ವಸತಿ ಶಾಲೆಗಳಲ್ಲಿ ರಂಗ ಚಟುವಟಿಕೆಗಳಿಗೆ ಕೋಟಿ ಗಟ್ಟಲೆ ರುಪಾಯಿ! ಎಷ್ಟು ಸತ್ಯ? ಎಷ್ಟು ಮಿಥ್ಯ?

Most read

ರಂಗ ಚಟುವಟಿಕೆಗಳಿಗೆ ಅಂದಾಜು 4.2 ಕೋಟಿ ವೆಚ್ಚ ; ಪ್ರಕಾಶ್ ರೈ ರವರ ‘ನಿರ್ದಿಗಂತ’ ಕ್ಕೆ ಸಿಂಹಪಾಲು” ಎನ್ನುವ ಶೀರ್ಷಿಕೆಯ ಸುದ್ದಿಯೊಂದು ದಿ-ಫೈಲ್.ಇನ್ ಎನ್ನುವ ಅನ್ಲೈನ್ ಮಾಧ್ಯಮದಲ್ಲಿ ಪ್ರಕಟವಾಗಿದೆ. ಈ ಸುದ್ದಿಯ ಸತ್ಯ ಮಿಥ್ಯಗಳ ಸುತ್ತ ಬರೆದಿದ್ದಾರೆ ರಂಗಕರ್ಮಿ ಶಶಿಕಾಂತ ಯಡಹಳ್ಳಿ.

“ರಂಗ ಚಟುವಟಿಕೆಗಳಿಗೆ ಅಂದಾಜು 4.2 ಕೋಟಿ ವೆಚ್ಚ ; ಪ್ರಕಾಶ್ ರೈ ರವರ ‘ನಿರ್ದಿಗಂತ’ ಕ್ಕೆ ಸಿಂಹಪಾಲು” ಎನ್ನುವ ಶೀರ್ಷಿಕೆಯ ಸುದ್ದಿಯೊಂದು ದಿ-ಫೈಲ್.ಇನ್ ಎನ್ನುವ ಅನ್ಲೈನ್ ಮಾಧ್ಯಮದಲ್ಲಿ ಪ್ರಕಟವಾಗಿ ವ್ಯಾಪಕ ಪ್ರಚಾರವನ್ನು ಪಡೆದು, ಹಲವಾರು ಸಂದೇಹಗಳನ್ನು ಹುಟ್ಟುಹಾಕಿ, ಕೆಲವಾರು ರಂಗಕರ್ಮಿಗಳಿಗೆ ಹೊಟ್ಟೆಯಲ್ಲಿ ತವುಡು ಕುಟ್ಟಿದಂತಾಯಿತು. ಅರೆ ಒಂದೇ ತಂಡಕ್ಕೆ ಹೀಗೆ ಕೋಟಿಗಳನ್ನು ಕೊಟ್ಟರೆ ಬೇರೆ ತಂಡದವರ ಗತಿ ಏನು? ಎನ್ನುವ ಪ್ರಶ್ನೆ ಕೆಲವರನ್ನು ಕಾಡತೊಡಗಿತು. ‘ದಶಕಗಳ ಕಾಲ ರಂಗಕ್ರಿಯೆಯಲ್ಲಿ ತೊಡಗಿಕೊಂಡ ರಂಗತಂಡಗಳನ್ನು ಬಿಟ್ಟು ನಿನ್ನೆ ಮೊನ್ನೆ ಕಣ್ಬಿಟ್ಟ ‘ನಿರ್ದಿಗಂತ’ ತಂಡಕ್ಕೆ ಕೋಟಿಗಳ ಯೋಜನೆ ಕೊಟ್ಟ ಸರಕಾರಿ ಇಲಾಖೆಯ ನಿರ್ಧಾರ ತಪ್ಪು’ ಎಂದು ಪ್ರತಿಕ್ರಿಯೆಗಳು ವ್ಯಕ್ತವಾದವು. ‘ಸರಕಾರದ ರಂಗಾಯಣ, ಎನ್‌ ಎಸ್‌ ಡಿ, ಖಾಸಗಿ ನೀನಾಸಂ, ಶಿವಸಂಚಾರದಂತಹ ರೆಪರ್ಟರಿ ತಂಡಗಳಿಗೆ ಈ ಕೋಟಿಗಳ ಪ್ರಾಜೆಕ್ಟ್ ಕೊಟ್ಟಿದ್ದರೆ ಎಷ್ಟೊಂದು ಯುವ ರಂಗಕರ್ಮಿಗಳ ಬದುಕಿಗೆ ಸಹಾಯವಾಗುತ್ತಿತ್ತು’ ಎಂದು ಕೆಲವರು ಕಾಳಜಿ ತೋರಿದರು. ನೋಂದಣಿಯಾಗಿ ಮೂರು ವರ್ಷ ಆದ ನಂತರವಷ್ಟೇ ಸರಕಾರಿ ಅನುದಾನ ಅನುಕೂಲಗಳಿಗೆ ತಂಡಗಳು ಅರ್ಹತೆ ಪಡೆಯುತ್ತವೆ, ಆದರೆ ಅದ್ಯಾವುದೂ ಇಲ್ಲದೇ ಇರುವ ‘ನಿರ್ದಿಗಂತ’ಕ್ಕೆ ಯೋಜನೆ ಕೊಟ್ಟಿದ್ದು ಕಾನೂನಾತ್ಮಕ ಉಲ್ಲಂಘನೆ ಎಂದೂ ಕೆಲವರು ಅವಲತ್ತುಕೊಂಡರು. ‘ಪ್ರಕಾಶ್ ರೈ ರವರ ಪ್ರಭಾವ ಹಾಗೂ ಅವರ ಬಿಜೆಪಿ ವಿರೋಧಿ ನಿಲುವಿನಿಂದಲೇ ಕಾಂಗ್ರೆಸ್ ಸರಕಾರ ಈ ಯೋಜನೆಯನ್ನು ಕೊಟ್ಟಿದೆ’ ಎಂದು ಕೆಲವು ಚಡ್ಡಿ ರಂಗಕರ್ಮಿಗಳು ಟೀಕಿಸಿದರು. 

ಇಷ್ಟಕ್ಕೂ ‘ದಿ ಫೈಲ್’ ಸುದ್ದಿಯಲ್ಲಿ ಇದ್ದಿದ್ದಾದರೂ ಏನು? ಕನ್ನಡ ರಂಗಭೂಮಿಯಲ್ಲಿ ಈ ರೀತಿ ನಕಾರಾತ್ಮಕ ಸಂಚಲನವನ್ನು ಹುಟ್ಟಿಸಿದ್ದಾದರೂ ಯಾಕೆ? ನಿನ್ನೆ ಮೊನ್ನೆಯವರೆಗೂ ನಿರ್ದಿಗಂತದ  ರಂಗ ಕಾರ್ಯಗಳನ್ನು ಹೊಗಳುತ್ತಿದ್ದ ಅನೇಕರಿಗೆ ಇದ್ದಕ್ಕಿದ್ದಂತೆ ಅಸೂಯೆ ಹುಟ್ಟಲು ಕಾರಣಗಳಾದರೂ ಏನು?

 ಅದೇನೆಂದರೆ “ಮೊರಾರ್ಜಿ ದೇಸಾಯಿ ವಸತಿ  ಶಾಲೆ ಕಾಲೇಜುಗಳಲ್ಲಿ ಸಾಂಸ್ಕೃತಿಕ ಹಾಗೂ ರಂಗಭೂಮಿ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿದ ಸಮಾಜ ಕಲ್ಯಾಣ ಇಲಾಖೆಯು ಇದಕ್ಕಾಗಿ ‘ನಿರ್ದಿಗಂತ’ ಸಂಸ್ಥೆಯೂ ಸೇರಿದಂತೆ ಇನ್ನಿತರೆ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಪತ್ರವೊಂದನ್ನು ಹೊರಡಿಸಿದೆ. ಹಾಗೂ ಈ ಯೋಜನೆಗೆ ಅಂದಾಜು 4.2 ಕೋಟಿ ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ ನಟ ಪ್ರಕಾಶ್ ರೈ ಸ್ಥಾಪಿಸಿರುವ ನಿರ್ದಿಗಂತ ಸಂಸ್ಥೆಯು ಸಿಂಹಪಾಲು ಪಡೆದಿದೆ” ಎಂದು ಲೇಖನದಲ್ಲಿ ಬರೆದು ಜೊತೆಗೆ ಅಧಿಕೃತ ಜ್ಞಾಪನ ಪತ್ರವನ್ನೂ ಲಗತ್ತಿಸಲಾಗಿತ್ತು. 

ದಿ ಫೈಲ್

ಈ ಲೇಖನದಲ್ಲಿ ಒಂಚೂರು ಸತ್ಯ ಬಾಕಿಯೆಲ್ಲಾ ಸುಳ್ಳು ಸುದ್ದಿಯನ್ನೇ ಬರೆದು ಸೆನ್ಸೇಶನ್ ಸೃಷ್ಟಿಸಲು ಪ್ರಯತ್ನಿಸಿದ್ದು ಇಡೀ ಲೇಖನವನ್ನು ಕೂಲಂಕಶವಾಗಿ ಓದಿದಾಗಲೇ ಗೊತ್ತಾಗುತ್ತದೆ. ಆದರೆ ಕೋಟಿಗಳ ಲೆಕ್ಕ ನೋಡಿದ ತಕ್ಷಣ ಕೆಲವು ರಂಗಕರ್ಮಿಗಳ ವಿವೇಚನೆ ಬಂದಾಗಿ ಊಹಾಪೋಹಗಳೇ ಮುಂದಾಗಿದ್ದು ಅಚ್ಚರಿಯ ಸಂಗತಿ. ಈ ದಿ ಫೈಲ್ ಲೇಖನದ ಜೊತೆಗೆ ಪ್ರಕಟಿಸಲಾದ ಜ್ಞಾಪನ ಪತ್ರವನ್ನು ಓದಿ ಅರ್ಥಮಾಡಿಕೊಂಡರೆ ಪತ್ರದಲ್ಲಿರುವ ಸಂಗತಿಗೂ ಹಾಗೂ ಲೇಖನದಲ್ಲಿರುವ ಅತಿರೇಕಕ್ಕೂ ನಡುವಿನ ವ್ಯತ್ಯಾಸ ಅರ್ಥವಾಗುತ್ತದೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು (KREIS) 09-01-2024 ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ 80 ನೇ ಆಡಳಿತ ಮಂಡಳಿಯ ಸಭೆ ನಡೆಸಿತ್ತು. ಆ ಸಭೆಯಲ್ಲಿ ಸಂಘದ ವ್ಯಾಪ್ತಿಯ ವಸತಿ ಶಾಲೆ/ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಓದಿನ ಜೊತೆಗೆ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಚಟುವಟಿಕೆಗಳನ್ನು ಶಾಲೆಯ ಪ್ರಾಂಶುಪಾಲರುಗಳ  ಹಂತದಲ್ಲಿ 50 ಸಾವಿರ ರೂ. ಮಿತಿಯಲ್ಲಿ  ಅನುಷ್ಟಾನಕ್ಕೆ ತರಲು ತೀರ್ಮಾನಿಸಲಾಯ್ತು. ಈ ಹಣವನ್ನು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ವಹಣಾ ವೆಚ್ಚದಲ್ಲಿ ಭರಿಸಬಹುದು ಮತ್ತು ನಿರ್ದಿಗಂತ ಅಥವಾ ಇದೇ ರೀತಿಯ ಖಾಸಗಿ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ನಿರ್ಧರಿಸಿ ‘ಅಧಿಕೃತ ಜ್ಞಾಪನ ಪತ್ರ’ವನ್ನು ಹೊರಡಿಸಲಾಯಿತು.

ಈ ಪತ್ರದಲ್ಲಿ ಎಲ್ಲಿಯೂ ಇಡೀ ಯೋಜನೆಗೆ 4.2 ಕೋಟಿ ಕೊಡಲಾಗುತ್ತದೆ ಎಂದು ನಮೂದಿಸಿಲ್ಲ. ಹೋಗಲಿ ನಿರ್ದಿಗಂತಕ್ಕೆ ಸಿಂಹಪಾಲು ಕೊಡಲಾಗುತ್ತದೆ ಎಂದೂ ಹೇಳಿಲ್ಲ. ಒಂದೇ ಸಂಸ್ಥೆ ಎಲ್ಲಾ ಶಾಲೆಗಳಲ್ಲಿ ರಂಗಚಟುವಟಿಕೆಗಳನ್ನು ಮಾಡಲೂ ಸಾಧ್ಯವಿಲ್ಲ. “ನಿರ್ದಿಗಂತ ಸಂಸ್ಥೆಯ ಜೊತೆಗೆ ಪ್ರಾಂಶುಪಾಲರುಗಳು ಒಪ್ಪಂದ ಮಾಡಿಕೊಳ್ಳಬೇಕೆಂದು ಮೌಖಿಕವಾಗಿ ಹೇಳಲಾಗಿದೆ” ಎಂದು ಯಾರೋ ರಂಗಕರ್ಮಿಗಳು ಹೇಳಿದರೆಂದು ಬರೆಯಲಾಗಿದೆ, ಅದಕ್ಕೆ ಯಾವುದೇ ಆಧಾರವೂ ಇಲ್ಲ, ಹಾಗೆ ಹೇಳಿದ ರಂಗಕರ್ಮಿ ಯಾರು ಎನ್ನುವ ಪ್ರಸ್ತಾಪವೂ ಇಲ್ಲ. ‘ವಸತಿ ಶಾಲೆಗಳ ನಿರ್ವಹಣಾ ವೆಚ್ಚ ಏರಿಕೆ ಮಾಡದೇ ನಿರ್ವಹಣಾ ವೆಚ್ಚದಲ್ಲಿ ರಂಗಚಟುವಟಿಕೆಗಳಿಗೆ ಹಣ ನೀಡುವ ಬಗ್ಗೆ ಪ್ರಾಂಶುಪಾಲರುಗಳು ತಕರಾರು ತೆಗೆದಿದ್ದಾರೆ’ ಎಂದು ಬರೆಯಲಾಗಿದೆಯಾದರೂ ಯಾವ ಪ್ರಾಂಶುಪಾಲರು ಎಂದು ಹೇಳಿಲ್ಲ, ತಕರಾರು ತೆಗೆದಿದ್ದಕ್ಕೆ ಸಾಕ್ಷಿಗಳಿಲ್ಲ. ‘ವಸತಿ ಶಾಲೆಗಳಲ್ಲಿ ರಂಗಚಟುವಟಿಕೆ ಮಾಡಲು ನಿರ್ದಿಗಂತ ಹಾಗೂ ಇತರೆ ಸಂಸ್ಥೆಗಳಿಗೆ ಅವಕಾಶ ಕೊಡಲಾಗಿದೆ’ ಎನ್ನುವ ಒಂದೆಳೆ ಕಥೆಗೆ ತನ್ನದೇ ಕಲ್ಪನೆಯನ್ನು ಸೇರಿಸಿ ಒಂದಿಡೀ ಸಿನೆಮಾ ಮಾಡುವ ಪ್ರಯತ್ನವನ್ನು ದಿ ಫೈಲ್ ಮಾಡಿದೆ ಎನ್ನಬಹುದು.

ನಿರ್ದಿಗಂತ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ ಒಟ್ಟು 833 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಮಕ್ಕಳಿಗೆ 6 ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಕೊಡಲಾಗುತ್ತದೆ. ಇದಕ್ಕಾಗಿ ಸರಕಾರವು ಪ್ರತಿ ವರ್ಷ ಬಜೆಟ್‌ ನಲ್ಲಿ ಅನುದಾನವನ್ನು ಮೀಸಲಿಟ್ಟಿರುತ್ತದೆ. ಇಂತಹ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಾಲೆಯಲ್ಲಿ  ಒಂದಿಷ್ಟು ರಂಗಚಟುವಟಿಕೆಗಳನ್ನು ಹಮ್ಮಿಕೊಂಡು ಅಲ್ಲಿರುವ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಬೇಕು ಎನ್ನುವುದು ಈ ಇಲಾಖೆಯ ಹೊಸ ಯೋಜನೆಯಾಗಿದೆ. ಸಚಿವರ ವಿಶೇಷ ಆಸಕ್ತಿಯೂ ಆಗಿದೆ.

ಹೌದು. ಇಷ್ಟಕ್ಕೂ ರಾಜ್ಯದಲ್ಲಿ ಟೋಟಲ್ಲಾಗಿ ಇರುವ 833 ವಸತಿ ಶಾಲೆಗಳಲ್ಲೂ ರಂಗಶಿಬಿರ ಮಾಡಿಸುವುದು ಅಸಾಧ್ಯದ ಸಂಗತಿ. ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಶಿಬಿರ ಮಾಡಲೇಬೇಕು ಎನ್ನುವ ಆದೇಶವೂ ಇಲ್ಲ. ಆಯಾ ಶಾಲೆಗಳಲ್ಲಿ ಹಣ ಇದ್ದರೆ, ಪ್ರಾಂಶುಪಾಲರು ಅನುಮತಿ ಕೊಟ್ಟರೆ ರಂಗಶಿಬಿರ ಮಾಡಬಹುದಾಗಿದೆ. ಆದರೆ 833 ಶಾಲೆಗಳಿಗೆ ತಲಾ 50 ಸಾವಿರ ಲೆಕ್ಕದಲ್ಲಿ ಒಟ್ಟು 4.2 ಕೋಟಿ ಎಂದು ಹೋಲ್ ಸೇಲ್ ಲೆಕ್ಕ ಹಾಕಿ ದಿಕ್ಕು ತಪ್ಪಿಸಲಾಗಿದೆ.

ಅಸಲಿ ಸಂಗತಿ ಏನೆಂದರೆ.. ನಿರ್ದಿಗಂತ ತಂಡವು ಎಲ್ಲಾ ವಸತಿ ಶಾಲೆಗಳಲ್ಲಿ ರಂಗಶಿಬಿರಗಳನ್ನು ಮಾಡುತ್ತಿಲ್ಲ. ನಿರ್ದಿಗಂತ ಮೂಲಗಳ ಪ್ರಕಾರ ಆಯ್ದ ಕೇವಲ ಹತ್ತು ಶಾಲೆಗಳಲ್ಲಿ ಎರಡು ತಿಂಗಳ ಅವಧಿಯ ರಂಗಕಾರ್ಯಾಗಾರವನ್ನು ಮಾಡಲು ನಿರ್ಧರಿಸಲಾಗಿದೆ. ಅಂದರೆ ವಸತಿ ಶಾಲಾ ಸಂಘವು ಹತ್ತು ಶಾಲೆಗಳ ಶಿಬಿರಕ್ಕೆ ತಲಾ 50 ಸಾವಿರದಂತೆ ಒಟ್ಟು 5 ಲಕ್ಷ ಹಣವನ್ನು ಕೊಡುತ್ತದೆ, ಅದೂ ಶಿಬಿರ ಮುಗಿದಾದ ನಂತರ. ಇನ್ನೂ ಬಾಕಿ ಉಳಿದಿರುವ ಬಹುತೇಕ ವಸತಿ ಶಾಲೆಗಳಲ್ಲಿ ಶಿಬಿರಗಳನ್ನು ಮಾಡುವ ಅವಕಾಶವನ್ನು ರಂಗಾಯಣ, ನೀನಾಸಂ ಆದಿಯಾಗಿ ಯಾವುದೇ ಸಂಸ್ಥೆಗಳು ಆಯಾ ಶಾಲೆಗಳ ಪ್ರಾಂಶುಪಾಲರ ಒಪ್ಪಿಗೆಯನ್ನು ಪಡೆದು ಅವಕಾಶವನ್ನು ಉಪಯೋಗಿಸಿ ಕೊಳ್ಳಬಹುದಾಗಿದೆ. ಆದರೆ ಈ ಯಾವ ಸಂಸ್ಥೆಗಳೂ ಸರಕಾರಿ ಶಾಲೆಗಳಲ್ಲಿ ಶಿಬಿರ ಮಾಡಲು ಮುಂದೆ ಬರುವುದಿಲ್ಲ. ರಂಗತಂಡಗಳಿಗೂ ಸಾಧ್ಯವಾಗುವುದಿಲ್ಲ. ದಿ ಫೈಲ್ ನಲ್ಲಿ ಬಂದಿರುವ ಲೇಖನವನ್ನು ಓದಿ ಹೌಹಾರಿದ ಯಾವ ರಂಗಕರ್ಮಿಯೂ ಯಾವೊಂದು ಶಿಬಿರವನ್ನೂ ನಡೆಸಲು ಆಸಕ್ತಿ ತೋರುವುದಿಲ್ಲ.

ಯಾಕೆಂದರೆ.. ನಿಗದಿಯಾದ 50 ಸಾವಿರ ರೂಪಾಯಿಗಳಲ್ಲಿ ಎರಡು ತಿಂಗಳುಗಳ ಕಾಲ ರಂಗ ಕಾರ್ಯಾಗಾರವನ್ನು ನಡೆಸಿ ನಾಟಕವನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಶಿಬಿರದ ನಿರ್ದೇಶಕರಿಗೆ ಕನಿಷ್ಟ ತಿಂಗಳಿಗೆ 25 ಸಾವಿರ ಎಂದರೂ ಎರಡು ತಿಂಗಳಿಗೆ 50 ಸಾವಿರ ಹಣ ಪಾವತಿಸ ಬೇಕಾಗುತ್ತದೆ. ರಂಗಶಿಬಿರ ಎಂದರೆ ಕೊನೆಗೆ ಒಂದಾದರೂ ನಾಟಕ ಮಾಡಿಸ ಬೇಕಲ್ಲವೇ?. ಕೊಡುವ 50 ಸಾವಿರ ನಿರ್ದೇಶಕರ ಸಂಭಾವನೆಗೆ ಸರಿಹೋದರೆ ನಾಟಕ ನಿರ್ಮಿತಿಗೆ  ಹಣ ಎಲ್ಲಿ ಉಳಿಯುತ್ತದೆ?. ಎಷ್ಟೇ ಕಡಿಮೆ ಖರ್ಚಿನಲ್ಲಿ ನಾಟಕ ಮಾಡಿದರೂ ಸೆಟ್ ಪ್ರಾಪರ್ಟಿ ಕಾಸ್ಟ್ಯೂಮ್ ಗಳಿಗೆ, ಪರದೆ ಹಾಗೂ ಲೈಟಿಂಗ್ ಗಳಿಗೆ, ನೇಪಥ್ಯ ತಜ್ಞರಿಗೆ ಸೇರಿ ಕನಿಷ್ಟ ಅಂದರೂ 25 ಸಾವಿರದಷ್ಟಾದರೂ ಹಣ ಬೇಕಲ್ಲವೇ?. ಇದನ್ನು ಯಾರು ಕೊಡುತ್ತಾರೆ?. ಹೇಗೆ ಲೆಕ್ಕ ಹಾಕಿದರೂ ರಂಗತಂಡವೊಂದು ಎರಡು ತಿಂಗಳುಗಳ ಕಾಲದ ರಂಗಕಾರ್ಯಾಗಾರ ನಡೆಸಿ ನಾಟಕವೊಂದನ್ನು ನಿರ್ಮಿಸಲು ಸಾಧ್ಯವಿಲ್ಲ. ಯಾರೋ ರಂಗಾಸಕ್ತ ಯುವ ನಿರ್ದೇಶಕರು, ಸಿಕ್ಕಷ್ಟು ಸಂಭಾವನೆಯಾದರೂ ಸಿಗಲಿ ಎನ್ನುವವರು ಒಪ್ಪಬಹುದಾದರೂ ವೃತ್ತಿಪರವಾಗಿ ಶಿಬಿರ ನಡೆಸಿ ನಾಟಕ ಮಾಡಿಸಲು ಕಷ್ಟಸಾಧ್ಯ.

ಆದರೆ.. ರಂಗಭೂಮಿಯ ಹಿನ್ನೆಲೆಯಿಂದ ಬಂದ ನಟ ಪ್ರಕಾಶ್ ರೈ ರವರು ‘ನಿರ್ದಿಗಂತ’ ಎನ್ನುವ ತಂಡವನ್ನು ಹುಟ್ಟುಹಾಕಿದ್ದು ಹಣ ಮಾಡಬೇಕು ಎನ್ನುವ ಉದ್ದೇಶದಿಂದ ಅಲ್ಲ. ತಾನು ಸಿನಿಮಾದಿಂದ ಗಳಿಸಿದ ಹಣವನ್ನು ಅರ್ಥಪೂರ್ಣವಾಗಿ ಸಮಾಜಕ್ಕೆ  ವಿನಿಯೋಗಿಸುವುದಕ್ಕೆ.‌ ಒಂದು ಸಿನೆಮಾಕ್ಕೆ ಹಲವು ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯುವ ಈ ಬಹುಭಾಷಾ ಕಲಾವಿದ ಜುಜುಬಿ 5 ಲಕ್ಷಕ್ಕಾಗಿ 10 ಶಿಬಿರ ನಡೆಸುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳಲೂ ಸಾಧ್ಯವಿಲ್ಲ. ಈಗ ಒಪ್ಪಿಕೊಂಡ 10 ರಂಗಶಿಬಿರಗಳನ್ನು ನಡೆಸಲು 16 ರಂಗಶಿಕ್ಷಣ ಪಡೆದ ಯುವಕರನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಒಂದು ತಿಂಗಳಿಗೆ 40 ಸಾವಿರ ಸಂಬಳವನ್ನು ಪ್ರಕಾಶ್ ರೈ ರವರು ನಿಗದಿ ಪಡಿಸಿದ್ದಾರಂತೆ. ಆಯ್ದ 10 ವಸತಿ ಶಾಲೆಗಳಲ್ಲಿ ನಡೆಯುವ ರಂಗಶಿಬಿರಗಳ ನಿರ್ದೇಶಕರುಗಳಿಗೆ ಮಾತ್ರ ಖರ್ಚಾಗುವ ಒಟ್ಟು ಸಂಬಳ 1.2 ಕೋಟಿ. ಇನ್ನು ಪ್ರತಿ ಶಿಬಿರದಲ್ಲಿ ನಿರ್ಮಿಸಿ ಪ್ರದರ್ಶಿಸಲಾಗುವ ನಾಟಕದ ಖರ್ಚು ಹೆಚ್ಚುವರಿಯಾಗಿರುವಂತಹುದು. ಅಂದರೆ ಒಟ್ಟು ಹತ್ತು ವಸತಿ ಶಾಲೆಗಳಲ್ಲಿ ರಂಗಶಿಬಿರಗಳನ್ನು ಮಾಡಿ ಹತ್ತು ನಾಟಕಗಳನ್ನು ನಿರ್ಮಿಸಿಕೊಡಲು ಕನಿಷ್ಟ ಅಂದರೂ ಎರಡು ಕೋಟಿಯಷ್ಟು ಹಣ ಖರ್ಚಾಗುತ್ತದೆ. ಆದರೆ ವಸತಿ ಶಾಲೆಯ ಸಂಘ ಹತ್ತೂ ಶಾಲೆಗಳ ಲೆಕ್ಕದಲ್ಲಿ ಕೊಡುವುದು ಕೇವಲ 5 ಲಕ್ಷ ಹಣ ಮಾತ್ರ. ಹಾಗಾದರೆ ಬಾಕಿ ಹಣವನ್ನು ‘ನಿರ್ದಿಗಂತ’ ದ ಹೆಸರಲ್ಲಿ ಪ್ರಕಾಶ್ ರೈ ರವರೇ ತಮ್ಮ ಸ್ವಂತ ಹಣದಿಂದ ಭರಿಸುತ್ತಿದ್ದಾರೆ. ಬಡಮಕ್ಕಳ ಶಾಲೆಯಲ್ಲಿ ರಂಗಚಟುವಟಿಕೆಗಳನ್ನು ಮಾಡುವ ಮೂಲಕ ಸಾಮಾಜಿಕ ಕಳಕಳಿಯ ಕಾಯಕವನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಹದಿನೆಂಟು ಸರಕಾರಿ ಶಾಲೆಗಳಲ್ಲಿ ಯಾವುದೇ ಸರಕಾರೀ ಹಣವನ್ನು ಪಡೆಯದೇ ರಂಗಶಿಬಿರಗಳನ್ನು ನಿರ್ವಹಿಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಮಾಡದೇ, ಯಾವುದೇ ಪ್ರಚಾರದ ಗೀಳಿಗೆ ಬೀಳದೇ ಪ್ರಕಾಶ್ ರೈರವರು ಮಾಡಿದ ರಂಗಸಾಧನೆ ಅನನ್ಯವಾದದ್ದು. ಅವರ ಹಿಂದಿನ ವರ್ಷದ ರಂಗಬದ್ಧತೆ ಹಾಗೂ ಅದಕ್ಕಾಗಿ ಮಾಡಿಕೊಂಡ ಸಿದ್ಧತೆಗಳನ್ನು ಪರಿಗಣಿಸಿಯೇ ಸಮಾಜ ಕಲ್ಯಾಣ ಇಲಾಖೆಯು ‘ನಿರ್ದಿಗಂತ’ ದ ಹೆಸರನ್ನು ಜ್ಞಾಪನಾ ಪತ್ರದಲ್ಲಿ ನಮೂದಿಸಿದೆಯೇ ಹೊರತು ಸಿಂಹಪಾಲು ಕೊಡಲು ಅಲ್ಲ.

ಕಳೆದ ವರ್ಷ ನಿರ್ದಿಗಂತ ವು ಮೂರು  ವಸತಿ ಶಾಲೆಯಲ್ಲಿ ಮಾಡಿದ ರಂಗಶಿಬಿರದ ಬಾಬ್ತು ಮತ್ತು ನಾಟಕ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಒಂದೂವರೆ ಲಕ್ಷ ಹಣದಲ್ಲಿ ತೆರಿಗೆ ಕಳೆದು ಬಾಕಿ ಹಣದ ಚೆಕ್‌ ನ್ನು ಮಾರ್ಚ್ 31 ರ ಒಳಗೆ ನಿರ್ದಿಗಂತಕ್ಕೆ ಕೊಡಲಾಗಿದೆಯಂತೆ. ಆದರೆ ನಮಗೆ ಸರಕಾರದ ಹಣ ಬೇಡ ಚೆಕ್ ನ್ನು ವಾಪಸ್ ಪಡೆಯಿರಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆಯಂತೆ. ಆದರೆ ಅಧಿಕಾರಿಗಳು ವಾಪಸ್ ಪಡೆಯಲು ನಿರಾಕರಿಸಿದ್ದರಿಂದ ಆ ಚೆಕ್ ನ್ನು ನಗದೀಕರಣಕ್ಕೆ ಬ್ಯಾಂಕಿಗೆ ಹಾಕದೇ ನಿರ್ದಿಗಂತ ವು ತಿರಸ್ಕರಿಸಿದೆ. ಬದ್ದತೆ ಅಂದ್ರೆ ಇದು. ನಿರ್ದಿಗಂತದ ಫೌಂಡರ್ ಆದ ಪ್ರಕಾಶ್ ರೈ ಮತ್ತು ಬಿ.ಸುರೇಶ್ ಇಬ್ಬರೂ ಸರಕಾರದ ಸಹಾಯ ಪಡೆಯದೇ ಸಿನೆಮಾದಿಂದ ಬಂದ ತಮ್ಮ ಸಂಪಾದನೆಯ ಹಣದಿಂದಲೇ ರಂಗ ಸಂಘಟನೆಯನ್ನು ಮುನ್ನಡೆಸುತ್ತಿರುವುದು ಇಡೀ ರಾಜ್ಯದಲ್ಲೇ ಮೊದಲನೆಯದು.‌ ಕಳೆದ ವರ್ಷ ವಸತಿ ಶಾಲೆಗಳಲ್ಲಿ ಮಾಡಲಾದ ರಂಗಶಿಬಿರ ಹಾಗೂ ನಾಟಕ ನಿರ್ಮಾಣಕ್ಕೆ ಒಂದೂಕಾಲು ಕೋಟಿ ಖರ್ಚು ಮಾಡಲಾಗಿದೆಯಂತೆ. ಕಳೆದ ತಿಂಗಳು ಮಂಗಳೂರಿನಲ್ಲಿ ಆಯೋಜಿಸಲಾದ ರಂಗೋತ್ಸವಕ್ಕಾದ ಒಟ್ಟು ಖರ್ಚು ಸರಿಸುಮಾರು ಒಂದು ಕೋಟಿ. ಒಂದು ಸರಕಾರಿ ಅಕಾಡೆಮಿಯೂ ಮಾಡಲಾಗದ ಕೆಲಸವನ್ನು ನಿರ್ದಿಗಂತ ದ ಮೂಲಕ ಬದ್ದತೆಯಿಂದ ಮಾಡುತ್ತಿರುವ ಪ್ರಕಾಶ್ ರೈ,  ಬಿ.ಸುರೇಶ್, ಹಾಗೂ ಶ್ರೀಪಾದ ಭಟ್ ರವರ ಕೊಡುಗೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ದಾಖಲಾರ್ಹವಾಗಿದೆ.

ಆದರೆ.. ಹಿಂದೆ ಮುಂದೆ ಯಾವುದನ್ನೂ ಅರಿಯದೇ, ರಂಗಭೂಮಿಯ ಕುರಿತು ಕನಿಷ್ಟ ಜ್ಞಾನವೂ ಇಲ್ಲದೆ ದ ಫೈಲ್ ನ ಮಹಾಂತೇಶ್ ಅವರು ಜ್ಞಾಪನ ಪತ್ರವೊದನ್ನು RTI ಮೂಲಕ ಪಡೆದುಕೊಂಡು ಅದರ ಸುತ್ತಲೂ ಇಲ್ಲದ ಸುಳ್ಳುಗಳ ಕತೆ ಕಟ್ಟಿದ್ದನ್ನು ರಂಗಭೂಮಿ ಎಂದೂ ಕ್ಷಮಿಸಲು ಸಾಧ್ಯವಿಲ್ಲ. ಸಾಂಸ್ಕೃತಿಕ ಲೋಕದಲ್ಲಿ ಇಲ್ಲದ ಅನುಮಾನಗಳನ್ನು ಹುಟ್ಟುಹಾಕುವ ಇಂತಹ ವಿವೇಚನಾ ರಹಿತ ಪ್ರಯತ್ನಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ರಂಗಕರ್ಮಿಗಳನ್ನು ನಿರುತ್ಸಾಹ ಗೊಳಿಸುವಂತಹುದಾಗಿವೆ. ಈ ವಾದವಿವಾದಗಳೇ ಬೇಡವೆಂದು ಸಮಾಜ ಕಲ್ಯಾಣ ಇಲಾಖೆ ಇಡೀ ಯೋಜನೆಯನ್ನು ರದ್ದು ಮಾಡಿದ್ದೇ ಆದರೆ ರಂಗಚಟುವಟಿಕೆಗಳಿಂದ ಅತ್ಯಂತ ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳ ಮಕ್ಕಳು ವಂಚಿತರಾಗುತ್ತಾರೆ. ಹಾಗೂ ಈ ಶಿಬಿರವನ್ನು ನಡೆಸಿ ಕೊಡುವ ಯುವ ರಂಗಕರ್ಮಿಗಳಿಗೆ ಸಿಗಬಹುದಾದ ಅವಕಾಶವನ್ನು ಕಿತ್ತುಕೊಂಡಂತೆ ಆಗುತ್ತದೆ. ಕೇವಲ ಪ್ರಚಾರಕ್ಕಾಗಿ ಪ್ರಕಟಿಸಲಾದ ಇಂತಹ ಅತಿರೇಕದ ಸುದ್ದಿಯಿಂದಾಗಿ ದಿ ಫೈಲ್ ಹಾಗೂ ಅದರ ರೂವಾರಿ ಮಹಾಂತೇಶ್ ಕೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಯಾರೋ ಏನೋ ಬರೆದರು ಎಂದ ತಕ್ಷಣ ಯೋಚನೆ ಮಾಡದೇ ಸಂದೇಹ ಪಡುವಂತಹ ರಂಗಕರ್ಮಿಗಳು ಸುಳ್ಳು ಸುದ್ದಿಗಳ ಹಿಂದಿರುವ ಸತ್ಯ ಸಂಗತಿಗಳನ್ನು ತಿಳಿದು ನಂತರ ತಮ್ಮ ಪ್ರತಿಕ್ರಿಯೆ ನೀಡಿದರೆ ಉತ್ತಮ.

ನಿರ್ದಿಗಂತ ತಂಡ

ಪ್ರಕಾಶ್ ರೈ ರವರ ಹಾಗೆ ಉಚಿತವಾಗಿ ರಂಗಶಿಬಿರವನ್ನು ಬಡ ಹಿಂದುಳಿದ ಅಲ್ಪಸಂಖ್ಯಾತ ಮಕ್ಕಳ ವಸತಿ ಶಾಲೆಯಲ್ಲಿ ಆಯೋಜಿಸಲು ಯಾವುದಾದರೂ ರಂಗ ಸಂಸ್ಥೆ ಅಥವಾ ರಂಗಕರ್ಮಿ ಸಿದ್ದರಾಗಿದ್ದಾರಾ? ಇಲ್ಲ ಎಂದಾದಲ್ಲಿ ವಸತಿ ಶಾಲೆಗಳಲ್ಲಿ ಉಚಿತವಾಗಿ ರಂಗತರಬೇತಿ ಶಿಬಿರವನ್ನು ಸಾಮಾಜಿಕ ಬದ್ದತೆಯಿಂದ ಮಾಡುತ್ತಿರುವ ಪ್ರಕಾಶ್ ರೈ ರವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ?

ಯಾರು ಏನೇ ಬರೆಯಲಿ. ಅದೇನೇ ಸುಳ್ಳು ಆರೋಪಗಳನ್ನು ಮಾಡಲಿ. ರಂಗಕ್ರಿಯೆ ನಿಲ್ಲದೇ ಇರಲಿ. ಪ್ರಕಾಶ್ ರೈರವರಂತಹ ರಂಗಕರ್ಮಿಗಳ ಪ್ರಯತ್ನ ಮುಂದುವರೆಯಲಿ. ನಿರ್ದಿಗಂತ ತಂಡದ ಜೊತೆಗೆ ಇರುವ ರಂಗಪ್ರತಿಭೆಗಳು ಶಾಲೆ ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳನ್ನು ವಿಸ್ತರಿಸುವ ಕಾಯಕವನ್ನು ಮುಂದುವರೆಸಲಿ. ರಂಗಭೂಮಿಯ ಘೋಷಣಾ ವಾಕ್ಯವಾದ “ಶೋ ಮಸ್ಟ್ ಗೋ ಆನ್” ಎನ್ನುವುದೊಂದೇ ರಂಗಕರ್ಮಿಗಳೆಲ್ಲರ  ಧ್ಯೇಯವಾಗಿರಲಿ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳು)

ಶಶಿಕಾಂತ ಯಡಹಳ್ಳಿ

ರಂಗಕರ್ಮಿಗಳು ಮತ್ತು ಪತ್ರಕರ್ತರು

More articles

Latest article