ಹೊಸದಿಲ್ಲಿ: ಶ್ರದ್ಧಾ ವಾಕರ್ ಕೊಲೆ ಪ್ರಕರಣದ ವರದಿ ಸಂದರ್ಭದಲ್ಲಿ ಒಂದಿಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಲವ್ ಜೆಹಾದ್ ಬಣ್ಣ ನೀಡಿದ ನ್ಯೂಸ್ 18 ಚಾನಲ್ ಗೆ 50,000 ರುಪಾಯಿ ದಂಡ ವಿಧಿಸಿರುವ the News Broadcasting & Digital Standards Authority (NBDSA) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಶ್ ದೇವಗನ್ ಮತ್ತು ಅಮನ್ ಚೋಪ್ರಾ ನಡೆಸಿಕೊಟ್ಟ ಕಾರ್ಯಕ್ರಮಗಳ ವಿಡಿಯೋಗಳನ್ನು ಅಳಿಸಿಹಾಕುವಂತೆ ಆದೇಶಿಸಿದೆ.
ಅಮಿಶ್ ದೇವಗನ್ ಮತ್ತು ಅಮನ್ ಚೋಪ್ರಾ ನಡೆಸಿಕೊಟ್ಟ ಕಾರ್ಯಕ್ರಮಗಳು ಸಮರ್ಪಕವಾಗಿರಲಿಲ್ಲ. ಅವರು ಒಂದು ಇಡೀ ಸಮುದಾಯವನ್ನು ಅವರು ಗುರಿಯಾಗಿಸಿಕೊಂಡರು. ಲವ್ ಜಿಹಾದ್ ಎಂಬ ಪದಪುಂಜವನ್ನು ಹೀಗೆ ಲಘುವಾಗಿ ಬಳಸುವುದರಿಂದ ದೇಶದ ಜಾತ್ಯತೀಯ ಹಂದರಕ್ಕೆ ಧಕ್ಕೆಯಾಗುತ್ತದೆ ಎಂದು NBDSA ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿ ಎ.ಕೆ.ಸಿಕ್ರಿ ಅಧ್ಯಕ್ಷರಾಗಿರುವ NBDSA ಈ ತೀರ್ಪು ನೀಡಿದ್ದು, ಇಂದ್ರಜಿತ್ ಘೋರ್ಪಡೆ ಎಂಬುವವರು ನೀಡಿದ ದೂರಿನ ವಿಚಾರಣೆ ನಂತರ ನ್ಯೂಸ್ 18 ಚಾನಲ್ ಗೆ ದಂಡ ವಿಧಿಸಲಾಗಿದೆ.
2022ರ ಮೇ 18ರಂದು 27 ವರ್ಷದ ಶ್ರದ್ಧಾ ವಾಕರ್ ಎಂಬಾಕೆಯನ್ನು ಆಕೆಯ ಸ್ನೇಹಿತ ಆಫ್ತಾಬ್ ಅಮಿನ್ ಪೂನಾವಾಲಾ ಎಂಬಾತ ದಾರುಣವಾಗಿ ಸಾಯಿಸಿ, ಮೃತದೇಹವನ್ನು ಮುಚ್ಚಿಡುವ ಸಲುವಾಗಿ ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸಿದ್ದ. ಈ ಪ್ರಕರಣ ವರದಿಯಾಗುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡ ದೇಶದ ಟಿವಿ ಚಾನಲ್ ಗಳನ್ನು ಪ್ರಕರಣಕ್ಕೆ ಲವ್ ಜಿಹಾದ್ ಬಣ್ಣ ಕಟ್ಟಿದ್ದಲ್ಲದೆ, ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ವರದಿಗಳನ್ನು ಪ್ರಕಟಿಸಿದ್ದವು.
ದೇಶದ ಯಾವುದೇ ಮೂಲೆಯಲ್ಲಿ ಅಪರಾಧ ಪ್ರಕರಣಗಳು ನಡೆದರೂ ಆರೋಪಿ ಮುಸ್ಲಿಂ ಸಮುದಾಯದವನಾಗಿದ್ದರೆ ಆ ಪ್ರಕರಣಗಳಿಗೆ ಕೋಮುಬಣ್ಣ ನೀಡಿ, ಜನರನ್ನು ಪ್ರಚೋದಿಸಿ ಕೋಮುಗಲಭೆಗಳಿಗೆ ಕುಮ್ಮಕ್ಕು ನೀಡುವ ಕಾರ್ಯವನ್ನು ಹಲವು ನ್ಯೂಸ್ ಚಾನಲ್ ಗಳು ಇತ್ತೀಚಿನ ದಿನಗಳಲ್ಲಿ ನಡೆಸುತ್ತ ಬಂದಿವೆ.
ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ವಾಸೈ ಎಂಬ ಊರಿನವರಾದ ಶ್ರದ್ಧಾ ವಾಕರ್ 2018ರವರೆಗೆ ತನ್ನ ತಾಯಿ ಮತ್ತು ಸೋದರನೊಂದಿಗೆ ವಾಸೈನಲ್ಲಿ ಇದ್ದರು. ಮಲಾಡ್ ನ ಬಹುರಾಷ್ಟ್ರೀಯ ಕಂಪೆನಿಯೊಂದರ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾಗೆ ಪೂನಾವಾಲನ ಪರಿಚಯಯಾಗಿತ್ತು. ನಂತರ ಅವರಿಬ್ಬರೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಇಬ್ಬರ ನಡುವೆ ವೈಮನಸ್ಯ ತಲೆದೋರಿದ ನಂತರ ಪಾತಕಿ ಪೂನಾವಾಲಾ ಶ್ರದ್ಧಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದ.