ನವದೆಹಲಿ, ನ.07 : ಕಾವೇರಿ ನದಿಯಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಆದೇಶಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ್ದ ಶಿಫಾರಸನ್ನ ಪ್ರಾಧಿಕಾರ ಎತ್ತಿಹಿಡಿದಿದ್ದು, ನವೆಂಬರ್ 7 ರಿಂದ ಮುಂದಿನ 15 ದಿನಗಳವರೆಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ.
ವಿನೀತ್ ಗುಪ್ತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿನ ಮಳೆ, ಬೆಳೆ ಪರಿಸ್ಥಿತಿ ಹಾಗೂ ಜಲಾಶಯಗಳಲ್ಲಿನ ನೀರಿನ ಸಂಗ್ರಹವನ್ನು ಪರಿಶೀಲಿಸಿದ ಬಳಿಕ ಈ ನಿರ್ದೇಶನ ನೀಡಲಾಗಿದೆ. ಇದರಂತೆ 15 ದಿನಗಳಲ್ಲಿ ಕರ್ನಾಟಕದಿಂದ ಸುಮಾರು 3.88 ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗುವ ಸಾಧ್ಯತೆಗಳಿವೆ.
ಆದರೆ, ಪ್ರಾಧಿಕಾರದ ಮುಂದೆ ಕರ್ನಾಟಕವು ತನ್ನದೇ ಆದ ಜಲಸಂಕಷ್ಟವನ್ನು ಸಮಿತಿಯ ಮುಂದೆ ಪ್ರಸ್ತಾಪಿಸಿದೆ. ರಾಜ್ಯದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಬರುತ್ತಿರುವ ಒಳಹರಿವು ಕಳೆದ 30 ವರ್ಷಗಳ ಸರಾಸರಿಗಿಂತ ಶೇ.53.8 ಕಡಿಮೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಕರ್ನಾಟಕ ತಿಳಿಸಿದೆ.
ರಾಜ್ಯದ ವಾದದ ಪ್ರಕಾರ, ಅಂದಾಜು 57 ಟಿಎಂಸಿ ಲಭ್ಯ ನೀರಿನಲ್ಲಿ ಮುಂದಿನ ಮಳೆಗಾಲ ಅಂದರೆ ಜುಲೈ 2027ರ ಅಂತ್ಯದವರೆಗೆ ಆದ್ಯತೆಯ ಅಗತ್ಯಗಳನ್ನು ಪೂರೈಸಲು ಸುಮಾರು 50 ಟಿಎಂಸಿ ಅಗತ್ಯವಿದೆ. ಹೀಗಾಗಿ ಕೇವಲ 7 ಟಿಎಂಸಿ ಮಾತ್ರ ಉಳಿಯಲಿದ್ದು, ಅದು ಈಗಾಗಲೇ ಬೆಳೆಯುತ್ತಿರುವ ಬೆಳೆಗಳಿಗೆ ಸಾಕಾಗುವುದಿಲ್ಲ ಎಂಬ ಆತಂಕವನ್ನು ಕರ್ನಾಟಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುವಂತೆ ಆದೇಶಿಸಬಾರದು ಎಂದು ಮನವಿ ಮಾಡಿದೆ.
ಇತ್ತ ತಮಿಳುನಾಡು, ನವೆಂಬರ್ 4ರವರೆಗೆ ಕರ್ನಾಟಕ ಕೇವಲ 53.435 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದು, ಬಾಕಿ ಇರುವ 16.895 ಟಿಎಂಸಿ ನೀರನ್ನೂ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಅ.24ರಿಂದ ನ.4ರವರೆಗೆ ಹಲವು ದಿನಗಳಲ್ಲಿ ಸಿಡಬ್ಲ್ಯೂಆರ್‌ಸಿ ಸೂಚಿಸಿದ್ದ 3,000 ಕ್ಯೂಸೆಕ್‌ಗಿಂತ ಕಡಿಮೆ ನೀರು ಬಿಳಿಗುಂಡ್ಲುವಿಗೆ ಹರಿದುಬಂದಿದೆ ಎಂಬುದು ತಮಿಳುನಾಡು ವಾದ.
ಇದೇ ವೇಳೆ, ನವೆಂಬರ್ 5ರಿಂದ 21ರವರೆಗೆ ಬಿಳಿಗುಂಡ್ಲುವಿನಲ್ಲಿ ಬಾಕಿ ನೀರನ್ನೂ ಸೇರಿಸಿ ಒಟ್ಟು 20.678 ಟಿಎಂಸಿ ನೀರು ಹರಿಸುವಂತೆ ತಕ್ಷಣ ನಿರ್ದೇಶನ ನೀಡಬೇಕೆಂದು ತಮಿಳುನಾಡು ಮನವಿ ಮಾಡಿದೆ.
ಸಿಡಬ್ಲ್ಯೂಆರ್‌ಸಿಯ ಹೊಸ ಆದೇಶವು ಕರ್ನಾಟಕಕ್ಕೆ ಮತ್ತೊಂದು ಸವಾಲು ತಂದಿದೆ. ಒಂದೆಡೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಡಿಮೆ ಒಳಹರಿವು ಮತ್ತು ಬರ ಪರಿಸ್ಥಿತಿ; ಮತ್ತೊಂದೆಡೆ ತಮಿಳುನಾಡಿನ ಸಾಂಬಾ ಬೆಳೆಗಳಿಗೆ ನೀರಿನ ಬೇಡಿಕೆ. ಈ ಎರಡರ ನಡುವೆ ನೀರು ಹಂಚಿಕೆ ವಿಚಾರ ಮತ್ತೆ ತೀವ್ರಗೊಂಡಿದೆ.

