಾಗುವುದು ಹಾಗೆ ಬೇರೆಬೇರೆಯಲ್ಲ ಕೂಡ. ಹೀಗಾಗಿಯೇ ಅವರೊಬ್ಬ ಸೂಫಿ ಅಥವಾ ಯೋಗಿಯ ಗುಣವುಳ್ಳ ಕಲಾವಿದ. ಸಾಹಿತ್ಯದ ವಿಷಯದಲ್ಲಿ ಬಿಗಿಯಾದ ತರ್ಕದಲ್ಲಿ ಚರ್ಚಿಸುವ ಅವರು, ಸಂಗೀತ ವಿಷಯ ಬಂದೊಡನೆ ಅಂತರ್ಮುಖಿಯಾಗಿ ದಾರ್ಶನಿಕ ಟ್ರಾನ್ಸಿಗೆ ಸರಿದುಬಿಡುತ್ತಾರೆ. ಸಂಗೀತವು ಅವರ ಪಾಲಿಗೆ ಕೇವಲ ಕಲಾಮಾಧ್ಯಮವಲ್ಲ. ತಮ್ಮನ್ನು ತಾವು ಕಂಡುಕೊಳ್ಳುವ ಕನ್ನಡಿ; ತಮ್ಮ ಗುರುಪರಂಪರೆ ಯನ್ನು ಮುಂದಕ್ಕೆ ಒಯ್ಯುವ ಹೊಣೆಗಾರಿಕೆ; ಭಾರತದ ಬಹುರೂಪಿ ಸಂಸ್ಕೃತಿಯನ್ನು ಹುಡುಕುವ ಮಾಧ್ಯಮ ಕೂಡ. ಹೀಗಾಗಿಯೇ ಅವರು ಸದ್ಯದ ಭಾರತೀಯ ಸಮಾಜದಲ್ಲಿ ತುಂಬ ನಲುಗುತ್ತಿರುವ ಬಹುರೂಪಿ ಸಂಸ್ಕೃತಿಯ ಉನ್ನತ ಪ್ರತೀಕದಂತೆ ತೋರುವುದು. ಅವರ ‘ಸಂಗೀತ ಮತ್ತು ನಾನು’ ಎಂಬ ಲೇಖನದಲ್ಲಿ ಈ ಕೆಳಗಿನ ಮಾತುಗಳಿವೆ:

“ನನ್ನ ದೇವರನ್ನು ನಾನೇ ಹುಡುಕಿಕೊಳ್ಳಬೇಕಿತ್ತು ಮತ್ತು ಆ ಸಂಗೀತ ದೇವತೆಯಿಂದ ನನ್ನೊಳಗನ್ನು ತುಂಬಿಕೊಳ್ಳಬೇಕಿತ್ತು. ಆ ಭಾವನೆಯಿಂದ ನನ್ನ ದೇಶ-ಕಾಲವನ್ನು ಸೃಷ್ಟಿಸಿಕೊಳ್ಳಬೇಕಿತ್ತು. ಆ ಸಮಯದಲ್ಲಿ ನನ್ನೊಳಗೆ ಅಲಿ ಅಕಬರ್ ಅವರು ಪ್ರವಹಿಸಿದರು. ಅವರ ಸಂಗೀತವು ನನಗೆ ಎಲ್ಲವನ್ನೂ ಅಥವಾ ಈ ಉಪಖಂಡ ನನಗೇನಾಗಿದೆಯೊ ಅದರ ಪ್ರತಿಯೊಂದನ್ನು ಗ್ರಹಿಸುವ, ಸ್ವೀಕರಿಸುವ ಮತ್ತು ರೂಪಿಸುವ ಪ್ರಗತಿಪರವಾದ ವೈವಿಧ್ಯಮಯ ವಿಧಾನಗಳನ್ನು ನೀಡಿತ್ತು. ರಸಾಸ್ವಾದದ ಕತ್ತಲೆಯ ಅನಿರ್ವಚನೀಯ ವಿಷಾದದ ಒಂಟಿತನದ ಪ್ರಶಾಂತತೆಯ ಪ್ರತ್ಯಕ್ಷತೆಯನ್ನು ಸೃಷ್ಟಿಸಲು ಒಬ್ಬ ಅಲಿ ಅಕ್ಬರಖಾನ್‌  ಬೇಕು ಎಂದಷ್ಟೆ ಹೇಳಬಲ್ಲೆ. ನನ್ನ ಗುರುವಿನಿಂದ ನಾನು ಪಡೆದುಕೊಂಡ ಅನುಗ್ರಹದಲ್ಲಿ ಈ ನೆಲದ ಒಂದು ಕಲ್ಲುಹರಳಿನಿಂದ ಹಿಡಿದು ಭಾರತೀಯ ಸಿನಿಮಾವರೆಗೆ ಎಲ್ಲದಕ್ಕೆ ಸಂಬಂಧಿಸಿದ ಒಂದು ಮಾಧ್ಯಮವನ್ನು ಹೊಂದಿರುವೆ. ನನ್ನ ಕಲೆಯಲ್ಲಿ ನನ್ನ ನಾಡು ನನಗೆ ಪಾರದರ್ಶಕವಾಗಿ ನನ್ನ ಸ್ಥಳ, ನನ್ನ ನಿರ್ದಿಷ್ಟ ಸ್ಥಳ ಮತ್ತು ಕಾಲ ಆಗಿದೆ. ನನಗೆ ದೇಶೀ ಆಗಿರುವುದರಲ್ಲಿ ಹರ್ಷವಿದೆ.’’

ಸಂದರ್ಶನದ ಭಾಗ 1 ಓದಿದ್ದೀರಾ? ನೆನಪು | ಪಂಡಿತ್‌ ರಾಜೀವ ತಾರಾನಾಥರೊಡನೆ ಒಂದು ದಿನ- ರಹಮತ್‌ ತರೀಕೆರೆ

ರಾಜೀವ್ ಹಿಂದೂಸ್ತಾನಿ ಸಂಗೀತದವರು. ಕರ್ನಾಟಕ ಸಂಗೀತದ ಬಗ್ಗೆ ಅವರ ಒಲವನ್ನು ತಿಳಿವ ಕುತೂಹಲದಿಂದ ಕೇಳಿದೆ. “ಅವುಗಳಲ್ಲಿ  ಅನುಭಾವ ತನ್ಮಯತೆ ವಿಷಯದಲ್ಲಿ ವ್ಯತ್ಯಾಸವಿಲ್ಲ. ಭೇದಭಾವವನ್ನು ಸಂಗೀತ ಒಪ್ಪುವುದಿಲ್ಲ” ಎಂದರು. ಬಿಡಿಬಿಡಿ ಸಂಗತಿಗಳನ್ನು ಕೂಡಿಸಿ ನೋಡುವ ಪರಂಪರೆಯಲ್ಲಿ ಬಂದವರಿಗೆ ಭೇದಭಾವವು ಒಂದು ಅಸಹಜ ಕಾಯಿಲೆಯಂತೆ ಕಾಣುವುದು ಸಹಜ.

ಸುದೀರ್ಘ ಭೇಟಿ ಮುಗಿಯುತ್ತ ಬಂದಿತು. ಆಗ ನಾನು ಸೂಫಿ ಸಂಗೀತದಲ್ಲಿರುವ ಮೆಹಫಿಲೆ ಸಮಾ ಹಾಗೂ ಮೆಹಫಿಲೆ ಕಲಾಂಗಳ ಬಗ್ಗೆ ಪ್ರಸ್ತಾಪಿಸಿದೆ. ಆಶ್ಚರ್ಯವಾಯಿತು! ಅಷ್ಟು ದೊಡ್ಡ ಸಂಗೀತಗಾರರಾದ ಅವರಿಗೆ ಈತನಕ ಸಮಾ ಕಾರ್ಯಕ್ರಮ ನೋಡಲು ಸಾಧ್ಯವಾಗಿಲ್ಲ. ‘ಮಹೆಫಿಲ್ ಸಮಾ ಮೇ ಶರೀಕ್ ಹೋನಾ ಚಾಹೂಂಗಾ. ಹಾಲ್ ಹೀ ಮೇ ಸುನಾ ಹ್ಞೂ ಕೆ ಗುಲಬರ್ಗಾಮೇ ಏಕ್ ಪೀರ್‍ಸಾಹೆಬ್ ಹ್ಞೈ. ತೊ ಉನ್ಸೇ ಭಿ ಮಿಲ್ನಾ ಚಾಹತಾ ಹ್ಞೂಂ’’(ಸಮಾದಲ್ಲಿ ಭಾಗವಹಿಸಲು ಬಯಸುತ್ತೇನೆ. ಗುಲಬರ್ಗಾದಲ್ಲಿ ಒಬ್ಬ ಸೂಫಿಗುರು ಇದ್ದಾರೆಂದು ಕೇಳಿರುವೆ. ಅವರನ್ನು ಕಾಣಲು ಬಯಸುತ್ತೇನೆ)  ಎಂದು ನಮ್ರವಾಗಿ ಉತ್ತರಿಸಿದರು. ತಮ್ಮ ತಂದೆಯ ಬಗ್ಗೆ ‘ಅಗರ್ ಇಸ್ ನಜರಿಯೇಸೇ ಆಪ್ ದೇಖನಾ ಚಾಹತೇ ಹ್ಞೈ ತೊ, ಹಮಾರೆ ವಾಲಿದ್‍ಸಾಬ್ ಏಕ್ ಸೂಫಿಯಾನಾ ಥೆ’ (ಈ ನಿಟ್ಟಿನಿಂದ ನೋಡುವುದಾದರೆ ನಮ್ಮಪ್ಪ ಒಬ್ಬ ಸೂಫಿಯಾಗಿದ್ದರು) ಎಂದರು. ನಾನು ಅಜ್ಮೀರಿನ ಮೆಹಫಿಲೆ ಸಮಾವನ್ನು ಬಣ್ಣಿಸಲು, ‘ನನಗೆ ಒಮ್ಮೆ ಕರಕೊಂಡು ಹೋಗ್ತೀರಾ?’ ಎಂದು ಮಗುವಿನಂತೆ ಕೇಳಿದರು. ಮೈಸೂರಿನಲ್ಲಿ ತಾರಾನಾಥ್ ಫೌಂಡೇಶನ್ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತ ‘ನೀವೆಲ್ಲ ಬರ್ರಿ. ಸೂಫಿ ಟ್ರೆಡಿಶನ್ ಮ್ಯಾಲೆ ಸಿರೀಸ್ ಲೆಕ್ಚರ್ಸ್ ಮಾಡೋ ಇರಾದೆ ಅದ. ಫಯಾಜ್‍ಖಾನ್, ಅವ್ಞ ಆಕ್ಸಿಡೆಂಟ್ ಆಗಿ ಸತ್ತುಬದುಕಿದವ್ಞ. ಕಟ್ಟಿಗೆ ಹಿಡಕೊಂಡು ಬರ್ತಾನ. ಕೆಳಕ್ಕ ಕೂಡ್ಲಿಕ್ಕೆ ಆಗೋದಿಲ್ಲ. ಕುರ್ಚಿಮ್ಯಾಲ ಕೂತು ಪಸ್ಟ್‌ಕ್ಲಾಸ್‌ ಹಾಡ್ತಾನ. ನಾನೂ ಬಾರಸ್ತೀನಿ. ಪ್ರವೀಣ್ ಭಟ್ಟಾಚಾರ್ಯ ಬಾರಸ್ತಾನ. ಬೆಂಗಾಲಿ. ಎಂಥಾ ಒಳ್ಳೇ ಸಿತಾರ ಪ್ಲೇಯರ್! ಸಣ್ಣವಯಸ್ಸು. ನಮ್ಮ ಬೆಂಗಳೂರಿನ ಕನ್ನಡಮ್ಮನ ಮಕ್ಕಳು ಎಷ್ಟರಮಟ್ಟಿಗೆ ಹಾಳಾಗಿದ್ದಾರೆ ಅಂತಂದ್ರೆ, ಆರು ವರ್ಷದಿಂದ ಅವ್ಞ ಅಲ್ಲದಾನ. ಒಮ್ಮೇನೂ ಹಾಡಸಿಲ್ಲ’’ ಎಂದರು.

ನಾನು ಬಿದಾಯಿ ತೆಗೆದುಕೊಳ್ಳುವುದಕ್ಕಾಗಿ ಅವರ ಮುಂಗೈ ಹಿಡಿದುಕೊಂಡು ಸೂಫಿ ಪದ್ಧತಿಯಂತೆ ಚುಂಬಿಸಿದೆ. ನನ್ನ ಕೈಮೇಲೆ ತಮ್ಮ ಇನ್ನೊಂದು ಬೆಚ್ಚನೆಯ ಕೈಯನ್ನು ಇಟ್ಟು ‘ಅರರೆ!’ ಎನ್ನುತ್ತ ಆರ್ದ್ರಭಾವದಿಂದ ಅಮುಕುತ್ತ `ಮತ್ತ ಮತ್ತ ಬರತಿರಬೇಕು’ ಎಂದರು.

(ಮುಗಿಯಿತು)

(ಈ ಮಾತುಕತೆಯನ್ನು ನ್ಯಾಯನಿಷ್ಠುರಿಗಳ ಜತೆಯಲ್ಲಿ ಕೃತಿಯಿಂದ ಆಯ್ದುಕೊಳ್ಳಲಾಗಿದೆ)

ರಹಮತ್‌ ತರೀಕೆರೆ

ಹಿರಿಯ ಸಾಹಿತಿ

More articles

Latest article