Tuesday, September 17, 2024

ಚುನಾವಣೆ ಗೆಲ್ಲುವ ಧೂರ್ತ ಬಿಜೆಪಿ ಸೂತ್ರ

Most read

ಸರ್ವಾಧಿಕಾರಿ ವ್ಯವಸ್ಥೆ ಮಾಡುವುದೇ ಚುನಾವಣಾ ವಂಚನೆಯನ್ನು. ಉತ್ತರ ಕೊರಿಯಾ, ರಷ್ಯಾದಂತಹ ರಾಷ್ಟ್ರಗಳ ಸರ್ವಾಧಿಕಾರಿಗಳೂ ಸಹ ನಿಯಮಿತವಾಗಿ ಚುನಾವಣೆ ನಡೆಸುತ್ತಾರೆ. ಆದರೆ ಚುನಾವಣೆಗೆ ಮೊದಲೇ ಎದುರಾಳಿಗಳೇ ಇಲ್ಲದಂತೆ ನೋಡಿಕೊಳ್ಳುತ್ತಾರೆ. ಅದೇ ಮಾದರಿಯ ತಂತ್ರಗಾರಿಕೆಯ ಒಂದು ಡೆಮೋ ಪ್ರದರ್ಶನ ಗುಜರಾತಿನ ಸೂರತ್ ನಲ್ಲಿ ನಡೆದ ಈ ಚುನಾವಣಾ ಪ್ರಹಸನ. – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಅಧಿಕಾರಕ್ಕಾಗಿ ಏನೇನು ಮಾಡಬೇಕೋ ಅವುಗಳನ್ನೆಲ್ಲಾ ಕೋಮುವಾದಿ ಬಿಜೆಪಿ ಪಕ್ಷ ಮಾಡಿಯಾಗಿದೆ. ಆಪರೇಶನ್ ಕಮಲ ಮಾಡಿ ಚುನಾಯಿತ ಸರಕಾರಗಳನ್ನೇ ಉರುಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಲೇವಡಿ ಮಾಡಿಯಾಗಿದೆ. ಇಡಿ ಐಟಿ ಸಿಬಿಐ ಗಳಂತಹ ತನಿಖಾ ಸಂಸ್ಥೆಗಳನ್ನು ಚೂ ಬಿಟ್ಟು ಹೆದರಿಸಿ ಪ್ರತಿಪಕ್ಷಗಳ ಪ್ರಭಾವಿ ನಾಯಕರುಗಳನ್ನೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪವಿತ್ರವಾಗಿಸಿ ವಾಮಮಾರ್ಗದಲ್ಲಿ ಅಧಿಕಾರ ಗಿಟ್ಟಿಸಿಕೊಂಡಾಗಿದೆ. ದಾರಿಗೆ ಬರದ ನಾಯಕರುಗಳ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗಟ್ಟಿ ಅವರ ಪಕ್ಷವನ್ನೇ ನಾಶ ಮಾಡಲು ಪ್ರಯತ್ನಿಸಲಾಗಿದೆ. ಪ್ರಮುಖ ಪ್ರತಿಪಕ್ಷದ ಬ್ಯಾಂಕ್ ಅಕೌಂಟುಗಳನ್ನೇ ಸೀಜ್ ಮಾಡಿಸಿ ಆ ಪಕ್ಷದ ಚುನಾವಣೆ ಖರ್ಚಿಗೂ ಜನರಿಂದ ಸಂಗ್ರಹಿಸಿದ ಅವರದೇ ಹಣ ಇಲ್ಲದಂತೆ ಮಾಡಲಾಗಿದೆ. ಒಟ್ಟಾರೆಯಾಗಿ ಪ್ರತಿಪಕ್ಷಗಳನ್ನೆಲ್ಲಾ ದುರ್ಬಲಗೊಳಿಸಿ ಏಕಪಕ್ಷದ ಸರ್ವಾಧಿಕಾರದ ಆಡಳಿತವನ್ನು ಜಾರಿಗೆ ತರುವುದೇ ಮೋದಿಯವರ ಉದ್ದೇಶವಾಗಿದೆ. ಆರೆಸ್ಸೆಸ್ ಗುರಿಯಾಗಿದೆ.

ಇಷ್ಟೆಲ್ಲಾ ಮಾಡಿದರೂ ಎಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುತ್ತದೋ ಎನ್ನುವ ಆತಂಕ ವಿಶ್ವಗುರುವನ್ನು ಕಾಡುತ್ತಲೇ ಇದೆ. ಅದಕ್ಕೆ ಇನ್ನೊಂದು ಹೊಸ ಅಡ್ಡದಾರಿಯನ್ನು ಕಂಡುಹಿಡಿಯಲಾಗಿದೆ. ಎದುರಾಳಿ ಪಕ್ಷದ ಕ್ಯಾಡಿಡೇಟ್ ಗಳ ಉಮೇದುವಾರಿಕೆಯನ್ನೇ ಅಮಾನ್ಯಗೊಳಿಸಿ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಮಾಡಿ ಅವಿರೋಧವಾಗಿ ಗೆಲ್ಲುವ ಅನೈತಿಕ ಸೂತ್ರವನ್ನು ಮೋದಿ ಶಾ ಜೋಡಿ ಕಂಡು ಹಿಡಿದು ಗುಜರಾತಿನಲ್ಲಿ ಪ್ರಯೋಗವನ್ನೂ ಮಾಡಿದ್ದಾರೆ.

ಮುಖೇಶ್ ದಲಾಲ್

ಪ್ರಧಾನಿಯವರ ತವರು ರಾಜ್ಯ ಗುಜರಾತ್ ನ ಎರಡನೇ ದೊಡ್ಡ ನಗರ ಸೂರತ್ ಲೋಕಸಭಾ ಕ್ಷೇತ್ರ ಬರುತ್ತದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಎನ್ನುವವರ ವಿರುದ್ದ ಕಾಂಗ್ರೆಸ್ಸಿನ ನಿಲೇಶ್ ಕುಂಬಾನಿ ಸ್ಪರ್ಧಿಸಿದ್ದರು. ಮತದಾನಕ್ಕೆ ಮುನ್ನವೇ ಚುನಾವಣಾ ಅಖಾಡದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನೇ ಸ್ಪರ್ಧೆಯಿಂದ ಅಮಾನ್ಯಗೊಳಿಸುವ ಅಸಹ್ಯಕರ ಬೆಳವಣಿಗೆಗೆ ಬುದ್ದ ಗಾಂಧಿ ನಾಡು ಗುಜರಾತ್ ಸಾಕ್ಷಿಯಾಯಿತು.

ಇಷ್ಟಕ್ಕೂ ಆಗಿದ್ದೇನು ಅಂದ್ರೆ. ಬಿಜೆಪಿ ಪಕ್ಷದಲ್ಲಿದ್ದ ನೀಲೇಶ್ ಕುಂಬಾನಿ ಎಂಬ ವ್ಯಕ್ತಿ ಕಾಂಗ್ರೆಸ್ಸಿಗೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಕ್ರಮಬದ್ದವಾಗಿಲ್ಲವೆಂದು ಚುನಾವಣಾ ಅಧಿಕಾರಿ ಅವರ ಉಮೇದುವಾರಿಕೆಯನ್ನೇ ಅಮಾನ್ಯಗೊಳಿಸಿದರು. ಕುನಾಲ್ ನಾಮಪತ್ರದ ಸೂಚಕರಾಗಿ ಸಹಿ ಮಾಡಿದವರೇ ಚುನಾವಣಾ ಅಧಿಕಾರಿಯ ಮುಂದೆ ಹಾಜರಾಗಿ ಸಾಕ್ಷಿ ಹೇಳಲಿಲ್ಲವೆಂಬುದೇ ಅಮಾನ್ಯತೆಗೆ ಕಾರಣವಾಗಿತ್ತು. ಅವತ್ತಿನಿಂದ ಕುನಾಲ್ ನಾಪತ್ತೆಯಾದರು. ಯಾವುದಕ್ಕೂ ಇರಲಿ ಎಂದು ಕಾಂಗ್ರೆಸ್ ಇನ್ನೊಬ್ಬ ಪರ್ಯಾಯ ಅಭ್ಯರ್ಥಿಯನ್ನೂ ಪಕ್ಷೇತರರಾಗಿ ನಿಲ್ಲಿಸಿತ್ತು. ಆ ವ್ಯಕ್ತಿಯ ಸೂಚಕರೇ ಚುನಾವಣಾಧಿಕಾರಿಯ ಮುಂದೆ ಬಂದು ನಮ್ಮ ಸಹಿ ಪೋರ್ಜರಿ ಮಾಡಲಾಗಿದೆ ಎಂದು ಹೇಳಿದ್ದರಿಂದ ಈ ಪರ್ಯಾಯ ಅಭ್ಯರ್ಥಿಯ ನಾಮಪತ್ರವೂ ತಿರಸ್ಕೃತ ಮಾಡಲಾಯ್ತು. ಅವತ್ತಿನ ದಿನವೇ ಬಿಎಸ್ಪಿ ಪಕ್ಷದ ಅಭ್ಯರ್ಥಿಯೂ ಸೇರಿದಂತೆ ಉಳಿದ ಆರೂ ಜನ ಪಕ್ಷೇತರ ಅಭ್ಯರ್ಥಿಗಳೂ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡರು. ಕೊನೆಗೆ ಬಿಜೆಪಿ ಪಕ್ಷದ ಶಡ್ಯಂತ್ರ ಯಶಸ್ವಿಯಾಗಿ ಚುನಾವಣೆಯನ್ನು ಎದುರಿಸದೇ ಬಿಜೆಪಿಯ ಅಭ್ಯರ್ಥಿ ಅವಿರೋಧವಾಗಿ ಗೆಲ್ಲುವಂತಾಯ್ತು. ಚುನಾವಣಾ ಆಯೋಗ ಆತನ ಗೆಲುವನ್ನೂ ಘೋಷಿಸಿತು.

ಎಲ್ಲಾ ಕಾಕತಾಳೀಯ ಎನ್ನುವಂತೆ ನಡೆದಿರುವ ಈ ಬಿಜೆಪಿ ಕೃಪಾ ಪೋಷಿತ ನಾಟಕ ಸಂವಿಧಾನಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಿದೆ. ಬಿಜೆಪಿಯ ಹುನ್ನಾರ ಹೇಗಿದೆ ಎಂದರೆ. ತನ್ನ ಪಕ್ಷದಲ್ಲಿರುವ ಕುನಾಲ್ ಎನ್ನುವ ಪ್ರಭಾವಿ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿಸುತ್ತದೆ. ಆತನ ನಾಮಪತ್ರವನ್ನೂ ಸಹ ಬಿಜೆಪಿ ಪಕ್ಷದ ವಕೀಲರುಗಳೇ ಭರ್ತಿ ಮಾಡುತ್ತಾರೆ‌. ಸೂಚಕರಾಗಿ ಕುನಾಲ್ ರ ಭಾವ ಅಳಿಯ ಹಾಗೂ ಸಂಬಂಧಿ ಸಹಿ ಮಾಡುತ್ತಾರೆ. ನಾಮಪತ್ರ ಪರಿಶೀಲನೆಯ ಸಮಯದಲ್ಲಿ ಸೂಚಕರು ಬರದೇ ಇರುವಂತೆ ಮಾಡಿ ನಾಮಪತ್ರ ತಿರಸ್ಕೃತವಾಗುವಂತೆ ನೋಡಿಕೊಳ್ಳಲಾಗುತ್ತದೆ. ಪರ್ಯಾಯ ಅಭ್ಯರ್ಥಿಯ ಸೂಚಕರನ್ನು ಕೊಂಡುಕೊಂಡು ಪೋರ್ಜರಿ ಸಹಿ ಎಂದು ಹೇಳಿಸಿ ಆ ಅಭ್ಯರ್ಥಿಯ ನಾಮಪತ್ರವನ್ನೂ ರಿಜೆಕ್ಟ್ ಮಾಡಿಸಲಾಗುತ್ತದೆ. ಮಿಕ್ಕ ಏಳೂ ಜನ ಅಭ್ಯರ್ಥಿಗಳಿಗೂ ಆಸೆ ಆಮಿಷ ತೋರಿಸಿ ಉಮೇದುವಾರಿಕೆ ವಾಪಸ್ ಪಡೆಯುವಂತೆ ಮಾಡಲಾಗುತ್ತದೆ. ಬಿಜೆಪಿಯ ಈ ಶಡ್ಯಂತ್ರಕ್ಕೆ ಚುನಾವಣಾ ಅಧಿಕಾರಿಯ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ. ಕೊನೆಗೂ ಎಲ್ಲವೂ ಬಿಜೆಪಿ ಮೊದಲೇ ರಚಿಸಿದ ಸ್ಕ್ರಿಪ್ಟ್ ಪ್ರಕಾರವೇ ನಡೆಯುತ್ತದೆ. ಅನೈತಿಕ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಸೂತ್ರವೊಂದರ ಪ್ರಯೋಗ ಯಶಸ್ವಿಯಾಗುತ್ತದೆ.

ಚುನಾವಣೆಯ ಸ್ಪರ್ಧೆ ಇಲ್ಲಾ, ಪ್ರಚಾರದ ಅಬ್ಬರವಿಲ್ಲಾ, ಯಾವುದೇ ಚುನಾವಣಾ ಖರ್ಚುಗಳಿಲ್ಲಾ, ಯಾರೂ ಬೆವರು ಹರಿಸಬೇಕಿಲ್ಲ. ಆದರೆ ವಿಜಯಮಾಲೆ ಬಿಜೆಪಿ ಅಭ್ಯರ್ಥಿಗೆ. ಸ್ಪರ್ಧೆಯ ದಿನಕ್ಕಿಂತಾ ಮುಂಚಿತವಾಗಿ ಅಖಾಡದಲ್ಲಿ ವಂಚನೆ ಸಂಚಿನ ಮೂಲಕ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಮಾಡಿ ಆಟವನ್ನೇ ಆಡದೇ ಗೆಲುವು ಘೋಷಿಸಿಕೊಂಡ ಪುಕ್ಕಲು ಪೈಲ್ವಾನನಂತೆ ಈ ರಣಹೇಡಿ ಬಿಜೆಪಿಗರ ಬ್ರಹನ್ನಾಟಕ ಇದಾಗಿದೆ.

ನಿಲೇಶ್ ಕುಂಬಾನಿ

ಪ್ರಜಾಪ್ರಭುತ್ವದ ಆಶಯದ ಕೊಲೆ ಅಂದ್ರೆ ಇದು. ಇದು ಕೇವಲ ಎದುರಾಳಿ ಅಭ್ಯರ್ಥಿಗೆ ಮಾಡಿದ ಮೋಸ ಮಾತ್ರವಲ್ಲಾ, ಆ ಮತಕ್ಷೇತ್ರದ 17 ಲಕ್ಷ ಮತದಾರರಿಗೆ ಮಾಡಿದ ಅವಮಾನವೂ ಆಗಿದೆ. ಆ ಜನರ ಮತ ಚಲಾವಣೆಯ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ. ಜನರಿಂದ ಆಯ್ಕೆಯಾಗಬೇಕಾದ ಜನಪ್ರತಿನಿಧಿಯನ್ನು ಜನರ ಸಹಭಾಗಿತ್ವವೇ ಇಲ್ಲದಂತೆ ಮಾಡಿ ಕುತಂತ್ರದಿಂದ ಗೆಲುವನ್ನು ಘೋಷಿಸಿಕೊಂಡ ಬಿಜೆಪಿ ಪಕ್ಷ ಮಾಡಿದ್ದು ಖಂಡಿತಾ ಅನೈತಿಕ, ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಕೃತ್ಯವಾಗಿದೆ.

ಇದೇ ರೀತಿಯ ಅಡ್ಡದಾರಿಯನ್ನು ಬಳಸಿಕೊಂಡ ಬಿಜೆಪಿ ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಜೊತೆಗೆ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲೂ ತನ್ನ ಹತ್ತು ಅಭ್ಯರ್ಥಿಗಳನ್ನು ಅವಿರೋಧವಾಗಿ ಗೆಲ್ಲುವಂತೆ ಮಾಡಲಾಗಿದೆ. ಇದೇ ರೀತಿಯ ಅಡ್ಡದಾರಿಗಳನ್ನು ಮುಂಬರುವ ಚುನಾವಣೆಗಳಲ್ಲಿ ಅಳವಡಿಸಿಕೊಳ್ಳಲು ಬಿಜೆಪಿಗೆ ಇದೊಂದು ನೀಚಾತಿನೀಚ ಮಾದರಿಯಾಗಿದೆ. ಸಂವಿಧಾನವನ್ನು ಬದಲಾಯಿಸಲೆಂದೇ ಬಂದಿರುವ ಪಕ್ಷಕ್ಕೆ ಇವೆಲ್ಲಾ ಕುತಂತ್ರಗಾರಿಕೆಗಳು ಮಾಮೂಲಾಗಬಹುದು. ಆದರೆ ಪ್ರಜಾತಂತ್ರಕ್ಕೆ ಮಾರಕವಾಗಿದೆ.

ಸರ್ವಾಧಿಕಾರಿ ವ್ಯವಸ್ಥೆ ಮಾಡುವುದೇ ಇಂತಹ ಚುನಾವಣಾ ವಂಚನೆಯನ್ನು. ಉತ್ತರ ಕೋರಿಯಾ, ರಷ್ಯಾದಂತಹ ರಾಷ್ಟ್ರಗಳ ಸರ್ವಾಧಿಕಾರಿಗಳೂ ಸಹ ನಿಯಮಿತವಾಗಿ ಚುನಾವಣೆ ನಡೆಸುತ್ತಾರೆ. ಆದರೆ ಚುನಾವಣೆಗೆ ಮೊದಲೇ ಎದುರಾಳಿಗಳೇ ಇಲ್ಲದಂತೆ ನೋಡಿಕೊಳ್ಳುತ್ತಾರೆ. ಅದೇ ಮಾದರಿಯ ತಂತ್ರಗಾರಿಕೆಯ ಒಂದು ಡೆಮೋ ಪ್ರದರ್ಶನ ಗುಜರಾತಿನ ಸೂರತ್ ನಲ್ಲಿ ನಡೆದ ಈ ಚುನಾವಣಾ ಪ್ರಹಸನ. ಪ್ರಜಾಪ್ರಭುತ್ವವನ್ನು ಬದಲಾಯಿಸಿ ‌ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಲು ಇಂತಹ ಸಂಚುಗಳನ್ನು ಬಿಜೆಪಿ ಪಕ್ಷ ಮಾಡುತ್ತಲೇ ಇರುತ್ತದೆ. ಅದರ ಹಿಂದಿರುವ ಆರೆಸ್ಸೆಸ್ ಸಂಘ ಇಂತಹುದಕ್ಕೆಲ್ಲಾ ನಿರ್ದೇಶನ ನೀಡುತ್ತಲೇ ಇರುತ್ತದೆ.

ಬಿಜೆಪಿ ಪಕ್ಷದ ಈ ರೀತಿಯ ಚುನಾವಣಾ ವಂಚನೆಗಳ ಹಿಂದಿರುವ ಸಂಚುಗಳನ್ನು ಅರ್ಥ ಮಾಡಿಕೊಂಡು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿ ಸೋಲಿಸಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಮೋದಿ ಶಾ ಅಂತವರ ಹುಸಿ ಮಾತಿನ ಮೋಡಿಗೆ ಒಳಗಾಗಿ ಮತ್ತೊಮ್ಮೆ ಬಹುಮತದಿಂದ ಮೋದಿ ಸರಕಾರವನ್ನೇ ಆಯ್ಕೆ ಮಾಡಿದ್ದೇ ಆದರೆ ಪ್ಯಾಸಿಸಂ ವ್ಯವಸ್ಥೆ ಬರುವುದು ಖಂಡಿತ. ಸಂವಿಧಾನ ಕೊಟ್ಟ ಸಮಾನತೆಯ ಆಶಯಗಳು ಕೊನೆಗೊಂಡು ಮನುಸ್ಮೃತಿ ಆಧಾರಿತ ವರ್ಣಬೇಧದ ಹಿಂದೂರಾಷ್ಟ್ರ ನಿರ್ಮಾಣ ಆಗುವುದು ನಿಶ್ಚಿತ. ಆಯ್ಕೆ ಈಗ ಈ ದೇಶದ ಜನರ ಕೈಯಲ್ಲಿದೆ. ಸಂವಿಧಾನದ ಅಳಿವು ಹಾಗೂ ಉಳಿವನ್ನು ಈ ಚುನಾವಣೆ ನಿರ್ಧರಿಸುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article